Site icon Vistara News

Lok Sabha Election 2024: ಸ್ವಪಕ್ಷೀಯರ ವಿರುದ್ಧ ಮತ್ತೆ ಗುಡುಗಿದ ಹರಿಪ್ರಸಾದ್; ಚುನಾವಣೆ ಬಳಿಕ ಪೆನ್‌ಡ್ರೈವ್‌ ರಿಲೀಸ್‌!

Lok Sabha Election 2024 Hariprasad again criticises his own partymen Pen drive to be released after Election

ಬೆಳಗಾವಿ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯ ಬಿರುಸಾಗಿದೆ. ರಾಜಕೀಯ ಪಕ್ಷಗಳ ನಾಯಕರು ಒಗ್ಗಟ್ಟಿನ ಮಂತ್ರ ಹೇಳುತ್ತಿದ್ದಾರೆ. ಆದರೆ, ಕಾಂಗ್ರೆಸ್‌ನ ರೆಬೆಲ್‌ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ (BK Hariprasad) ಅವರು ಪುನಃ ಸ್ವಪಕ್ಷೀಯರ ವಿರುದ್ಧ ಹರಿಹಾಯ್ದಿದ್ದಾರೆ. ಕೆಲವು ನಾಯಕರ ಸಹಿತ ಇನ್ನಷ್ಟು ವಿಚಾರಗಳನ್ನು ನಾನು ಪೆನ್‌ಡ್ರೈವ್‌ನಲ್ಲಿ ಇಟ್ಟುಕೊಂಡಿದ್ದೇನೆ. ಈ ಎಲೆಕ್ಷನ್‌ ಮುಗಿಯಲಿ ಎಂದು ಕಾಯುತ್ತಿದ್ದೇನೆ. ಮುಗಿದ ಮೇಲೆ ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನೂ ಹೊರಹಾಕುತ್ತೇನೆ ಎಂದು ಗುಡುಗಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ಕೆ. ಹರಿಪ್ರಸಾದ್‌, ನಾನು ಬೆಳಸಿದವರು ಬರೀ ಸಚಿವರಲ್ಲ. ಇನ್ನೂ ಏನೇನೋ ಆಗಿದ್ದಾರೆ. ಅದಕ್ಕೆ ಎಲ್ಲವನ್ನೂ ಪೆನ್‌ಡ್ರೈವ್‌ನಲ್ಲಿ ಇಟ್ಟಿದ್ದೇನೆ. ಚುನಾವಣೆ ಆದ ಮೇಲೆ ಇಲ್ಲೇ ಬಂದು ಸುದ್ದಿಗೋಷ್ಠಿ ನಡೆಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಅಲ್ಲದೆ, ರಾಜಕಾರಣದಲ್ಲಿ ಇದ್ದಾಗ ಅವೆಲ್ಲ ಬರುತ್ತಾ ಇರುತ್ತವೆ. ರಾಜಕಾರಣದಲ್ಲಿ ಹಲವಾರು ಮುಖವಾಡಗಳನ್ನು ನಾವು ನೋಡಬೇಕಾಗುತ್ತದೆ. ಯಾರಾದರೂ ಏನೋ ಮಾಡಿದರೆ ಅದಕ್ಕೆ ಉತ್ತರ ಕೊಡಲು ಆಗಲ್ಲ. ನನ್ನ ವೈಯಕ್ತಿಕ ನಿಷ್ಠೆ ಕಾಂಗ್ರೆಸ್ ಪಕ್ಷ, ತ್ರಿವರ್ಣ ಧ್ವಜ ಹಾಗೂ ಎಐಸಿಸಿ ಅಧ್ಯಕ್ಷರ ಕುರ್ಚಿಗೆ ಮಾತ್ರ. ಬಾಕಿಯದ್ದೆಲ್ಲವೂ ನಡೆಯುತ್ತಿರುತ್ತದೆ ಎಂದು ಹೇಳಿದ್ದಾರೆ.

ನಾನು ಸ್ಟಾರ್ ಕ್ಯಾಂಪೇನರ್ ಇದ್ದೇನೆ. ನನ್ನನ್ನು ಯಾರೂ ಸಹ ಉಪಯೋಗಿಸಿಕೊಳ್ಳಲು ಆಗುವುದಿಲ್ಲ. ನನ್ನ ಉಪಯೋಗವನ್ನು ಕಾಂಗ್ರೆಸ್ ಪಕ್ಷ ತೆಗೆದುಕೊಳ್ಳುತ್ತದೆ. ವೈಯಕ್ತಿಕ ರಾಜಕಾರಣ ಬೇರೆ, ಇದು ಕಾಂಗ್ರೆಸ್ ಪಕ್ಷದ ಹಾಗೂ ದೇಶದ ರಾಜಕಾರಣವಾಗಿದೆ. ಏನೇ ಭಿನ್ನಾಭಿಪ್ರಾಯ ಇದ್ದರೂ ಅದನ್ನು ಪೆನ್‌ಡ್ರೈವ್‌ನಲಿಟ್ಟುಕೊಳ್ಳುತ್ತೇನೆ. ಆಮೇಲೆ ಎಲ್ಲವನ್ನೂ ವಿವರವಾಗಿ ಹೇಳುತ್ತೇನೆ ಎಂದು ಬಿ.ಕೆ. ಹರಿಪ್ರಸಾದ್‌ ಹೇಳಿದ್ದಾರೆ.

ಬೇರೆ ಯಾರಿಗೂ ನಾನು ಯೂಸ್ ಆಗಲು ಬಿಟ್ಟೇ ಇಲ್ಲ

ಬಿ.ಕೆ. ಹರಿಪ್ರಸಾದ್ ಅವರನ್ನು ಉಪಯೋಗಿಸಿಕೊಂಡು ದೂರ ಇಡುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದೇನೂ ತೊಂದರೆ ಇಲ್ಲ. ನಾನು ಕಾಂಗ್ರೆಸ್ ಪಕ್ಷದ ಸೇವಾದಳದಿಂದ ಬೆಳೆದು ಬಂದವನು. ಯೂಸ್ ಮಾಡಿ ಬಿಡೋದು ಬೇರೆ ಪ್ರಶ್ನೆ. ನಾವು ಕಾಂಗ್ರೆಸ್ ಪಕ್ಷಕ್ಕೆ ಬಂದಿರೋದು. ಪಕ್ಷ ನನ್ನನ್ನು ಬಳಕೆ ಮಾಡಿಕೊಳ್ಳಲಿ. ಆದರೆ, ಬೇರೆ ಯಾರಿಗೂ ನಾನು ಯೂಸ್ ಆಗಲು ಬಿಟ್ಟೇ ಇಲ್ಲ. ದೆಹಲಿಯಿಂದ ರಾಜಕಾರಣ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷಕ್ಕಾಗಿ ಮಾಡಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: Rameshwaram Cafe Blast: ಮೂರು ವರ್ಷದಲ್ಲಿ ಮೂರು ಬ್ಲಾಸ್ಟ್; ಈ ಮೂರಕ್ಕೂ ಶಿವಮೊಗ್ಗ ನಂಟು!

ಅಮೃತ ಕಾಲವನ್ನು ಅನ್ಯಾಯದ ಕಾಲ

2024ರ ಲೋಕಸಭಾ ಚುನಾವಣೆ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಅಮೃತಕಾಲ ಅಂತಿದ್ದ ಪ್ರಧಾನಿ ನರೇಂದ್ರ ಮೋದಿಯವರದ್ದು ಅನ್ಯಾಯ ಕಾಲ. ರಾಹುಲ್ ಗಾಂಧಿ ಅವರು ಭಾರತ್ ಜೋಡೊ ಯಾತ್ರೆ ಮಾಡಿ ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದಾರೆ. ಮಹಿಳೆಯರು, ರೈತರಿಗೆ, ಕಾರ್ಮಿಕರಿಗೆ ನ್ಯಾಯ ಕೊಡುವ 25 ಅಂಶಗಳನ್ನು ಒಳಗೊಂಡ ಪ್ರಣಾಳಿಕೆ ಅದಾಗಿದೆ. ದೇಶದಲ್ಲಿ ಅರಾಜಕತೆ ಇದ್ದು, ಮಣಿಪುರದಲ್ಲಿ ಇನ್ನೂ ಹೊತ್ತಿ ಉರಿಯುತ್ತಿದೆ. ಹತ್ತು ವರ್ಷದಲ್ಲಿ ಅಮೃತಕಾಲವನ್ನು ಜನ ನೋಡಲಿಲ್ಲ. ಕೇವಲ ಅನ್ಯಾಯದ ಕಾಲ ನೋಡಿದ್ದಾರೆ. ಈ ದಶಕವೇ ಬರ್ಬಾದ್ ದಶಕ ಎಂದ ಬಿ.ಕೆ. ಹರಿಪ್ರಸಾದ್‌ ಕಿಡಿಕಾರಿದ್ದಾರೆ.

Exit mobile version