ನವದೆಹಲಿ: ಲೋಕಸಭಾ ಚುನಾವಣಾ ಫಲಿತಾಂಶ (Election Results 2024)ದ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು, ಇನ್ನೇನು ಕೆಲವೇ ಹೊತ್ತಿನಲ್ಲಿ ವಿಜಯ ಮಾಲೆ ಯಾರ ಕೊರಳಿಗೆ ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ. ಕೆಲವು ಕ್ಷೇತ್ರಗಳು ಪ್ರಭಾವಿ ಅಭ್ಯರ್ಥಿಗಳ ಸ್ಪರ್ಧೆಯಿಂದ ದೇಶದ ಗಮನ ಸೆಳೆದಿದೆ. ಅಂತಹ ಕ್ಷೇತ್ರಗಳ ಸಂಕ್ಷಿಪ್ತ ವಿವರ ಇಲ್ಲಿದೆ.
ವಾರಣಾಸಿ: ನರೇಂದ್ರ ಮೋದಿ VS ಅಜಯ್ ರಾಯ್
ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಣಾಸಿಯಿಂದ ಸತತ ಮೂರನೇ ಬಾರಿ ಕಣಕ್ಕಿಳಿದಿದ್ದಾರೆ. 2014ರಲ್ಲಿ ಮೋದಿ ಅವರು ಆಮ್ ಆದ್ಮಿ ಪಾರ್ಟಿಯ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ್ದರು. 2019ರಲ್ಲಿ ಸಮಾಜವಾದಿ ಪಾರ್ಟಿಯ ಶಾಲಿನಿ ಯಾದವ್ ವಿರುದ್ಧ ಜಯ ಗಳಿಸಿದ್ದರು. ಇನ್ನು ಕಾಂಗ್ರೆಸ್‌ನಿಂದ ಸತತ ಮೂರನೇ ಬಾರಿಯೂ ಇಲ್ಲಿ ಅಜಯ್ ರಾಯ್ ಸ್ಪರ್ಧಿಸುತ್ತಿದ್ದಾರೆ. ಈ ಹಿಂದೆ ವಾರಣಾಸಿ ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ ಜೋಷಿ ಅವರ ಕ್ಷೇತ್ರವಾಗಿತ್ತು.
ವಯನಾಡು: ರಾಹುಲ್ ಗಾಂಧಿ VS ಆ್ಯನಿ ರಾಜ
ಕೇರಳದ ವಯನಾಡು ದೇಶದ ಗಮನ ಸೆಳೆದ ಇನ್ನೊಂದು ಕ್ಷೇತ್ರ. ಇಲ್ಲಿ ಎರಡನೇ ಅವಧಿಗೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿಪಿಐ ನಾಯಕಿ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಆ್ಯನಿ ರಾಜಾ ಅವರನ್ನು ಎದುರಿಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಸಿಪಿಐ ಎರಡೂ ʼಇಂಡಿಯಾʼ ಮೈತ್ರಿಕೂಟದ ಸದಸ್ಯರಾಗಿರುವುದರಿಂದ ಈ ಸ್ಪರ್ಧೆಯು ಸಾರ್ವಜನಿಕ ಆಸಕ್ತಿಯನ್ನು ಕೆರಳಿಸಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಸಿಪಿಐನ ಪಿ.ಪಿ.ಸುನೀರ್ ಅವರನ್ನು 4.31 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು.
ಅಮೇಥಿ: ಸ್ಮೃತಿ ಇರಾನಿ VS ಕಿಶೋರ್ ಲಾಲ್ ಶರ್ಮಾ
2019ರಲ್ಲಿ ಉತ್ತರಪ್ರದೇಶದ ಅಮೇಥಿಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಜಯ ಗಳಿಸಿ ಇತಿಹಾಸ ಬರೆದಿದ್ದರು. ಈ ಬಾರಿಯೂ ಸ್ಮೃತಿ ಇರಾನಿ ಇಲ್ಲಿಂದಲೇ ಕಣಕ್ಕಿಳಿದಿದ್ದು, ರಾಹುಲ್ ಗಾಂಧಿ ಬದಲು ಕಾಂಗ್ರೆಸ್‌ನಿಂದ ಕಿಶೋರ್ ಲಾಲ್ ಶರ್ಮಾ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 25 ವರ್ಷಗಳಲ್ಲಿ ಮೊದಲ ಬಾರಿಗೆ ಇಲ್ಲಿ ಗಾಂಧಿ ಕುಟುಂಬದ ಸದಸ್ಯರು ಸ್ಪರ್ಧಿಸುತ್ತಿಲ್ಲ ಎನ್ನುವುದು ವಿಶೇಷ.
ತಿರುವನಂತಪುರಂ: ರಾಜೀವ್ ಚಂದ್ರಶೇಖರ್ VS ಶಶಿ ತರೂರ್
ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಈ ಬಾರಿ ಜಿದ್ದಾಜಿದ್ದಿನ ಹೋರಾಟ ನಡೆಯುವ ನಿರೀಕ್ಷೆ ಇದೆ. ಇಲ್ಲಿ ಬಿಜೆಪಿ ಹಿರಿಯ ನಾಯಕ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್‌ನಿಂದ ಹಿರಿಯ ನಾಯಕ ಶಶಿ ತರೂರರ್ ಸ್ಪರ್ಧಿಸುತ್ತಿದ್ದಾರೆ. ಶಶಿ ತರೂರ್ ಅವರಿಗೆ ಇದು ನಾಲ್ಕನೇ ಸ್ಪರ್ಧೆ.
ಬಹರಾಂಪುರ: ಅಧೀರ್ ರಂಜನ್ ಚೌಧರಿ VS ಯೂಸುಫ್ ಪಠಾಣ್
ಪಶ್ಚಿಮ ಬಂಗಾಳದ ಬಹರಾಂಪುರ ಕ್ಷೇತ್ರ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಸ್ಪರ್ಧೆಯಿಂದ ಸಾರ್ವಜನಿಕರ ಗಮನ ಸೆಳೆದಿದೆ. ಅವರು ತೃಣಮೂಲ ಕಾಂಗ್ರೆಸ್‌ನಿಂದ ಕಣಕ್ಕಿಳಿದರೆ ಕಾಂಗ್ರೆಸ್‌ನಿಂದ ಅಧಿರ್ ರಂಜನ್ ಚೌಧರಿ ಸ್ಪರ್ಧಿಸುತ್ತಿದ್ದಾರೆ.
ನವ ದೆಹಲಿ: ಬಾನ್ಸುರಿ ಸ್ವರಾಜ್ VS ಸೋಮನಾಥ್ ಭಾರ್ತಿ
ಹೊಸ ದಿಲ್ಲಿಯ ಕ್ಷೇತ್ರದಿಂದ ಬಿಜೆಪಿಯಿಂದ ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಸ್ಪರ್ಧಿಸುತ್ತಿದ್ದಾರೆ. ಇವರಿಗೆ ಆಮ್ ಆದ್ಮಿ ಪಾರ್ಟಿಯ ಸೋಮನಾಥ್ ಭಾರ್ತಿ ಸವಾಲೊಡ್ಡಿದ್ದಾರೆ. ಈ ಕ್ಷೇತ್ರದ ಎರಡು ಬಾರಿಯ ಸಂಸದೆ ಮತ್ತು ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರನ್ನು ಬದಲಾಯಿಸಿ ಬಿಜೆಪಿ ಬಾನ್ಸುರಿ ಸ್ವರಾಜ್ ಅವರಿಗೆ ಟಿಕೆಟ್ ನೀಡಿದೆ. ರಾಷ್ಟ್ರ ರಾಜಧಾನಿಯಲ್ಲಿ ಕಾಂಗ್ರೆಸ್ ಮತ್ತು ಎಎಪಿ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ, ಈ ಹೈ ಪ್ರೊಫೈಲ್ ಕ್ಷೇತ್ರದಲ್ಲಿನ ಸ್ಪರ್ಧೆಯು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಶಿವಮೊಗ್ಗ: ಬಿ.ವೈ.ರಾಘವೇಂದ್ರ VS ಕೆ.ಎಸ್.ಈಶ್ವರಪ್ಪ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ಬಿಜೆಪಿಯಿಂದ ಮತ್ತು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಪಕ್ಷೇತರರಾಗಿ ಸ್ಪರ್ಧಿಸಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರ ರಾಜ್ಯ ಮಾತ್ರವಲ್ಲ ದೇಶದ ಗಮನ ಸೆಳೆದಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಬಿ.ವೈ.ರಾಘವೇಂದ್ರ ಅವರು 2.23 ಲಕ್ಷ ಮತಗಳ ಅಂತರದಲ್ಲಿ ಜೆಡಿಎಸ್‌ನ ಮಧು ಬಂಗಾರಪ್ಪ ಅವರ ವಿರುದ್ಧ ಗೆಲುವು ಸಾಧಿಸಿದ್ದರು. 2014ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿಯಿಂದ ಸ್ಪರ್ಧಿಸಿ ಸುಮಾರು 3 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು. ಹೀಗಾಗಿ ಈ ಬಾರಿ ಜಯ ಯಾರಿಗೆ ಒಲಿಯಲಿದೆ ಎನ್ನುವ ಕುತೂಹಲ ಮೂಡಿದೆ.
ಇದನ್ನೂ ಓದಿ: Lok Sabha Election 2024:ಮತ ಎಣಿಕೆ ಮೊದಲೇ ಕಾಂಗ್ರೆಸ್ ನಾಯಕರಿಂದ ಮತಯಂತ್ರ ದೂಷಣೆ ಆರಂಭ!