Site icon Vistara News

Election Results 2024: ಇಂದೋರ್‌ನಲ್ಲಿ NOTAಕ್ಕೆ ಲಭಿಸಿತು ಬರೋಬ್ಬರಿ 2 ಲಕ್ಷಕ್ಕೂ ಅಧಿಕ ಮತ; ಹಿಂದಿನ ದಾಖಲೆಗಳೆಲ್ಲ ಉಡೀಸ್‌

Election Results 2024

Election Results 2024

ಭೋಪಾಲ್‌: ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ. ಈ ಮಧ್ಯೆ ಅಚ್ಚರಿಯ ಸಂಗತಿಯೊಂದು ಹೊರ ಬಿದ್ದಿದ್ದು, ಮಧ್ಯ ಪ್ರದೇಶದ ಇಂದೋರ್‌ನಲ್ಲಿ ʼನೋಟಾʼ (ಮೇಲಿನ ಯಾರೂ ಅಲ್ಲ -NOTA)ಕ್ಕೆ 2 ಲಕ್ಷಕ್ಕೂ ಅಧಿಕ ಮತ ಬಿದ್ದಿದೆ. ಆ ಮೂಲಕ ಕ್ಷೇತ್ರದಲ್ಲಿ ʼನೋಟಾʼ ಎರಡನೇ ಸ್ಥಾನ ಪಡೆದುಕೊಂಡಿದೆ (Election Results 2024).

ದಾಖಲೆ

ʼನೋಟಾʼಕ್ಕೆ ಸುಮಾರು 2 ಲಕ್ಷಕ್ಕಿಂತ ಅಧಿಕ ಮತ ಬಿದ್ದಿದೆ. ಈ ಮೂಲಕ ಸುಮಾರು 11 ವರ್ಷಗಳಲ್ಲಿ ಅತೀ ಹೆಚ್ಚು ʼನೋಟಾʼ ಮತ ಪಡೆದಿರುವ ದಾಖಲೆ ನಿರ್ಮಿಸಿದೆ. ಈ ಹಿಂದೆ 2019ರಲ್ಲಿ ಬಿಹಾರದ ಗೋಪಾಲ್‌ಗಂಜ್‌ ಲೋಕಸಭಾ ಕ್ಷೇತ್ರದಲ್ಲಿ ʼನೋಟಾʼಕ್ಕೆ 51,660 ಮತ ಲಭಿಸಿತ್ತು. ಇದು ಇದುವರೆಗಿನ ಅತೀ ಹೆಚ್ಚಿನ ʼನೋಟಾʼ ಮತ ಎನಿಸಿಕೊಂಡಿತ್ತು. ಇದೀಗ ಇಂದೋರ್‌ ಈ ದಾಖಲೆಯನ್ನು ಮುರಿದಿದೆ. ಇಲ್ಲಿ ಬೆಜೆಪಿಯ ಅಭ್ಯರ್ಥಿ ಶಂಕರ್ ಲಾಲ್ವಾ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.

ಯಾಕಾಗಿ ನೋಟಾಕ್ಕೆ ದಾಖಲೆಯ ಮತ?

ʼನೋಟಾʼಕ್ಕೆ ಈ ರೀತಿಯ ದಾಖಲೆ ಸಂಖ್ಯೆಯ ಮತ ದೊರೆಯಲು ಕಾಂಗ್ರೆಸ್‌ ಕೂಡ ಕಾರಣ. ಯಾಕೆಂದರೆ ಕಾಂಗ್ರೆಸ್‌ ʼನೋಟಾʼಕ್ಕೆ ಮತ ಚಲಾಯಿಸುವಂತೆ ಪ್ರಚಾರ ಮಾಡಿತ್ತು. ಇಂದೋರ್ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಕ್ಷಯ್ ಕಾಂತಿ ಬಾಮ್‌ ಕಣಕ್ಕಿಳಿದಿದ್ದರು. ಬಳಿಕ ಕೊನೆಯ ಕ್ಷಣದಲ್ಲಿ ತಮ್ಮ ಉಮೇದುವಾರಿಗೆ ಹಿಂದಕ್ಕೆ ಪಡೆದಿದ್ದರು. ಇದರಿಂದ ಬೇರೆ ಅಭ್ಯರ್ಥಿಯನ್ನು ಅಖಾಡಕ್ಕೆ ಇಳಿಸಲು ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ. ತನ್ನ ಅಭ್ಯರ್ಥಿ ದ್ರೋಹ ಎಸಗಿದ್ದಾರೆ. ಹೀಗಾಗಿ ಬೇರೆ ಅಭ್ಯರ್ಥಿ ನಾಮಪತ್ರ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಕೈ ಪಡೆ ಮಧ್ಯಪ್ರದೇಶ ಹೈಕೋರ್ಟ್ ಮೊರೆ ಹೋಗಿತ್ತು. ಆದರೆ ಅಲ್ಲಿ ಅವಕಾಶ ಸಿಕ್ಕಿರಲಿಲ್ಲ.

ಹೀಗಾಗಿ ಕಾಂಗ್ರೆಸ್ ʼಪ್ರಜಾಪ್ರಭುತ್ವ ಉಳಿಸುವ’ ಮತ್ತು ‘ನೈತಿಕ ವಿಜಯ’ಕ್ಕಾಗಿ ಅದು ಹೋರಾಟ ನಡೆಸುವುದಾಗಿ ತಿಳಿಸಿ ʼನೋಟಾʼಕ್ಕೆ ಮತ ಚಲಾಯಿಸುವಂತೆ ವ್ಯಾಪಕ ಪ್ರಚಾರ ನಡೆಸಿತ್ತು. ಅಕ್ಷಯ್ ಕಾಂತಿ ಬಾಮ್ ಅವರ ಮೇಲೆ ಒತ್ತಡ ಹೇರಿ ಅವರನ್ನು ಕಣದಿಂದ ಹಿಂದೆ ಸರಿಯುವಂತೆ ಬಿಜೆಪಿ ಕುತಂತ್ರ ಮಾಡಿದೆ ಎನ್ನುವುದು ಕಾಂಗ್ರೆಸ್ ಆರೋಪ. ಅದಕ್ಕಾಗಿ ‘ನೋಟಾ’ದ ಪ್ರಚಾರ ನಡೆಸಿತ್ತು.

ಕಳೆದ ಬಾರಿಯೂ ಇಂದೋರ್‌ನಲ್ಲಿ ಸ್ಪರ್ಧಿಸಿ ಶಂಕರ್ ಲಾಲ್ವಾನಿ ಅವರು 5.4 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 1989ರಿಂದ ಸತತ ಎಂಟು ಚುನಾವಣೆಗಳಲ್ಲಿ ಬಿಜೆಪಿಯ ಸುಮಿತ್ರಾ ಮಹಾಜನ್ ಇಲ್ಲಿಂದ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: Election Results 2024: 2014ರ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್‌ಗೆ 100 ಸೀಟು, ಮತ್ತೆ ಚಿಗುರಿದ ಪುರಾತನ ಪಕ್ಷ!

ಏನಿದು ʼನೋಟಾʼ?

2013ರಲ್ಲಿ ʼನೋಟಾʼ ಆಯ್ಕೆಯನ್ನು ಮತದಾರರಿಗೆ ಒದಗಿಸಲಾಗಿತ್ತು. ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಯಾರೂ ಒಪ್ಪಿಗೆಯಾಗದಿದ್ದರೆ ಮತದಾರರು ʼನೋಟಾʼ ಆಯ್ಕೆಗೆ ಮತ ಹಾಕಬಹುದು. 2014ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ ನೀಲಗಿರೀಸ್‌ ಕ್ಷೇತ್ರದಲ್ಲಿ ʼನೋಟಾʼಕ್ಕೆ 46,559 ಮತ ಲಭಿಸಿತ್ತು. ದಾಖಲಾದ ಒಟ್ಟು ಮತಗಳ ಪೈಕಿ ಇದರ ಪ್ರಮಾಣ ಶೇ. 5. ಸುಮಾರು 72 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಇಂದೋರ್‌ನಲ್ಲಿ ಕಾಂಗ್ರೆಸ್‌ ಚುನಾವಣಾ ಕಣದಲ್ಲಿ ಇರಲಿಲ್ಲ ಎನ್ನುವುದು ವಿಶೇಷ.

Exit mobile version