Site icon Vistara News

Election Results 2024: ಶಶಿ ತರೂರ್‌ ವಿರುದ್ಧ ವೀರೋಚಿತ ಸೋಲು ಕಂಡ ಬಿಜೆಪಿಯ ರಾಜೀವ್‌ ಚಂದ್ರಶೇಖರ್‌

Election Results 2024

Election Results 2024

ತಿರುವನಂತಪುರಂ: ಈ ಬಾರಿಯ ಲೋಕಸಭಾ ಚುನಾವಣೆ ಫಲಿತಾಂಶ (Election Results 2024) ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ಅದರಲ್ಲಿಯೂ ಮುಖ್ಯವಾಗಿ ಕೇರಳದಲ್ಲಿ ಇದೇ ಮೊದಲ ಬಾಗಿ ಬಿಜೆಪಿ ಜಯಗಳಿಸಿದ್ದು, ತ್ರಿಶೂರ್‌ನಲ್ಲಿ ನಟ ಸುರೇಶ್‌ ಗೋಪಿ (Suresh Gopi) ಕಮಲ ಅರಳಿಸಿದ್ದಾರೆ. ಎಲ್‌ಡಿಎಫ್‌ ಮತ್ತು ಯುಡಿಎಫ್‌ ಪಾರಮ್ಯದ ನಡುವೆಯೂ ಕೇಸರಿ ಪಡೆ ಮತದಾರರ ಮನ ಗೆದ್ದಿದೆ. ಇನ್ನೊಂದೆಡೆ ತಿರುವನಂತಪುರಂನಲ್ಲಿ ಯುಡಿಎಫ್‌ (ಕಾಂಗ್ರೆಸ್‌) ಅಭ್ಯರ್ಥಿ ಶಶಿ ತರೂರ್‌ (Shashi Tharoor) ಅವರಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದ ಬಿಜೆಪಿಯ ರಾಜೀವ್‌ ಚಂದ್ರಶೇಖರ್‌ (Rajeev Chandrasekhar) ವೀರೋಚಿತವಾಗಿ ಸೋಲು ಕಂಡಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿಗಳು ಕಣಕ್ಕಿಳಿದ ಕಾರಣ ತಿರುವನಂತಪುರಂ ಲೋಕಸಭಾ ಕ್ಷೇತ್ರ ಇಡೀ ದೇಶದ ಗಮನ ಸೆಳೆದಿತ್ತು. ಲೋಕಸಭೆಯಲ್ಲಿ ತಿರುವನಂತಪುರಂ ಕ್ಷೇತ್ರವನ್ನು ಪ್ರತಿನಿಧಿಸಿದ ಶಶಿ ತರೂರ್ ಸತತ ನಾಲ್ಕನೇ ಬಾರಿಗೆ ಗೆದ್ದಿದ್ದಾರೆ. ಆದರೆ ಈ ಬಾರಿ 16,077 ಮತಗಳ ಅಲ್ಪ ಅಂತರದಿಂದ ಜಯ ಗಳಿಸಿದ್ದಾರೆ. ಹೈ ವೋಲ್ಟೇಜ್ ಸ್ಪರ್ಧೆಯಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಪನ್ನಿಯನ್ ರವೀಂದ್ರನ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಮುನ್ನಡೆ ಸಾಧಿಸಿದ್ದ ರಾಜೀವ್‌ ಚಂದ್ರಶೇಖರ್‌

ಆರಂಭದಲ್ಲಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಮುನ್ನಡೆ ಸಾಧಿಸಿದ್ದರು. ಒಂದು ಹಂತದಲ್ಲಿ ಅವರು ಜಯ ಗಳಿಸುತ್ತಾರೆ ಎಂದೂ ಭಾವಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಫೀನಿಕ್ಸ್‌ನಂತೆ ಎದ್ದು ಬಂದ ಶಶಿ ತರೂರು ಅಂತಿಮವಾಗಿ ಜಯ ತಮ್ಮದಾಗಿಸಿಕೊಂಡರು.

ಬೆಳಿಗ್ಗೆ ಒಂದು ಹಂತದಲ್ಲಿ ರಾಜೀವ್‌ ಚಂದ್ರಶೇಖರ್ ಅವರು ತರೂರ್ ಅವರಿಗಿಂತ 20,000ಕ್ಕೂ ಹೆಚ್ಚು ಮತಗಳ ಮುನ್ನಡೆಯನ್ನು ಹೊಂದಿದ್ದರು. ಅಂತಿಮವಾಗಿ ತರೂರ್ 3,58,155 ಮತಗಳನ್ನು ಪಡೆದರೆ, ರಾಜೀವ್‌ ಚಂದ್ರಶೇಖರ್ 34,2078 ಮತಗಳನ್ನು ಗಳಿಸಿದರು. ಪನ್ನಿಯನ್ ರವೀಂದ್ರನ್ 24,7648 ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಹಿಂದೆಯೂ ಕಠಿಣ ಸ್ಪರ್ಧೆ ಎದುರಾಗಿತ್ತು

ಶಶಿ ತರೂರ್‌ ಅವರಿಗೆ ಕಠಿಣ ಸ್ಪರ್ಧೆ ಎದುರಾಗುತ್ತಿರುವುದು ಇದು ಮೊದಲ ಸಲವೇನಲ್ಲ. 2014ರ ಚುನಾವಣೆಯಲ್ಲಿ ಬಿಜೆಪಿಯ ಒ.ರಾಜಗೋಪಾಲ್ ಪ್ರಬಲ ಸ್ಪರ್ಧೆ ಒಡ್ಡಿದ್ದರು. ಕೊನೆಗೆ ತರೂರ್ 15,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿ ನಿಟ್ಟುಸಿರು ಬಿಟ್ಟಿದ್ದರು. ಈ ಬಾರಿಯಾದರೂ ಕೇರಳದಲ್ಲಿ ಖಾತೆ ತೆರೆಯಬೇಕೆಂದು ಬಿಜೆಪಿ ಶತಾಯ ಗತಾಯ ಶ್ರಮಿಸಿದ್ದರು. ಪ್ರಧಾನ ಮಂತ್ರಿ ನರೆಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರು ಹಲವು ಪ್ರಚಾರ ನಡೆಸಿದ್ದರು.

ಗೆಲುವಿನ ಖಾತೆ ತೆರೆದ ಬಿಜೆಪಿ

ತ್ರಿಶೂರ್‌ನಲ್ಲಿ ಸುರೇಶ್‌ ಗೋಪಿ ಜಯ ಗಳಿಸಿದ್ದಾರೆ. ಇವರು ಕಾಂಗ್ರೆಸ್‌ನ ಕೆ. ಮುರಳೀಧರನ್‌ ಮತ್ತು ಸಿಪಿಐಯ ವಿ.ಎಸ್‌. ಸುನೀಲ್‌ ಕುಮಾರ್‌ ಅವರನ್ನು ಸೋಲಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಹಿಂದಿನ ಲೋಕಸಭೆ ಚುನಾವಣೆ (2019)ಯಲ್ಲಿಯೂ ಸುರೇಶ್‌ ಗೋಪಿ ಉತ್ತಮ ಪ್ರದರ್ಶನ ತೋರಿದ್ದರು. ಶೇ. 28.19ರಷ್ಟು ಮತಗಳನ್ನು ತನ್ನದಾಗಿಸಿಕೊಂಡಿದ್ದರು. ಆ ಸಮಯದಲ್ಲಿ ಸಿಪಿಐಯ ರಾಜಾಜಿ ಮ್ಯಾಥ್ಯೂ ಥಾಮಸ್ ಶೇ. 30.85 ಮತ ಪಡೆದಿದ್ದರು. ಕಾಂಗ್ರೆಸ್‌ನ ಟಿ.ಎಸ್.ಪಾರ್ಥಪನ್ ಶೇ. 39.83ರಷ್ಟು ಮತ ಪಡೆದು ಜಯ ಗಳಿಸಿದ್ದರು. ಅವರು 4,15,089 ಮತಗಳನ್ನು ಗಳಿಸಿ 3,21,456 ಮತಗಳನ್ನು ಪಡೆದ ಸಿಪಿಐಯ ರಾಜಾಜಿ ಮ್ಯಾಥ್ಯೂ ಥಾಮಸ್ ಅವರನ್ನು ಸೋಲಿಸಿದ್ದರು.

ಇದನ್ನೂ ಓದಿ: Election Results 2024: ಕೇರಳದಲ್ಲಿ ಕೊನೆಗೂ ಅರಳಿದ ಕಮಲ; ತ್ರಿಶೂರ್‌ನಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್‌ ಗೋಪಿ ಭರ್ಜರಿ ಜಯ

Exit mobile version