Site icon Vistara News

Election Results 2024: ಕೇರಳದಲ್ಲಿ ಕೊನೆಗೂ ಅರಳಿದ ಕಮಲ; ತ್ರಿಶೂರ್‌ನಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್‌ ಗೋಪಿ ಭರ್ಜರಿ ಜಯ

Election Results 2024

Election Results 2024

ತಿರುವನಂತಪುರಂ: ಕೊನೆಗೂ ಬಿಜೆಪಿಯ ಕನಸು ನನಸಾಗಿದೆ. ಕೇರಳದಲ್ಲಿ ಮೊದಲ ಬಾರಿಗೆ ಖಾತೆ ತೆರೆದಿದೆ. ತ್ರಿಶೂರ್‌ನಲ್ಲಿ ನಟ, ಬಿಜೆಪಿ ಅಭ್ಯರ್ಥಿ ಸುರೇಶ್‌ ಗೋಪಿ (Suresh Gopi) ಜಯ ಗಳಿಸಿದ್ದಾರೆ. ಇವರು ಕಾಂಗ್ರೆಸ್‌ನ ಕೆ. ಮುರಳೀಧರನ್‌ ಮತ್ತು ಸಿಪಿಐಯ ವಿ.ಎಸ್‌. ಸುನೀಲ್‌ ಕುಮಾರ್‌ ಅವರನ್ನು ಸೋಲಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ (Election Results 2024).

ಈ ಹಿಂದಿನ ಲೋಕಸಭೆ ಚುನಾವಣೆ (2019)ಯಲ್ಲಿಯೂ ಸುರೇಶ್‌ ಗೋಪಿ ಉತ್ತಮ ಪ್ರದರ್ಶನ ತೋರಿದ್ದರು. ಶೇ. 28.19ರಷ್ಟು ಮತಗಳನ್ನು ತನ್ನದಾಗಿಸಿಕೊಂಡಿದ್ದರು. ಆ ಸಮಯದಲ್ಲಿ ಸಿಪಿಐಯ ರಾಜಾಜಿ ಮ್ಯಾಥ್ಯೂ ಥಾಮಸ್ ಶೇ. 30.85 ಮತ ಪಡೆದಿದ್ದರು. ಕಾಂಗ್ರೆಸ್‌ನ ಟಿ.ಎಸ್.ಪಾರ್ಥಪನ್ ಶೇ. 39.83ರಷ್ಟು ಮತ ಪಡೆದು ಜಯ ಗಳಿಸಿದ್ದರು. ಅವರು 4,15,089 ಮತಗಳನ್ನು ಗಳಿಸಿ 3,21,456 ಮತಗಳನ್ನು ಪಡೆದ ಸಿಪಿಐಯ ರಾಜಾಜಿ ಮ್ಯಾಥ್ಯೂ ಥಾಮಸ್ ಅವರನ್ನು ಸೋಲಿಸಿದ್ದರು.

ಸುರೇಶ್‌ ಗೋಪಿ ಹಿನ್ನೆಲೆ ಏನು?

ಮಾಲಿವುಡ್‌ನ ಜನಪ್ರಿಯ ನಟರಲ್ಲಿ ಸುರೇಶ್‌ ಗೋಪಿ ಕೂಡ ಒಬ್ಬರು. 65 ವರ್ಷದ ಸೂರೇಶ್‌ ಗೋಪಿ ಮಲಯಾಳಂ ಜತೆಗೆ ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳ ಕೆಲವು ಚಿತ್ರಗಳಲ್ಲಿಯೂ ನಟಿಸಿದ್ದಾರೆ. 1988ರಲ್ಲಿ ತೆರೆಕಂಡ ʼನ್ಯೂ ಡೆಲ್ಲಿʼ ಸಿನಿಮಾ ಮೂಲಕ ಅವರು ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದರು. 1997ರಲ್ಲಿ ತೆರೆಕಂಡ ಮಲಯಾಳಂನ ʼಕಲಿಯಾಟ್ಟಂʼ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿದ್ದರು. ಖಡಕ್‌ ಪೊಲೀಸ್‌ ಪಾತ್ರ ಮತ್ತು ಆ್ಯಕ್ಷನ್‌ ಚಿತ್ರಗಳಿಗೆ ಅವರು ಪ್ರಸಿದ್ಧರಾಗಿದ್ದು, ರಿಯಾಲಿಟಿ ಶೋಗಳನ್ನೂ ನಡೆಸಿಕೊಟ್ಟಿದ್ದಾರೆ. ಕಾಲೇಜು ದಿನಗಳಲ್ಲಿ ಎಡ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಅವರು 2016ರಲ್ಲಿ ಅವರು ಬಿಜೆಪಿ ಸೇರ್ಪಡೆಯಾಗಿದ್ದರು. ಅಂದು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು, 2021ರಲ್ಲಿ ಕೇರಳ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಇದೀಗ ಎರಡನೇ ಪ್ರಯತ್ನದಲ್ಲಿ ಗೆದ್ದು ಬೀಗಿದ್ದಾರೆ. ಸುಮಾರು 30 ಸಾವಿರ ಅಂತರದಿಂದ ಗೆದ್ದಿದ್ದಾರೆ.

ಮುನ್ನಡೆಯಲ್ಲಿ ರಾಹುಲ್‌ ಗಾಂಧಿ

ಇತ್ತ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಯನಾಡಿನಿಂದ ಸ್ಪರ್ಧಿಸುತ್ತಿದ್ದು, ಮುನ್ನಡೆ ಸಾಧಿಸಿದ್ದಾರೆ. ಇಲ್ಲಿ ಸಿಪಿಐಯಿಂದ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಆ್ಯನಿ ರಾಜಾ ಮತ್ತು ಬಿಜೆಪಿಯಿಂದ ಕೆ.ಸುರೇಂದ್ರನ್‌ ಸ್ಪರ್ಧಿಸುತ್ತಿದ್ದಾರೆ. ಕಳೆದ ಬಾರಿಯೂ ಇಲ್ಲಿ ರಾಹುಲ್‌ ಗಾಂಧಿ ಸ್ಪರ್ಧಿಸಿ ಗೆದ್ದಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಸಿಪಿಐನ ಪಿ.ಪಿ.ಸುನೀರ್ ಅವರನ್ನು 4.31 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. ಇನ್ನು ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಈ ಬಾರಿ ಜಿದ್ದಾಜಿದ್ದಿನ ಹೋರಾಟ ನಡೆಯುವ ನಿರೀಕ್ಷೆ ಇದೆ. ಇಲ್ಲಿ ಬಿಜೆಪಿ ಹಿರಿಯ ನಾಯಕ, ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್‌ನಿಂದ ಹಿರಿಯ ನಾಯಕ ಶಶಿ ತರೂರರ್‌ ಸ್ಪರ್ಧಿಸುತ್ತಿದ್ದಾರೆ. ಶಶಿ ತರೂರ್‌ ಅವರಿಗೆ ಇದು ನಾಲ್ಕನೇ ಸ್ಪರ್ಧೆ. ಸದ್ಯ ಶಶಿ ತರೂರ್‌ ಅವರು ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ಬಹು ನಿರೀಕ್ಷಿತ ಕ್ಷೇತ್ರಗಳಲ್ಲಿ ಇದೂ ಕೂಡ ಒಂದು.

ಇದನ್ನೂ ಓದಿ: Lok Sabha Election Results 2024: ಎರಡೂ ಕಡೆಗಳಲ್ಲಿ ರಾಹುಲ್‌ ಗಾಂಧಿಗೆ ಭರ್ಜರಿ ಮುನ್ನಡೆ

Exit mobile version