ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಸನ್ನಿಹಿತವಾಗಿದೆ. ಚುನಾವಣಾ ದಿನಾಂಕವೂ (Election Date) ಘೋಷಣೆಯಾಗಿದೆ. ಕರ್ನಾಟಕದಲ್ಲಿ ಎರಡು ಹಂತದಲ್ಲಿ (ಏಪ್ರಿಲ್ 26 ಮತ್ತು ಮೇ 7ರಂದು) ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ (Congress Karnataka) ತನ್ನ ಪ್ರಚಾರ ಕಾರ್ಯತಂತ್ರವನ್ನು ರೂಪಿಸಲು ಮುಂದಾಗಿದೆ. ಈ ನಿಮಿತ್ತ ಚುನಾವಣಾ ಪ್ರಚಾರದ ಕಾರ್ಯಕ್ರಮ ಆಯೋಜನೆ, ಪ್ರವಾಸ, ಮಾರ್ಗಗಳ ವ್ಯವಸ್ಥಿತ ಪ್ಲ್ಯಾನಿಂಗ್ ಸೇರಿದಂತೆ ಇನ್ನಿತರ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಸಂಬಂಧ ಕರ್ನಾಟಕದ ಎರಡೂ ಹಂತಗಳಿಗೆ ಪ್ರತ್ಯೇಕವಾಗಿ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ (Election campaign) ಕಾರ್ಯಕ್ರಮಗಳಿಗಾಗಿ ಇಬ್ಬರು ಉಸ್ತುವಾರಿಗಳನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
ಏಪ್ರಿಲ್ 19ರಂದು 102 ಕ್ಷೇತ್ರಗಳು ಕ್ಷೇತ್ರಗಳಿಗೆ ಮತದಾನ ನಡೆಯುವ ಮೂಲಕ ಏಳು ಹಂತದ ಚುನಾವಣೆ ನಡೆಯಲಿದೆ. ಏಪ್ರಿಲ್ 26ರಂದು ನಡೆಯುವ 2ನೇ ಹಂತದಲ್ಲಿ 89 ಕ್ಷೇತ್ರ, ಮೇ 7ರ 3ನೇ ಹಂತದಲ್ಲಿ 94 ಕ್ಷೇತ್ರ, ಮೇ 13ರಂದು ನಡೆಯುವ 4ನೇ ಹಂತದಲ್ಲಿ 96 ಕ್ಷೇತ್ರ, ಮೇ 20ರ 5ನೇ ಹಂತದಲ್ಲಿ 49 ಕ್ಷೇತ್ರ, ಮೇ 25ರಂದು ನಡೆಯುವ 6ನೇ ಹಂತದಲ್ಲಿ 57 ಕ್ಷೇತ್ರ ಮತ್ತು ಜೂನ್ 1ರ 7ನೇ ಹಂತದಲ್ಲಿ 57 ಕ್ಷೇತ್ರಗಳ ಚುನಾವಣೆ ನಡೆಯಲಿದೆ. ಕರ್ನಾಟಕದಲ್ಲಿ ಎರಡು ಹಂತವಿದ್ದು, ಏಪ್ರಿಲ್ 26 ಮತ್ತು ಮೇ 7ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು 2ನೇ ಹಂತದ ಚುನಾವಣಾ ಜಿಲ್ಲೆಗಳಿಗೆ ರಾಜ್ಯಸಭಾ ಸದಸ್ಯರಾದ ಜಿ.ಸಿ. ಚಂದ್ರಶೇಖರ್ (GC Chandrashekhar) ಹಾಗೂ 3ನೇ ಹಂತದ ಚುನಾವಣಾ ಜಿಲ್ಲೆಗಳಿಗೆ ಬಸವರಾಜ ರಾಯರೆಡ್ಡಿ (Basaaraj Rayareddy) ಅವರನ್ನು ನೇಮಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶವನ್ನು ಹೊರಡಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಆದೇಶದಲ್ಲೇನಿದೆ?
ಪ್ರಸ್ತುತ ನಡೆಯಲಿರುವ 2024ರ ಲೋಕಸಭಾ ಚುನಾವಣೆಗೆ ಪಕ್ಷದ ಮುಖಂಡರ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸಲು ಹಾಗೂ ಪ್ರವಾಸ ಕಾರ್ಯಕ್ರಮಗಳನ್ನು ಸುಲಲಿತವಾಗಿ ಅನುಷ್ಠಾನಗೊಳಿಸಬೇಕಿದೆ. ಇವುಗಳ ಪೂರ್ಣ ಜವಾಬ್ದಾರಿಯನ್ನು ನಿರ್ವಹಿಸಲು ರಾಜ್ಯದಲ್ಲಿ ನೆಡೆಯಲಿರುವ 2ನೇ ಹಂತದ ಲೋಕಸಭಾ ಚುನಾವಣೆಯ ಜಿಲ್ಲೆಗಳ ಪ್ರವಾಸ ಕಾರ್ಯಕ್ರಮದ ಜವಾಬ್ದಾರಿಯನ್ನು ರಾಜ್ಯಸಭಾ ಸದಸ್ಯರಾದ ಜಿ.ಸಿ. ಚಂದ್ರಶೇಖರ್ ಅವರಿಗೆ ಹಾಗೂ 3ನೇ ಹಂತದ ಜಿಲ್ಲೆಗಳ ಉಸ್ತುವಾರಿಯನ್ನು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರಿಗೆ ನೀಡಲಾಗಿದೆ.
ಈ ಉಭಯ ನಾಯಕರಿಗೆ 2ನೇ ಹಾಗೂ 3ನೇ ಹಂತದ ಚುನಾವಣಾ ಜಿಲ್ಲೆಗಳ ಹೊಣೆಯನ್ನು ವಹಿಸಲಾಗಿದೆ. ಈ ಪ್ರವಾಸ ಕಾರ್ಯಕ್ರಮದ ಮಾರ್ಗಗಳನ್ನು ವ್ಯವಸ್ಥಿತವಾಗಿ ಆಯೋಜಿಸಿ ಪೂರೈಸುವ ಹಿನ್ನೆಲೆಯಲ್ಲಿ ತಕ್ಷಣ ತಮಗೆ ನೀಡಿರುವ ಜವಾಬ್ದಾರಿಯನ್ನು ವಹಿಸಿಕೊಂಡು ಎಲ್ಲ ಸ್ಥಳೀಯ ಮುಖಂಡರ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮಾರ್ಗ ಹಾಗೂ ನಕ್ಷೆಯನ್ನು ಸಿದ್ಧಪಡಿಸಿ ಒಂದು ವಾರದೊಳಗೆ ಸಲ್ಲಿಸಲು ಕೋರುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.