ನವದೆಹಲಿ: ಲೋಕಸಭೆ ಚುನಾವಣೆ(Lok Sabha Election 2024) ಕೊನೆಯ ಹಂತಕ್ಕೆ ಬಂದು ತಲುಪಿದೆ. ಇನ್ನೇನು ಬಾಕಿ ಉಳಿದಿರುವ ಒಂದು ಹಂತದ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡರೆ ದೇಶದ ಜನರ ಚಿತ್ತ ಫಲಿತಾಂಶ(Election Result)ದತ್ತ ಹೊರಳುತ್ತದೆ ಫಲಿತಾಂಶಕ್ಕೂ ಮುನ್ನ ಇತ್ತೀಚಿನ ಹಲವು ವರ್ಷಗಳಿಂದ ಜನ ಚುನಾವಣೋತ್ತರ ಸಮೀಕ್ಷೆ(Exit Poll)ಗಳ ಬಗ್ಗೆ ಅತಿ ಹೆಚ್ಚಿನ ಆಸಕ್ತಿ ತೋರುತ್ತಾರೆ. ಇಂದು (ಜೂ. 1) ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಲೋಕಸಭೆ ಚುನಾವಣೆಯ ಮತದಾನ ಕೊನೆಗೊಳ್ಳಲಿದೆ. ಹೀಗಾಗಿ ಇಂದೇ ಎಕ್ಸಿಟ್ ಪೋಲ್ ಫಲಿತಾಂಶವೂ ಹೊರಬೀಳಲಿದೆ.
ಎಕ್ಸಿಟ್ ಪೋಲ್ ಎಂದರೇನು?
ಮತದಾರರು ಯಾವ ರಾಜಕೀಯ ಪಕ್ಷವನ್ನು ಬೆಂಬಲಿಸುತ್ತಾರೆ ಎಂಬುದನ್ನು ಕೇಳಿ ಅದರ ಆಧಾರದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು ಲಭಿಸಲಿದೆ ಎಂದು ಅಂದಾಜಿಸಲಾಗುತ್ತದೆ. ಈ ಬಗ್ಗೆ ಎಕ್ಸಿಟ್ ಪೋಲ್ ನಡೆಸುವವರು ಮತದಾರರನ್ನು ಪ್ರಶ್ನಿಸುತ್ತಾರೆ. ಇದನ್ನು ಎಕ್ಸಿಟ್ ಪೋಲ್ ಎನ್ನಲಾಗುತ್ತದೆ. ಚುನಾವಣೆಯ ಮೊದಲು ನಡೆಸಲಾದ ಅಭಿಪ್ರಾಯ ಸಂಗ್ರಹಕ್ಕಿಂತ ಇದು ಭಿನ್ನ. ಮತದಾರರ ಮೇಲೆ ಪ್ರಭಾವ ಬೀರಿದ ವಿಷಯಗಳು, ವ್ಯಕ್ತಿತ್ವಗಳು ಮತ್ತು ನಿಷ್ಠೆಗಳಂತಹ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಚುನಾವಣೋತ್ತರ ಸಮೀಕ್ಷೆ ನಡೆಸಲಾಗುತ್ತಿದೆ.
ಜನಪ್ರಿಯ ಎಕ್ಸಿಟ್ ಪೋಲ್‌ಗಳ ವಿವರಗಳು
ಚುನಾವಣೋತ್ತರ ಸಮೀಕ್ಷೆಗಳನ್ನು ನಡೆಸಲು ವಿವಿಧ ಏಜೆನ್ಸಿಗಳು ವಿವಿಧ ವಿಧಾನಗಳು ಮತ್ತು ಮಾದರಿಗಳನ್ನು ಬಳಸಿಕೊಳ್ಳುತ್ತವೆ. ವೈಯಕ್ತಿಕವಾಗಿ ಅಥವಾ ಆನ್‌ಲೈನ್ ಸರ್ವೆ ಮೂಲಕ ಮತದಾರರ ಅಭಿಪ್ರಾಯ ಪಡೆಯಲಾಗುತ್ತದೆ. ಇಂಡಿಯಾ ಟುಡೆ-ಆಕ್ಸಿಸ್, ಸಿಎನ್‌ಎನ್ ನ್ಯೂಸ್ 18-ಐಪಿಎಸ್‌ಒಎಸ್, ಟೈಮ್ಸ್ ನೌ-ವಿಎಂಆರ್, ರಿಪಬ್ಲಿಕ್-ಜನ್ ಕಿ ಬಾತ್, ರಿಪಬ್ಲಿಕ್-ಸಿವೋಟರ್, ನ್ಯೂಸ್‌ಎಕ್ಸ್-ಎನ್‌ಇಟಿಎ ಮತ್ತು ಟುಡೇಸ್ ಚಾಣಕ್ಯ ಮುಂತಾದವು ಎಕ್ಸಿಟ್ ಪೋಲ್‌ಗಳನ್ನು ನಡೆಸುವ ಕೆಲವು ಪ್ರಸಿದ್ಧ ಸಂಸ್ಥೆಗಳು.
ಎಕ್ಸಿಟ್ ಪೋಲ್‌ಗಳ ನಿಯಮಗಳು
ಭಾರತದಲ್ಲಿ ಎಕ್ಸಿಟ್ ಪೋಲ್‌ಗಳನ್ನು ನಿಷೇಧಿಸದಿದ್ದರೂ, ಭಾರತೀಯ ಚುನಾವಣಾ ಆಯೋಗವು (ಇಸಿಐ) ಅವುಗಳ ನಡವಳಿಕೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸಿದೆ. ಎಕ್ಸಿಟ್ ಪೋಲ್‌ಗಳನ್ನು ಯಾವಾಗ ನಡೆಸಬಹುದು ಮತ್ತು ಪ್ರಕಟಿಸಬಹುದು ಎಂಬುದಕ್ಕೆ ಇಸಿಐ ಕೆಲವು ಮಾರ್ಗಸೂಚಿಗಳನ್ನು ನೀಡಿದೆ. ಎಕ್ಸಿಟ್ ಪೋಲ್‌ಗಳಿಗೆ ನಿರ್ದಿಷ್ಟ ಸಮಯದೊಳಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಮತದಾನ ಮುಗಿದ ನಂತರವೇ ಇದನ್ನು ಪ್ರಕಟಿಸಬೇಕು.
ಮತದಾನದ ಅವಧಿ ಮುಗಿಯುವ ಮೊದಲು ಭಾರತದ ಯಾವುದೇ ಭಾಗದಲ್ಲಿ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟಿಸಬಾರದು ಅಥವಾ ಪ್ರಸಾರ ಮಾಡಬಾರದು ಎಂದು ECI ಷರತ್ತು ವಿಧಿಸಿದೆ. ಇನ್ನೂ ಮತ ಚಲಾಯಿಸದ ಮತದಾರರ ಮೇಲೆ ಪ್ರಭಾವ ಬೀರುವುದನ್ನು ತಡೆಯಲು ಈ ಈ ನಿಯಮ ಜಾರಿಗೊಳಿಸಲಾಗಿದೆ. ಇದಲ್ಲದೆ ಅಂತಿಮ ಸುತ್ತಿನ ಮತದಾನ ಮುಗಿದ ನಂತರವೇ ಎಕ್ಸಿಟ್ ಪೋಲ್ ಫಲಿತಾಂಶವನ್ನು ಪ್ರಕಟಿಸಬಹುದು. ಹೆಚ್ಚುವರಿಯಾಗಿ, ನ್ಯಾಯಯುತ ಮತ್ತು ನಿಷ್ಪಕ್ಷಪಾತ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಚುನಾವಣೋತ್ತರ ಸಮೀಕ್ಷೆಗಳನ್ನು ನಡೆಸುವ ಎಲ್ಲ ಮಾಧ್ಯಮಗಳು ಚುನಾ ಆಯೋಗದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.
ಎಕ್ಸಿಟ್ ಪೋಲ್ ಆರಂಭವಾಗಿದ್ದು ಯಾವಾಗ?
ಎಕ್ಟಿಟ್ ಪೋಲ್‌ಗೆ ಸುಮಾರು 7 ದಶಕಗಳ ಇತಿಹಾಸವಿದೆ. ಎಕ್ಸಿಟ್ ಪೋಲ್ ಅನ್ನು 1957ರಲ್ಲೇ ಆರಂಭಿಸಲಾಗಿತ್ತು. ಅಂದಿನಿಂದ ಎಕ್ಸಿಟ್ ಪೋಲ್‌ನ ವಿಧಾನದಲ್ಲಿ ಅನೇಕ ಬದಲಾವಣೆ ಸಂಭವಿಸಿದೆ. ಅದರಲ್ಲಿಯೂ ಮಾದರಿ ಸಂಗ್ರಹದಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಆರಂಭದ ದಿನಗಳಲ್ಲಿ ದೇಶಾದ್ಯಂತ ಸುಮಾರು 20-30 ಸಾವಿರ ಮಂದಿಯಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿತ್ತು. ಇದೀಗ ಎಕ್ಸಿಟ್ ಪೋಲ್ ನಡೆಸುವ ಸಂಸ್ಥೆಗಳು ಸುಮಾರು 10 ಲಕ್ಷ ಮಂದಿಯನ್ನು ಸಂಪರ್ಕಿಸುತ್ತವೆ. ಲಕ್ಷಾಂತರ ಮಂದಿಯಿಂದ ಅಭಿಪ್ರಾಯ ಸಂಗ್ರಹಣೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎಂಬಂತಾಗಿದೆ.
ಯಾವಾಗ ಎಕ್ಸಿಟ್ ಫೋಲ್ ಫಲಿತಾಂಶ ಹೊರ ಬೀಳುತ್ತದೆ?
ಕೊನೆಯ ಹಂತದ ಮತದಾನ ನಡೆಯಲಿರುವ ಜೂ. 1ರಂದು ಎಕ್ಸಿಟ್ ಪೋಲ್ ನಡೆಯಲಿದೆ. ಸಂಜೆ 6 ಗಂಟೆಗೆ ಮತದಾನ ಪ್ರಕ್ರಿಯೆ ಮುಗಿಯಲಿದ್ದು, 6:30ರ ನಂತರ ಎಕ್ಸಿಟ್ ಪೋಲ್ ಫಲಿತಾಂಶ ಹೊರ ಬೀಳಲಿದೆ.
ಇದನ್ನೂ ಓದಿ: Exit Poll: 2004, 2009, 2014, 2019ರಲ್ಲಿ ಎಕ್ಸಿಟ್ ಪೋಲ್ ಹೇಳಿದ್ದೇನು? ಆಗಿದ್ದೇನು?