Site icon Vistara News

CM Siddaramaiah: ಲೋಕಸಭಾ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರಕಾರ ಕಾಂಗ್ರೆಸ್‌ಗೆ ಎಷ್ಟು ಸೀಟ್‌? ಸಂಪುಟ ಪುನಾರಚನೆ ಇಲ್ಲ!

how many seats will the Congress have in the Lok Sabha elections CM Siddaramaiah statement

ಬೆಂಗಳೂರು: ಸರ್ಕಾರಕ್ಕೆ ವರ್ಷ ಪೂರೈಸಿದ ಸಂದರ್ಭದಲ್ಲಿ ಬೆಂಗಳೂರು ಪ್ರೆಸ್‌ ಕ್ಲಬ್‌ನಲ್ಲಿ ಆಯೋಜಿಸಿದ್ದ ಮೀಟ್ ದ ಪ್ರೆಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ರಾಜ್ಯ ಸರ್ಕಾರದ ಸಾಧನೆಗಳನ್ನು ಹೇಳುತ್ತಾ ಬಂದರು. ಅಲ್ಲದೆ, ಈ ವೇಳೆ ಕೇಂದ್ರ ಸರ್ಕಾರದ ಬಗ್ಗೆಯೂ ಕಿಡಿಕಾರಿದರು. ಇದೇ ವೇಳೆ, ಲೋಕಸಭಾ ಚುನಾವಣೆ (Lok Sabha Election 2024) ಫಲಿತಾಂಶದ ಬಗ್ಗೆಯೂ ಮಾತನಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್‌ ಕನಿಷ್ಠ 15 ಸ್ಥಾನ ಹಾಗೂ ಗರಿಷ್ಠ 20 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದರು.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರಂತೆ 28 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ ಎಂದು ನಾನು ಹೇಳುವುದಿಲ್ಲ. ಆದರೆ, ನಮ್ಮ ಕಾಂಗ್ರೆಸ್‌ ಪಕ್ಷವು ಕನಿಷ್ಠ 15 ಸ್ಥಾನ ಹಾಗೂ ಗರಿಷ್ಠ 20 ಸ್ಥಾನಗಳನ್ನು ಗೆದ್ದುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಸಂಪುಟ ಆಗುತ್ತಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಸದ್ಯಕ್ಕೆ ಸಂಪುಟ ವಿಸ್ತರಣೆ, ಪುನರ್ ರಚನೆ ವಿಚಾರ ನಮ್ಮ ಮುಂದೆ ಇಲ್ಲ. ಆದರೆ, ಹೈಕಮಾಂಡ್ ನಿರ್ದೇಶನದಂತೆ ನಮ್ಮ ಪಕ್ಷದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಗ್ಯಾರಂಟಿಗಳು ಜನರ ಮನೆ ಮನೆ ತಲುಪಿವೆ

ಬಿಜೆಪಿಯ ನಿರಂತರ ಅಪ ಪ್ರಚಾರದ ನಡುವೆಯೂ ಗ್ಯಾರಂಟಿಗಳು ಜನರ ಮನೆ ಮನೆ ತಲುಪಿವೆ. ಗ್ಯಾರಂಟಿಗಳ ಹೊರತಾಗಿ ಅಭಿವೃದ್ಧಿಗೂ ಹಣ ಮೀಸಲಿಟ್ಟು ಖರ್ಚು ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಕಿ ಅಂಶಗಳ ಸಮೇತ ವಿವರಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್‌ಗೆ ಆರ್ಥಿಕತೆ ಅರ್ಥ ಆಗಲ್ಲ. ಹೀಗಾಗಿ ಖಜಾನೆ ಖಾಲಿ ಆಗಿದೆ ಎಂದು ಪರಮ ಸುಳ್ಳು ಹೇಳುತ್ತಿದ್ದಾರೆ. ನಾವು ಗ್ಯಾರಂಟಿಯೇತರ ಅಭಿವೃದ್ಧಿ ಕಾರ್ಯಗಳಿಗೆ 54374 ಕೋಟಿ ರೂಪಾಯಿ ಖರ್ಚು ಮಾಡುವುದಾಗಿ ಬಜೆಟ್‌ನಲ್ಲಿ ಹೇಳಿದ್ದೆವು. ಆದರೆ, 56274 ಕೋಟಿ ರೂಪಾಯಿ ಖರ್ಚು ಮಾಡಿದೆವು. ಅಂದರೆ ಬಜೆಟ್‌ನಲ್ಲಿ ಹೇಳಿದ್ದಕ್ಕಿಂತ ಹೆಚ್ಚು ಖರ್ಚು ಮಾಡಿದ್ದೇವೆ ಎಂದು ಅಂಕಿ ಅಂಶಗಳ ಸಮೇತ ಸಿಎಂ ಸಿದ್ದರಾಮಯ್ಯ ವಿವರಿಸಿದರು.

ನೀರಾವರಿಗೆ 16360 ಕೋಟಿ ರೂಪಾಯಿ ಖರ್ಚು ಮಾಡುವುದಾಗಿ ಬಜೆಟ್‌ನಲ್ಲಿ ಹೇಳಿದ್ದೆವು. ಆದರೆ, 18198 ಕೋಟಿ ರೂಪಾಯಿ ಖರ್ಚು ಮಾಡಿದೆವು. ಹೇಳಿದ್ದಕ್ಕಿಂತ ಹೆಚ್ಚು ಖರ್ಚು ಮಾಡಿದ್ದೇವೆ. ಲೋಕೋಪಯೋಗಿ ಇಲಾಖೆಗೂ 9661 ಕೋಟಿ ರೂಪಾಯಿ ಖರ್ಚು ಮಾಡಿದ್ದೇವೆ. ಬಿಜೆಪಿಯವರ ಹೇಳಿಕೆಯಂತೆ ಖಜಾನೆ ಖಾಲಿ ಆಗಿದ್ದರೆ ಇಷ್ಟೆಲ್ಲ ಖರ್ಚು ಮಾಡಲು ಸಾಧ್ಯವಿತ್ತೇ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

ಸಮಾಜ ಕಲ್ಯಾಣಕ್ಕಾಗಿ ಪರಿಶಿಷ್ಟ ಜಾತಿ/ವರ್ಗದ ಗುತ್ತಿಗೆದಾರರಿಗೆ ಒಂದು ಕೋಟಿವರೆಗಿನ ಕಾಮಗಾರಿಗೆ ಮೀಸಲಾತಿ, ಹಿಂದುಳಿದವರಿಗೆ ಮೀಸಲಾತಿ ನೀಡಿದೆವು. SCSP/TSP ಕಾಯ್ದೆ ಮಾಡಿದ್ದು ನಮ್ಮ ಸರ್ಕಾರ. ಪ್ರಧಾನಿ ನರೇಂದ್ರ ಮೋದಿ ಭಾಷಣದಲ್ಲಿ ಸುಳ್ಳು ಹೇಳುವುದನ್ನು ಬಿಟ್ಟು ಈ ಕಾಯ್ದೆಯನ್ನು ಬಿಜೆಪಿ ಆಡಳಿತದ ಸರ್ಕಾರಗಳು ಏಕೆ ಜಾರಿ ಮಾಡಿಲ್ಲ ಎನ್ನುವುದಕ್ಕೆ ಉತ್ತರಿಸಲಿ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.

ಹಿಂದುಳಿದವರ ಮೀಸಲಾತಿ ಕಿತ್ತು ಮುಸ್ಲಿಮರಿಗೆ ಕೊಡ್ತಾರೆ ಎಂದು ಮತ್ತೊಂದು ಮೋದಿ ಸುಳ್ಳು ಹೇಳುತ್ತಿದ್ದಾರೆ. ಇದು ಅಪ್ಪಟ ಸುಳ್ಳು. ಚಿನ್ನಪ್ಪರೆಡ್ಡಿ ಆಯೋಗದ ವರದಿಯಂತೆ 30 ವರ್ಷದಿಂದ ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿ ಜಾರಿಯಲ್ಲಿದೆ. ಬಸವರಾಜ ಬೊಮ್ಮಾಯಿ ಸರ್ಕಾರ ಕೂಡ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿ ಮುಸ್ಲಿಮರ ಮೀಸಲಾತಿ ರದ್ದು ಮಾಡುವುದಿಲ್ಲ ಎಂದು ಒಪ್ಪಿಕೊಂಡಿತ್ತು. ಆದರೂ ಮೋದಿ ಭಾಷಣಗಳಲ್ಲಿ ಸುಳ್ಳು ಹೇಳುತ್ತಾ ತಿರುಗುತ್ತಿದ್ದಾರೆ. ನಾವು ಯಾರ ಮೀಸಲಾತಿಯನ್ನೂ ಕಿತ್ತುಕೊಂಡಿಲ್ಲ. ಹೀಗಾಗಿ ಮೋದಿ ಹೇಳುತ್ತಿರುವುದು ಅಪ್ಪಟ ಸುಳ್ಳು ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದರು.

ಚುನಾವಣೆಗಾಗಿ ಜನರನ್ನು ರೊಚ್ಚಿಗೆಬ್ಬಿಸಿ, ದಿಕ್ಕು ತಪ್ಪಿಸುವುದನ್ನು ಬಿಜೆಪಿ ಮತ್ತು ಮೋದಿ ನಿಲ್ಲಿಸಬೇಕು. ಜನ ಬಿಜೆಪಿಯ ಸುಳ್ಳಿಗಳ ಬಗ್ಗೆ ಎಚ್ಚೆತ್ತುಕೊಂಡಿದ್ದಾರೆ. ಆರೋಗ್ಯ, ಶಿಕ್ಷಣ, ನೀರಾವರಿ, ಸಮಾಜ ಕಲ್ಯಾಣ, ಕೃಷಿ ಸೇರಿ ಎಲ್ಲಾ ಇಲಾಖೆಗಳಲ್ಲೂ ಅಭಿವೃದ್ಧಿ ಕೆಲಸಗಳು ಯಥೇಚ್ಚವಾಗಿ ನಡೆಯುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು.

ಬಿಜೆಪಿಯ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿ ನರಳುತ್ತಿದ್ದ ಮಧ್ಯಮ ವರ್ಗ ಮತ್ತು ಬಡವರ ಕೊಳ್ಳುವ ಶಕ್ತಿ ಹೆಚ್ಚಿಸಲು ಗ್ಯಾರಂಟಿಗಳನ್ನು ಜಾರಿ ಮಾಡಿದೆವು ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು.

ಐದೂ ಗ್ಯಾರಂಟಿ ಜಾರಿ ಮಾಡಿದ್ದೇವೆ

ಪ್ರಮಾಣವಚನ ಸ್ವೀಕರಿಸಿದ ದಿನದಿಂದಲೇ ಚುನಾವಣೆಯಲ್ಲಿ ಕೊಟ್ಟ ಆಶ್ವಾಸನೆ, ಗ್ಯಾರಂಟಿಗಳ ಜಾರಿಗೆ ಕ್ರಮ ತೆಗೆದುಕೊಂಡು ಐದಕ್ಕೆ ಐದೂ ಜಾರಿ ಮಾಡಿದ್ದೇವೆ. ಅನ್ನಭಾಗ್ಯ ಯೋಜನೆಗೆ ನಾವು ಹಣ ಕೊಟ್ಟರೂ ಅಕ್ಕಿ ಕೊಡದೆ ಕೇಂದ್ರ ಸರ್ಕಾರ ಸತಾಯಿಸಿತು. ಅಕ್ಕಿ ಸಂಗ್ರಹ ಇದ್ದರೂ ಕೊಡಲಿಲ್ಲ. ಅಕ್ಕಿ ಕೊಡದೆ ಇರಲು ಮೇಲಿನಿಂದ ಆದೇಶ ಇದೆ ಎಂದು ಅಧಿಕಾರಿಗಳು ತಿಳಿಸಿದರು. ಮಧ್ಯವರ್ತಿಗಳ ಹಾವಳಿ ಇಲ್ಲದಂತೆ ನೇರ ನಾಡಿನ ಜನತೆಯ ಖಾತೆಗೆ ಹಣ ಜಮೆ ಮಾಡಿದೆವು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: CET Result: ದ್ವಿತೀಯ ಪಿಯು 2ನೇ ಪರೀಕ್ಷೆ ಬಳಿಕವೇ ಸಿಇಟಿ ಫಲಿತಾಂಶ; ಮೇ 30 ಅಥವಾ 31ಕ್ಕೆ ಪ್ರಕಟ?

ನಮ್ಮ ಕಾಲದಲ್ಲಿ ಭ್ರಷ್ಟಾಚಾರ ಸಂಪೂರ್ಣವಾಗಿ ನಿಂತಿದೆ ಎಂದು ಹೇಳೋದಿಲ್ಲ. ಆದರೆ ಪ್ರಮಾಣ ಕಡಿಮೆ ಮಾಡಲು ನಿಷ್ಠುರವಾಗಿ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. 40% ತನಿಖೆಗೆ ಶುರು ಮಾಡಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Exit mobile version