Site icon Vistara News

Election Commission: ಥೀಮ್‌ ಸಾಂಗ್‌ನಲ್ಲಿ ‘ಜೈ ಭವಾನಿ’ ಪದ ಬಳಕೆ; ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣಕ್ಕೆ ನೋಟಿಸ್‌

Election Commission

Election Commission

ಮುಂಬೈ: ಪಕ್ಷದ ಅಧಿಕೃತ ಪ್ರಚಾರ ಹಾಡಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ (Election Commission)ವು ಉದ್ಧವ್ ಠಾಕ್ರೆ (Uddhav Thackeray) ನೇತೃತ್ವದ ಶಿವಸೇನೆ (ಯುಬಿಟಿ) ಬಣಕ್ಕೆ ಭಾನುವಾರ ನೋಟಿಸ್ ನೀಡಿದೆ. ಪಕ್ಷದ ಥೀಮ್‌ ಸಾಂಗ್‌ನಲ್ಲಿ ‘ಜೈ ಭವಾನಿ’ ಎಂಬ ಘೋಷಣೆಯಿದ್ದು, ಧಾರ್ಮಿಕ ಉಲ್ಲೇಖದ ಬಳಕೆಯ ಬಗ್ಗೆ ಆಯೋಗವು ಆಕ್ಷೇಪ ಎತ್ತಿದೆ.

ʼಭವಾನಿʼ ಎಂಬ ಪದವು ಹಿಂದೂ ದೇವತೆಯ ಹೆಸರಾಗಿದ್ದು, ಅಂತಹ ಧಾರ್ಮಿಕ ಘೋಷಣೆಯನ್ನು ಸೇರಿಸುವ ಬಗ್ಗೆ ಆಯೋಗ ಕಳವಳ ವ್ಯಕ್ತಪಡಿಸಿದೆ. ಶಿವಸೇನೆ (ಯುಬಿಟಿ) ಕೆಲವು ದಿನಗಳ ಹಿಂದೆ ಪಕ್ಷದ ಥೀಮ್ ಸಾಂಗ್‌ ಬಿಡುಗಡೆ ಮಾಡಿತ್ತು. ಇದರಲ್ಲಿ ಪಕ್ಷದ ಸಂಸ್ಥಾಪಕ ದಿವಂಗತ ಬಾಳ್ ಠಾಕ್ರೆ ಉರಿಯುತ್ತಿರುವ ಜ್ಯೋತಿಯನ್ನು ಹಿಡಿದಿರುವ ದೃಶ್ಯಗಳಿವೆ. ಶಿವಸೇನೆ ಕಾರ್ಯಕರ್ತರು ಹಾಗೂ ಆದಿತ್ಯ ಮತ್ತು ಉದ್ಧವ್ ಠಾಕ್ರೆ ರ‍್ಯಾಲಿಗಳನ್ನು ನಡೆಸುತ್ತಿದ್ದಾರೆ. ಹಿನ್ನೆಲೆಯಲ್ಲಿ ʼಜೈ ಭವಾನಿ, ಜೈ ಶಿವಾಜಿʼ ಎಂಬ ಘೋಷಣೆ ಕೇಳಿ ಬಂದಿದೆ.

“ನಮ್ಮ ಹಾಡಿನಿಂದ ʼಜೈ ಭವಾನಿʼ ಪದವನ್ನು ತೆಗೆದು ಹಾಕುವಂತೆ ಚುನಾವಣಾ ಆಯೋಗವು ನಮಗೆ ನೋಟಿಸ್‌ ನೀಡಿದೆ. ಯಾವುದೇ ಕಾರಣಕ್ಕೂ ನಾವು ಈ ಪದವನ್ನು ಹಿಂತೆಗೆಯುವುದಿಲ್ಲ. ಚುನಾವಣಾ ಆಯೋಗವು ನಮ್ಮ ವಿರುದ್ಧ ಕ್ರಮ ಕೈಗೊಳ್ಳುವ ಮೊದಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಮಹಾರಾಷ್ಟ್ರದ ದೇವತೆಗೆ ಅಗೌರವ ತೋರಿದ್ದಾರೆ ಎಂದು ನಾನು ಆರೋಪಿಸಿದರೆ ಅದಕ್ಕೆ ಚುನಾವಣಾ ಆಯೋಗದ ಬಳಿ ಉತ್ತರವಿದೆಯೇ?ʼʼ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಪ್ರಶ್ನಿಸಿದ್ದಾರೆ.

ಶಿವಸೇನೆ ಪ್ರಾರಂಭದಿಂದಲೂ ‘ಭವಾನಿ, ಜೈ ಶಿವಾಜಿ’ ಎಂಬ ಪದವನ್ನು ತನ್ನ ರಾಜಕೀಯ ಘೋಷಣೆಯಾಗಿ ಬಳಸುತ್ತಿದೆ. ಮರಾಠ ಯೋಧ ರಾಜ ಛತ್ರಪತಿ ಶಿವಾಜಿ ಮಹಾರಾಜ್ ಭವಾನಿ ದೇವಿಯ ಭಕ್ತನಾಗಿದ್ದನ.

ಇಡಿ ದಾಳಿಗೆ ಒಳಗಾಗಿದ್ದ ಉದ್ಧವ್​ ಬಣದ ಶಾಸಕ

ಐಷಾರಾಮಿ ಹೋಟೆಲ್ ನಿರ್ಮಿಸಲು ಸಾರ್ವಜನಿಕ ಭೂಮಿಯನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಜಾರಿ ನಿರ್ದೇಶನಾಲಯದಿಂದ ತನಿಖೆ ಎದುರಿಸುತ್ತಿರುವ ಶಿವಸೇನೆ (ಉದ್ಧವ್​ ಠಾಕ್ರೆ ಬಣ) ಶಾಸಕ ರವೀಂದ್ರ ವೈಕರ್ ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಿಕೊಂಡಿದ್ದರು. ಮುಂಬೈಯ ಜೋಗೇಶ್ವರಿ ಪ್ರದೇಶದ ಶಾಸಕ ವೈಕರ್ ಅವರು ಉದ್ಧವ್ ಠಾಕ್ರೆಯ ಅತ್ಯಾಪ್ತರಾಗಿದ್ದರು. ಮಲಬಾರ್ ಹಿಲ್​ನಲ್ಲಿರುವ ಮುಖ್ಯಮಂತ್ರಿಯ ಅಧಿಕೃತ ನಿವಾಸ ‘ವರ್ಷಾ’ದಲ್ಲಿ ವೈಕರ್, ಶಿಂಧೆ ನೇತೃತ್ವದ ಗುಂಪನ್ನು ಸೇರಿಕೊಂಡಿದ್ದರು.

ಇದನ್ನೂ ಓದಿ: ಉದ್ಧವ್‌ ಠಾಕ್ರೆ ಮನೆ ಎದುರು ಹನುಮಾನ್‌ ಚಾಲೀಸಾ ಪಠಿಸಿದ್ದ ನವನೀತ್ ರಾಣಾಗೆ ಬಿಜೆಪಿ ಟಿಕೆಟ್!

ವೈಕರ್ ಅವರು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್​​ನ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ. ನಾಲ್ಕು ಬಾರಿ ಕಾರ್ಪೊರೇಟರ್ ಮತ್ತು ಜೋಗೇಶ್ವರಿಯಿಂದ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಕ್ರೀಡೆ ಮತ್ತು ಮನರಂಜನಾ ಉದ್ದೇಶಗಳಿಗಾಗಿ ಮೀಸಲಾಗಿರುವ ಜೋಗೇಶ್ವರಿ-ವಿಖ್ರೋಲಿ ಲಿಂಕ್ ರಸ್ತೆಯ ಪ್ಲಾಟ್​​ನಲ್ಲಿ ಐಷಾರಾಮಿ ಹೋಟೆಲ್ ನಿರ್ಮಿಸಲು 2021 ರ ಜನವರಿ ಮತ್ತು ಜುಲೈ ನಡುವೆ ಬಿಎಂಸಿಯಲ್ಲಿ ಅವ್ಯವಹಾರ ಮಾಡಿದ್ದರು. ಮೋಸದಿಂದ ಅನುಮತಿ ಗಿಟ್ಟಿಸಿದ ಆರೋಪದ ಮೇಲೆ ದಾಖಲಾದ ಪ್ರಕರಣದಲ್ಲಿ ಅವರ ವಿರುದ್ಧ ಇಡಿ ತನಿಖೆ ನಡೆಸುತ್ತಿದೆ.

Exit mobile version