Site icon Vistara News

Election Results 2024: ಸರ್ಕಾರ ರಚನೆಯ ಕಸರತ್ತು; ಒಂದೇ ವಿಮಾನದಲ್ಲಿ ದೆಹಲಿಗೆ ಹಾರಿದ ನಿತೀಶ್ ಕುಮಾರ್, ತೇಜಸ್ವಿ ಯಾದವ್

Election Results 2024

Election Results 2024

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024)ಯ ಫಲಿತಾಂಶ (Election Results 2024) ಹೊರ ಬಿದ್ದಿದ್ದು, ಮುಂದಿನ ಸರ್ಕಾರವನ್ನು ರಚಿಸಲು ತೀವ್ರ ಚರ್ಚೆ ಆರಂಭವಾಗಿದೆ. ಈ ಮಧ್ಯೆ ಬಿಹಾರ ಮುಖ್ಯಮಂತ್ರಿ, ಜೆಡಿಯು (JDU) ಮುಖ್ಯಸ್ಥ ನಿತೀಶ್ ಕುಮಾರ್ (Nitish Kumar) ಮತ್ತು ರಾಷ್ಟ್ರೀಯ ಜನತಾ ದಳ (RJD) ಮುಖಂಡ ತೇಜಸ್ವಿ ಯಾದವ್ (Tejashwi Yadav) ಬುಧವಾರ ಒಂದೇ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ, ಈ ಇಬ್ಬರು ಬಿಹಾರದ ನಾಯಕರು ಬೆಳಿಗ್ಗೆ 10.30ಕ್ಕೆ ವಿಸ್ತಾರಾ ವಿಮಾನದಲ್ಲಿ ಪ್ರಯಾಣಿಸಿದ್ದಾರೆ.

ವಿಶೇಷ ಎಂದರೆ ನಿತಿಶ್‌ ಕುಮಾರ್‌ ಬಿಜೆಪಿ ನೇತೃತ್ವದ ಎನ್‌ಡಿಎ ಬಣದಲ್ಲಿದ್ದರೆ ತೇಜಸ್ವಿ ಯಾದವ್ ಪ್ರತಿಪಕ್ಷಗಳ ʼಇಂಡಿಯಾʼ ಒಕ್ಕೂಟದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಈ ನಾಯಕರ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ. ನಿತೀಶ್‌ ಕುಮಾರ್‌ ಅವರನ್ನು ʼಇಂಡಿಯಾʼ ಒಕ್ಕೂಟ ತನ್ನತ್ತ ಸೆಳೆಯಲು ಮುಂದಾಗಿರುವುದು ಕೂಡ ರಾಜಕೀಯ ಚಟಿವಟಿಕೆ ಬಿರುಸು ಪಡೆದುಕೊಳ್ಳಲು ಕಾರಣವಾಗಿದೆ. ಕೆಲವು ತಿಂಗಳ ಮೊದಲು, ಎನ್‌ಡಿಎಗೆ ಸೇರುವ ಮುನ್ನ ನಿತೀಶ್ ಕೂಡ ಯುಪಿಎ ಜತೆಗಿದ್ದರು ಎನ್ನುವುದು ಗಮನಾರ್ಹ.

ಕೇಂದ್ರದಲ್ಲಿ ಸರ್ಕಾರ ರಚಿಸಲು ಬಿಜೆಪಿಯ ಮಿತ್ರ ಪಕ್ಷವಾಗಿ ಎನ್‌ಡಿಯ ಒಕ್ಕೂಟದಲ್ಲಿಯೇ ಉಳಿಯುವುದಾಗಿ ಜೆಡಿಯು ಈಗಾಗಲೇ ಸ್ಪಷ್ಟಪಡಿಸಿದೆ. ಬಿಹಾರದಲ್ಲಿ ಜೆಡಿಯು 12 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 12 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಎನ್‌ಡಿಎಯ ಇನ್ನೊಂದು ಮಿತ್ರಪಕ್ಷ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (LJP) 5 ಸ್ಥಾನಗಳನ್ನು ಗೆದ್ದಿದೆ. ಜೆಡಿಯು ನಾಯಕರು ಬುಧವಾರ ಬೆಳಿಗ್ಗೆ ನಿತೀಶ್‌ ಕುಮಾರ್‌ ಅವರನ್ನು ಭೇಟಿಯಾಗಿ ಸರ್ಕಾರ ರಚಿಸುವ ಬಗ್ಗೆ ಚರ್ಚೆ ನಡೆಸಿದ್ದರು.

ಜೆಡಿಯು ಹೇಳಿದ್ದೇನು?

ಮಂಗಳವಾರ ಜೆಡಿಯು ವಕ್ತಾರ ಕೆ.ಸಿ.ತ್ಯಾಗಿ ಅವರು ಮಾತನಾಡಿ, ತಮ್ಮ ಪಕ್ಷ ಎನ್‌ಡಿಎಯೊಂದಿಗೆ ಉಳಿಯಲಿದೆ ಎಂದು ಸ್ಪಷ್ಟಪಡಿಸಿದ್ದರು. “ನಾವು ನಮ್ಮ ನಿಲುವನ್ನು ಮುಂದುವರಿಸುತ್ತೇವೆ. ನಿತೀಶ್ ಕುಮಾರ್ ಅವರ ನಾಯಕತ್ವದಲ್ಲಿ, ಜೆಡಿಯು ಮತ್ತೊಮ್ಮೆ ಎನ್‌ಡಿಎಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ. ನಾವು ಎನ್‌ಡಿಎ ಜತೆಗಿದ್ದೇವೆ ಮತ್ತು ನಾವು ಎನ್‌ಡಿಎಯೊಂದಿಗೆ ಮುಂದುವರಿಯುತ್ತೇವೆ” ಎಂದು ಅವರು ಹೇಳಿದ್ದರು.

ಕೆಲವು ದಿನಗಳ ಹಿಂದೆ ʼಇಂಡಿಯಾʼ ಒಕ್ಕೂಟದ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ನಿತೀಶ್ ಕುಮಾರ್ ಅವರಿಗೆ ಕರೆ ಮಾಡಿದ್ದರು. ಇದಾದ ಬಳಿಕ ಬಿಹಾರ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಅವರು ನಿತೀಶ್ ಅವರ ನಿವಾಸಕ್ಕೆ ತೆರಳಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಇದನ್ನೂ ಓದಿ: Election Results 2024: ನಿತೀಶ್‌ಕುಮಾರ್, ಚಂದ್ರಬಾಬು ನಾಯ್ಡು ನೆರವಿಲ್ಲದೆ ಮೋದಿ ಸರ್ಕಾರ ನಡೆಸಲಾಗದೆ?

ಫಲಿತಾಂಶದ ವಿವರ

ಇಂಡಿಯಾ ಮಿತ್ರಪಕ್ಷಗಳು ಒಟ್ಟಾಗಿ 233 ಸ್ಥಾನಗಳನ್ನು ಗೆದ್ದಿವೆ. ಇದು ಬಹುಮತಕ್ಕೆ 39 ಸ್ಥಾನ ಕಡಿಮೆ ಬರುತ್ತದೆ. ಬಿಜೆಪಿ ನೇತೃತ್ವದ ಎನ್‌ಡಿಎ 291 ಸ್ಥಾನ ಗೆದ್ದಿದ್ದು, ಇದು ಬಹುಮತಕ್ಕಿಂತ 19 ಹೆಚ್ಚು ಇದೆ. ಬಿಜೆಪಿ ತನ್ನ ಸ್ವಂತ ಬಲದಿಂದ 240 ಸ್ಥಾನ ಗಳಿಸಿದೆ. ಮ್ಯಾಜಿಕ್ ಫಿಗರ್‌ಗಿಂತ 32 ಕಡಿಮೆ. ಯಾವುದೇ ಮೈತ್ರಿಯಲ್ಲಿ ಇಲ್ಲದ ಸಂಸದರಲ್ಲಿ 4 ವೈಎಸ್‌ಆರ್‌ಸಿಪಿ ಮತ್ತು ಪಕ್ಷೇತರರು ಇದ್ದಾರೆ. ಆದ್ದರಿಂದ, ಇಂಡಿಯಾ ಬಣವು ಅಧಿಕಾರವನ್ನು ಪಡೆಯಲು ಬಯಸಿದರೆ ಅವರು ಜೆಡಿಯು, ಟಿಡಿಪಿ ಮತ್ತು ಕೆಲವು ಸ್ವತಂತ್ರರನ್ನು ಒಟ್ಟುಗೂಡಿಸಲೇಬೇಕು. ಮತ್ತೊಂದೆಡೆ, ಬಿಜೆಪಿಯು ಅಧಿಕಾರದಲ್ಲಿ ಉಳಿಯಬೇಕಾದರೆ ಇವರನ್ನು ಎಷ್ಟು ವೆಚ್ಚವಾದರೂ ಉಳಿಸಿಕೊಳ್ಳಬೇಕು.

Exit mobile version