ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ (Election Results 2024) ಜೂನ್ 4ರಂದು ಹೊರ ಬಂದಿದ್ದು, ಸುಮಾರು ಎರಡು ತಿಂಗಳುಗಳ ಕಾಲ ಕಾಡುತ್ತಿದ್ದ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಎನ್‌ಡಿಎ (NDA) ಒಕ್ಕೂಟ 294 ಸೀಟುಗಳನ್ನು ಗೆದ್ದುಕೊಂಡು ಸರ್ಕಾರ ರಚಿಸಲು ಮುಂದಾಗಿದೆ. ಸತತ ಮೂರನೇ ಬಾರಿಗೆ ನರೇಂದ್ರ ಮೋದಿ (Narendra Modi) ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ. ಈ ಮಧ್ಯೆ ಕುತೂಹಲಕಾರಿ ಸಂಗತಿಯೊಂದು ಹೊರ ಬಿದ್ದಿದ್ದು, ದೆಹಲಿಯ 7 ಲೋಕಸಭಾ ಸೀಟುಗಳಿಗೆ ಸ್ಪರ್ಧಿಸಿದ್ದ 162 ಅಭ್ಯರ್ಥಿಗಳ ಪೈಕಿ 148 (ಶೇ. 91) ಮಂದಿ ತಮ್ಮ ಠೇವಣಿ (Security Deposits) ಕಳೆದುಕೊಂಡಿದ್ದಾರೆ (Delhi Lok Sabha Elections). ಹಾಗಾದರೆ ಠೇವಣಿ ಎಂದರೇನು? ಇದು ಹೇಗೆ ನಷ್ಟವಾಗುತ್ತದೆ? ಇದಕ್ಕಿರುವ ನಿಯಮ ಏನು? ಇಲ್ಲಿದೆ ಉತ್ತರ.
ದೆಹಲಿಯಲ್ಲಿನ ಎಲ್ಲ ಸೀಟುಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಇಲ್ಲಿನ ಚಾಂದನಿ ಚೌಕ್‌ನಲ್ಲಿ 23, ನವದೆಹಲಿಯಲ್ಲಿ 15, ದಕ್ಷಿಣ ದೆಹಲಿಯಲ್ಲಿ 20, ಪೂರ್ವ ದೆಹಲಿಯಲ್ಲಿ 18, ಪಶ್ಚಿಮ ದೆಹಲಿಯಲ್ಲಿ 22, ಈಶಾನ್ಯ ದೆಹಲಿಯಲ್ಲಿ 26 ಮತ್ತು ವಾಯುವ್ಯ ದೆಹಲಿಯಲ್ಲಿ 24 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಇನ್ನು ದೇಶಾದ್ಯಂತ 7,193 ಅಭ್ಯರ್ಥಿಗಳ ಠೇವಣಿ ನಷ್ಟವಾಗಿದೆ.
ಏನಿದು ಠೇವಣಿ?
ನಿಯಮದ ಪ್ರಕಾರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಪ್ರತಿ ಅಭ್ಯರ್ಥಿ 25,000 ರೂ. (ಸಾಮಾನ್ಯ ವಿಭಾಗ) ಮತ್ತು 12,500 ರೂ. (ಎಸ್‌ಸಿ ವಿಭಾಗ) ಠೇವಣಿ ಇರಿಸಬೇಕು. ಅಭ್ಯರ್ಥಿಯಿಂದ ಹಣ ಪಡೆದು, ಅದನ್ನು ಸರ್ಕಾರದ ಖಾತೆಗೆ ಜಮೆ ಮಾಡಲಾಗುತ್ತದೆ. ಫಲಿತಾಂಶ ಹೊರಬಂದ ಬಳಿಕ ಠೇವಣಿ ಉಳಿಸಿಕೊಂಡ ಅಭ್ಯರ್ಥಿಗಳಿಗೆ ಅಷ್ಟೂ ಹಣ ಮರಳಿ ನೀಡಲಾಗುತ್ತದೆ. ಠೇವಣಿ ಕಳೆದುಕೊಂಡವರ ಹಣವನ್ನು ಸರ್ಕಾರ ವಶಕ್ಕೆ ಪಡೆದುಕೊಳ್ಳುತ್ತದೆ. ಹಾಗಾದರೆ ಠೇವಣಿ ಕಳೆದುಕೊಳ್ಳುವುದು ಎಂದರೇನು? ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು. ಇದಕ್ಕೆ ಚುನಾವಣಾ ಆಯೋಗ ನಿಯಮವನ್ನು ರೂಪಿಸಿದೆ.
ಪ್ರತಿ ಕ್ಷೇತ್ರದಲ್ಲಿ ಚಲಾವಣೆಯಾಗುವ ಒಟ್ಟು ಮತಗಳ ಪೈಕಿ ಆರನೇ ಒಂದರಷ್ಟು ಮತ ಪಡೆದ ಅಭ್ಯರ್ಥಿಯ ಠೇವಣಿ ಮರಳಿ ದೊರೆಯುತ್ತದೆ. ಅಂದರೆ ಒಟ್ಟು ಒಂದು ಲಕ್ಷ ಮತಗಳು ಚಲಾವಣೆಯಾಗಿದೆ ಎಂದಿಟ್ಟುಕೊಳ್ಳೋಣ. ಆ ಪೈಕಿ ಅಭ್ಯರ್ಥಿ 16,667 ಮತ ಪಡೆದರೆ ಠೇವಣಿ ಇಟ್ಟ ಹಣ ದೊರೆಯುತ್ತದೆ. ಅದಕ್ಕೂ ಕಡಿಮೆ ಮತ ಪಡೆದರೆ ಹಣ ಸರ್ಕಾರದ ಪಾಲಾಗುತ್ತದೆ. ಇನ್ನು ಠೇವಣಿ ಇರಿಸುವ ಮೊತ್ತ ವಿಧಾನಸಭೆ ಮತ್ತು ಪಂಚಾಯತ್ ಮಟ್ಟದ ಚುನಾವಣೆಗಳಿಗೆ ಬೇರೆ ಬೇರೆಯಾಗಿರುತ್ತದೆ.
ದೆಹಲಿಯಲ್ಲಿ ಏನಾಯ್ತು?
ದೆಹಲಿಯ ಆಡಳಿತರೂಢ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಒಪ್ಪಂದ ಮಾಡಿಕೊಂಡು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಅದರಂತೆ ಆಪ್‌ನ 4 ಅಭ್ಯರ್ಥಿಗಳು ಮತ್ತು ಕಾಂಗ್ರೆಸ್‌ನ 3 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ಜಯ ಗಳಿಸಿದ ಬಿಜೆಪಿ ಮತ್ತು ಎರಡನೇ ಸ್ಥಾನ ಗಳಿಸಿದ ಕಾಂಗ್ರೆಸ್-ಆಪ್ ಮೈತ್ರಿಯ ಅಭ್ಯರ್ಥಿಗಳನ್ನು ಬಿಟ್ಟು ಉಳಿದವರು ತಮ್ಮ ಠೇವಣಿ ಕಳೆದುಕೊಂಡಿದ್ದಾರೆ. ವಿಶೇಷ ಎಂದರೆ ಚಾಂದಿನಿ ಚೌಕ್‌ನಲ್ಲಿ ಸ್ಪರ್ಧಿಸಿದ್ದ ಸ್ವತಂತ್ರ ಅಭ್ಯರ್ಥಿ ಅಶೋಕ್ ಕುಮಾರ್ ಅವರಿಗೆ ಕೇವಲ 140 ವೋಟು ಲಭಿಸಿದ್ದು, ಅತ್ಯಂಕ ಕಡಿಮೆ ಮತ ಗಳಿಸಿದ ಅಭ್ಯರ್ಥಿ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: NDA Meeting: ಮೋದಿ ನಿವಾಸದಲ್ಲಿ ಎನ್‌ಡಿಎ ಸಭೆ; ಯಾವೆಲ್ಲ ವಿಚಾರಗಳನ್ನು ಚರ್ಚಿಸಲಾಯ್ತು? ಇಲ್ಲಿದೆ ವಿವರ