Site icon Vistara News

INDIA Bloc: 6 ಸಂಸದರನ್ನು ಕಳೆದುಕೊಳ್ಳುವ ಭೀತಿಯಲ್ಲಿ ಇಂಡಿ ಒಕ್ಕೂಟ; ಕಾರಣವೇನು?

INDIA Bloc

INDIA Bloc

ಲಕ್ನೋ: ಲೋಕಸಭಾ ಚುನಾವಣೆ (Lok Sabha Election 2024) ಮುಗಿದು, ಫಲಿತಾಂಶ ಪ್ರಕಟಗೊಂಡು ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ. ಪ್ರಧಾನಿಯಾಗಿ ಸತತ ಮೂರನೇ ಬಾರಿಗೆ ನರೇಂದ್ರ ಮೋದಿ (Narendra Modi) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದೀಗ ಕ್ರಿಮಿನಲ್‌ ಹಿನ್ನೆಲೆ ಹೊಂದಿರುವ ಪ್ರತಿಪಕ್ಷಗಳ ಇಂಡಿ ಒಕ್ಕೂಟ (INDIA bloc)ದ ಸುಮಾರು 6 ಸಂಸದರು ತಮ್ಮ ಹುದ್ದೆಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇದರಲ್ಲಿ ಎಸ್‌ಪಿಯ ಐವರು ಮತ್ತು ಕಾಂಗ್ರೆಸ್‌ನ ಓರ್ವ ಸಂಸದ ಇದ್ದಾರೆ.

ಉತ್ತರ ಪ್ರದೇಶದಿಂದ ಆಯ್ಕೆಯಾದ ಈ 6 ಸಂಸದರ ವಿರುದ್ಧ ಪ್ರಕರಣಗಳು ದಾಖಲಾಗಿದೆ. ಇದರಲ್ಲಿ ಕನಿಷ್ಠ ಪಕ್ಷ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾದ ಪ್ರಕರಣಗಳಿವೆ. ಹೀಗಾದಲ್ಲಿ ಅವರ ಸಂಸತ್‌ ಸದಸ್ಯ ಸ್ಥಾನ ನಷ್ಟವಾಗಲಿದ್ದು, ಉಪ ಚುನಾವಣೆ ನಡೆಸಬೇಕಾಗುತ್ತದೆ.

ಅಫ್ಜಲ್ ಅನ್ಸಾರಿ

ಉತ್ತರ ಪ್ರದೇಶದ ಘಾಝಿಪುರ ಕ್ಷೇತ್ರದಿಂದ ಗೆದ್ದಿರುವ ಸಮಾಜವಾದಿ ಪಾರ್ಟಿ (SP)ಯ ಅಫ್ಜಲ್ ಅನ್ಸಾರಿ ಈಗಾಗಲೇ ಗ್ಯಾಂಗ್‌ಸ್ಟರ್ ಕಾಯ್ದೆ (Gangster Act)ಯಡಿ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಕಳೆದ ತಿಂಗಳು ಅಲಹಾಬಾದ್ ಹೈಕೋರ್ಟ್ ಅವರ ಶಿಕ್ಷೆಯನ್ನು ತಡೆಹಿಡಿದಿತ್ತು. ಹೀಗಾಗಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಜುಲೈಯಲ್ಲಿ ಮತ್ತೆ ಈ ಪ್ರಕರಣದ ವಿಚಾರಣೆ ನಡೆಯಲಿದೆ. ನ್ಯಾಯಾಲಯವು ಅಂತಿಮವಾಗಿ ಶಿಕ್ಷೆಯನ್ನು ಎತ್ತಿ ಹಿಡಿದರೆ, ಅನ್ಸಾರಿ ತಮ್ಮ ಲೋಕಸಭಾ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ.

ಧರ್ಮೇಂದ್ರ ಯಾದವ್

ಸಂಸದ ಸ್ಥಾನ ಕಳೆದುಕೊಳ್ಳಲಿರುವ ಭೀತಿ ಎದುರಿಸುತ್ತಿರುವ ಇನ್ನೊಬ್ಬ ನಾಯಕ ಎಸ್‌ಪಿಯ ಧರ್ಮೇಂದ್ರ ಯಾದವ್. ಅವರು ಈ ಚುನಾವಣೆಯಲ್ಲಿ ಅಜಂಗಢ ಕ್ಷೇತ್ರದಲ್ಲಿ ಜಯ ಗಳಿಸಿದ್ದಾರೆ. ಧರ್ಮೇಂದ್ರ ಯಾದವ್ ವಿರುದ್ಧ ನಾಲ್ಕು ಪ್ರಕರಣಗಳು ಬಾಕಿ ಉಳಿದಿವೆ ಮತ್ತು ಆ ಪೈಕಿ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಶಿಕ್ಷೆಗೊಳಗಾದರೆ ಸಂಸದ ಸ್ಥಾನದಿಂದ ಅನರ್ಹಗೊಳ್ಳುತ್ತಾರೆ.

ಬಾಬು ಸಿಂಗ್ ಕುಶ್ವಾಹ

ರಾಜಕೀಯದ 10 ವರ್ಷಗಳ ವನವಾಸವನ್ನು ಕೊನೆಗೊಳಿಸಿ ಜಾನ್ಪುರ ಸ್ಥಾನವನ್ನು ಗೆದ್ದ ಎಸ್‌ಪಿಯ ಬಾಬು ಸಿಂಗ್ ಕುಶ್ವಾಹ ಅವರು ಮಾಯಾವತಿ ಆಡಳಿತದಲ್ಲಿ ನಡೆದ ಎನ್ಆರ್‌ಎಚ್‌ಎಂ (NRHM) ಹಗರಣಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅವರ ವಿರುದ್ಧ ಬರೋಬ್ಬರಿ 25 ಪ್ರಕರಣಗಳಲ್ಲಿ ದಾಖಲಾಗಿದೆ.

ರಾಮ್ಬುವಾಲ್‌ ನಿಷಾದ್

ಬಿಜೆಪಿಯ ಮೇನಕಾ ಗಾಂಧಿ ಅವರನ್ನು ಸೋಲಿಸುವ ಮೂಲಕ ಸುಲ್ತಾನ್ಪುರ ಕ್ಷೇತ್ರದಲ್ಲಿ ಗೆದ್ದ ಎಸ್‌ಪಿಯ ರಾಮ್ಬುವಾಲ್‌ ನಿಷಾದ್ ವಿರುದ್ಧ ಗ್ಯಾಂಗ್‌ಸ್ಟರ್‌ ಕಾಯ್ದೆಯಡಿ ಒಂದು ಸೇರಿದಂತೆ ಎಂಟು ಪ್ರಕರಣಗಳು ದಾಖಲಾಗಿವೆ.

ವೀರೇಂದ್ರ ಸಿಂಗ್

ಚಂದೌಲಿ ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ಮಹೇಂದ್ರ ನಾಥ್ ಪಾಂಡೆ ಅವರನ್ನು ಸೋಲಿಸಿದ ವೀರೇಂದ್ರ ಸಿಂಗ್ ಅವರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಮತ್ತೊಬ್ಬ ಎಸ್‌ಪಿ ಸಂಸದ. ಇವರು ಕೂಡ ಗಂಭೀರ ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಇಮ್ರಾನ್ ಮಸೂದ್

ಸಹರಾನ್ಪುರ ಕ್ಷೇತ್ರದಲ್ಲಿ ಗೆದ್ದ ಕಾಂಗ್ರೆಸ್‌ನ ಇಮ್ರಾನ್ ಮಸೂದ್ ವಿರುದ್ಧ ಎಂಟು ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಜಾರಿ ನಿರ್ದೇಶನಾಲಯದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಒಂದು ಪ್ರಕರಣವೂ ಸೇರಿದೆ.

ಇದನ್ನೂ ಓದಿ: Lok Sabha Election 2024: ಈ ಬಾರಿ 74 ಮಹಿಳಾ ಸಂಸದರು, ಯಾವ ಪಕ್ಷದಲ್ಲಿ ಎಷ್ಟು ಮಂದಿ?

ಇಂಡಿ ಒಕ್ಕೂಟದ ಭಾಗವಾಗಿರುವ ಎಸ್‌ಪಿ ಮತ್ತು ಕಾಂಗ್ರೆಸ್‌ ಈ ಬಾರಿಯ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ 80 ಕ್ಷೇತ್ರಗಳ ಪೈಕಿ 43 ಕಡೆ ಜಯ ಗಳಿಸಿದೆ. ಈ ಪೈಕಿ 6 ಸಂಸದರನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ.

Exit mobile version