Site icon Vistara News

Lok Sabha Election 2024: ಡಿಕೆ ಬ್ರದರ್ಸ್‌ ಕೋಟೆಯಲ್ಲಿ ರೋಡ್‌ ಶೋ ಮೂಲಕ ಅಬ್ಬರಿಸಿದ ಅಮಿತ್‌ ಶಾ!

Lok Sabha Election 2024 Amit Shah holds roadshow at DK Brothers Fort

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿಯ ಫೈರ್‌ ಬ್ರ್ಯಾಂಡ್‌, ಗೃಹ ಸಚಿವ ಅಮಿತ್‌ ಶಾ ಅವರು ಕರ್ನಾಟಕದಲ್ಲಿ ತಮ್ಮ ಮೊದಲ ರೋಡ್‌ ಶೋ ಮೂಲಕ ರಣಕಹಳೆ ಊದಿದ್ದಾರೆ. ಖ್ಯಾತ ಹೃದ್ರೋಗ ತಜ್ಞ, ಹೃದಯವಂತ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್.‌ ಮಂಜುನಾಥ್‌ ಪರ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಚಿಕ್ಕಮಳೂರಿನಿಂದ ಡಿ.ಟಿ. ರಾಮು ಸರ್ಕಲ್‌ವರೆಗೆ ರೋಡ್‌ ಶೋ ನಡೆಸಿದರು. ಈ ಮೂಲಕ ಡಿಕೆ ಬ್ರದರ್ಸ್‌ ಕೋಟೆಯಲ್ಲಿ ಚುನಾವಣಾ ಚಾಣಕ್ಯ ಅಬ್ಬರಿಸಿದ್ದಾರೆ. ಈ ವೇಳೆ ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು.

ಚನ್ನಪಟ್ಟಣದ ಚನ್ನಪಟ್ಟಣದ ಚಿಕ್ಕಮಳೂರಿನಿಂದ ರೋಡ್ ಶೋಗೆ ಚಾಲನೆ ನೀಡಿದ ಅಮಿತ್ ಶಾ ಅವರ ಮೇಲೆ ಹೂ ಮಳೆಯನ್ನೇ ಸುರಿಸಲಾಯಿತು. ದಾರಿಯುದ್ದಕ್ಕೂ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಜೈಕಾರ ಕೂಗಿದರು. ಅಮಿತ್‌ ಶಾ ಸಹ ರಸ್ತೆಯ ಎರಡೂ ಬದಿಗೆ ಕೈಬೀಸುತ್ತಾ ಸಾಗಿದರು. ಈ ವೇಳೆ ಡಾ. ಸಿಎನ್.‌ ಮಂಜುನಾಥ್‌ ಸಹ ಜನರಿಗೆ ಕೈ ಮುಗಿದು ಧನ್ಯತೆ ಹೇಳಿದರು. ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ , ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಎಂಎಲ್ಸಿ ಸಿ.ಪಿ. ಯೋಗೇಶ್ವರ್, ಶಾಸಕ ಮುನಿರತ್ನ, ಮುಖ್ಯ ವಕ್ತಾರ ಅಶ್ವತ್ಥ ನಾರಾಯಣ್, ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ಮಾಗಡಿ ಮಾಜಿ ಶಾಸಕ ಮಂಜುನಾಥ್ ಅವರು ಭಾಗಿಯಾಗಿದ್ದರು.

ಡಿಕೆ ಬ್ರದರ್ಸ್‌ ಕೋಟೆಯಲ್ಲಿ ಶಾ ಅಬ್ಬರ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವು ಕಾಂಗ್ರೆಸ್‌ ಹಾಗೂ ಡಿಕೆ ಬ್ರದರ್ಸ್‌ನ ಭದ್ರಕೋಟೆಯಾಗಿದೆ. ಈ ಬಾರಿ ಇವರಿಗೆ ಟಕ್ಕರ್‌ ಕೊಡಬೇಕು ಎಂಬ ನಿಟ್ಟಿನಲ್ಲಿಯೇ ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್.‌ ಮಂಜುನಾಥ್‌ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಅದೂ ಅಲ್ಲದೆ, ಚುನಾವಣೆ ಘೋಷಣೆಯಾದ ಬಳಿಕ ರಾಜ್ಯಕ್ಕೆ ಮೊದಲ ಬಾರಿಗೆ ಆಗಮಿಸಿದ ಅಮಿತ್‌ ಶಾ ಅವರು ತಮ್ಮ ಮೊದಲ ರೋಡ್‌ ಶೋವನ್ನು ಚನ್ನಪಟ್ಟಣದಿಂದಲೇ ಆರಂಭಿಸುವ ಮೂಲಕ ತಾವು ಈ ಕ್ಷೇತ್ರವನ್ನು ಸೀರಿಯಸ್‌ ಆಗಿ ಪರಿಗಣಿಸಿದ್ದೇವೆ ಎಂಬ ಸಂದೇಶವನ್ನು ರವಾನೆ ಮಾಡಿದ್ದಾರೆ.

ರೋಡ್‌ ಶೋ ವೇಳೆ ಸ್ಥಳದಲ್ಲಿ ಸೇರಿದ್ದ ಕಾರ್ಯಕರ್ತರು ಮೋದಿ.. ಮೋದಿ… ಘೋಷಣೆ ಕೂಗಿದ್ದಾರೆ. ಜತೆಗೆ ಜೈಶ್ರೀರಾಮ್‌ ಘೋಷಣೆಯನ್ನೂ ಕೂಗಿದ್ದಾರೆ.

ಇದನ್ನೂ ಓದಿ: Lok Sabha Election 2024: ಅಧಿಕಾರಕ್ಕೆ ಅಂಟಿಕೊಂಡಿಲ್ಲವೆಂದು ಸುಮಲತಾ ಪತ್ರ; ನಾಳೆಯ ನಿರ್ಧಾರ ಏನು? ದರ್ಶನ್‌ ಭಾಗಿ!

ಅಮಿತ್ ಶಾ ಬಂದಿರೋದು ನಮ್ಮ ವೇಗ ಹೆಚ್ಚಿಸಿದೆ!

ಅಮಿತ್ ಶಾ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿದ ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಾ. ಸಿ.ಎನ್.‌ ಮಂಜುನಾಥ್‌ ಪ್ರತಿಕ್ರಿಯೆ ನೀಡಿ, ರಾಜ್ಯಕ್ಕೆ ಅಮಿತ್‌ ಶಾ ಅವರು ಭೇಟಿ ನೀಡಿರುವುದು ನಮ್ಮ ವೇಗವನ್ನು ಬಹಳಷ್ಟು ಹೆಚ್ಚಿಸಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಇಂದು ಅವರು ರೋಡ್‌ ಶೋ ನಡೆಸಲಿದ್ದು, ಇದು ಮತದಾರರ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಲಿದೆ. ಬಿಜೆಪಿ – ಜೆಡಿಎಸ್‌ ನಾಯಕರು, ಕಾರ್ಯಕರ್ತರು ಒಗ್ಗಟ್ಟಾಗಿ ಹೋಗುತ್ತಿರುವುದರಿಂದ ನಮ್ಮ ಗೆಲುವು ನಿಶ್ಚಿತ ಎಂದು ಅಭಿಪ್ರಾಯಪಟ್ಟರು.

ಇನ್ನು ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ. ಸುರೇಶ್‌ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ತಾವೇ ಕ್ಷೇತ್ರವನ್ನು ಗೆಲ್ಲುವುದಾಗಿ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಡಾ. ಸಿ.ಎನ್.‌ ಮಂಜುನಾಥ್‌, ಎಲ್ಲರೂ ಗೆಲ್ಲಬೇಕು ಎಂದೇ ಚುನಾವಣೆಯಲ್ಲಿ ಭಾಗಿಯಾಗುತ್ತಾರೆ. ಆದರೆ, ಈ ಬಾರಿ ಜನರು ಬದಲಾವಣೆಯನ್ನು ಬಯಸಿದ್ದಾರೆ. ಹೀಗಾಗಿ ಗೆಲುವು ನನ್ನದೇ ಎಂದು ಹೇಳಿದ್ದಾರೆ.

ಇದನ್ನೂ ಓದಿ: Lok Sabha Election 2024: ಅಮಿತ್‌ ಶಾ ʼಬೂತ್‌ʼ ಮಂತ್ರ; ಕರ್ನಾಟಕ ಗೆಲ್ಲೋಕೆ ಮಾಡಿದ್ರು ಚಾಣಕ್ಯ ತಂತ್ರ!

ಡೊಳ್ಳಿನ ಮೂಲಕ ಸ್ವಾಗತ

ಇದ್ಕೂ ಮೊದಲು ಅಮಿತ್ ‌ಶಾ ಅವರನ್ನು ಕಲಾತಂಡಗಳು ಸ್ವಾಗತ ಕೋರಿದರು. ಸ್ಥಳೀಯ ಕಲೆಗಳಾದ ಡೊಳ್ಳುನ ವಾದ್ಯಗೊಂದಿಗೆ ಅಮಿತ್‌ ಶಾ ಅವರನ್ನು ಬರಮಾಡಿಕೊಳ್ಳಲಾಯಿತು.

Exit mobile version