ಚೆನ್ನೈ: ದಕ್ಷಿಣ ಭಾರತದಲ್ಲಿ ಭರ್ಜರಿಯಾಗಿ ಗೆಲುವಿನ ಖಾತೆ ತೆರೆಯಬೇಕು ಎನ್ನುವ ಬಿಜೆಪಿ (BJP) ಕನಸಿಗೆ ತಮಿಳುನಾಡಿನ ಮತದಾರರು ಸ್ಪಂದಿಸಿಲ್ಲ ಎನ್ನುವುದು ಈ ರಿಸಲ್ಟ್ ಮೂಲಕ ಸ್ಪಷ್ಟವಾಗಿದೆ. ಕೊನೆಗೂ ಕೇರಳದಲ್ಲಿ ಖಾತೆ ತೆರೆಯಲು ಯಶಸ್ವಿಯಾಗಿರುವ ಬಿಜೆಪಿ 1 ಸೀಟು ಗೆದ್ದುಕೊಂಡಿದೆ. ತ್ರಿಶೂರ್‌ನಲ್ಲಿ ನಟ ಸುರೇಶ್ ಗೋಪಿ ಗೆಲುವಿನ ನಗೆ ಬೀರಿದ್ದಾರೆ. ಇತ್ತ ತಮಿಳುನಾಡಿನಲ್ಲಿ ಸೀಟು ಗೆಲ್ಲಬೇಕೆನ್ನುವ ಬಿಜೆಪಿ ಕನಸು ಕೈಗೂಡಿಲ್ಲ. ಆದಾಗ್ಯೂ ರಾಜ್ಯದಲ್ಲಿ ಬಿಜೆಪಿಗೆ ದೊರೆತ ಮತಗಳ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ. ಪ್ರತಿಪಕ್ಷಗಳ ʼಇಂಡಿಯಾʼ ಒಕ್ಕೂಟದಲ್ಲಿ ಗುರುತಿಸಿಕೊಂಡಿರುವ ಆಡಳಿತ ರೂಢ ಡಿಎಂಕೆ (DMK) ಮುನ್ನಡೆ ಕಾಯ್ದುಕೊಂಡಿದೆ.
ಸುಮಾರು 4 ಪಟ್ಟು ಹೆಚ್ಚಾದ ಮತ ಗಳಿಕೆ
ವಿಶೇಷ ಎಂದರೆ ಬಿಜೆಪಿಗೆ ಇದೇ ಮೊದಲ ಬಾರಿಗೆ ತಮಿಳುನಾಡಿನಲ್ಲಿ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ವೋಟಿಂಗ್ ಶೇರ್‌ನಲ್ಲಿ ಸುಮಾರು 4 ಪಟ್ಟು ಹೆಚ್ಚಳ ದಾಖಲಿಸಿದೆ. ಕಳೆದ ಬಾರಿ ಶೇ. 3.57ರಷ್ಟಿದ್ದ ಮತ ಗಳಿಕೆಯ ಪ್ರಮಾಣ ಶೇ. 11.04ಕ್ಕೆ ತಲುಪಿದೆ. ಸದ್ಯ ಇದು ಬಿಜೆಪಿಗೆ ದೊರೆತ ಜನ ಬೆಂಬಲದ ಪ್ರತೀಕ ಎಂದೇ ವಿಶ್ಲೇಷಿಸಲಾಗುತ್ತಿದೆ.
#HappyBirthday Shri @annamalai_k Ji. 💐 pic.twitter.com/p56wpQUqvK
— Nitin Gadkari (मोदी का परिवार) (@nitin_gadkari) June 4, 2024
ಪ್ರಾದೇಶಿಕ ಪಕ್ಷಗಳಿಗೆ ಮಣೆ ಹಾಕುವ ತಮಿಳುನಾಡಿನಲ್ಲಿ 1967ರಿಂದ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಸ್ಪರ್ಧೆ ನಡೆಯುತ್ತಿದೆ. ಚುನಾವಣೆ ಘೋಷಣೆಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ 10ಕ್ಕಿಂತ ಹೆಚ್ಚು ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದರು. ಈ ಬಾರಿ ಬಿಜೆಪಿ 23 ಸೀಟುಗಳಲ್ಲಿ ಸ್ಪರ್ಧಿಸಿತ್ತು.
ಸ್ಪರ್ಧೆ ನೀಡಿದ ಅಣ್ಣಾಮಲೈ
ತಮಿಳುನಾಡಿನ ಕೊಯಮತ್ತೂರು (Coimbatore) ಕ್ಷೇತ್ರದಿಂದ ತಮಿಳುನಾಡು ಬಿಜೆಪಿ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಕಣಕ್ಕೆ ಇಳಿದಿದ್ದರು. ಆ ಮೂಲಕ ಕಾರ್ಯಕರ್ತರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದರು. ಅಲ್ಲದೆ ಅವರ ಸ್ಪರ್ಧೆಯಿಂದ ಈ ಕ್ಷೇತ್ರ ದೇಶದ ಗಮನ ಸೆಳೆದಿತ್ತು. ಸಮೀಕ್ಷೆಗಳೂ ಅಣ್ಣಾಮಲೈ ಜಯ ಸಾಧಿಸಬಹುದು ಎಂದು ಊಹಿಸಿದ್ದವು. ಆದರೆ ಈ ನಿರೀಕ್ಷೆ ಹುಸಿಯಾಗಿದೆ. ಅಣ್ಣಾಮಲೈ ತಮಿಳುನಾಡಿನಲ್ಲಿ ಕಮಲ ಅರಳಿಸಲು ವಿಫಲರಾಗಿದ್ದಾರೆ. ಇಲ್ಲಿ ಡಿಎಂಕೆಯಿಂದ ಸ್ಪರ್ಧಿಸಿದ್ದ ಗಣಪತಿ ಪಿ. ರಾಜ್‌ಕುಮಾರ್ ಜಯ ದಾಖಲಿಸಿದ್ದಾರೆ. ವಿಶೇಷ ಎಂದರೆ ಇಂದು (ಜೂನ್ 4) ಅಣ್ಣಾಮಲೈ ಅವರ ಹುಟ್ಟುಹಬ್ಬ. ಜನ್ಮದಿನದ ಸಂಭ್ರಮ ಸೋಲಿನ ಕಹಿಯೊಂದಿಗೆ ಮರೆಯಾಗಿದೆ.
2019ರಲ್ಲಿಯೂ ಇಲ್ಲಿ ಡಿಎಂಕೆ ತನ್ನ ಗೆಲುವು ಸಾಧಿಸಿತ್ತು. 39 ಸ್ಥಾನಗಳ ಪೈಕಿ 38 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಬಾರಿಯೂ ಡಿಎಂಕೆ 38 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇಲ್ಲಿ ಡಿಎಂಕೆ, ಕಾಂಗ್ರೆಸ್, ಎಡಪಕ್ಷಗಳು, ದಲಿತ ಗುಂಪುಗಳು ಮತ್ತು ಅಲ್ಪಸಂಖ್ಯಾತ ಪಕ್ಷಗಳನ್ನು ಮೈತ್ರಿ ಮಾಡಿಕೊಂಡಿವೆ.
ಕಣದಲ್ಲಿದ್ದ ಪ್ರಮುಖರು
ಮಣಿ ಎ. (ಡಿಎಂಕೆ), ಎಂ.ಕೆ. ಕೃಷ್ಣ ಪ್ರಸಾದ್ (ಕಾಂಗ್ರೆಸ್), ವೆಂಕಟೇಶನ್ ಎಸ್. (ಸಿಪಿಐ (ಎಂ)), ಎ. ರಾಜಾ (ಡಿಎಂಕೆ), ಮುರಸೋಳಿ ಎಸ್. (ಡಿಎಂಕೆ), ಅಣ್ಣಾಮಲೈ (ಬಿಜೆಪಿ), ರಾಧಿಕಾ ಶರತ್ ಕುಮಾರ್ (ಬಿಜೆಪಿ), ಕನಿಮೋಳಿ (ಡಿಎಂಕೆ), ದಯಾನಿಧಿ ಮಾರನ್ (ಡಿಎಂಕೆ), ಸ್ಟಾಲಿನ್ (ಡಿಎಂಕೆ), ತಮಿಳಿಸಾಯಿ ಸುಂದರರಾಜನ್ (ಬಿಜೆಪಿ).
ಇದನ್ನೂ ಓದಿ: Election Results 2024: ಶಶಿ ತರೂರ್ ವಿರುದ್ಧ ವೀರೋಚಿತ ಸೋಲು ಕಂಡ ಬಿಜೆಪಿಯ ರಾಜೀವ್ ಚಂದ್ರಶೇಖರ್