Site icon Vistara News

Lok Sabha Election 2024: ಬಿಆರ್‌ಎಸ್‌ಗೆ ಮತ್ತೊಂದು ಶಾಕ್‌; ಪಕ್ಷ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದ ಸಂಸದ ರಂಜಿತ್ ರೆಡ್ಡಿ

reddy 17

reddy 17

ನವದೆಹಲಿ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ (Lok Sabha Election 2024). ಶನಿವಾರ (ಮಾರ್ಚ್‌ 16) ಚುನಾವಣಾ ಆಯೋಗ ವೇಳಾಪಟ್ಟಿಯನ್ನೂ ಪ್ರಕಟಿಸಿದೆ. ಹೀಗಾಗಿ ರಾಜಕೀಯ ಪಕ್ಷಗಳಲ್ಲಿನ ಚಟುವಟಿಕೆ ಬಿರುಸು ಪಡೆದುಕೊಂಡಿದೆ. ಈ ಮಧ್ಯೆ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ (K Chandrasekhar Rao) ಅವರಿಗೆ ಮತ್ತೊಂದು ಹೊಡೆತ ಬಿದ್ದಿದೆ. ಭಾನುವಾರ (ಮಾರ್ಚ್‌ 17) ಚೆವೆಲ್ಲಾ ಸಂಸದ ರಂಜಿತ್ ರೆಡ್ಡಿ ಭಾರತ್ ರಾಷ್ಟ್ರ ಸಮಿತಿ (Bharat Rashtra Samithi) ತೊರೆದು ಆಡಳಿತಾರೂಢ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ರಂಜಿತ್ ರೆಡ್ಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಜತೆಗೆ ತಮ್ಮ ಈ ದಿಢೀರ್‌ ನಿರ್ಧಾರದ ಹಿಂದಿನ ಕಾರಣಗಳನ್ನು “ಪ್ರಸ್ತುತ ರಾಜಕೀಯ ಪರಿಸ್ಥಿತಿ” ಎಂದು ಉಲ್ಲೇಖಿಸಿದ್ದಾರೆ. ಮಾತ್ರವಲ್ಲ ತಮ್ಮ ರಾಜೀನಾಮೆ ಪತ್ರವನ್ನು ಹಂಚಿಕೊಂಡಿದ್ದಾರೆ.

ರಾಜೀನಾಮೆ ಪತ್ರದಲ್ಲಿ ಏನಿದೆ?

“ರಂಗಾ ರೆಡ್ಡಿ ಮತ್ತು ವಿಕಾರಾಬಾದ್ ಜಿಲ್ಲೆಗಳ ನಿವಾಸಿಗಳ ಮೇಲೆ ಪರಿಣಾಮ ಬೀರುವ ನಿರ್ಣಾಯಕ ತೀರ್ಮಾನಗಳನ್ನು ತೆಗೆದುಕೊಳ್ಳಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಪಕ್ಷವು ಒದಗಿಸಿದ ಅಮೂಲ್ಯ ಅವಕಾಶಕ್ಕಾಗಿ ನಾನು ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ನನ್ನ ಸಾಮರ್ಥ್ಯದ ಮೇಲೆ ನೀವಿಟ್ಟ ವಿಶ್ವಾಸದಿಂದ ನನಗೆ ಪರಿಣಾಮಕಾರಿಯಾಗಿ ಚೆವೆಲ್ಲಾ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಯಿತುʼʼ ಎಂದು ಅವರು ಚಂದ್ರಶೇಖರ್‌ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

“ಈ ಪ್ರಯಾಣದುದ್ದಕ್ಕೂ ನಿಮ್ಮ ದೃಢವಾದ ಬೆಂಬಲಕ್ಕಾಗಿ ನಾನು ಪ್ರಾಮಾಣಿಕವಾಗಿ ಕೃತಜ್ಞನಾಗಿದ್ದೇನೆ. ದುರದೃಷ್ಟವಶಾತ್ ತೆಲಂಗಾಣದ ಪ್ರಸ್ತುತ ಪರಿಸ್ಥಿತಿಯ ಕಾರಣದಿಂದ ನಾನು ಈ ತೀರ್ಮಾನಕ್ಕೆ ಬಂದಿದ್ದೇನೆ. ಭಾರವಾದ ಹೃದಯದಿಂದ ನಾನು ಬಿಆರ್‌ಎಸ್‌ಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಮತ್ತು ನನ್ನ ಸದಸ್ಯತ್ವವನ್ನು ತ್ಯಜಿಸುತ್ತಿದ್ದೇನೆ. ನನ್ನ ಅಧಿಕಾರಾವಧಿಯಲ್ಲಿ ಪಕ್ಷವು ನೀಡಿದ ಬೆಂಬಲ ಮತ್ತು ಅನುಮೋದನೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದೇನೆ” ಎಂದು ಅವರು ಬರೆದುಕೊಂಡಿದ್ದಾರೆ.

ಕಾಂಗ್ರೆಸ್‌ ಸೇರ್ಪಡೆ

ರಾಜೀನಾಮೆ ಸಲ್ಲಿಕೆಯ ನಂತರ ರಂಜಿತ್ ರೆಡ್ಡಿ ಅವರು ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಮತ್ತು ಇತರ ಪ್ರಮುಖ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಕೆಸಿಆರ್ ಎಂದು ಕರೆಯಲ್ಪಡುವ ಕೆ. ಚಂದ್ರಶೇಖರ್ ರಾವ್ ಅವರ ಬಿಆರ್‌ಎಸ್‌ ತೊರೆದು ಹಲವರು ಕೆಲವು ದಿನಗಳಿಂದ ವಿವಿಧ ಪಕ್ಷಗಳಿಗೆ ಸೇರ್ಪಡೆಯಾಗುತ್ತಿದ್ದಾರೆ. ಶನಿವಾರ ವಾರಂಗಲ್‌ನ ಬಿಆರ್‌ಎಸ್‌ ಸಂಸದ ಪಶುನೂರಿ ದಯಾಕರ್ ಆಡಳಿತಾರೂಢ ಕಾಂಗ್ರೆಸ್‌ಗೆ ಸೇರಿದ್ದರು.

ಇದನ್ನೂ ಓದಿ: Rajiv Kumar: ಇವಿಎಂ ಶಂಕಿಸುವ ಪ್ರತಿಪಕ್ಷಗಳಿಗೆ ಕವಿತೆ ಮೂಲಕ ಟಾಂಗ್‌ ಕೊಟ್ಟ ಆಯುಕ್ತ; ನೀವೂ ಕೇಳಿ

ಕೆಲವು ದಿನಗಳ ಹಿಂದೆ ಜಹೀರಾಬಾದ್ ಮತ್ತು ನಾಗರ್‌ಕರ್ನೂಲ್‌ನ ಬಿಆರ್‌ಎಸ್‌ ಸಂಸದರಾದ ಬಿ.ಬಿ.ಪಾಟೀಲ್‌ ಮತ್ತು ಪಿ.ರಾಮುಲು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇತ್ತೀಚೆಗೆ ನಡೆದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಬಿಆರ್‌ಎಸ್‌ ಇದೀಗ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಹೆಣಗಾಡುತ್ತಿದೆ. ಬಿ.ಬಿ.ಪಾಟೀಲ್ ಅವರು ಪಕ್ಷಕ್ಕೆ ಸೇರಿದ ಒಂದು ದಿನದ ನಂತರ ಬಿಜೆಪಿ ಅವರನ್ನು ಜಹೀರಾಬಾದ್‌ನಿಂದ ಕಣಕ್ಕಿಳಿಸಿದೆ. ತೆಲಂಗಾಣದಲ್ಲಿ ಮೇ 13ರಂದು ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗ ಜೂನ್‌ 4ರಂದು ಫಲಿತಾಂಶ ಪ್ರಕಟಿಸಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version