Site icon Vistara News

Election Commission: ಜಮ್ಮು & ಕಾಶ್ಮೀರದ ಅನಂತ್‌ನಾಗ್‌-ರಾಜೌರಿ ಕ್ಷೇತ್ರದ ಮತದಾನ ಮುಂದೂಡಿಕೆ; ಹೊಸ ವೇಳಾಪಟ್ಟಿ ಇಂತಿದೆ

Election Commission

Election Commission

ನವದೆಹಲಿ: ಲೋಕಸಭಾ ಚುನಾವಣೆ (Lok Sabha Election 2024)ಯ ಎರಡು ಹಂತದ ಮತದಾನ ಈಗಾಗಲೇ ಮುಗಿದಿದೆ. ಮೇ 7ರಂದು ಮೂರನೇ ಹಂತದ ಮತದಾನ ನಡೆಯಲಿದೆ. ಈ ಮಧ್ಯೆ ಮಂಗಳವಾರ ಚುನಾವಣಾ ಆಯೋಗ (Election Commission) ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌-ರಾಜೌರಿ ಲೋಕಸಭಾ ಕ್ಷೇತ್ರದ ಮತದಾನವನ್ನು ಮೇ 7ರಿಂದ ಮೇ 25ಕ್ಕೆ ಮುಂದೂಡಿದೆ.

ಚುನಾವಣಾ ಆಯೋಗವು ತನ್ನ ಅಧಿಸೂಚನೆಯಲ್ಲಿ, “ವಿವಿಧ ಲಾಜಿಸ್ಟಿಕ್ಸ್, ಸಂವಹನ ಮತ್ತು ಸಂಪರ್ಕದ ನೈಸರ್ಗಿಕ ಅಡೆತಡೆಯಿಂದಾಗಿ ಚುನಾವಣಾ ದಿನಾಂಕಗಳನ್ನು ಬದಲಾಯಿಸಲು ವಿವಿಧ ರಾಜಕೀಯ ಪಕ್ಷಗಳು ಮನವಿ ಸಲ್ಲಿಸಿದ್ದವು. ಈ ಎಲ್ಲ ಸಮಸ್ಯೆಗಳು ಪ್ರಚಾರಕ್ಕೆ ಅಡ್ಡಿಯಾಗುವುದರಿಂದ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತದೆ ಎನ್ನುವುದನ್ನು ಮನಗಂಡಿದ್ದೇವೆ. ಇದು ಮತದಾನ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ದಿನಾಂಕ ಮುಂದೂಡಲಾಗಿದೆ” ಎಂದು ಹೇಳಿದೆ.

ಮೂರರ ಬದಲು ಆರನೇ ಹಂತದಲ್ಲಿ ಮತದಾನ

ʼʼಈ ಹಿಂದೆ ಅನಂತ್‌ನಾಗ್‌-ರಾಜೌರಿ ಲೋಕಸಭಾ ಕ್ಷೇತ್ರಕ್ಕೆ ಮೂರನೇ ಹಂತದಲ್ಲಿ ಅಂದರೆ ಮೇ 7ರಂದು ಮತದಾನ ನಡೆಸಲು ತೀರ್ಮಾನಿಸಲಾಗಿತ್ತು. ಅದರ ಬದಲು ಇದೀಗ ಆರನೇ ಹಂತದಲ್ಲಿ ಅಂದರೆ ಮೇ 25ಕ್ಕೆ ಮುಂದೂಡಲಾಗಿದೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಕಾಶ್ಮೀರದ ಕೆಲವು ಭಾಗಗಳು ಮತ್ತು ಜಮ್ಮು ಪ್ರದೇಶದ ಪೂಂಚ್ ಮತ್ತು ರಾಜೌರಿ ಪ್ರದೇಶಗಳನ್ನು ಒಳಗೊಂಡಿರುವ ಈ ಪ್ರದೇಶಗಳ ರಸ್ತೆ ಪರಿಸ್ಥಿತಿ, ಹವಾಮಾನ ಮತ್ತು ಇಲ್ಲಿನ ಪ್ರವೇಶದ ಬಗ್ಗೆ ವಿವರವಾದ ವರದಿಯನ್ನು ತಕ್ಷಣ ಸಲ್ಲಿಸುವಂತೆ ಚುನಾವಣಾ ಆಯೋಗವು ಜಮ್ಮು ಮತ್ತು ಕಾಶ್ಮೀರ ಆಡಳಿತವನ್ನು ಕೇಳಿದೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ (National Conference) ಮತ್ತು ಮೆಹಬೂಬಾ ಮುಫ್ತಿ (PDP) ಕಳೆದ ವಾರ ಚುನಾವಣೆಯನ್ನು ಮುಂದೂಡದಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದರು. “ಮುಂದೂಡುವ ಬೇಡಿಕೆ ಎಲ್ಲ ಪಕ್ಷಗಳಿಂದ ಬಂದಿಲ್ಲ. ವಿಶೇಷ ಎಂದರೆ ಚುನಾವಣಾ ಆಯೋಗಕ್ಕೆ ಪತ್ರ ಬರೆದ ಕೆಲವರು ಸ್ಪರ್ಧಿಸುತ್ತಿಲ್ಲ” ಎಂದು ಅಬ್ದುಲ್ಲಾ ತಿಳಿಸಿದ್ದಾರೆ.

ನ್ಯಾಷನಲ್ ಕಾನ್ಫರೆನ್ಸ್ ಅಭ್ಯರ್ಥಿ ಮಿಯಾನ್ ಅಲ್ತಾಫ್ ವಿರುದ್ಧ ಅನಂತ್‌ನಾಗ್-ರಾಜೌರಿಯಿಂದ ಸ್ಪರ್ಧಿಸುತ್ತಿರುವ ಮೆಹಬೂಬಾ ಮುಫ್ತಿ, “ಎಲ್ಲರೂ ನನ್ನ ವಿರುದ್ಧ ಗುಂಪುಗೂಡಿದ್ದಾರೆ. ಯಾಕೆಂದರೆ ಅವರು ನನ್ನನ್ನು ಸಂಸತ್ತಿನಲ್ಲಿ ನೋಡಲು ಬಯಸುವುದಿಲ್ಲ. ಜನರು, ಧಾರ್ಮಿಕ ಮತ್ತು ಪಕ್ಷಾತೀತವಾಗಿ ನನ್ನ ಬೆಂಬಲಕ್ಕೆ ಬರುತ್ತಿದ್ದಾರೆ. ಆದ್ದರಿಂದ ಅವರು ಚುನಾವಣೆಗಳನ್ನು ಮುಂದೂಡಲು ಮತ್ತು ತಿರುಚಲು ಚುನಾವಣಾ ಆಯೋಗವನ್ನು ಬಳಸುತ್ತಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Narendra Modi: ತಾಕತ್ತಿದ್ದವರು 370ನೇ ವಿಧಿ ಜಾರಿಗೆ ತರಲಿ; ಪ್ರತಿಪಕ್ಷಗಳಿಗೆ ಮೋದಿ ಸವಾಲು!

ಮೇ 7ರಂದು ಮೂರನೇ ಹಂತದಲ್ಲಿ ಒಟ್ಟು 1,352 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಈ ಪೈಕಿ ಶೇ. 18ರಷ್ಟು ಅಂದರೆ 244 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಾಗಿವೆ ಎಂದು ತಿಳಿದುಬಂದಿದೆ. ನ್ಯಾಷನಲ್‌ ಎಲೆಕ್ಷನ್‌ ವಾಚ್‌ ಹಾಗೂ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ADR) ಬಿಡುಗಡೆ ಮಾಡಿರುವ ವರದಿ ಪ್ರಕಾರ, ಮೂರನೇ ಹಂತದ 244 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಾಗಿವೆ ಎಂದು ತಿಳಿದುಬಂದಿದೆ. 172 ಅಭ್ಯರ್ಥಿಗಳ ವಿರುದ್ಧ ಗಂಭೀರ ಕ್ರಿಮಿನಲ್‌ ಕೇಸ್‌ ದಾಖಲಾಗಿವೆ. ಅತ್ಯಾಚಾರ ಸೇರಿ ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಕುರಿತಂತೆ 38 ಜನರ ವಿರುದ್ಧ ಕೇಸ್‌ ದಾಖಲಾಗಿದೆ. ದ್ವೇಷ ಭಾಷಣಕ್ಕೆ ಕುರಿತಂತೆ 17 ಅಭ್ಯರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿವೆ. ಅಭ್ಯರ್ಥಿಗಳು ಚುನಾವಣೆ ಆಯೋಗಕ್ಕೆ ನೀಡಿರುವ ಮಾಹಿತಿ ಆಧರಿಸಿ ವರದಿ ತಯಾರಿಸಲಾಗಿದೆ.

Exit mobile version