Site icon Vistara News

Lok Sabha Election 2024: ಕಾಂಗ್ರೆಸ್‌ ನಾಯಕ ಸುರ್ಜೇವಾಲಾ ಅವರ ವಿವಾದಾತ್ಮಕ ಹೇಳಿಕೆ ಬಳಿಕ ಟಿಎಂಸಿಗೂ ಸಂಕಷ್ಟ

Lok Sabha Election 2024

Lok Sabha Election 2024

ಕೋಲ್ಕತ್ತಾ: ದೇಶದಲ್ಲಿ ಲೋಕಸಭಾ ಚುನಾವಣೆ (Lok Sabha Election 2024)ಯ ಕಾವು ಏರತೊಡಗಿದೆ. ಈ ಮಧ್ಯೆ ರಾಜಕೀಯ ನಾಯಕರ ನಡುವೆ ಆರೋಪ-ಪ್ರತ್ಯಾರೋಪ ನಡೆಯುತ್ತಿದೆ. ʼʼತಮ್ಮ ಸಂಸದರಾದ ಲಾಕೆಟ್ ಚಟರ್ಜಿ (Locket Chatterjee) ಅವರ ಘನತೆಯ ಮೇಲೆ ಟಿಎಂಸಿ ಶಾಸಕರೊಬ್ಬರು ನಿರ್ದಯವಾಗಿ ಹಲ್ಲೆ ನಡೆಸಿದ್ದಾರೆʼʼ ಎಂದು ಬಿಜೆಪಿ (BJP)ಯ ಪಶ್ಚಿಮ ಬಂಗಾಳ ಘಟಕ ಆರೋಪಿಸಿದೆ. ʼʼಟಿಎಂಸಿ ಶಾಸಕ ಅಸಿತ್ ಮಜುಂದಾರ್ (Asit Majumdar) ಅವರು ನಾಚಿಕೆಯಿಲ್ಲದೆ ಲಾಕೆಟ್ ಚಟರ್ಜಿ ವಿರುದ್ಧ ʼ2 ನಂಬರ್ ಮಾಲ್ʼ ಎಂಬ ಅವಹೇಳನಕಾರಿ ಪದವನ್ನು ಬಳಸಿದ್ದಾರೆʼʼ ಎಂದು ಆರೋಪಿಸಿದೆ.

“ಈ ಘಟನೆಯು ಟಿಎಂಸಿ ನಾಯಕರಲ್ಲಿ ಆಳವಾಗಿ ಬೇರೂರಿರುವ ಸ್ತ್ರೀ ದ್ವೇಷವನ್ನು ಬಹಿರಂಗಪಡಿಸುತ್ತದೆ. ಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿ ಮಹಿಳೆಯರು ಎದುರಿಸುತ್ತಿರುವ ದಬ್ಬಾಳಿಕೆಯು ಕಠೋರ ವಾಸ್ತವದ ಸ್ಪಷ್ಟ ಪ್ರತಿಬಿಂಬ. ಹೀಗಾಗಿ ಪಶ್ಚಿಮ ಬಂಗಾಳಕ್ಕೆ ಮಹಿಳೆಯರ ಘನತೆಯನ್ನು ಎತ್ತಿ ಹಿಡಿಯುವ ನಾಯಕರ ಅಗತ್ಯವಿದೆʼʼ ಎಂದು ಬಿಜೆಪಿ ತಿಳಿಸಿದೆ.

ನಟಿ-ರಾಜಕಾರಣಿ ಹೇಮಾ ಮಾಲಿನಿ ವಿರುದ್ಧ ಕಾಂಗ್ರೆಸ್‌ ಸಂಸದ ರಣದೀಪ್ ಸುರ್ಜೆವಾಲಾ ಅವರ ‘ಅವಹೇಳನಕಾರಿ ಹೇಳಿಕೆ’ ವಿವಾದ ಸೃಷ್ಟಿಸಿರುವ ಮಧ್ಯೆ ಈ ಘಟನೆ ನಡೆದಿದೆ. ಈ ಬಗ್ಗೆ ಕಾಂಗ್ರೆಸ್ ಈಗಾಗಲೇ ವ್ಯಾಪಕ ಆಕ್ರೋಶ ಎದುರಿಸುತ್ತಿದ್ದು, ಇದೀಗ ಈ ಹೇಳಿಕೆ ಟಿಎಂಸಿಗೂ ಸಂಕಷ್ಟ ತಂದಿಟ್ಟಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಬರೆದುಕೊಂಡಿದ್ದು, “ಕಾಂಗ್ರೆಸ್ ಸಂಸದ ರಣದೀಪ್ ಸುರ್ಜೇವಾಲಾ ಅವರು ಹೇಮಾ ಮಾಲಿನಿ ಅವರ ಬಗ್ಗೆ ಮಾತ್ರವಲ್ಲ, ಸಾಮಾನ್ಯವಾಗಿ ಮಹಿಳೆಯರನ್ನು ಅವಮಾನಿಸಿದ್ದಾರೆʼʼ ಎಂದು ಆರೋಪಿಸಿದ್ದರು.

ಕಾರ್ಯಕ್ರಮವೊಂದರಲ್ಲಿ ರಣದೀಪ್‌ ಸುರ್ಜೇವಾಲಾ ಅವರು ಮಾತನಾಡಿ, “ಶಾಸಕ, ಸಂಸದರನ್ನು ಏಕೆ ಆಯ್ಕೆ ಮಾಡಲಾಗುತ್ತದೆ? ನಮ್ಮ ಧ್ವನಿ ಎತ್ತ, ನಮ್ಮ ಪರವಾಗಿ ಕೆಲಸ ಮಾಡಲು, ನಮ್ಮ ಅಭಿಪ್ರಾಯ, ಸಲಹೆಗಳನ್ನು ಸ್ವೀಕರಿಸಲು ಆಯ್ಕೆ ಮಾಡಲಾಗುತ್ತದೆ. ಆದರೆ, ಹೇಮಾಮಾಲಿನಿಯವರನ್ನು ನೆಕ್ಕಲು ಬಿಜೆಪಿಯವರು ಸಂಸದೆಯನ್ನಾಗಿ ಮಾಡುತ್ತಿದ್ದಾರೆಯೇ” ಎಂದು ಹೇಳಿದ್ದರು. ಈ ವಿಡಿಯೊವನ್ನು ಅಮಿತ್ ಮಾಳವೀಯ ಹಂಚಿಕೊಂಡು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ: Hema Malini: ಹೇಮಾಮಾಲಿನಿಯನ್ನು ನೆಕ್ಕಲು ಬಿಜೆಪಿ ಟಿಕೆಟ್‌ ಎಂದ ರಣದೀಪ್‌ ಸುರ್ಜೇವಾಲಾ; ವಿವಾದ

ಟಿಎಂಸಿ ವಿರುದ್ಧ ಲಾಕೆಟ್ ಚಟರ್ಜಿ ವಾಗ್ದಾಳಿ

ʼʼಟಿಎಂಸಿಯ ಗೂಂಡಾಗಳು ಹಿಂದೂ ಮಹಿಳೆಯರನ್ನು ಬೇಟೆಯಾಡುತ್ತಿದ್ದಾರೆ ಮತ್ತು ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾರೆʼʼ ಎಂದು ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ ಆರೋಪಿಸಿದ್ದಾರೆ. ಈ ಬಾರಿ ಹೂಗ್ಲಿಯಲ್ಲಿ ಲಾಕೆಟ್ ಚಟರ್ಜಿ ವಿರುದ್ಧ ಸ್ಪರ್ಧಿಸಲು ಟಿಎಂಸಿ ಜನಪ್ರಿಯ ಟಿವಿ ಗೇಮ್ ಶೋ ‘ದೀದಿ ನಂ 1’ ನಿರೂಪಕಿ ಮತ್ತು ನಟಿ ರಚನಾ ಬ್ಯಾನರ್ಜಿ ಅವರಿಗೆ ಟಿಕೆಟ್‌ ನೀಡಿದೆ. ಹೀಗಾಗಿ ಈ ಕ್ಷೇತ್ರ ಈಗಾಗಲೇ ಗಮನ ಸೆಳೆದಿದೆ. ಲೋಕಸಭೆ ಚುನಾವಣೆ 7 ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದ ಮತದಾನ ಏಪ್ರಿಲ್‌ 19ರಂದು ನಡೆಯಲಿದೆ. ಕರ್ನಾಟಕದಲ್ಲಿ ಏಪ್ರಿಲ್‌ 26 ಮತ್ತು ಮೇ 7ರಂದು ಆಯೋಜಿಸಲಾಗಿದೆ. ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version