ಬೆಳಗಾವಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದೆ. ವೈಯಕ್ತಿಕ ಟೀಕೆ ಸೇರಿದಂತೆ ಆರೋಪ – ಪ್ರತ್ಯಾರೋಪಗಳ ಸುರಿಮಳೆಯನ್ನೇ ಗೈಯಲಾಗುತ್ತಿದೆ. ಈಗ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ. ಮಿಸ್ಟರ್ ಕುಮಾರಸ್ವಾಮಿ ನೀನು ಮಂಡ್ಯದಲ್ಲಿ ಗೆಲ್ಲಲ್ಲ. ನೀನೆಂಥ ಸುಳ್ಳುಗಾರ, ಮೋಸಗಾರ ಎನ್ನುವುದನ್ನು ಅಸೆಂಬ್ಲಿಯಲ್ಲಿ ಮಾತನಾಡೋಣ. ನಾನು ಕಲ್ಲು ಮಾರಿದ್ದೇನೋ? ಕಳ್ಳತನ ಮಾಡಿದ್ದೇನೋ? ಅದನ್ನೂ ನೋಡೋಣ. ಇದೆಲ್ಲವನ್ನೂ ಬಹಿರಂಗ ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ ಎಂದು ಬಹಿರಂಗ ಸವಾಲನ್ನು ಹಾಕಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ ಅವರು ಹೆಣ್ಣು ಮಕ್ಕಳಿಗೆ ಅವಮಾನಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಹೋರಾಟ ರೂಪಿಸುವ ಸಲುವಾಗಿ ನಾನು ಜೂಮ್ ಮೀಟಿಂಗ್ ಕರೆದಿದ್ದು ನಿಜ. ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದರೆ ಹೇಗೆ? ಇದು ಮಹಿಳೆಯರ ಸ್ವಾಭಿಮಾನದ ಪ್ರಶ್ನೆಯಾಗಿದೆ. ಎಲ್ಲ ಮಹಿಳಾ ಸಂಘಟನೆಗಳೂ ಎಚ್‌ಡಿಕೆ ವಿರುದ್ಧ ಪ್ರತಿಭಟನೆಯನ್ನು ಮಾಡಬೇಕು. ಎಲ್ಲ ಮಹಿಳೆಯರಿಗೂ ನಾನು ಪಕ್ಷಾತೀತವಾಗಿ ಕರೆ ಕೊಡುತ್ತಿದ್ದೇನೆ. ಬದುಕು ಬದಲಾವಣೆಗೆ ಕಾರ್ಯಕ್ರಮಗಳನ್ನು ಕೊಟ್ಟರೆ ಕುಮಾರಸ್ವಾಮಿ ಅವರು ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಹೇಳುತ್ತಾರೆ. ಪ್ರತಿ ತಾಲೂಕಿನಲ್ಲೂ ಮಹಿಳೆಯರು ಪ್ರತಿಭಟನೆ, ಹೋರಾಟವನ್ನು ಮಾಡಬೇಕು. ಹೆಣ್ಣು ಮಕ್ಕಳ ಪರವಾಗಿ ನಾವು ನಿಲ್ಲಬೇಕಾಗಿದೆ. ಹೆಣ್ಣು ಮಕ್ಕಳ ಕುಲಕ್ಕೆ ಕುಮಾರಸ್ವಾಮಿ ಕಪ್ಪುಚುಕ್ಕೆ ಇಟ್ಟಿದ್ದಾರೆ. ಕುಮಾರಸ್ವಾಮಿಯ ವಿಷಾದದ ಡ್ರಾಮಾ ನನಗೆ ಬೇಕಾಗಿಲ್ಲ ಎಂದು ಹೇಳಿದರು.
ಎಚ್‌ಡಿಕೆ ಹಿಟ್ ಆ್ಯಂಡ್ ರನ್ ಕೇಸ್‌ಗೆ ಫೇಮಸ್
ಗ್ಯಾರಂಟಿ ಯೋಜನೆಗಳು ಪಿಕ್ ಪಾಕೆಟ್ ಯೋಜನೆಗಳು ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಕುಮಾರಸ್ವಾಮಿಗೆ ಪಿಕ್ ಪಾಕೆಟ್ ಮಾಡಿ ರೂಢಿ ಇದೆ. ಅದಕ್ಕೆ ಹೀಗೆ ಹೇಳಿದ್ದಾರೆ. ಎಚ್‌ಡಿಕೆ ಹಿಟ್ ಆ್ಯಂಡ್ ರನ್ ಕೇಸ್‌ಗೆ ಫೇಮಸ್ ಎಂದು ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.
ಯಾರ ಅಕೌಂಟ್‌ಗೆ ಹಣ ಹಾಕಿದ್ದೀರಿ?
ಮೈಸೂರಿಗೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಬಂದಿದ್ದರು. ಅಲ್ಲದೆ, ಬಾಬಾಸಾಹೇಬ್ ಅಂಬೇಡ್ಕರ್ ಜನ್ಮದಿನ ಸಹ ಇತ್ತು. ಅವರ ಸರ್ಕಾರ ಇದ್ದಾಗ ಜನರಿಗೆ ಯಾವ ಕೊಡುಗೆಯನ್ನೂ ನೀಡಿಲ್ಲ. ಚುನಾವಣಾ ಪ್ರಣಾಳಿಕೆಗೆ ಶಕ್ತಿ ಬರುವುದಿಲ್ಲ. ಸರ್ಕಾರ ಇದ್ದಾಗ ಜನರಿಗೆ ಏನು ಮಾಡಬಹುದು ಎನ್ನುವ ಯೋಚನೆ ಮಾಡುವ ಅವಕಾಶ ಇತ್ತು. ಬರೀ ಭಾವನೆಗಳ ಬಗ್ಗೆ ಯೋಚನೆ ಮಾಡಿದರು. ಬದುಕಿನ ಬಗ್ಗೆ ಅಲ್ಲ. ಕಳೆದ ಬಾರಿ ಕಪ್ಪು ಹಣ ತರುತ್ತೇನೆ, ಹಂಚುತ್ತೇನೆ ಎಂದು ಹೇಳಿದ್ದರು. ಕಾಂಗ್ರೆಸ್‌ನವರು ಸ್ವಿಸ್ ಬ್ಯಾಂಕ್‌ನಲ್ಲಿ ಹಣ ಇಟ್ಟಿದ್ದಾರೆ. ಎಲ್ಲರ ಅಕೌಂಟಿಗೆ 15 ಲಕ್ಷ ರೂಪಾಯಿ ಹಾಕುತ್ತೇನೆ ಎಂದು ಹೇಳಿದ್ದರು. ಯಾರ ಅಕೌಂಟ್‌ಗೆ ಹಣ ಹಾಕಿದ್ದೀರಿ? ಜನ್ ಧನ್ ಯೋಜನೆ ಮಾಡಿದಿರಿ. ಯಾರ ಅಕೌಂಟಿಂಗೆ ಹಣ ಹಾಕಿದಿರಿ? ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ಹೇಳಿದ್ದರು. ಯಾವ ರೈತನ ಆದಾಯವನ್ನು ಡಬಲ್ ಮಾಡಿದಿರಿ? ಲೆಕ್ಕ ಇದ್ದರೆ ಹೇಳಿ ಎಂದು ಡಿ.ಕೆ. ಶಿವಕುಮಾರ್ ಪ್ರಶ್ನೆ ಮಾಡಿದರು.
ಇದನ್ನೂ ಓದಿ: Laxmi Hebbalkar: ನನ್ನನ್ನು ಕೊಲೆ ಮಾಡಲು ಲಕ್ಷ್ಮಿ ಹೆಬ್ಬಾಳ್ಕರ್ ಯತ್ನ; ಮಾಜಿ ಶಾಸಕನ ಆರೋಪ
ಯಾರು ಯಾರಿಗೆ ಉದ್ಯೋಗ ಕೊಟ್ಟಿದ್ದೀರಿ?
700 ಜನ ರೈತರ ಪ್ರಾಣ ಕೊಟ್ಟ ಮೇಲೆ ಅವರ ಒತ್ತಡಕ್ಕೆ ಮಣಿದು ಕೃಷಿ ಕಾಯ್ದೆಯನ್ನು ವಾಪಸ್ ತೆಗೆದುಕೊಂಡಿದ್ದೀರಿ. 2 ಕೋಟಿ ಉದ್ಯೋಗ ಕೊಡುತ್ತೇನೆ ಎಂದು ಯಾರು ಯಾರಿಗೆ ಉದ್ಯೋಗ ಕೊಟ್ಟಿದ್ದೀರಿ? ಅದನ್ನು ಬಿಜೆಪಿಯವರು, ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಸ್ಪಷ್ಟಪಡಿಸಬೇಕು. ನಿಮ್ಮ ಕೈಯಲ್ಲಿ ಅಧಿಕಾರ ಇದ್ದಾಗ ಏನೂ ತರಲಿಲ್ಲ. ಅಧಿಕಾರ ಇಲ್ಲದಿದ್ದಾಗ ಏನು ತರುತ್ತೀರಿ? ಗೃಹ ಜ್ಯೋತಿ, ಯುವನಿಧಿಯನ್ನು ಇಲ್ಲಿಯೇ ಘೋಷಣೆ ಮಾಡಿದ್ದೆವು. ಐದು ಯೋಜನೆಗಳನ್ನು ನಾವು ಅನುಷ್ಠಾನಕ್ಕೆ ತಂದು ನಿಮ್ಮ ಮುಂದೆ ಕುಳಿತಿದಿದ್ದೇವೆ. ಬೇರೆ ಪಾರ್ಟಿಯ ರೀತಿ ನಾವು ಮಾಡೋಕೆ ಆಗಲ್ಲ. ನಮಗೆ ಬದ್ಧತೆ ಬೇಕು ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದರು. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.