Site icon Vistara News

Election Results 2024: 25 ವರ್ಷದ ಶಾಂಭವಿ ಚೌಧರಿ ದೇಶದ ಅತ್ಯಂತ ಕಿರಿಯ ಸಂಸದೆ

Election Results 2024

Election Results 2024

ಪಟನಾ: ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮುನ್ನಡೆ ಸಾಧಿಸಿದ್ದರೂ ಎಕ್ಸಿಟ್‌ ಪೋಲ್‌ ಸಮೀಕ್ಷೆಗಿಂತ ಭಿನ್ನ ಚಿತ್ರಣ ಕಂಡು ಬಂದಿದೆ. ಇತ್ತ 25 ವರ್ಷದ ಶಾಂಭವಿ ಚೌಧರಿ (Shambhavi Choudhary) ಜಯ ಗಳಿಸಿದ್ದು, ದೇಶದ ಅತ್ಯಂತ ಕಿರಿಯ ಸಂಸದೆ ಎನಿಸಿಕೊಂಡಿದ್ದಾರೆ. ಉತ್ತರ ಬಿಹಾರದ ಸಮಸ್ತಿಪುರ ಲೋಕಸಭಾ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅವರು ಇದೀಗ ಇತಿಹಾಸ ಬರೆದಿದ್ದಾರೆ (Election Results 2024).

ಯಾರು ಈ ಶಾಂಭವಿ ಚೌಧರಿ?

ನಿತೀಶ್ ಕುಮಾರ್ ನೇತೃತ್ವದ ಸರ್ಕಾರದ ಹಿರಿಯ ಜೆಡಿಯು ಸಚಿವ ಅಶೋಕ್ ಕುಮಾರ್ ಚೌಧರಿ ಅವರ ಪುತ್ರಿ ಶಾಂಭವಿ ಚೌಧರಿ. ಇವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸನ್ನಿ ಹಜಾರಿ ಅವರನ್ನು ಸುಮಾರು 1 ಲಕ್ಷ ಮತಗಳ ಅಂತರಿಂದ ಸೋಲಿಸಿದ್ದಾರೆ. ಮೊದಲ ಬಾರಿಗೆ ಸ್ಪರ್ಧಿಸಿದ್ದ ಶಾಂಭವಿ ಚೌಧರಿ ಜಯಭೇರಿ ಭಾರಿಸಿದ್ದಾರೆ. ಶಾಂಭವಿ ಅವರು ನಿವೃತ್ತ ಐಪಿಎಸ್‌ ಅಧಿಕಾರಿ ಕಿಶೋರ್‌ ಕುನಾಲ್‌ ಅವರ ಪುತ್ರ ಸಾಯನ್‌ ಕುನಾಲ್‌ ಅವರ ಪತ್ನಿ. ಇವರು ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್)ದಿಂದ ಸ್ಪರ್ಧಿಸಿದ್ದರು.

ವಿಶೇಷ ಎಂದರೆ ಶಾಂಭವಿ ಅವರ ಎದುರಾಳಿ ಸನ್ನಿ ಹಜಾರಿ ಜೆಡಿಯು ನಾಯಕ, ಸಚಿವ ಮಹೇಶ್ವರ್‌ ಹಜಾರಿ ಅವರ ಪುತ್ರ. ಇವರು ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರು. ಲೋಕಸಭಾ ಚುನಾವಣೆ ವೇಳೆ ಅವರು ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು. ಅದಾಗ್ಯೂ ಮಹೇಶ್ವರ್‌ ಹಜಾರಿ ತಮ್ಮ ಮಗನ ಪರವಾಗಿ ಪ್ರಚಾರ ಮಾಡದೆ ಅಂತರ ಕಾಯ್ದುಕೊಂಡಿದ್ದರು. ಮೊದಲು ಚಿರಾಗ್‌ ಪಾಸ್ವಾನ್‌ ಅವರ ಲೋಕ ಜನಶಕ್ತಿ ಪಕ್ಷ (ರಾಮ್‌ ವಿಲಾಸ್‌)ದಿಂದ ಟಿಕೆಟ್‌ಗಾಗಿ ಪ್ರಯತ್ನಿಸಿದ್ದ ಸನ್ನಿ ಅಲ್ಲಿ ಅವಕಾಶ ಸಿಗದ ಹಿನ್ನಲೆಯಲ್ಲಿ ಕಾಂಗ್ರೆಸ್‌ಗೆ ಹಾರಿದ್ದರು.

ಶಾಂಭವಿ ಪರ ಪ್ರಚಾರ ಮಾಡಿದ್ದ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಶಾಂಭವಿ ಪರವಾಗಿ ಪ್ರಚಾರ ಮಾಡಿದ್ದರು. ಕುನಾಲ್ ಅವರು ಅಯೋಧ್ಯೆ ರಾಮ ಮಂದಿರ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಪಟನಾದ ಮಹಾವೀರ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷರೂ ಆಗಿದ್ದಾರೆ. ಈ ಕ್ಷೇತ್ರದಲ್ಲಿ 2019ರಲ್ಲಿ ಲೋಕ ಜನಶಕ್ತಿ ಪಕ್ಷದ ಪ್ರಿನ್ಸ್‌ ರಾಜ್‌ ಅವರು ಸುಮಾರು 1 ಲಕ್ಷದ ಅಂತರದಿಂದ ಕಾಂಗ್ರೆಸ್‌ನ ಅಶೋಕ್‌ ಕುಮಾರ್‌ ಅವರನ್ನು ಸೋಲಿಸಿದ್ದರು. 2014ರಲ್ಲಿ ಕೇಂದ್ರದ ಮಾಜಿ ಸಚಿವ ದಿವಂಗತ ರಾಮ್‌ ವಿಲಾಸ್‌ ಪಾಸ್ವಾನ್‌ ಅವರ ಕಿರಿಯ ಸಹೋದರ ಸಮಸ್ತಿಪುರದಲ್ಲಿ ಜಯ ಗಳಿಸಿದ್ದರು. ಅಂದು ಕಾಂಗ್ರೆಸ್‌ನ ಅಶೋಕ್‌ ರಾಮ್‌ ಎರಡನೇ ಸ್ಥಾನ ಗಳಿಸಿದ್ದರು.

ಇದನ್ನೂ ಓದಿ: Election Results 2024: 5 ಬಾರಿಯ ಸಂಸದನ ವಿರುದ್ಧ ಚೊಚ್ಚಲ ಪ್ರಯತ್ನದಲ್ಲೇ ಭರ್ಜರಿ ಗೆಲುವು ಸಾಧಿಸಿದ ಯೂಸುಫ್ ಪಠಾಣ್

ಸದ್ಯದ ಚಿತ್ರಣ ಹೇಗಿದೆ

ಬಹುತೇಕ ಎಕ್ಸಿಟ್‌ ಪೋಲ್‌ಗಳು ಎನ್‌ಡಿಎಗೆ 320ಕ್ಕಿಂತ ಹೆಚ್ಚು ಸೀಟು ಲಭಿಸಲಿದೆ ಎಂದೇ ಭವಿಷ್ಯ ನುಡಿದಿದ್ದವು. ಈ ಮೂಲಕ ನರೇಂದ್ರ ಮೋದಿ ಮೂರನೇ ಬಾರಿ ಅಧಿಕಾರಕ್ಕೆ ಮರಳುತ್ತಾರೆ ಎಂದು ಹೇಳಿದ್ದವು. ಸದ್ಯದ ಟ್ರೆಂಡ್‌ ಪ್ರಕಾರ ಎನ್‌ಡಿಎಗೆ ಬಹುಮತ ಬಂದಿದ್ದರೂ 300 ಸೀಟು ದಾಟುವುದು ಬಹುತೇಕ ಅಸಾಧ್ಯ ಎಂದೇ ಹೇಳಲಾಗುತ್ತಿದೆ. ಎನ್‌ಡಿಎ 293 ಮತ್ತು ʼಇಂಡಿಯಾʼ ಒಕ್ಕೂಟ 232 ಕ್ಷೇತ್ರಗಳಲ್ಲಿ ಮುಂದಿದೆ.

Exit mobile version