Site icon Vistara News

Election Results 2024: ಜೈಲಿನಿಂದಲೇ ಸ್ಪರ್ಧಿಸಿ ಗೆದ್ದ ಇವರು ಸಂಸತ್‌ಗೆ ಹಾಜರಾಗಬಹುದೆ? ಕಾನೂನು ಏನು ಹೇಳುತ್ತದೆ?

Election Results 2024

Election Results 2024

ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ (Election Results 2024). ಸಮೀಕ್ಷೆಗಳನ್ನು ತಲೆ ಕೆಳಗಾಗಿಸಿದ ಈ ರಿಸಲ್ಟ್‌ ಹಲವು ಅಚ್ಚರಿಗಳಿಗೂ ಕಾರಣವಾಗಿದೆ. ಈ ಪೈಕಿ ಭಯೋತ್ಪಾದನೆ ಆರೋಪದ ಮೇಲೆ ಪ್ರಸ್ತುತ ಜೈಲಿನಲ್ಲಿರುವ ಇಬ್ಬರು ಅಭ್ಯರ್ಥಿಗಳು ಚುನಾವಣೆಯಲ್ಲಿ ವಿಜೇತರಾಗಿ ಹೊರ ಹೊಮ್ಮಿರುವುದು ಕೂಡ ಒಂದು. ಖಲಿಸ್ತಾನಿ ಪರ ಬೋಧಕ (Pro-Khalistani preacher) ಅಮೃತ್‌ಪಾಲ್‌ ಸಿಂಗ್ (Amrit pal Singh) ಪಂಜಾಬ್‌ನ ಖದೂರ್ ಸಾಹಿಬ್ (Khadoor Sahib) ಕ್ಷೇತ್ರದಿಂದ ಮತ್ತು ಭಯೋತ್ಪಾದಕರಿಗೆ ಹಣಕಾಸಿನ ನೆರವು ಒದಗಿಸಿದ ಆರೋಪ ಎದುರಿಸುತ್ತಿರುವ ಎಂಜಿನಿಯರ್ ರಶೀದ್ ಎಂದೇ ಜನಪ್ರಿಯವಾಗಿರುವ ಶೇಖ್ ಅಬ್ದುಲ್ ರಶೀದ್ (Sheikh Abdul Rashid) ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ (Baramulla) ಕ್ಷೇತ್ರದಿಂದ ಗೆದ್ದಿದ್ದಾರೆ.

ಹೊಸ ಸದನದ ಕಾರ್ಯಕಲಾಪಗಳಿಗೆ ಇವರು ಹಾಜರಾಗುವಂತಿಲ್ಲವಾದರೂ ಸಂಸತ್ತಿನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಂವಿಧಾನಿಕ ಹಕ್ಕನ್ನು ಹೊಂದಿದ್ದಾರೆ.

ಕಾನೂನು ಏನು ಹೇಳುತ್ತದೆ?

ಜೈಲಿನಲ್ಲಿರುವ ಹೊಸದಾಗಿ ಚುನಾಯಿತರಾದ ಸಂಸದರಿಗೆ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡಲಾಗುತ್ತದೆ. ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವುದು ಅವರ ಸಾಂವಿಧಾನಿಕ ಹಕ್ಕು. ಎಂಜಿನಿಯರ್ ರಶೀದ್ ಮತ್ತು ಅಮೃತ್‌ಪಾಲ್‌ ಸಿಂಗ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹಾಜರಾಗಬೇಕಾದರೆ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು. ಪ್ರಮಾಣ ವಚನ ಸ್ವೀಕರಿಸಿದ ನಂತರ, ಅವರು ಜೈಲಿಗೆ ಮರಳಬೇಕಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ಸದನಕ್ಕೆ ಹಾಜರಾಗಲು ಸಾಧ್ಯವಾಗದಿರುವ ಬಗ್ಗೆ ಸ್ಪೀಕರ್‌ಗೆ ತಿಳಿಸಲಾಗುವುದು. ನಂತರ ಸ್ಪೀಕರ್ ಈ ಮನವಿಗಳನ್ನು ಸದಸ್ಯರ ಗೈರು ಹಾಜರಿಯ ಸದನ ಸಮಿತಿಗೆ ಕಳುಹಿಸುತ್ತಾರೆ. ಸಮಿತಿಯು ನಂತರ ಸದನದ ಕಲಾಪಗಳಿಗೆ ಗೈರು ಹಾಜರಾಗಲು ಅವಕಾಶ ನೀಡಬೇಕೆ ಅಥವಾ ಬೇಡವೇ ಎಂದು ಶಿಫಾರಸು ಮಾಡುತ್ತದೆ. ನಂತರ ಶಿಫಾರಸನ್ನು ಸ್ಪೀಕರ್ ಸದನದ ಮತಕ್ಕೆ ಹಾಕುತ್ತಾರೆ. ಒಂದು ವೇಳೆ ಎಂಜಿನಿಯರ್ ರಶೀದ್ ಅಥವಾ ಅಮೃತ್‌ಪಾಲ್‌ ಸಿಂಗ್ ಅವರಿಗೆ ಕನಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದರೆ, ತಕ್ಷಣವೇ ಅವರು ಸಂಸದ ಸ್ಥಾನವನ್ನು ಕಳೆದುಕೊಳ್ಳುತ್ತಾರೆ ಎಂದು ವಿವರಿಸಿದ್ದಾರೆ.

ಅಮೃತ್‌ಪಾಲ್‌ ಸಿಂಗ್ ಹಿನ್ನೆಲೆ

ಅಮೃತಸರದ ಜಲ್ಲುಪುರ್‌ ಖೇರಾ ಎಂಬ ಗ್ರಾಮದಲ್ಲಿ 1993ರಲ್ಲಿ ಜನಿಸಿದ ಅಮೃತ್‌ಪಾಲ್‌, 12ನೇ ತರಗತಿವರೆಗೆ ಓದಿದ್ದಾನೆ. 2012ರಲ್ಲಿ ಭಾರತ ತೊರೆದು, ದುಬೈಯಲ್ಲಿ ತನ್ನ ಚಿಕ್ಕಪ್ಪನ ಟ್ರಾನ್ಸ್‌ಪೋರ್ಟ್‌ ಕಂಪನಿಯಲ್ಲಿ ದುಡಿದ. ಈತ ಪಂಜಾಬ್‌ನ ಪೊಲೀಸರ ಹಾಗೂ ರಾಜಕಾರಣಿಗಳ ಗಮನಕ್ಕೆ ಬಂದುದೇ ಕೆಲವು ದಿನಗಳ ಹಿಂದೆ- ʼವಾರಿಸ್‌ ಪಂಜಾಬ್‌ ದೇʼ ಸಂಘಟನೆಯ ಮುಖ್ಯಸ್ಥನಾಗಿ ನಿಯುಕ್ತನಾದ ಸಂದರ್ಭದಲ್ಲಿ. ಈ ಸಂಘಟನೆಯನ್ನು ಸ್ಥಾಪಿಸಿದವನು ನಟ, ಚಳವಳಿಗಾರ ದೀಪ್‌ ಸಿಧು. ಇವನು 2022ರ ಫೆಬ್ರವರಿಯಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ. ಇವನನ್ನು ಸರ್ಕಾರ ಸಾಯಿಸಿದೆ ಎಂದು ಅಮೃತ್‌ಪಾಲ್‌ ಮತ್ತು ಬೆಂಬಲಿಗರು ಆರೋಪಿಸುತ್ತ ಬಂದಿದ್ದಾರೆ. ಅಮೃತ್‌ಪಾಲ್‌ ಯಾವತ್ತೂ ಸಿಧುವನ್ನು ಭೇಟಿ ಮಾಡಿದವನೇ ಅಲ್ಲ. ಆದರೆ ಆನ್‌ಲೈನ್‌ನಲ್ಲಿ ತನ್ನನ್ನು ಅತ್ಯಂತ ಪ್ರಭಾವಿಸಿದ್ದ ಎಂದು ಹೇಳಿಕೊಳ್ಳುತ್ತಾನೆ. ಸಿಧುವಿನ ಸಾವಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಸಿಧುವಿನ ಸಲಹೆಯಂತೆ ತಾನು ಗಡ್ಡ ಟ್ರಿಮ್‌ ಮಾಡಿಕೊಳ್ಳುವುದು ಬಿಟ್ಟಿರುವುದಾಗಿ ಹೇಳಿದ್ದ.

ಹಲವು ಸಮಯದಿಂದ ಆತ ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಖಲಿಸ್ತಾನ್ ಪರ ಪೋಸ್ಟ್‌ಗಳನ್ನು ಹಾಕುತ್ತಿದ್ದ. 2021ರಲ್ಲಿ ಕೆಂಪು ಕೋಟೆಯ ಮೇಲೆ ನಡೆದ ಗುಂಪು ದಾಳಿಯ ವೇಳೆ ಅದರ ನೇತೃತ್ವ ವಹಿಸಿದ್ದ ದೀಪ್‌ ಸಿಧುವಿನ ಕೃತ್ಯವನ್ನು ಈತ ಸಮರ್ಥಿಸಿಕೊಂಡಿದ್ದ. 2022ರಲ್ಲಿ ಪಂಜಾಬ್‌ನಲ್ಲಿ ಅಮೃತ್‌ಪಾಲ್‌ನನ್ನು ಅರೆಸ್ಟ್‌ ಮಾಡಲಾಗಿತ್ತು.

ಯಾರು ಈ ಶೇಖ್ ಅಬ್ದುಲ್ ರಶೀದ್?

ಇಂಜಿನಿಯರ್ ರಶೀದ್ ಪ್ರಸ್ತುತ ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ. ಅವಾಮಿ ಇತ್ತೆಹಾದ್ ಪಕ್ಷದ ಮುಖ್ಯಸ್ಥ, ಎರಡು ಬಾರಿ ಶಾಸಕನಾಗಿದ್ದ ರಶೀದ್‌ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) 2019 ರಲ್ಲಿ ಭಯೋತ್ಪಾದನೆ-ಧನಸಹಾಯ ಚಟುವಟಿಕೆಗಳ ಆರೋಪದ ಮೇಲೆ ಬಂಧಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ ಆತ ನ್ಯಾಷನಲ್‌ ಕಾನ್ಫರೆನ್ಸ್‌ನ ಓಮರ್‌ ಅಬ್ದುಲ್ಲಾ ವಿರುದ್ಧ ಸ್ಪರ್ಧಿಸಿ 4,7,2481 ಮತಗಳನ್ನು ಗಳಿಸಿದ್ದಾನೆ. ಒಮ್ಮೆಯೂ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡದ ರಶೀದ್ 2,04,142 ಮತಗಳ ಭಾರೀ ಅಂತರದಿಂದ ಗೆದ್ದಿದ್ದಾನೆ.

ಇದನ್ನೂ ಓದಿ: Lok Sabha Election 2024: ಚುನಾವಣಾ ಕಣಕ್ಕೆ ಧುಮುಕಿದ ಖಲಿಸ್ತಾನಿ ನಾಯಕ ಅಮೃತ್​ಪಾಲ್​ ಸಿಂಗ್‌; ಯಾವ ಕ್ಷೇತ್ರ?

Exit mobile version