Site icon Vistara News

2nd PUC Exam: ದ್ವಿತೀಯ ಪಿಯುಸಿ ಪರೀಕ್ಷೆ-2 ಬರೆಯುತ್ತೀರಾ? ಹಾಗಿದ್ರೆ ನಿಮ್ಗೆ ಬಸ್‌ ಪ್ರಯಾಣ ಫ್ರೀ!

2nd PUC Exam 2 KSRTC BMTC bus travel free for students in exam timing

ಬೆಂಗಳೂರು: ಇದೇ ಏಪ್ರಿಲ್ 29ರಿಂದ ದ್ವಿತೀಯ ಪಿಯುಸಿ ಪರೀಕ್ಷೆ-2 ಆರಂಭವಾಗಲಿದ್ದು, ವಿದ್ಯಾರ್ಥಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಈಗ ರಾಜ್ಯದ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಉಚಿತ ಪ್ರಯಾಣಕ್ಕೆ ಅನುವು ಮಾಡಿ ಕೊಟ್ಟಿದೆ. ಪರೀಕ್ಷೆಗೆ ಹಾಜರಾಗುವವರು ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ಪ್ರಕಟಣೆ ಮೂಲಕ ತಿಳಿಸಿದೆ.

ಏಪ್ರಿಲ್‌ 2ರಿಂದ ರಾಜ್ಯದ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ 2ನೇ ಪೂರಕ ಪರೀಕ್ಷೆಯು ಪ್ರಾರಂಭವಾಗುತ್ತಿದೆ. ಇನ್ನು ವಿದ್ಯಾರ್ಥಿಗಳಿಗೆ ಅವರ ಕಾಲೇಜಿನ ಹೊರತಾಗಿ ಇತರೆ ಕಾಲೇಜಿಗೆ ಪರೀಕ್ಷಾ ಕೇಂದ್ರಗಳು ನಿಗದಿಯಾಗಿವೆ. ಈ ಕಾರಣದಿಂದ ಪರೀಕ್ಷಾ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಅವರ ವಾಸಸ್ಥಳದಿಂದ ಪರೀಕ್ಷಾ ಕೇಂದ್ರಕ್ಕೆ ಸಂಚಾರ ಮಾಡಲು ನಿಗಮದ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಲು ಅನುಮತಿ ನೀಡುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧ್ಯಕ್ಷರು ಪತ್ರ ಬರೆದು ಕೋರಿದ್ದಾರೆ. ಈ ಕಾರಣದಿಂದಾಗಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರಕಟಣೆಯಲ್ಲಿ ತಿಳಿಸಿದೆ.

ಆದೇಶದಲ್ಲೇನಿದೆ?

ಕ.ರಾ.ರ.ಸಾ. ನಿಗಮವು, ದ್ವಿತೀಯ ಪಿಯುಸಿ ಪರೀಕ್ಷೆ-2 ನಡೆಯುವ ದಿನಾಂಕಗಳಂದು ಅಂದರೆ, ದಿನಾಂಕ 29.04.2024 ರಿಂದ 16.05.2024 ರವರೆಗೆ, ಪರೀಕ್ಷೆಗೆ ಹಾಜರಾಗುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಹೋಗುವಾಗ ಮತ್ತು ಹಿಂದಿರುಗುವಾಗ “ದ್ವಿತೀಯ ಪಿಯುಸಿ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ, ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ಈ ಸಂಬಂಧ, ನಿಗಮದ ಎಲ್ಲ ಚಾಲಕರು ಹಾಗೂ ನಿರ್ವಾಹಕರಿಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಅವಧಿಯಲ್ಲಿ ನಿಯೋಜಿತ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಹಾಗೂ ವಾಸಸ್ಥಳಕ್ಕೆ ಮರಳಲು ಪರೀಕ್ಷಾ ಪ್ರವೇಶ ಪತ್ರದೊಂದಿಗೆ ಪ್ರಯಾಣಿಸಲು ಅನುಮತಿಸಲು ಸೂಕ್ತ ತಿಳಿವಳಿಕೆ ನೀಡಲು ಸೂಚಿಸಲಾಗಿದೆ. ಮುಂದುವರಿದು, ಪ್ರವೇಶ ಪತ್ರದ ಆಧಾರದ ಮೇಲೆ ಬಸ್ಸುಗಳ ಕಾರ್ಯಾಚರಣಾ ಮಾರ್ಗದಲ್ಲಿ ಪರೀಕ್ಷಾ ಕೇಂದ್ರಗಳಿದ್ದಲ್ಲಿ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸದರಿ ಮಾರ್ಗಗಳಲ್ಲಿ ಕೋರಿಕೆ ನಿಲುಗಡೆ ನೀಡಲು ಕ್ರಮ ಕೈಗೊಳ್ಳುವುದು.

ಚಾಲನಾ ಸಿಬ್ಬಂದಿ ಮೇಲ್ಕಂಡ ನಿರ್ದೇಶನಗಳನ್ನು ತಪ್ಪದೇ ಪಾಲಿಸುವಂತೆ ತಿಳಿಸುವುದು. ಈ ವಿಷಯವನ್ನು ಎಲ್ಲ ಘಟಕ ಮತ್ತು ಬಸ್ ನಿಲ್ದಾಣಗಳ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಿ ಮೇಲ್ಕಂಡ ನಿರ್ದೇಶನಗಳನ್ನು ಜಾರಿಗೊಳಿಸಲು ಕ್ರಮ ವಹಿಸುವಂತೆ ತಿಳಿಸಲಾಗಿದೆ ಎಂದು ನಿಗಮವು ಆದೇಶದಲ್ಲಿ ಉಲ್ಲೇಖಿಸಿದೆ.

ಬಿಎಂಟಿಸಿ ಬಸ್ಸಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ

ಬಿಎಂಟಿಸಿ ಸಹ ಈ ಬಗ್ಗೆ ಆದೇಶ ಹೊರಡಿಸಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಏಪ್ರಿಲ್ 29ರಿಂದ ಏಪ್ರಿಲ್‌ 15 ರವರೆಗೆ ದ್ವಿತೀಯ ಪಿ.ಯು.ಸಿ ಪರೀಕ್ಷೆ – 2 ನಡೆಯಲಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅವರ ಕಾಲೇಜು ಹೊರತಾಗಿ ಇತರೆ ಕಾಲೇಜಿನ ಪರೀಕ್ಷಾ ಕೇಂದ್ರಗಳ ನಿಯೋಜನೆಯಾಗಿರುವುದರಿಂದ ಪರೀಕ್ಷಾ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಅವರ ವಾಸಸ್ಥಳದಿಂದ ಪರೀಕ್ಷಾ ಕೇಂದ್ರಗಳವರೆಗೆ ಸಂಸ್ಥೆಯ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿಸುವಂತೆ ಉಲ್ಲೇಖಿತ ಪತ್ರದಲ್ಲಿ ಕೋರಲಾಗಿದೆ. ಹೀಗಾಗಿ ಸಂಸ್ಥೆಯು ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಕೆಳಕಂಡ ಸೌಲಭ್ಯಗಳನ್ನು ಕಲ್ಪಿಸಿರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ: 2nd PUC Exam: ಏಪ್ರಿಲ್‌ 29ರಿಂದ ದ್ವಿತೀಯ ಪಿಯುಸಿ ಪರೀಕ್ಷೆ-2; ಮತ್ತೊಂದು ಎಡವಟ್ಟು!

ಬಿಎಂಟಿಸಿ ಆದೇಶದಲ್ಲೇನಿದೆ?

ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ದಿನಾಂಕ 29.04.2024 ರಿಂದ 16.05.2024 ರವರೆಗೆ ಪರೀಕ್ಷೆಗಳು ನಡೆಯುವ ದಿನಾಂಕಗಳಂದು ಪರೀಕ್ಷೆಗೆ ಹಾಜರಾಗಲು ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಹೋಗುವಾಗ ಮತ್ತು ಹಿಂದಿರುಗುವಾಗ ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷಾ ಪ್ರವೇಶ ಪತ್ರವನ್ನು ತೋಲಿಸಿ, ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ದ್ವಿತೀಯ ಪಿ.ಯು.ಸಿ ಪರೀಕ್ಷಾ ದಿನಾಂಕಗಳಂದು ಪರೀಕ್ಷಾ ಕೇಂದ್ರಗಳ ಮಾರ್ಗಗಳಲ್ಲಿ ಕಡ್ಡಾಯವಾಗಿ ಎಲ್ಲ ಮಾರ್ಗಗಳನ್ನು, ಸುತ್ತುವಳಿಗಳನ್ನು ಕಾರ್ಯಾಚರಣೆಗೊಳಿಸುವುದು.

ಹೆಚ್ಚುವರಿ ಸುತ್ತುವಳಿಗಳ ಕಾರ್ಯಾಚರಣೆಯ ಅಗತ್ಯತೆ ಕಂಡುಬಂದಲ್ಲಿ ಕಾರ್ಯಾಚರಣೆ ಮಾಡುವುದು. ಪರೀಕ್ಷಾ ಕೇಂದ್ರಗಳ ಬಳಿ ವಿದ್ಯಾರ್ಥಿಗಳು/ಪೋಷಕರು ಕೋರಿಕೆ ನಿಲುಗಡೆ ಇದ್ದಲ್ಲಿ, ಬಸ್ ನಿಲುಗಡೆಯನ್ನು ನೀಡಲು ಚಾಲನಾ ಸಿಬ್ಬಂದಿಗೆ ತಿಳಿಸುವುದು. ಚಾಲನಾ ಸಿಬ್ಬಂದಿಯು ವಿದ್ಯಾರ್ಥಿಗಳೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು ಎಂದು ಬಿಎಂಟಿಸಿ ಆದೇಶದಲ್ಲಿ ಸೂಚಿಸಿದೆ.

Exit mobile version