ಹೊಸದಿಲ್ಲಿ: ಲೋಕಸಭೆ ಚುನಾವಣೆ (Lok Sabha Election 2024) ಮತ ಎಣಿಕೆಯ (Election Results 2024) ಕೊನೆಯ ಹಂತವನ್ನು ಸಮೀಪಿಸುತ್ತಿರುವಂತೆ, ತೀವ್ರ ಮುಖಭಂಗ ಅನುಭವಿಸಿದ್ದು ಎಂದರೆ ಎಕ್ಸಿಟ್ ಪೋಲ್‌ಗಳು (Exit polls 2024). ದೇಶಾದ್ಯಂತ ಬಹುತೇಕ ನಿರ್ಗಮನ ಸಮೀಕ್ಷೆಗಳು ಮಕಾಡೆ ಮಲಗಿವೆ; ದಾರುಣ ಸೋಲು ಅನುಭವಿಸಿವೆ.
ಶನಿವಾರದಂದು ಕೊನೆಯ, 7ನೇ ಹಂತದ ಮತದಾನದ ನಂತರ ಎಕ್ಸಿಟ್ ಪೋಲ್‌ಗಳು ಪ್ರಕಟವಾದಾಗ ಅವರಲ್ಲಿ ಹೆಚ್ಚಿನವರು ಒಂದೇ ಧ್ವನಿಯಲ್ಲಿ ಮಾತನಾಡಿದ್ದರು. ಎಲ್ಲರೂ ಬಿಜೆಪಿ ಮತ್ತು ಎನ್‌ಡಿಎಗೆ ಪ್ರಚಂಡ ಬಹುಮತವನ್ನು ನೀಡಿದ್ದರು. ಒಟ್ಟು 14 ಎಕ್ಸಿಟ್ ಪೋಲ್‌ಗಳ ಸಮೀಕ್ಷೆಗಳು ಎನ್‌ಡಿಎಗೆ ಸರಾಸರಿ 362-365 ಲೋಕಸಭಾ ಸ್ಥಾನಗಳನ್ನು ನೀಡಿದ್ದವು. ಮತ್ತು ಭಾರತ ಮೈತ್ರಿಕೂಟಕ್ಕೆ ಕೇವಲ 146 ಸ್ಥಾನಗಳನ್ನು ನೀಡಿದ್ದವು.
ಎಕ್ಸಿಟ್ ಪೋಲ್‌ಗಳಲ್ಲಿ ಮೂರು, ಇವು ಈ ಹಿಂದೆ ಕೆಲವು ಬಾರಿ ಸಾಕಷ್ಟು ನಿಖರ ಅಂದಾಜು ಮಾಡಿದ್ದವು- ಎನ್‌ಡಿಎ 400 ಸ್ಥಾನಗಳನ್ನು ಕೂಡ ಮುಟ್ಟಬಹುದು ಎಂದು ಹೇಳಿದ್ದವು. ಸ್ವತಃ ಎನ್‌ಡಿಎ ತನಗಾಗಿ ನಿಗದಿಪಡಿಸಿದ ಗುರಿ 400 ಆಗಿತ್ತು. ʼಅಬ್ ಕಿ ಬಾರ್ 400 ಪಾರ್ʼ ಎಂಬ ಘೋಷಣೆಯನ್ನು ಹುಟ್ಟುಹಾಕಿತ್ತು. ಬಿಜೆಪಿಯು ತನ್ನದೇ ಬಲದ ಮೇಲೆ ಸುಮಾರು 330 ಸ್ಥಾನಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗಿತ್ತು. ಕಳೆದ ಬಾರಿ ಅದು 303 ಸ್ಥಾನ ಗೆದ್ದಿತ್ತು.
ಮೂರು ದಿನಗಳ ನಂತರ ನೋಡಿದಾಗ, ಈ ಸಮೀಕ್ಷೆಗಳು ದೊಡ್ಡ ಅಂತರದಿಂದಲೇ ದಾರಿ ತಪ್ಪಿದ್ದವು ಎಂದು ಗೊತ್ತಾಗಿದೆ. ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಎನ್‌ಡಿಎ 295 ಸ್ಥಾನಗಳ ಸಮೀಪ ಬಂದು ನಿಂತಿದೆ. ಇದು ಎಕ್ಸಿಟ್ ಪೋಲ್‌ಗಳು ಅಂದಾಜು ಮಾಡಿದ ಸರಾಸರಿಗಿಂತ 74 ಕಡಿಮೆ ಸ್ಥಾನ. ಬಿಜೆಪಿ 241ರ ಆಸುಪಾಸಿನಲ್ಲಿದೆ. ಸಮೀಕ್ಷೆಗಳು ಭವಿಷ್ಯ ನುಡಿದ ಅಂಕಿಅಂಶಕ್ಕಿಂತ ಇದು ತುಂಬಾ ಕಡಿಮೆಯಾಗಿದೆ. ಬಹುಮತಕ್ಕೆ 272 ಸ್ಥಾನ ಬೇಕು. ಬಿಜೆಪಿ ಅದನ್ನೂ ಗಳಿಸಿಲ್ಲ.
ಈ ಚುನಾವಣೆಯ ಫಲಿತಾಂಶದ ಗಮನ ಸೆಳೆಯುವ ಸಂಗತಿ ಎಂದರೆ ಉತ್ತರ ಪ್ರದೇಶದ ಕಥೆ. ಅಲ್ಲಿ ಬಿಜೆಪಿ ಕೇವಲ 33 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. 2019ರಲ್ಲಿ ಅದು 62 ಸ್ಥಾನ ಗಳಿಸಿತ್ತು. ಈ ಬಾರಿ ಅರ್ಧಕ್ಕೆ ಇಳಿದಿದೆ. ಇದು ನಿರ್ಗಮನ ಸಮೀಕ್ಷೆಗಳು ಎಷ್ಟು ಪೊಳ್ಳಾಗಿವೆ ಎಂಬುದರ ಪ್ರತಿಬಿಂಬವಾಗಿದೆ. ಇಲ್ಲಿ ಸಮೀಕ್ಷೆಗಾರರು ಬಿಜೆಪಿಗೆ ಸರಾಸರಿ 68 ಸ್ಥಾನಗಳನ್ನು ನೀಡಿದ್ದರು. ಇಂಡಿಯಾ ಬ್ಲಾಕ್‌ಗೆ ಕೇವಲ 12 ಎಂದಿದ್ದವು. ಇದರಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪ್ರಮುಖ ಘಟಕಗಳು. ಸಮಾಜವಾದಿ ಪಕ್ಷ 36 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 7ರಲ್ಲಿ ಮುನ್ನಡೆ ಸಾಧಿಸಿವೆ. ಇವರ ಒಟ್ಟು ಸಂಖ್ಯೆ 43ಕ್ಕೆ ಏರಿದೆ.
2021ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಹೆಚ್ಚಿನ ನಿರ್ಗಮನ ಸಮೀಕ್ಷೆಗಳು ರಾಜ್ಯದ 294 ಸ್ಥಾನಗಳಲ್ಲಿ 100ಕ್ಕೂ ಹೆಚ್ಚು ಸ್ಥಾನಗಳು ಬಿಜೆಪಿಗೆ ಬರಲಿದೆ ಎಂದಿದ್ದವು. ಕೆಲವು ಪೋಲ್‌ಗಳು ಬಿಜೆಪಿ 148ರ ಬಹುಮತದ ಗೆರೆಯನ್ನು ದಾಟುತ್ತದೆ ಮತ್ತು ಅಲ್ಲಿ ಸರ್ಕಾರವನ್ನು ರಚಿಸುತ್ತದೆ ಎಂದು ಭವಿಷ್ಯ ನುಡಿದಿದ್ದವು. ಅಂತಿಮವಾಗಿ ಭಾಜಪ 77 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
ಷೇರು ಮಾರುಕಟ್ಟೆಯಲ್ಲಿ 40 ಲಕ್ಷ ಕೋಟಿ ರೂ. ನಷ್ಟ
ಎಕ್ಸಿಟ್ ಪೋಲ್‌ಗಳ ತೀರ್ಪುಗಳನ್ನು ಆಧರಿಸಿ ಎನ್‌ಡಿಎ ಕೂಡ ಪ್ರಫುಲ್ಲಿತವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿದ ಸಂದರ್ಶನಗಳಲ್ಲಿ, ಇಂದು ಚುನಾವಣಾ ಫಲಿತಾಂಶಗಳ ಘೋಷಣೆಯೊಂದಿಗೆ ಮಾರುಕಟ್ಟೆಯಲ್ಲಿ ಭಾರಿ ಏರುವಿಕೆಯನ್ನು ಊಹಿಸಿದ್ದರು. ದೇಶೀಯ ಷೇರು ಮಾರುಕಟ್ಟೆಯಲ್ಲಿ ಏರಿಕೆಯನ್ನು ಮುನ್ಸೂಚಿಸಿದ್ದ ಶಾ, ಜೂನ್ 4ರ ಮೊದಲು ಷೇರುಗಳ ಖರೀದಿ ಪರಿಗಣಿಸುವಂತೆ ಹೂಡಿಕೆದಾರರನ್ನು ಒತ್ತಾಯಿಸಿದ್ದರು. ಬಿಜೆಪಿ ನೇತೃತ್ವದ ಎನ್‌ಡಿಎ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ; ಕೇಂದ್ರದಲ್ಲಿ ಸ್ಥಿರವಾದ ಮೋದಿ ಸರ್ಕಾರದ ಪರಿಣಾಮವಾಗಿ ಮಾರುಕಟ್ಟೆ ಭಾರಿಯಾಗಿ ಏರಲಿದೆ ಎಂದು ಅವರು ಭವಿಷ್ಯ ನುಡಿದಿದ್ದರು.
ಆದರೆ ಇಂದಿನ ಫಲಿತಾಂಶದ ಮುನ್ಸೂಚನೆಗಳು ಬರತೊಡಗಿದ ಕೂಡಲೇ ಭಾರತೀಯ ಸ್ಟಾಕ್ ಮಾರುಕಟ್ಟೆಯಲ್ಲಿ ತೀವ್ರವಾಗಿ ಕುಸಿಯಿತು. ಹೂಡಿಕೆದಾರರಿಗೆ ಶಾಕ್ ಉಂಟುಮಾಡಿತು. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಕುಸಿದವು; ಸುಮಾರು 50 ಬಿಎಸ್‌ಇ-ಲಿಸ್ಟೆಡ್ ಕಂಪನಿಗಳು ₹40 ಲಕ್ಷ ಕೋಟಿಗಳ ಮಾರುಕಟ್ಟೆ ಬಂಡವಾಳವನ್ನು ಅಳಿಸಿಹಾಕಿದವು. ಎಲ್ಲಾ ವಲಯದ ಸೂಚ್ಯಂಕಗಳು ಗಣನೀಯ ನಷ್ಟ ಹೊಂದಿದವು. ಸಾರ್ವಜನಿಕ ವಲಯದ (ಪಿಎಸ್‌ಯು) ಷೇರುಗಳು ನೆಲಕಚ್ಚಿದವು.
ಮಧ್ಯಾಹ್ನದ ಹೊತ್ತಿಗೆ ಸೆನ್ಸೆಕ್ಸ್ 5,157.44 ಪಾಯಿಂಟ್‌ಗಳು ಅಥವಾ 6.74%ರಷ್ಟು ಕುಸಿದು 71,311.34ಕ್ಕೆ ತಲುಪಿತು. ನಿಫ್ಟಿ 1,638.05 ಪಾಯಿಂಟ್‌ಗಳು ಅಥವಾ 7.04%ನಷ್ಟು ಕುಸಿದು 21,625.85ಕ್ಕೆ ತಲುಪಿತು. ಸೆನ್ಸೆಕ್ಸ್ ಮತ್ತು ನಿಫ್ಟಿ 2 ವರ್ಷಗಳಲ್ಲಿ ಅತಿದೊಡ್ಡ ಏಕದಿನ ಕುಸಿತ ಕಂಡವು.
ಇದನ್ನೂ ಓದಿ: Election Results 2024: ಉತ್ತರ-ದಕ್ಷಿಣ ಎರಡೂ ಕಡೆ ಭರ್ಜರಿ ಜಯ ದಾಖಲಿಸಿದ ರಾಹುಲ್ ಗಾಂಧಿ