ಬೆಂಗಳೂರು: ಲೋಕಸಭಾ ಚುನಾವಣೆಗೆ (Lok Sabha Election 2024) ಭರ್ಜರಿ ತಯಾರಿ ನಡೆಯುತ್ತಿದೆ. ಈಗಾಗಲೇ ಎಲ್ಲ ಪಕ್ಷಗಳಿಂದಲೂ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸುತ್ತಿದ್ದಾರೆ. ಈ ನಡುವೆ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕಕ್ಕೆ ಭೇಟಿ ನೀಡಿದ್ದು, ರಾಜಕೀಯ ತಂತ್ರಗಾರಿಕೆಯಲ್ಲಿ ನಿರತರಾಗಿದ್ದಾರೆ. ಮೈತ್ರಿ ನಾಯಕರಿಗೆ ಕೆಲವು ಟಾಸ್ಕ್‌ಗಳನ್ನು ಸಹ ಅಮಿತ್ ಶಾ (Amt Shah) ನೀಡಿದ್ದಾರೆ. ಅಲ್ಲದೆ, ಪ್ರತಿ ದಿನ ರಾಜ್ಯದ ಸ್ಥಿತಿ – ಗತಿ ಬಗ್ಗೆ ಗ್ರೌಂಡ್ ರಿಪೋರ್ಟ್ (Political Ground Report) ಪಡೆಯುತ್ತಿರುವುದಾಗಿ ಹೇಳಿರುವ ಶಾ, ನಾಯಕರಿಗೆ ಬೂತ್ ಕಾರ್ಯಕರ್ತರ ಒಗ್ಗಟ್ಟಿನ ಟಾಸ್ಕ್ ಕೊಟ್ಟಿದ್ದಾರೆ. ಅಂದರೆ, ಪ್ರತಿ ನಾಯಕರು ಆಯಾ ಬೂತ್‌ಗಳಲ್ಲಿನ ಕಾರ್ಯಕರ್ತರ ಮನವೊಲಿಸಬೇಕು, ಎಲ್ಲರೂ ಒಂದಾಗಿ ಮತ ಕೇಳಬೇಕು. ಈ ನಿಟ್ಟಿನಲ್ಲಿ ಎಲ್ಲರ ಕಾರ್ಯ ಸಾಗಲಿ ಎಂಬ ಕಿವಿ ಮಾತನ್ನು ಹೇಳಿದ್ದಾರೆ.
ರಾಜ್ಯಕ್ಕೆ ಅಮಿತ್ ಶಾ ಬರುತ್ತಿದ್ದಂತೆ ಸರಣಿ ಸಭೆಗಳನ್ನು ನಡೆಸಿದ್ದಾರೆ. ಇನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಜತೆಗೆ ಪ್ರತ್ಯೇಕ ಮಾತುಕತೆಯನ್ನೂ ನಡೆಸಿದ್ದಾರೆ. ಶಿವಮೊಗ್ಗದಲ್ಲಿ ಬಂಡಾಯ ಎದ್ದಿರುವ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರಿಗೂ ಕರೆ ಮಾಡಿ ಅಸಮಾಧಾನ ಶಮನಕ್ಕೆ ಮುಂದಾಗಿದ್ದರು. ಅಲ್ಲದೆ, ನವ ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ. ಇನ್ನು ಕರ್ನಾಟಕ ರಾಜಕೀಯದ ಬಗ್ಗೆ ಪ್ರಸ್ತಾಪ ಮಾಡಿರುವ ಅಮಿತ್ ಶಾ, ನಾವು ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮಾಹಿತಿಯನ್ನು ಪಡೆದಿದ್ದೇವೆ. ನಮಗೆ ಪ್ರತಿದಿನ ರಿಪೋರ್ಟ್ ಸಿಗುತ್ತದೆ. ಇಲ್ಲಿಯವರೆಗೂ ಎಲ್ಲವೂ ಸರಿ ಇದೆ. ಆದರೆ, ಬೂತ್ ಮಟ್ಟದಲ್ಲಿ ಮತ್ತಷ್ಟು ಕೆಲಸಗಳು ಆಗಬೇಕಿದೆ ಎಂದು ಹೇಳಿದ್ದಾರೆ.
ನಾಯಕರಿಗೆ ಟಾಸ್ಕ್ ಕೊಟ್ಟ ಶಾ
ಈ ವೇಳೆ ಬೂತ್ ಮಟ್ಟದ ಕಾರ್ಯಕರ್ತರ ಮಹತ್ವದ ಬಗ್ಗೆ ಅಮಿತ್ ಶಾ ತಿಳಿಹೇಳಿದ್ದಾರೆ. ನಾಯಕರು ಬೂತ್ ಕಾರ್ಯಕರ್ತರನ್ನು ಮನವೊಲಿಸಬೇಕು. ಸರ್ಕಾರದ ಸಾಧನೆಗಳನ್ನು ಅವರಿಗೆ ಮನದಟ್ಟು ಮಾಡಬೇಕು. ಒಂದಾಗಿ ಹೋಗಿ ವೋಟ್ ಕೇಳುವಂತೆ ಸೂಚಿಸಬೇಕು. ಬೂತ್ ಲೀಡ್ ಪಡೆಯುವ ರೀತಿ ಕೆಲಸ ಮಾಡಬೇಕು ಎಂದು ಅಮಿತ್ ಶಾ ಟಾಸ್ಕ್ ಕೊಟ್ಟಿದ್ದಾರೆ.
2019ರ ರೀತಿಯ ಮೈತ್ರಿ ಬೇಡ
ನಾವೀಗ ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಂಡಿದ್ದೇವೆ. 2019ರ ರೀತಿಯ ಮೈತ್ರಿ ನಮಗೆ ಬೇಡ. ಅಂದು ಜೆಡಿಎಸ್ – ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರು ಒಂದಾಗದ ಪರಿಣಾಮ ನಮಗೆ ಲಾಭ ಆಯಿತು. ಆ ರೀತಿಯ ಮೈತ್ರಿ ನಮಗೆ ಬೇಡವೇ ಬೇಡ. ಎರಡೂ ಪಕ್ಷಗಳ ಕಾರ್ಯಕರ್ತರು ಒಂದಾಗಿ ಚುನಾವಣೆ ನಡೆಸಿದರೆ ಮಾತ್ರವೇ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುತ್ತೇವೆ. ನಮ್ಮ ಟಾರ್ಗೆಟ್ 28 ಕ್ಷೇತ್ರಗಳೇ ಹೊರತು, 20, 25 ಅಲ್ಲ. ಬಿಜೆಪಿ – ಜೆಡಿಎಸ್ ಸೇರಿ 28 ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿಕೊಂಡಿದ್ದು, ಅಷ್ಟೂ ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸಬೇಕಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಇದನ್ನೂ ಓದಿ: Lok Sabha Election 2024: ಅಧಿಕಾರಕ್ಕೆ ಅಂಟಿಕೊಂಡಿಲ್ಲವೆಂದು ಸುಮಲತಾ ಪತ್ರ; ನಾಳೆಯ ನಿರ್ಧಾರ ಏನು? ದರ್ಶನ್ ಭಾಗಿ!
ಶೀಘ್ರವೇ ಭಿನ್ನಮತಗಳನ್ನು ಪರಿಹರಿಸಿ
ಪಕ್ಷ ಅಂದ ಮೇಲೆ ಅಸಮಾಧಾನಗಳು, ಭಿನ್ನಮತಗಳು ಸಹಜ. ಆದರೆ, ನೀವು ಇವುಗಳನ್ನು ಆದಷ್ಟು ಬೇಗ ಸರಿಪಡಿಸಬೇಕು. ಎಲೆಕ್ಷನ್ ತಂತ್ರಗಾರಿಕೆಗಳನ್ನು ರೂಪಿಸಬೇಕು. ರೋಡ್ ಶೋ ಎಲ್ಲೆಲ್ಲಿ ಬೇಕು? ಬಹಿರಂಗ ಸಮಾವೇಶ ಎಲ್ಲೆಲ್ಲಿ ಬೇಕು? ಮೋದಿ ಯಾವ ಕ್ಷೇತ್ರಕ್ಕೆ ಬಂದರೆ ನಾಲ್ಕು ಕ್ಷೇತ್ರಕ್ಕೆ ಅನುಕೂಲ ಆಗುತ್ತದೆ ಎಂಬುದನ್ನು ಈಗಲೇ ಪ್ಲ್ಯಾನ್ ಮಾಡಿ. ಮೈತ್ರಿ ರಥವನ್ನು ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ ಹಾಗೂ ಎಚ್.ಡಿ. ಕುಮಾರಸ್ವಾಮಿ ಮುನ್ನಡೆಸುತ್ತಾರೆ ಎಂದು ಅಮಿತ್ ಶಾ ಸೂಚನೆ ಕೊಟ್ಟಿದ್ದಾರೆ.
ಸಿಎಂ, ಡಿಸಿಎಂಗೆ ಟಕ್ಕರ್ ಕೊಡಲು ಕರೆ
ಕಣದಲ್ಲಿ ಇರುವ ಅಭ್ಯರ್ಥಿಗಳು 24×7 ಕೆಲಸ ಮಾಡಬೇಕು. 40 ದಿನ ಎಲ್ಲವನ್ನೂ ಪಕ್ಕಕ್ಕೆ ಇಟ್ಟು ಚುನಾವಣೆ ಮಾಡಿ.
ಈ ಚುನಾವಣೆಯು ರಾಜ್ಯದ ಲೆಕ್ಕಾಚಾರ ಬದಲು ಮಾಡಲಿದೆ. ಈ ಚುನಾವಣೆ ಬಳಿಕ ರಾಜ್ಯದಲ್ಲಿ ಮಹತ್ತರ ಬದಲಾವಣೆ ಆಗುತ್ತದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಷ್ಠೆ ಆಗಿರುವ ಹಳೇ ಮೈಸೂರು ಭಾಗದ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಿ. ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿ ತಂತ್ರಗಾರಿಕೆ ರೂಪಿಸಿ ಎಂದು ಅಮಿತ್ ಶಾ ಒಂದಿಷ್ಟು ಟಾಸ್ಕ್‌ಗಳನ್ನು ನೀಡಿದ್ದಾರೆ.