Site icon Vistara News

Lok Sabha Election 2024: ಇಂಡಿಗನತ್ತ ಮತಗಟ್ಟೆ ಧ್ವಂಸ ಪ್ರಕರಣ; ಬಂಧಿತರಾಗಿದ್ದ 46 ಮಂದಿಗೆ ಜಾಮೀನು

Lok Sabha Election 2024

ಚಾಮರಾಜನಗರ: ಲೋಕಸಭೆ ಚುನಾವಣೆಯ (Lok Sabha Election 2024) ಮತದಾನದ ಸಮಯದಲ್ಲಿ ಇಂಡಿಗನತ್ತ ಗ್ರಾಮದಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ಮತಗಟ್ಟೆಯನ್ನು ಧ್ವಂಸ ಮಾಡಿದ್ದರು. ಮತಗಟ್ಟೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ 46 ಬಂಧಿತ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಜನಧ್ವನಿ ವೆಂಕಟೇಶ್ ಬಂಧಿತರಿಗೆ ಜಾಮೀನು ನೀಡಿದ್ದಾರೆ. ಮತಗಟ್ಟೆ ಧ್ವಂಸ ಪ್ರಕರಣದಲ್ಲಿ 26 ಪುರುಷರು, 20 ಮಹಿಳೆಯರು ಬಂಧಿತರಾಗಿದ್ದರು. ಇದೀಗ ಎಲ್ಲರು ಜಾಮೀನು ಪಡೆದು ಹೊರಬಂದಿದ್ದಾರೆ. ಇದೇ ವೇಳೆ ತಮಗೆ ಮೂಲ ಸೌಕರ್ಯ ಕಲ್ಪಿಸಿ ಕೊಡಿ ಎಂದು ಇಂಡಿಗನತ್ತ ಗ್ರಾಮದ ಮಹಿಳೆಯರು ಕಣ್ಣೀರಿಟ್ಟರು.

Lok Sabha Election 2024 Villagers vandalise polling booth in Chamarajanagar

ಏನಿದು ಪ್ರಕರಣ?

ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕಳೆದ ಏಪ್ರಿಲ್‌ 26ರಂದು ಮೊದಲ ಹಂತದ ಮತದಾನ (First phase of polling) ನಡೆದಿತ್ತು. ಆ ದಿನ ಚಾಮರಾಜನಗರ ಲೋಕಸಭಾ ಕ್ಷೇತ್ರದ (Chamarajanagar Lok Sabha constituency) ಮಹದೇಶ್ವರಬೆಟ್ಟ ವ್ಯಾಪ್ತಿಯ ಐದು ಗ್ರಾಮಗಳಲ್ಲಿ ಮತದಾನವನ್ನು ಬಹಿಷ್ಕರಿಸಲಾಗಿತ್ತು. ಇದೇ ವೇಳೆ ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆಯನ್ನೇ ಧ್ವಂಸ ಮಾಡಲಾಗಿತ್ತು.

ಎಷ್ಟು ಬಾರಿ ಮನವಿ ಮಾಡಿದರೂ ಈ ಗ್ರಾಮಗಳಲ್ಲಿ ಮೂಲ ಸೌಕರ್ಯವನ್ನು ಕಲ್ಪಿಸಲಾಗಿಲ್ಲ. ಚುನಾವಣೆ ಬಂದಾಗ ಮಾತ್ರ ಈ ರಾಜಕಾರಣಿಗಳಿಗೆ ನಮ್ಮ ನೆನಪಾಗುತ್ತದೆ. ಅದಾದ ಬಳಿಕ ನಮ್ಮನ್ನು ಕೇಳುವವರೇ ಇಲ್ಲ ಎಂದು ಆರೋಪಿಸಿ ಮಹದೇಶ್ವರಬೆಟ್ಟ ವ್ಯಾಪ್ತಿಯ ಐದು ಗ್ರಾಮಗಳ ಗ್ರಾಮಸ್ಥರು ಮತದಾನವನ್ನು ಬಹಿಷ್ಕಾರ ಮಾಡಿದ್ದರು.

ಮತಯಂತ್ರ ಧ್ವಂಸ ಮಾಡಿದ್ದ ಗ್ರಾಮಸ್ಥರು

ಇನ್ನು ಇಂಡಿಗನತ್ತ ಗ್ರಾಮದಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ಮತಗಟ್ಟೆಯನ್ನು ಧ್ವಂಸ ಮಾಡಿದ್ದರು. ಮತದಾನದಿಂದ ದೂರ ಉಳಿದ ಗ್ರಾಮಸ್ಥರಿಂದ ಈ ಕೃತ್ಯ ನಡೆದಿತ್ತು. ಈ ವೇಳೆ ಗ್ರಾಮಸ್ಥರ ಮನವೊಲಿಕೆಗೆ ತೆರಳಿದ್ದ ಅಧಿಕಾರಿಗಳ ಮೇಲೆಯೂ ಹಲ್ಲೆ ನಡೆಸಲಾಗಿತ್ತು. ಆಕ್ರೋಶಗೊಂಡ ಹಲವರು ಇವಿಎಂ, ಮೇಜು ಕುರ್ಚಿ ಮತಗಟ್ಟೆ ಸಾಮಗ್ರಿಗಳನ್ನು ಧ್ವಂಸ ಮಾಡಿದ್ದರು.

Lok Sabha Election 2024 Villagers vandalise polling booth in Chamarajanagar

ಲಾಠಿ ಚಾರ್ಚ್‌; ಹಲವರಿಗೆ ಗಾಯ

ಸ್ಥಳದಲ್ಲಿ ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಇದೇ ವೇಳೆ ತಿರುಗಿಬಿದ್ದ ಜನರು ಸಹ ಪೊಲೀಸರ ಮೇಲೆ ಕಲ್ಲು ತೂರಿದ್ದರು. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿತ್ತು. ಸಾರ್ವಜನಿಕರು ಸೇರಿ ಅಧಿಕಾರಿಗಳಿಗೂ ಗಾಯಗಳಾಗಿತ್ತು. ಪುರುಷರು, ಮಹಿಳೆಯರು ಎನ್ನದೆ ಪೊಲೀಸರು ಲಾಠಿ ಚಾರ್ಚ್ ಮಾಡಿದ್ದರು.

ಇದನ್ನೂ ಓದಿ: Ebrahim Raisi: ಹೆಲಿಕಾಫ್ಟರ್‌ ಪತನದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮೃತ್ಯು; ವಿಧ್ವಂಸಕ ಕೃತ್ಯವೇ?

85 ಮಂದಿಯಲ್ಲಿ ಮತ ಚಲಾಯಿಸಿದ್ದು ಇಬ್ಬರೇ!

ಇಂಡಿಗನತ್ತ, ತೇಕಣೆ, ಮೆಂದಾರೆ ಹಾಗೂ ತುಳಸಿಕೆರೆ ಗ್ರಾಮಗಳಲ್ಲಿ ಮತದಾನವನ್ನು ಬಹಿಷ್ಕಾರ ಮಾಡಲಾಗಿತ್ತು. ಪಡಸಲನತ್ತ ಗ್ರಾಮದಲ್ಲಿ 85 ಮತದಾರರ ಪೈಕಿ ಕೇವಲ ಇಬ್ಬರು ಮತದಾನ ಮಾಡಿದ್ದರು. ಉಳಿದಂತೆ ಮತಗಟ್ಟೆಗಳತ್ತ ಯಾರೊಬ್ಬರೂ ಸುಳಿದಿರಲಿಲ್ಲ.

ನೀರು, ರಸ್ತೆ, ವಿದ್ಯುತ್‌ ಏನೂ ಇಲ್ಲ!

ಕನಿಷ್ಠ ಮೂಲಭೂತ ಸೌಕರ್ಯವನ್ನೂ ನೀಡಲಾಗಿಲ್ಲ. ಕುಡಿಯುವ ನೀರು, ರಸ್ತೆ, ವಿದ್ಯುತ್, ಆರೋಗ್ಯ, ಶಿಕ್ಷಣ ಎಲ್ಲವೂ ಇಲ್ಲಿ ಮರೀಚಿಕೆಯಾಗಿದೆ. ಕೆಲವು ದಿನಗಳ ಹಿಂದೆಯೇ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಆದರೂ, ಯಾವೊಂದು ಭರವಸೆ ಸಿಗದೇ ಇರುವ ಹಿನ್ನೆಲೆಯಲ್ಲಿ ಮತದಾನವನ್ನು ಬಹಿಷ್ಕಾರ ಮಾಡುತ್ತಿರುವುದಾಗಿ ಗ್ರಾಮಸ್ಥರು ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version