ಹೊಸದಿಲ್ಲಿ: ಲೋಕಸಭೆ ಚುನಾವಣೆ ಫಲಿತಾಂಶ (Election Results 2024) ಬಂದ ಬಳಿಕ ಎನ್‌ಡಿಎ (NDA) ಮೈತ್ರಿಪಕ್ಷಗಳನ್ನು ಸೇರಿಸಿಕೊಂಡು ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದೆ. ಈ ಹಿನ್ನಲೆಯಲ್ಲಿ ಇಂದು (ಜೂನ್ 5) ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆ ಸೇರಿದೆ. ಮಂಗಳವಾರ ಫಲಿತಾಂಶ ಪ್ರಕಟವಾದ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ ಅವರು ಎನ್‌ಡಿಎ ಸರ್ಕಾರ ರಚಿಸಲಿದೆ ಎಂದು ಘೋಷಿಸಿದ್ದು, ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ.
ಇಂದು ಬೆಳಿಗ್ಗೆ 11:30ಕ್ಕೆ ದೆಹಲಿಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಎನ್‌ಡಿಎ ನಾಯಕರು ಇಂದು ಪ್ರಧಾನಿ ಮೋದಿ ಅವರ ನಿವಾಸವಾದ 7 ಲೋಕ ಕಲ್ಯಾಣ ಮಾರ್ಗದಲ್ಲಿ ಅಪರಾಹ್ನ 3:30ರ ಸುಮಾರಿಗೆ ಸಭೆ ಸೇರಲಿದ್ದಾರೆ. ಪ್ರಮುಖ ನಾಯಕರಾದ ಬಿಹಾರ ಮುಖ್ಯಮಂತ್ರಿ, ಜೆಡಿಯು ನಾಯಕ ನಿತೀಶ್ ಕುಮಾರ್ ಮತ್ತು ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಈ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ನಿತೀಶ್ ಕುಮಾರ್ ಈಗಾಗಲೇ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ.
#WATCH | Delhi: Union Cabinet meeting begins at 7, Lok Kalyan Marg.
— ANI (@ANI) June 5, 2024
Earlier visuals from outside the 7, LKM. pic.twitter.com/FY5BT2BTNp
ಇತ್ತ ಪ್ರತಿಪಕ್ಷಗಳ ‘ಇಂಡಿಯಾ’ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಿದ್ದು, ಸರ್ಕಾರ ರಚನೆಗೆ ಕಸರತ್ತು ಆರಂಭಿಸಿದೆ. ‘ಇಂಡಿಯಾ’ ಬಣದ ಸಭೆಯನ್ನು ದೆಹಲಿಯಲ್ಲಿ ಸಂಜೆ 6 ಗಂಟೆಗೆ ಆಯೋಜಿಸಲಾಗಿದೆ.
ಬಹುಮತ ಪಡೆದುಕೊಳ್ಳದ ಬಿಜೆಪಿ
ಈ ಬಾರಿ ಬಿಜೆಪಿಗೆ ಬಹುಮತ ಲಭಿಸಿಲ್ಲ. ಹೀಗಾಗಿ ಕೇಸರಿ ಪಾಳಯ ತನ್ನ ಮಿತ್ರಪಕ್ಷಗಳೊಂದಿಗೆ ಸೇರಿ ಸರ್ಕಾರ ರಚಿಸುವ ಸನ್ನಾಹದಲ್ಲಿ ತೊಡಗಿಸಿಕೊಂಡಿದೆ. ಬಿಜೆಪಿ 240 ಸ್ಥಾನಗಳನ್ನು ಗೆದ್ದಿದೆ. 2019ರಲ್ಲಿ ಕಮಲ ಪಡೆ 303 ಸ್ಥಾನ ಗಳಿಸಿತ್ತು. ಮತ್ತೊಂದೆಡೆ ಕಾಂಗ್ರೆಸ್ 99 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಬಲ ಪೈಪೋಟಿ ಒಡ್ಡಿದೆ. ಒಟ್ಟಾರೆಯಾಗಿ ಎನ್‌ಡಿಎ 291 ಸ್ಥಾನ ಗೆದ್ದಿದ್ದು, ʼಇಂಡಿಯಾʼ ಒಕ್ಕೂಟ 233 ಸ್ಥಾನ ಗಳಿಸಿದೆ. ಹೀಗಾಗಿ ‘ಇಂಡಿಯಾ’ ಬಣ ಎನ್‌ಡಿಎಯ ಮಿತ್ರ ಪಕ್ಷಗಳನ್ನು ಸೆಳೆದು ಅಧಿಕಾರದ ಗದ್ದುಗೆಗೆ ಏರಲು ಪ್ರಯತ್ನ ಆರಂಭಿಸಿದೆ. ಬಹುಮತಕ್ಕೆ 272 ಸೀಟು ಅಗತ್ಯ. ಈಗಿನ ಲೆಕ್ಕಾಚಾರದ ಪ್ರಕಾರ ‘ಇಂಡಿಯಾ’ ಮಿತ್ರಪಕ್ಷಗಳಿಗೆ ಬಹುಮತಕ್ಕೆ 39 ಸ್ಥಾನ ಕಡಿಮೆ ಇದೆ. ಎನ್‌ಡಿಎಗೆ ಬಹುಮತಕ್ಕಿಂತ 19 ಹೆಚ್ಚು ಇದೆ. ಬಿಜೆಪಿ ಮ್ಯಾಜಿಕ್ ಫಿಗರ್‌ಗಿಂತ 32 ಕಡಿಮೆ ಸ್ಥಾನ ಹೊಂದಿರುವುದು ಕೇಸರಿ ಪಾಳಯಕ್ಕೆ ತಲೆನೋವಾಗಿ ಪರಿಣಮಿಸಿದೆ.
ಇದನ್ನೂ ಓದಿ: Election Results 2024: ನಿತೀಶ್‌ಕುಮಾರ್, ಚಂದ್ರಬಾಬು ನಾಯ್ಡು ನೆರವಿಲ್ಲದೆ ಮೋದಿ ಸರ್ಕಾರ ನಡೆಸಲಾಗದೆ?
ಏತನ್ಮಧ್ಯ, ಮೋದಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದಾರೆ. ಜನಾದೇಶಕ್ಕಾಗಿ ಜನರಿಗೆ ಧನ್ಯವಾದ ಅರ್ಪಿಸುವ ವೇಳೆ ಅವರು, ಬಿಜೆಪಿ ನೇತೃತ್ವದ ಎನ್‌ಡಿಎ ಸತತ ಮೂರನೇ ಬಾರಿಗೆ ಸರ್ಕಾರವನ್ನು ರಚಿಸುತ್ತದೆ ಎಂದು ಘೋಷಿಸಿದ್ದಾರೆ. ಇದು ʼವಿಕಸಿತ್ ಭಾರತ್ʼ, ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಸಂಕಲ್ಪ ಮತ್ತು ಭಾರತದ ಸಂವಿಧಾನದಲ್ಲಿ ಜನರ ಬಲವಾದ ನಂಬಿಕೆಯ ಗೆಲುವು ಎಂದು ಅವರು ಬಣ್ಣಿಸಿದ್ದಾರೆ.