ನವದೆಹಲಿ: ಲೋಕಸಭಾ ಚುನಾವಣೆ (Lok Sabha Election 2024)ಯ ಫಲಿತಾಂಶಕ್ಕೆ ದಿನ ಗಣನೆ ಆರಂಭವಾಗಿದೆ. ಮಂಗಳವಾರ (ಜೂನ್ 4) ರಿಸಲ್ಟ್ ಹೊರ ಬೀಳಲಿದ್ದು, ರಾಜಕೀಯ ಪಕ್ಷಗಳ ನಡುವೆ ಲೆಕ್ಕಾಚಾರ ಆರಂಭವಾಗಿದೆ. ಈಗಾಗಲೇ ಎಕ್ಸಿಟ್ ಪೋಲ್ ಫಲಿತಾಂಶ ಹೊರಬಂದಿದ್ದು, ನಿರೀಕ್ಷಿಸಿದಂತೆಯೇ ಎನ್‌ಡಿಎ ಒಕ್ಕೂಟ ಬಹುಮತ ಪಡೆದುಕೊಳ್ಳಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಈ ಮಧ್ಯೆ ಫಲಿತಾಂಶ ಘೋಷಣೆಗೆ 1 ದಿನವಷ್ಟೇ ಬಾಕಿ ಇರುವಂತೆ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ವಿಪಕ್ಷಗಳ ʼಇಂಡಿಯಾʼ ಮೈತ್ರಿಕೂಟ ಚುನಾವಣಾ ಆಯೋಗ (Election Commission)ದ ಕದ ತಟ್ಟಿವೆ.
ಮತ ಎಣಿಕೆಯ ಸಮಯದಲ್ಲಿ ಎಲ್ಲ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆಯೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಪ್ರತಿಪಕ್ಷಗಳು ಆಯೋಗವನ್ನು ಆಗ್ರಹಿಸಿದರೆ, ಚುನಾವಣಾ ಪ್ರಕ್ರಿಯೆಯ ಸಮಗ್ರತೆಯನ್ನು ದುರ್ಬಲಗೊಳಿಸಲು ಪ್ರತಿಪಕ್ಷಗಳು ಸಂಘಟಿತ ಪ್ರಯತ್ನ ನಡೆಸುತ್ತಿವೆ ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಬಿಜೆಪಿ ಹೇಳಿದ್ದೇನು?
ʼʼಪ್ರತಿಪಕ್ಷಗಳು ನೇರವಾಗಿ ಚುನಾವಣಾ ಪ್ರಕ್ರಿಯೆಗಳ ಮೇಲೆ ದಾಳಿ ನಡೆಸುತ್ತಿವೆʼʼ ಎಂದು ಬಿಜೆಪಿ ಆರೋಪಿಸಿ ಪತ್ರ ನೀಡಿದ್ದು, ಇದರಲ್ಲಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಪಿಯೂಷ್ ಗೋಯಲ್ ಅವರ ಸಹಿ ಇದೆ. ಚುನಾವಣಾ ಪ್ರಕ್ರಿಯೆಯನ್ನು ಪ್ರತಿಪಕ್ಷಗಳು ಅನುಮಾನಿಸುತ್ತಿವೆ ಎಂದಿರುವ ಬಿಜೆಪಿ, ಇದಕ್ಕೆ ವಿದ್ಯುನ್ಮಾನ ಮತ ಯಂತ್ರಗಳ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಇತ್ತೀಚೆಗೆ ನಡೆದ ವಿಚಾರಣೆಯನ್ನು ಉಲ್ಲೇಖಿಸಿದೆ. ಅವರು ಸೋತಾಗ ಇಲ್ಲ ಸಲ್ಲದ ದೂರು ನೀಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಪ್ರತಿಪಕ್ಷಗಳ ಆಗ್ರಹವೇನು?
ಇತ್ತ ಪ್ರತಿಪಕ್ಷಗಳ ಒಕ್ಕೂಟ, ಮತಯಂತ್ರಗಳನ್ನು ಸಿಸಿಟಿವಿ ಕ್ಯಾಮೆರಾದ ಮೇಲ್ವಿಚಾರಣೆಯ ಮೂಲಕ ಸಾಗಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಮತ್ತು ನಿಯಂತ್ರಣ ಘಟಕಗಳ ಪ್ರಸ್ತುತ ದಿನಾಂಕ ಮತ್ತು ಸಮಯವನ್ನು ಪರಿಶೀಲಿಸುವಂತೆ ಅಧಿಕಾರಿಗಳನ್ನು ಆಗ್ರಹಿಸಿದೆ. ಮತ ಎಣಿಕೆಯ ಸಮಯದಲ್ಲಿ ಚುನಾವಣಾ ಅಧಿಕಾರಿಗಳು ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಒತ್ತಿ ಹೇಳಿವೆ.
ಎಕ್ಸಿಟ್ ಪೋಲ್ ಹೇಳಿದ್ದೇನು?
ಇಂಡಿಯಾ ನ್ಯೂಸ್ ಡೈನಾಮಿಕ್ಸ್ ಸಮೀಕ್ಷಾ ವರದಿ ಎನ್‌ಡಿಎ 371, ಇಂಡಿಯಾ ಮೈತ್ರಿ 125 ಇತರರು 47 ಸ್ಥಾನಗಳನ್ನು ಪಡೆದರೆ, ಜನ್ ಕಿ ಬಾತ್ ಸಮೀಕ್ಷಾ ವರದಿ ಪ್ರಕಾರ ಎನ್‌ಡಿಎ 377, ಇಂಡಿಯಾ ಒಕ್ಕೂಟ 151, ಇತರರು 15, ಎನ್‌ಡಿಟಿವಿ ಇಂಡಿಯಾ ಸಮೀಕ್ಷಾ ವರದಿ ಪ್ರಕಾರ ಎನ್‌ಡಿಎ 365, ಇಂಡಿಯಾ ಒಕ್ಕೂಟ 142, ಇತರರು 36, ನ್ಯೂಸ್ ನೇಷನ್ ಸಮೀಕ್ಷಾ ವರದಿ ಪ್ರಕಾರ, ಎನ್‌ಡಿಎ 342-378, ಇಂಡಿಯಾ ಒಕ್ಕೂಟ 153-169, ಇತರರು 21-23, ರಿಪ್ಲಬಿಕ್ ಭಾರ್ ಮ್ಯಾಟ್ರಿಜ್ ಸಮೀಕ್ಷಾ ವರದಿ ಪ್ರಕಾರ ಎನ್‌ಡಿಎ 353-368, ಇಂಡಿಯಾ ಒಕ್ಕೂಟ 118-133, ಇತರರು 43-48 ಸ್ಥಾನಗಳನ್ನು ಗಳಿಸಲಿದೆ. ಇನ್ನು ಪಿಮಾರ್ಕ್ ಸಮೀಕ್ಷಾ ವರದಿ ಪ್ರಕಾರ ಎನ್‌ಡಿಎ 359, ಇಂಡಿಯಾ ಒಕ್ಕೂಟ 154, ಇತರರು 30 ಕ್ಷೇತ್ರಗಳಲ್ಲಿ ಗೆಲ್ಲಲಿದೆ.
ಇದನ್ನೂ ಓದಿ: Exit poll 2024: ಮೂರು ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿ ಸೀಟು 400 ದಾಟಲಿದೆ!
ಇನ್ನು ನ್ಯೂಸ್ 18 ಮೆಗಾ ಎಕ್ಸಿಟ್ ಪೋಲ್ ಪ್ರಕಾರ, ರಾಜ್ಯದ ಒಟ್ಟು 28 ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ 23-26 ಸ್ಥಾನ ಬರಲಿದೆ. ಕಾಂಗ್ರೆಸ್ ಕೇವಲ 3-7 ಸ್ಥಾನಗಳಲ್ಲಿ ಕಾಂಗ್ರೆಸ್ ತನ್ನ ಗೆಲುವು ದಾಖಲಿಸಬಹುದು ಎಂದು ಹೇಳಿದೆ. ರಿಪಬ್ಲಿಕ್ ಟೀವಿ ಸಮೀಕ್ಷೆ ಪ್ರಕಾರ ಬಿಜೆಪಿ ಜೆಡಿಎಸ್ 22, ಕಾಂಗ್ರೆಸ್ 6 ಸ್ಥಾನ ಗೆಲ್ಲಲಿವೆ. ಇಂಡಿಯಾ ಟುಡೇ, ಎಬಿಪಿ ನ್ಯೂಸ್ ಎರಡೂಸಮೀಕ್ಷೆಗಳುಎನ್‌ಡಿಗೆ 23-25,ಕಾಂಗ್ರೆಸ್ ಗೆ 3-5 ಸ್ಥಾನ ನೀಡಿವೆ.