Site icon Vistara News

Laxmi Hebbalkar: ನನ್ನನ್ನು ಕೊಲೆ ಮಾಡಲು ಲಕ್ಷ್ಮಿ ಹೆಬ್ಬಾಳ್ಕರ್ ಯತ್ನ; ಮಾಜಿ ಶಾಸಕನ ಆರೋಪ

Laxmi Hebbalkar attempt to murder Sanjay Patil and Former MLA files complaint

ಬೆಳಗಾವಿ: ಲೋಕಸಭಾ ಚುನಾವಣೆ (Lok Sabha Election 2024) ಹೊತ್ತಿನಲ್ಲಿ ಬೆಳಗಾವಿ ರಾಜಕಾರಣ (Belagavi Politics) ರಂಗೇರಿದೆ. ಪರಸ್ಪರ ಆರೋಪ – ಪ್ರತ್ಯಾರೋಪಗಳು ಹೆಚ್ಚತೊಡಗಿವೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಮಾಜಿ ಶಾಸಕ ಸಂಜಯ್‌ ಪಾಟೀಲ್‌ (Sanjay Patil) ವಿರುದ್ಧ ಮಹಿಳಾ ಆಯೋಗವು ಸುಮೋಟೊ ಕೇಸ್‌ ದಾಖಲಿಸಿಕೊಂಡ ಬೆನ್ನಲ್ಲೇ ಈಗ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ವಿರುದ್ಧ ಕೊಲೆ ಯತ್ನ ಸಂಬಂಧ ದೂರು ಸಂಜಯ್‌ ಪಾಟೀಲ್‌ ದೂರು ಕೊಟ್ಟಿದ್ದಾರೆ.

ಗೂಂಡಾಗಳ ಮೂಲಕ ನನ್ನ ಹತ್ಯೆಗೆ ಪ್ರಚೋದನೆ ನೀಡಿದ್ದಾರೆಂದು ಆರೋಪಿಸಿ ಬೆಳಗಾವಿ ಶಹಾಪೂರ ಪೊಲೀಸ್ ಠಾಣೆಯಲ್ಲಿ ಮಾಜಿ ಶಾಸಕ ಸಂಜಯ್‌ ಪಾಟೀಲ್‌ ದೂರು ನೀಡಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ನೂರಕ್ಕೂ ಅಧಿಕ ಗೂಂಡಾಗಳ ಮೂಲಕ ನನ್ನ ಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಗಾಜಿನ ಬಾಟಲ್ ಕಲ್ಲುಗಳನ್ನು ಹಿಡಿದು ಮನೆಯೊಳಗೆ ನುಗ್ಗಲು ಯತ್ನಿಸಿ ಬೆಲೆಬಾಳುವ ವಸ್ತುಗಳನ್ನು ನಾಶ ಮಾಡಿದ್ದಾರೆ. ಇದಕ್ಕೆಲ್ಲ ನೇರವಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಚೋದನೆ ನೀಡಿದ್ದಾರೆ.‌ ನಮ್ಮ ಸಿಬ್ಬಂದಿ ಮೇಲೂ ಹಲ್ಲೆ ಮಾಡಿದ್ದಾರೆ. ಹೀಗಾಗಿ ಪ್ರಚೋದನೆ ನೀಡಿದವರು ಮತ್ತು ನನ್ನ ಕೊಲೆಗೆ ಯತ್ನಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಆಯಿಷಾ ಸನದಿ, ಸುಜಯ್ ಜಾಧವ್, ಜಯಶ್ರೀ ಸೂರ್ಯವಂಶಿ, ಪ್ರಭಾವತಿ ಮಾಸ್ತಮರಡಿ, ರೋಹಿಣಿ ಬಾಬ್ಟೆ, ಮುಷ್ತಾಕ್ ಮುಲ್ಲಾ, ಸದ್ದಾಂ, ಶಂಕರಗೌಡ ಪಾಟೀಲ, ಸಂಗನಗೌಡ ಪಾಟೀಲ್, ಭಾರತಿ ಸೇರಿ ನೂರಕ್ಕೂ ಅಧಿಕ ಜನರ ಮೇಲೆ ಕ್ರಮ ಕೈಗೊಳ್ಳುವಂತೆ ಸಂಜಯ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಂಜಯ್‌ ಪಾಟೀಲ್‌ ವಿರುದ್ಧ ಸುಮೋಟೊ ಕೇಸ್‌ ದಾಖಲು

ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ವಿರುದ್ಧ ರಾಜ್ಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಮಾಜಿ ಶಾಸಕನ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಲಾಗಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಭಾನುವಾರ ಹೇಳಿದ್ದರು.

ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಶಾಸಕ ಸಂಜಯ್‌ ಪಾಟೀಲ್‌ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದ ಬಳಸಿದ್ದರು. “ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಅತಿ ಹೆಚ್ಚು ಮಹಿಳೆಯರು ಸಮಾವೇಶದಲ್ಲಿ ಭಾಗಿಯಾಗಿದ್ದೀರಿ, ಇದರಿಂದ ಅವರಿಗೆ ಇಂದು ರಾತ್ರಿ ನಿದ್ದೆ ಬರುವುದಿಲ್ಲ. ಅದರಲ್ಲೂ ಇಂದು ರಮೇಶ್ ಜಾರಕಿಹೊಳಿ ಕೂಡ ಪ್ರಚಾರಕ್ಕೆ ಬಂದಿದ್ದರಿಂದ ಮಾತ್ರೆ ಜತೆಗೆ ಒಂದು ಪೆಗ್ ಹೆಚ್ಚಾಗಿಯೇ ಹಾಕಿಕೊಳ್ಳಬೇಕು ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ಮಾಜಿ ಶಾಸಕನ ವಿರುದ್ಧ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ನಾಲಿಗೆ ಮೇಲೆ ಹಿಡಿತ ಇರಬೇಕು: ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ

ಸಂಜಯ್ ಪಾಟೀಲ್ ಎಕ್ಸ್‌ಟ್ರಾ ಪೆಗ್ ಹೇಳಿಕೆ ವಿಚಾರಕ್ಕೆ ಭಾನುವಾಋ ಪ್ರತಿಕ್ರಿಯೆ ನೀಡಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ನಾನು ರಾಜ್ಯದ ಮಹಿಳೆಯರನ್ನು ಪ್ರತಿನಿಧಿಸುತ್ತೇನೆ‌. ನಾಲಿಗೆ ಮೇಲೆ ಹಿಡಿತ ಇರಬೇಕು, ವೇದಿಕೆ ಮೇಲೆ ಇದ್ದವರು ಯಾಕೆ ತಡೆಯಲಿಲ್ಲ. ಸಂಜಯ್ ಪಾಟೀಲ್ ಮೂಲಕ ಮಾತನಾಡಿಸಿದ್ದಾರಾ? ಇದು ನನಗೆ ಮಾತ್ರವಲ್ಲ, ಇಡೀ ಸ್ತ್ರೀ ಕುಲಕ್ಕೆ ಮಾಡಿದ ಅವಮಾನ, ನಾನು ಲಿಂಗಾಯತ ಸಮಾಜದ ಹೆಣ್ಣು ಮಗಳು. ಇದು ಲಿಂಗಾಯತ ಸಮಾಜಕ್ಕೆ ಮಾಡಿದ ಅವಮಾನ. ಇಂತಹವರನ್ನು ಇಡೀ ರಾಜ್ಯದ ಮಹಿಳೆಯರು ಧಿಕ್ಕರಿಸಬೇಕು ಎಂದು ಕರೆ ಕೊಡುತ್ತೇನೆ ಎಂದು ಕಿಡಿಕಾರಿದ್ದರು.

ಮಹಿಳೆಯ ಆತ್ಮಗೌರವಕ್ಕೆ ಧಕ್ಕೆಯಾಗಿದೆ. ಬಿಜೆಪಿಯವರು ಮಹಿಳಾ ಸಬಲೀಕರಣ ವಿರೋಧಿಗಳು. ಗ್ಯಾರಂಟಿ ಯೋಜನೆಯ ಬಗ್ಗೆಯೂ ವಿರೋಧ ಮಾಡ್ತಾರೆ. ಬಿಜೆಪಿ ನಾಯಕರು ಹಳ್ಳಿಯ ಹೆಣ್ಣು ಮಗಳ ಬಗ್ಗೆ ಯಾಕೆ ಇಷ್ಟು ಹಗರುವಾಗಿ ಮಾತನಾಡಿದ್ದಾರೆ. ಕಾಂಗ್ರೆಸ್ ಯಾವುದೇ ಸ್ವಾರ್ಥಕ್ಕಾಗಿ ಯೋಜನೆ ಮಾಡಿಲ್ಲ. ಬಿಜೆಪಿಯ ಮನಸ್ಥಿತಿ ಬಗ್ಗೆ ಜನರಿಗೆ ಗೊತ್ತಾಗಿದೆ ಎಂದು ಆಕ್ರೋಶವನ್ನು ಹೊರಹಾಕಿದ್ದರು.

ಎಕ್ಸ್‌ಟ್ರಾ ಪೆಗ್ ಅಂದ್ರೆ ಎನರ್ಜಿ ಡ್ರಿಂಕ್ ಎಂದ ಮಾಜಿ ಶಾಸಕ

ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗೆ ಆಕ್ರೋಶ ಭುಗಿಲೆದ್ದ ಹಿನ್ನೆಲೆಯಲ್ಲಿ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ಅವರು ಪೆಗ್‌ಗೆ ಹೊಸ ಭಾಷ್ಯ ಬರೆದಿದ್ದಾರೆ. ನಾನು ಮೊದಲು ಏನು ಮಾತನಾಡಿದ್ದೀನಿ ಎಂಬುವುದು ನನಗೆ ಗೊತ್ತಾಗುತ್ತಿಲ್ಲ. ನಾನು ಮಾತನಾಡಿದ್ದರಲ್ಲಿ ಅವರ (ಹೆಬ್ಬಾಳ್ಕರ್) ಹೆಸರಿದ್ದರೆ ತೋರಿಸಿಕೊಡಿ. ಅಕ್ಕಾ ಬಾಯಿ ಅಂದ್ರೆ ಅವರೇ ಅಂತ ನೀವ್ಯಾಕೆ‌ ತಿಳಿದುಕೊಳ್ಳುತ್ತೀರಿ? ಎಕ್ಸ್‌ಟ್ರಾ ಪೆಗ್ ಅಂದ್ರೆ ಎನರ್ಜಿ ಡ್ರಿಂಕ್ ಎಂದು ಹೇಳಿದ್ದಾರೆ.

ಇದನ್ನೂ ಓದಿ: DK Shivakumar: ದೆಹಲಿಯಲ್ಲಿ ಎಲ್ಲವೂ ತೀರ್ಮಾನವಾಗಿದೆ; ಸಿಎಂ ಬದಲಾವಣೆ ಸುಳಿವು ನೀಡಿದ ಡಿಕೆಶಿ!

ಚುನಾವಣೆಯ ಸೋಲಿನ ಭಯದಿಂದ ಅವರಿಗೆ ಹೆದರಿಕೆ ಶುರುವಾಗಿದೆ. ನನ್ನ ತಾಯಿ ಮಹಿಳೆ, ನನ್ನ ಮಗಳು, ಹೆಂಡತಿಯೂ ಮಹಿಳೆಯೇ. ಭಾರತದ ಸಂಸ್ಕೃತಿ ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎನ್ನುವುದನ್ನು ಕಲಿಸಿದೆ, ನಾನು ತಪ್ಪು ಮಾಡಿದರೆ ಚುನಾವಣೆ ಆಯೋಗ, ಪೊಲೀಸರಿದ್ದಾರೆ. ನಾನು ತಪ್ಪು ಮಾಡಿದರೆ ಶಿಕ್ಷೆ ಆಗಲಿ, ಯಾರದ್ದೋ ಮನೆಗೆ ಹೋಗಿ ರಾತ್ರಿ ಪ್ರತಿಭಟನೆ ‌ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ನಾನು ಹಾರ್ಟ್ ಪೇಶೆಂಟ್ ಇದ್ದೇನೆ, ಬೈ ಪಾಸ್ ಸರ್ಜರಿ ಸಹ ಆಗಿದೆ. ಹಾರ್ಟ್ ವೀಕ್ ಇದ್ದರೆ ಏನು ಗತಿ? ಅವರು ಹೀಗೆ ಮಾಡೋದು ಎಷ್ಟು ಸರಿ? ಪೃಥ್ವಿ ಸಿಂಗ್ ಮೇಲೆ ಹಲ್ಲೆ ಆಯ್ತು, ಅಂಗನವಾಡಿ ಟೀಚರ್ಸ್‌ ಮೇಲೆ ಹಲ್ಲೆ ನಡೆಯಿತು. ಸಚಿವೆ ತಮ್ಮ ಸ್ವಾರ್ಥಕ್ಕಾಗಿ ಇಲಾಖೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಹೋರಾಟಕ್ಕೆ ಒಂದು ರೀತಿ ನೀತಿ ಇದೆ, ಅದನ್ನು ಬಿಟ್ಟು ಮನೆ‌ಬಾಗಿಲಿಗೆ ಬಂದು ಕೂರುವುದು ಎಷ್ಟು ಸರಿ? ನಾನು ಅವರ ಹೆಸರು ತೆಗೆದುಕೊಂಡಿದ್ದರೆ ಇಲ್ಲೇ ಶಿಕ್ಷೆ ಕೊಡಿ ಎಂದು ಹೇಳಿದ್ದಾರೆ.

Exit mobile version