ತಿರುವನಂತಪುರಂ: ತೀವ್ರ ಕುತೂಹಲ ಕೆರಳಿಸಿದ್ದ ಲೋಕಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಈಗಿನ ಟ್ರೆಂಡ್ ಪ್ರಕಾರ ನಿರೀಕ್ಷೆಯಂತೆ ಬಿಜೆಪಿ ನೇತೃತ್ವದ ಎನ್‌ಡಿಎ ಮುನ್ನಡೆ ಸಾಧಿಸಿದೆ. ಈಗಾಗಲೇ ಎನ್‌ಡಿಎ 290ಕ್ಕಿಂತಲೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ವಿಪಕ್ಷಗಳ ಇಂಡಿಯಾ ಮೈತ್ರಿಕೂಟ 220 ಸೀಟುಗಳಲ್ಲಿ ಮುಂದಿದೆ. ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಈ ಬಾರಿ ಕೇರಳದಲ್ಲಿ ಬಿಜೆಪಿ ಖಾತೆ ತೆರೆಯಲಿದೆ ಎನ್ನಲಾಗಿದೆ. ಹಾಗಾದರೆ ಈಗ ಅಲ್ಲಿನ ಸ್ಥಿತಿ ಹೇಗಿದೆ? ಇಲ್ಲಿದೆ ವಿವರ (Kerala Election Results 2024).
ಬಿಜೆಪಿಗೆ 1 ಕಡೆ ಮುನ್ನಡೆ
ಸದ್ಯ ಬಿಜೆಪಿ ಕೇರಳದ ಒಂದು ಕಡೆ ಲೀಡ್‌ನಲ್ಲಿದೆ. ತ್ರಿಶ್ಯೂರಿನಲ್ಲಿ ಬಿಜೆಪಿ ಅಭ್ಯರ್ಥಿ, ನಟ ಸುರೇಶ್ ಗೋಪಿ ಇದೀಗ ಮುನ್ನಡೆ ಸಾಧಿಸಿದ್ದಾರೆ. ಇಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (CPI)ದಿಂದ ವಿ.ಎಸ್.ಸುನೀಲ್ ಕುಮಾರ್ ಮತ್ತು ಕಾಂಗ್ರೆಸ್‌ನಿಂದ ಕೆ.ಮುರಳೀಧರನ್ ಕಣಕ್ಕಿಳಿದಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಬಾರಿ (2019)ಯ ಲೋಕಸಭಾ ಚುನಾವಣೆಯಲ್ಲಿಯೂ ಇಲ್ಲಿ ತೀವ್ರ ಪೈಪೋಟಿ ನಡೆದಿತ್ತು. ಕಾಂಗ್ರೆಸ್ ಅಭ್ಯರ್ಥಿ ಟಿ.ಎಸ್.ಪಾರ್ಥಪನ್ 93,633 ಮತಗಳ ಗೆಲುವಿನ ಅಂತರದಿಂದ ಗೆದ್ದಿದ್ದರು. ಅವರು 4,15,089 ಮತಗಳನ್ನು ಗಳಿಸಿದ್ದರು. 3,21,456 ಮತಗಳನ್ನು ಪಡೆದ ಸಿಪಿಐಯ ರಾಜಾಜಿ ಮ್ಯಾಥ್ಯೂ ಥಾಮಸ್ ಅವರನ್ನು ಟಿ.ಎಸ್.ಪಾರ್ಥಪನ್ ಸೋಲಿಸಿದ್ದರು.
ಮುನ್ನಡೆಯಲ್ಲಿ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಯನಾಡಿನಿಂದ ಸ್ಪರ್ಧಿಸುತ್ತಿದ್ದು, ಮುನ್ನಡೆ ಸಾಧಿಸಿದ್ದಾರೆ. ಇಲ್ಲಿ ಸಿಪಿಐಯಿಂದ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಆ್ಯನಿ ರಾಜಾ ಮತ್ತು ಬಿಜೆಪಿಯಿಂದ ಕೆ.ಸುರೇಂದ್ರನ್ ಸ್ಪರ್ಧಿಸುತ್ತಿದ್ದಾರೆ. ಕಳೆದ ಬಾರಿಯೂ ಇಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸಿ ಗೆದ್ದಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಸಿಪಿಐನ ಪಿ.ಪಿ.ಸುನೀರ್ ಅವರನ್ನು 4.31 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. ಇನ್ನು ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಈ ಬಾರಿ ಜಿದ್ದಾಜಿದ್ದಿನ ಹೋರಾಟ ನಡೆಯುವ ನಿರೀಕ್ಷೆ ಇದೆ. ಇಲ್ಲಿ ಬಿಜೆಪಿ ಹಿರಿಯ ನಾಯಕ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್‌ನಿಂದ ಹಿರಿಯ ನಾಯಕ ಶಶಿ ತರೂರರ್ ಸ್ಪರ್ಧಿಸುತ್ತಿದ್ದಾರೆ. ಶಶಿ ತರೂರ್ ಅವರಿಗೆ ಇದು ನಾಲ್ಕನೇ ಸ್ಪರ್ಧೆ. ಸದ್ಯ ಶಶಿ ತರೂರ್ ಅವರು ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ಬಹು ನಿರೀಕ್ಷಿತ ಕ್ಷೇತ್ರಗಳಲ್ಲಿ ಇದೂ ಕೂಡ ಒಂದು.
ಸದ್ಯದ ಚಿತ್ರಣ
ಸದ್ಯ ಕೇರಳದಲ್ಲಿ ಯುಡಿಎಫ್ 18, ಎಲ್‌ಡಿಎಫ್ ಮತ್ತು ಎನ್‌ಡಿಎ ತಲಾ 1 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. 2019ರಲ್ಲಿ ಕೇರಳದಲ್ಲಿ ಯುಡಿಎಫ್ 19 ಮತ್ತು ಎಲ್‌ಡಿಎಫ್ 1 ಕಡೆ ಗೆದ್ದುಕೊಂಡಿತ್ತು. ಈ ಬಾರಿ ಇಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ. ಜತೆಗೆ ಶತಾಯ ಗತಾಯ ಕೇರಳದಲ್ಲಿ ಗೆಲುವು ಸಾಧಿಸಬೇಕು ಎಂದು ಬಿಜೆಪಿ ಹಠ ತೊಟ್ಟಿದ್ದು, ಪ್ರದಾನಿ ಮೋದಿ ಅವರೂ ಭರ್ಜರಿ ರೋಡ್ ಶೋ ನಡೆಸಿ ಗಮನ ಸೆಳೆದಿದ್ದರು. ಸದ್ಯ ದೇಶದಲ್ಲಿ ಎನ್‌ಡಿಎ 293, ಇಂಡಿಯಾ ಮೈತ್ರಿಕೂಟ 219 ಮತ್ತು ಇತರ ಅಭ್ಯರ್ಥಿಗಳು 30 ಕಡೆ ಮುನ್ನಡೆ ಸಾಧಿಸಿದ್ದಾರೆ.
ಇದನ್ನೂ ಓದಿ: Election results 2024: ದಿಲ್ಲಿಯಲ್ಲಿ ಈ ಬಾರಿಯೂ ಕ್ಲೀನ್ ಸ್ವೀಪ್ ಮಾಡುತ್ತಾ ಬಿಜೆಪಿ? ಏಳೂ ಕ್ಷೇತ್ರಗಳಲ್ಲಿ ಮುನ್ನಡೆ