ನವದೆಹಲಿ: ಪ್ರಪಂಚದಾದ್ಯಂತ ಚುನಾವಣೆಗಳಲ್ಲಿ (election) ವಿರೋಧಾಭಾಸಗಳು ಎದುರಾಗುತ್ತವೆ. ಇದರಲ್ಲಿ ಭಾರತವೂ ಹೊರತಾಗಿಲ್ಲ. ಇದೀಗ ಜೈಲಿನಲ್ಲಿರುವ (jail) ಇಬ್ಬರು ಕೈದಿಗಳಲ್ಲಿ (locked up) ಒಬ್ಬರಿಗೆ ಚುನಾವಣೆಗೆ ಸ್ಪರ್ಧಿಸಲು ಅನುಮತಿ ಸಿಕ್ಕಿದ್ದರೆ, ಇನ್ನೊಬ್ಬರಿಗೆ ಮತದಾನ (voting) ಮಾಡಲೂ ಅವಕಾಶ ನೀಡಲಾಗಿಲ್ಲ.
2024ರ ಲೋಕಸಭಾ ಚುನಾವಣೆಯ (Lok Sabha Election 2024) ವೇಳೆ ಭಾರತದಲ್ಲಿ (india) ಅಂತಹ ಒಂದು ವಿರೋಧಾಭಾಸ ಕಾಣಿಸಿಕೊಂಡಿದೆ. 2,300 ಕಿ.ಮೀ. ದೂರದಲ್ಲಿರುವ ಎರಡು ವಿಭಿನ್ನ ಜೈಲುಗಳಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಇವರಲ್ಲಿ ಒಬ್ಬರಿಗೆ ಚುನಾವಣೆಗೆ ಸ್ಪರ್ಧಿಸಲು ಅನುಮತಿ ನೀಡಿದ್ದರೆ, ಇನ್ನೊಬ್ಬರಿಗೆ ಮತದಾನ ಮಾಡಲು ಅವಕಾಶ ಸಿಕ್ಕಿಲ್ಲ.
ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತಪಾಲ್ ಸಿಂಗ್ (Amritpal Singh) ಅಸ್ಸಾಂನ ದಿಬ್ರುಗಢ್ ಜೈಲಿನಲ್ಲಿದ್ದರೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ತಿಹಾರ್ ಜೈಲಿನಲ್ಲಿದ್ದಾರೆ.
ಇದನ್ನೂ ಓದಿ: Lok Sabha Election 2024: ದೇಶ, ರಾಜ್ಯಕ್ಕೆ ಬಿಜೆಪಿಯಿಂದ ಖಾಲಿ ಚೊಂಬು ಕೊಟ್ಟಿದ್ದಾರೆ: ರಾಹುಲ್ ಗಾಂಧಿ
ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾನೂನು ಅನುಮತಿ ನೀಡಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಂತಹ ಲಕ್ಷಾಂತರ ವಿಚಾರಣಾಧೀನ ಕೈದಿಗಳು ಮತ ಚಲಾಯಿಸಲು ಅನುಮತಿ ನೀಡಲಾಗಿಲ್ಲ. ಯಾಕೆಂದರೆ ಭಾರತ ಕಾನೂನು ಪ್ರಕಾರ ಭಾರತದಲ್ಲಿ ಜನರು ಜೈಲಿನಲ್ಲಿ ಇದ್ದು ಚುನಾವಣೆಗೆ ಸ್ಪರ್ಧಿಸಬಹುದು. ಆದರೆ ಜೈಲಿನಿಂದ ಮತ ಚಲಾಯಿಸಲು ಸಾಧ್ಯವಿಲ್ಲ!
ಅಮೃತ್ ಪಾಲ್ ಸ್ಪರ್ಧೆ
2023ರ ಏಪ್ರಿಲ್ 23ರಿಂದ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಜೈಲಿನಲ್ಲಿರುವ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಅವರು ಪಂಜಾಬ್‌ನ ಖಾದೂರ್ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.
ದಿಬ್ರುಗಢ ಕೇಂದ್ರ ಕಾರಾಗೃಹದಲ್ಲಿ ಭಾಯಿ ಸಾಹೇಬ್ ಅಮೃತಪಾಲ್ ಅವರನ್ನು ನಾನು ಭೇಟಿ ಮಾಡಿದ್ದೇನೆ. ಖಾಲ್ಸಾ ಪಂಥ್‌ನ ಹಿತಾಸಕ್ತಿಯಿಂದ ಅವರು ಈ ಬಾರಿ ಸಂಸದರಾಗಲು ಖದೂರ್ ಸಾಹಿಬ್‌ನಿಂದ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ನಾನು ಅವರಿಗೆ ವಿನಂತಿಸಿದೆ ಎಂದು ಅಮೃತಪಾಲ್ ಅವರ ವಕೀಲ ರಾಜದೇವ್ ಸಿಂಗ್ ಖಾಲ್ಸಾ ಈ ಹಿಂದೆ ಹೇಳಿದ್ದು, ಭಾಯಿ ಸಾಹೇಬ್ ಒಪ್ಪಿದ್ದಾರೆ ಮತ್ತು ಅವರು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಅವರು ಹೇಳಿದರು.
ಬಂಧನಕ್ಕೆ ಒಳಗಾಗಿರುವುದು ಏಕೆ?
ಅಮೃತಪಾಲ್ ಸಿಂಗ್ ಅವರನ್ನು ಪಂಜಾಬ್‌ನ ಮೋಗಾ ಜಿಲ್ಲೆಯ ರೋಡ್ ಗ್ರಾಮದಲ್ಲಿ ವರ್ಷದ ಹಿಂದೆ ಬಂಧಿಸಲಾಗಿತ್ತು. ಅಮೃತ್‌ಪಾಲ್ ಸಿಂಗ್ ಅವರು ಬೆಂಬಲಿಗರೊಂದಿಗೆ ಬಂದೂಕು ಮತ್ತು ಕತ್ತಿಗಳನ್ನು ಹಿಡಿದುಕೊಂಡು ಅಮೃತಸರದ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದರಿಂದ ಅವರನ್ನು ಬಂಧಿಸಲಾಯಿತು. ಪ್ರತ್ಯೇಕತಾವಾದಿ ಈತ.
ಜೈಲಿನಿಂದ ಸ್ಪರ್ಧಿಸಿದವರು, ಗೆದ್ದವರಿವರು
1996 ರಲ್ಲಿ, ಡಾನ್- ಟರ್ನ್ಡ್ ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರು ಜೈಲಿನಲ್ಲಿದ್ದಾಗ ಬಿಎಸ್ಪಿ ಟಿಕೆಟ್‌ನಲ್ಲಿ ಉತ್ತರ ಪ್ರದೇಶದ ಮೌ ಅಸೆಂಬ್ಲಿ ಸ್ಥಾನಕ್ಕೆ ಸ್ಪರ್ಧಿಸಿದರು. ಕಳೆದ ತಿಂಗಳು ನಿಧನರಾದ ಅನ್ಸಾರಿ ಅವರು ಜೈಲಿನಿಂದಲೇ ಚುನಾವಣೆಯಲ್ಲಿ ಗೆದ್ದಿದ್ದರು.
2005ರಲ್ಲಿ ಸೆರೆವಾಸದಲ್ಲಿದ್ದ ಮುಖ್ತಾರ್ ಅನ್ಸಾರಿ ಅವರು ಜೈಲಿನಿಂದ 2007, 2012 ಮತ್ತು ಮತ್ತೆ 2017 ರಲ್ಲಿ ಒಟ್ಟು ಮೂರು ಬಾರಿ ಮೌ ಅಸೆಂಬ್ಲಿ ಸ್ಥಾನವನ್ನು ಗೆದ್ದರು.
ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ 1998ರ ಲೋಕಸಭೆ ಚುನಾವಣೆ ವೇಳೆ ಮೇವು ಹಗರಣದಲ್ಲಿ ಜೈಲು ಸೇರಿದ್ದರು. ಬಿಹಾರದ ಮಾಧೇಪುರ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿ ಜೈಲಿನಲ್ಲಿದ್ದೇ ಗೆದ್ದಿದ್ದರು.
ಕೇಜ್ರಿವಾಲ್ ಮತದಾನ ಸಾಧ್ಯವಿಲ್ಲ
ಅಪರಾಧಗಳ ಆರೋಪ ಹೊತ್ತಿರುವ ಜನರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ, ಅಪರಾಧಿಗಳೆಂದು ಸಾಬೀತಾಗದ ವಿಚಾರಣಾಧೀನ ಕೈದಿಗಳು ತಮ್ಮ ಮತವನ್ನು ಚಲಾಯಿಸಲು ಸಾಧ್ಯವಿಲ್ಲ.
ತಪ್ಪಿತಸ್ಥರೆಂದು ಸಾಬೀತಾಗದವರಿಗೂ ಭಾರತದಲ್ಲಿ ಜೈಲುಗಳಿಂದ ಮತದಾನ ಮಾಡಲು ಯಾವುದೇ ಅವಕಾಶವಿಲ್ಲ. 2019 ರ ಪ್ರವೀಣ್ ಕುಮಾರ್ ಚೌಧರಿ ವಿರುದ್ಧ ಭಾರತ ಚುನಾವಣಾ ಆಯೋಗದ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಕೈದಿಗಳಿಗೆ ಮತದಾನದ ಹಕ್ಕನ್ನು ಹೊಂದಿಲ್ಲ ಎಂದು ಪುನರುಚ್ಚರಿಸಿದೆ.
ಮೇ 25ರಂದು ದೆಹಲಿ ಮತದಾನ ನಡೆಯಲಿದೆ. ಏಪ್ರಿಲ್ 29 ರಂದು ಸುಪ್ರೀಂ ಕೋರ್ಟ್ ನೀಡುವ ತೀರ್ಪಿನ ಮೇಲೆ ಕೇಜ್ರಿವಾಲ್ ಮತ ಚಲಾಯಿಸಬಹುದೇ ಅಥವಾ ಇಲ್ಲವೇ ಎಂಬುದು ನಿರ್ಧಾರವಾಗಲಿದೆ.
ಮಾರ್ಚ್ 21ರಂದು ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟ ಕೇಜ್ರಿವಾಲ್, ಬಹು ಕಸ್ಟಡಿ ವಿಸ್ತರಣೆಗಳು ಮತ್ತು ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ ಅನಂತರ ಅವರನ್ನು ನವದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.
ಬಿಡುಗಡೆಯಾಗದೆ ಇದ್ದರೆ ಹೇಮಂತ್ ಸೊರೆನ್ ಗೂ ಅವಕಾಶ ಇಲ್ಲ
ಭಾರತದಲ್ಲಿ ಐದು ಲಕ್ಷಕ್ಕೂ ಹೆಚ್ಚು ವಿಚಾರಣಾಧೀನ ಕೈದಿಗಳಿದ್ದು, ಅವರಿಗೂ ಮತ ಚಲಾಯಿಸಲು ಸಾಧ್ಯವಿಲ್ಲ. ಅಂತೆಯೇ, ಭೂ ಹಗರಣಕ್ಕೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿರುವ ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೆನ್ ಅವರನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಆದೇಶಿಸದಿದ್ದರೆ ಮತದಾನ ಮಾಡಲಾಗುವುದಿಲ್ಲ.
ತನ್ನ ಬಂಧನವನ್ನು ಪ್ರಶ್ನಿಸಿ ಹೇಮಂತ್ ಸೊರೆನ್ ಬುಧವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಯಾಕೆ ಈ ತಾರತಮ್ಯ?
2021 ರ ರಾಷ್ಟ್ರೀಯ ಅಪರಾಧ ವರದಿಗಳ ಬ್ಯೂರೋ (NCRB) ವರದಿಯ ಪ್ರಕಾರ, ಭಾರತದಾದ್ಯಂತ ವಿವಿಧ ಜೈಲುಗಳಲ್ಲಿ ಒಟ್ಟು 5,54,034 ಕೈದಿಗಳನ್ನು ಬಂಧಿಸಲಾಗಿದೆ. ಅಮೃತಪಾಲ್ ಸಿಂಗ್ ಅವರಿಗೆ ಇನ್ನೂ ಶಿಕ್ಷೆಯಾಗದ ಕಾರಣ ಅವರು ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಶಿಕ್ಷೆಗೊಳಗಾದವರು ಕೂಡ ಜೈಲು ಶಿಕ್ಷೆ ಮುಗಿದ ಆರು ವರ್ಷಗಳ ಬಳಿಕ ಚುನಾವಣೆಗೆ ಸ್ಪರ್ಧಿಸಬಹುದು.
ಅಮೃತಪಾಲ್ ಸಿಂಗ್ ಅವರಂತಹ ಜೈಲಿನಲ್ಲಿರುವ ವ್ಯಕ್ತಿಗಳು ತಮ್ಮ ಪ್ರತಿನಿಧಿಯ ಸಹಾಯದಿಂದ ಜೈಲಿನಿಂದಲೇ ನಾಮಪತ್ರ ಸಲ್ಲಿಸಬಹುದು. ಒಂದು ವೇಳೆ ಜೈಲಿನಲ್ಲಿರುವ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದರೆ, ತಜ್ಞರ ಪ್ರಕಾರ ಜೈಲಿನೊಳಗೆ ಪ್ರಮಾಣ ವಚನ ಬೋಧಿಸಲು ಅವಕಾಶವಿಲ್ಲದ ಕಾರಣ, ಪ್ರಮಾಣ ವಚನ ಸ್ವೀಕರಿಸಲು ಜೈಲಿನಿಂದ ಬಿಡುಗಡೆ ಮಾಡಬಹುದು.
ಆದರೆ ಜೈಲಿನಲ್ಲಿರುವ ವ್ಯಕ್ತಿಯ ಪರವಾಗಿ ಬೇರೆಯವರು ಮತವನ್ನು ಚಲಾಯಿಸಲು ಸಾಧ್ಯವಿಲ್ಲ. ಪತಿ ಅರವಿಂದ್ ಕೇಜ್ರಿವಾಲ್ ಬಂಧನದ ಅ ನಂತರ ಗಮನ ಸೆಳೆದಿರುವ ಸುನೀತಾ ಕೇಜ್ರಿವಾಲ್, ಎಎಪಿ ಪರ ಪ್ರಚಾರ ಮಾಡಲಿದ್ದಾರೆ.
ಪ್ರಜಾಪ್ರತಿನಿಧಿ ಕಾಯಿದೆ 1951ರ ಸೆಕ್ಷನ್ 62 (5) ಪ್ರಕಾರ ಯಾವುದೇ ವ್ಯಕ್ತಿ ಪೊಲೀಸರ ಕಾನೂನುಬದ್ಧ ವಶದಲ್ಲಿದ್ದರೆ ಅಥವಾ ಜೈಲಿನಲ್ಲಿ ಬಂಧಿಯಾಗಿದ್ದಲ್ಲಿ ಯಾವುದೇ ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ.