Site icon Vistara News

Lok Sabha Election 2024: ಬೀದರ್‌, ಕೊಪ್ಪಳಕ್ಕೆ ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿ? ಬಳತೆ, ಮಲ್ಕಾಪುರೆಗೆ ಟಿಕೆಟ್?

Lok Sabha Election 2024 Balate adn Malkapure to be get Bidar and Koppal constituency

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡೆಯುತ್ತಿದೆ. ಈಗಾಗಲೇ ಹಾಲಿ ಸಂಸದರ ಬಗ್ಗೆ ಎರಡು ಮೂರು ಸರ್ವೆಗಳನ್ನು ಮಾಡಿಸಿ ರಿಪೋರ್ಟ್‌ (Survey Report) ಕಾರ್ಡ್‌ ಇಟ್ಟುಕೊಂಡಿರುವ ಹೈಕಮಾಂಡ್‌ ತನ್ನದೇ ಲೆಕ್ಕಾಚಾರದಲ್ಲಿ ತೊಡಗಿದೆ. ಈ ಹಿನ್ನೆಲೆಯಲ್ಲಿ ಯಾವ ಕ್ಷೇತ್ರದಲ್ಲಿ ಹಾಲಿ ಅಭ್ಯರ್ಥಿಗಳನ್ನು ಉಳಿಸಿಕೊಳ್ಳಬೇಕು? ಯಾವ ಕ್ಷೇತ್ರದಲ್ಲಿ ಕೈಬಿಡಬೇಕು? ಆ ಜಾಗಕ್ಕೆ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು? ಎಂಬಿತ್ಯಾದಿಗಳ ಬಗ್ಗೆ ಈಗಾಗಲೇ ಚರ್ಚೆಗಳು ನಡೆಯುತ್ತಿವೆ. ಈ ಸಂಬಂಧ ರಾಜ್ಯ ನಾಯಕರ ಅಭಿಪ್ರಾಯವನ್ನೂ ಪಡೆದುಕೊಳ್ಳಲಾಗುತ್ತಿದೆ. ಇದೇ ವೇಳೆ ಬಿಜೆಪಿಯಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆಯುತ್ತಿದ್ದು, ಬೀದರ್‌ ಹಾಗೂ ಕೊಪ್ಪಳದ ಹಾಲಿ ಸಂಸದರಿಗೆ ಕೊಕ್‌ ಕೊಡುವ ಎಲ್ಲ ಸಾಧ್ಯತೆಗಳೂ ಇವೆ ಎನ್ನಲಾಗಿದೆ.

ಸದ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಯಲ್ಲಿ ಬೀದರ್ ಲೋಕಸಭಾ ಕ್ಷೇತ್ರದ (Bidar Lok Sabha constituency) ಹಾಲಿ ಸಂಸದ ಭಗವಂತ ಖೂಬಾಗೆ (Bhagwanth Khuba) ಟಿಕೆಟ್ ಡೌಟ್ ಎನ್ನಲಾಗಿದೆ. ಹೀಗಾಗಿ ಅವರ ಜಾಗಕ್ಕೆ ಚನ್ನಬಸವಣ್ಣ ಬಳತೆ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಅಲ್ಲದೆ, ಈ ಕ್ಷೇತ್ರಕ್ಕೆ ರಘುನಾಥ್ ರಾವ್ ಮಲ್ಕಾಪುರೆ (Raghnath Rao Malakapure) ಅವರಿಂದಲೂ ಟಿಕೆಟ್ ಲಾಬಿ ನಡೆಯುತ್ತಿದೆ ಎನ್ನಲಾಗಿದೆ.

ಮಲ್ಕಾಪುರೆಗೆ ಕೊಪ್ಪಳ ಟಿಕೆಟ್?‌

ರಘುನಾಥ್ ರಾವ್ ಮಲ್ಕಾಪುರೆ ಅವರು ಬೀದರ್‌ ಕ್ಷೇತ್ರದಿಂದ ಟಿಕೆಟ್‌ ಬಯಸಿದರೂ ಅವರಿಗೆ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ (Koppal Lok Sabha constituency) ಟಿಕೆಟ್‌ ನೀಡುವ ಬಗ್ಗೆ ಬಿಜೆಪಿ ಹೈಕಮಾಂಡ್‌ ಒಲವು ತೋರಿದೆ ಎನ್ನಲಾಗಿದೆ. ಇದಕ್ಕೆ ಕಾರಣ, ಮಲ್ಕಾಪುರೆ ಅವರು ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಬೀದರ್‌ನಲ್ಲಿ ಕುರುಬ ಸಮುದಾಯದ ಮತಗಳು ಇಲ್ಲ. ಆದರೆ, ಕೊಪ್ಪಳದಲ್ಲಿ ಕುರುಬ ಸಮುದಾಯದವರು ನಿರ್ಣಾಯಕ ಪಾತ್ರವನ್ನು ವಹಿಸಲಿದ್ದಾರೆ. ಹೀಗಾಗಿ ಅದೇ ಸಮುದಾಯದ ರಘುನಾಥ್ ರಾವ್ ಮಲ್ಕಾಪುರೆ ಅವರಿಗೆ ಟಿಕೆಟ್‌ ಕೊಟ್ಟರೆ ಬಿಜೆಪಿ – ಜೆಡಿಎಸ್‌ ಮತಗಳೂ ಸೇರಿದಂತೆ ಕುರುಬ ಸಮುದಾಯದ ಮತಗಳೂ ಸೇರಿದಂತೆ ಗೆಲುವು ಕಟ್ಟಿಟ್ಟ ಬುತ್ತಿ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ. ಹೀಗಾಗಿ ಅವರಿಗೆ ಕೊಪ್ಪಳದಲ್ಲಿ ಟಿಕೆಟ್ ಕೊಡಿಸುವ ಬಗ್ಗೆ ರಾಜ್ಯ ನಾಯಕರು ಸಲಹೆ ನೀಡಿದ್ದಾರೆ.

ಕೊಪ್ಪಳ ಒಪ್ಪದ ರಘುನಾಥ್ ರಾವ್ ಮಲ್ಕಾಪುರೆ!

ಕೊಪ್ಪಳದಲ್ಲಿ ಸ್ಪರ್ಧೆ ಮಾಡುವಂತೆ ಎಷ್ಟೇ ಹೇಳಿದರೂ ರಘುನಾಥ್ ರಾವ್ ಮಲ್ಕಾಪುರೆ ಅವರು ಒಪ್ಪುತ್ತಿಲ್ಲ ಎನ್ನಲಾಗಿದೆ. ಕಾರಣ, ತಾವು ಸ್ಥಳೀಯರಲ್ಲ. ಜತೆಗೆ ಕೊಪ್ಪಳಕ್ಕೂ ನನಗೂ ಸಂಬಂಧವೇ ಇಲ್ಲ. ಹೀಗಿರುವಾಗ ಅಲ್ಲಿ ಸ್ಪರ್ಧೆ ಮಾಡುವುದು ಕಷ್ಟ ಎಂದು ಹೇಳಿದ್ದಾರೆ. ನನಗೆ ಟಿಕೆಟ್‌ ಕೊಡುವುದಾದರೆ ಬೀದರ್ ಲೋಕಸಭಾ ಕ್ಷೇತ್ರದಿಂದಲೇ ಕೊಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Lok Sabha Election 2024: ಗೋಬ್ಯಾಕ್ ಶೋಭಾ ಅಭಿಯಾನ; ತೇಜಸ್ವಿ ಸೂರ್ಯ ಸಹೋದರ ಸಂಬಂಧಿ ಬೆಂಬಲ!

ಕೊಪ್ಪಳದಲ್ಲಿ ಕರಡಿಗೆ ಜನವಿರೋಧ?

ಕೊಪ್ಪಳದ ಹಾಲಿ ಸಂಸದ ಕರಡಿ ಸಂಗಣ್ಣ ಅವರಿಗೆ ಜನವಿರೋಧ ಇದೆ ಎಂದು ಬಿಜೆಪಿ ಮಾಡಿಸಿದ ಸರ್ವೆಯಲ್ಲಿ ತಿಳಿದುಬಂದಿದೆ ಎನ್ನಲಾಗಿದೆ. ಹೀಗಾಗಿ ಅಭ್ಯರ್ಥಿಯನ್ನು ಬದಲಾವಣೆ ಮಾಡಲು ಬಿಜೆಪಿ ಪ್ಲ್ಯಾನ್‌ ಮಾಡಿದೆ. ಅವರಿಗೆ ಟಿಕೆಟ್‌ ತಪ್ಪಿಸಿದರೂ ಕುರುಬ ಸಮುದಾಯಕ್ಕೇ ಟಿಕೆಟ್ ಕೊಡುವ ಅಗತ್ಯ ಇದೆ ಎಂಬ ನಿಟ್ಟಿನಲ್ಲಿ ಕೊಪ್ಪಳದಿಂದ ಮಲ್ಕಾಪುರೆ ಅವರಿಗೆ ಅಭ್ಯರ್ಥಿ ಆಗುವಂತೆ ಸಲಹೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಬದಲಾದ ಸನ್ನಿವೇಶದಲ್ಲಿ ಬೀದರ್‌ಗೆ ಚನ್ನಬಸವಣ್ಣ ಬಳತೆ ಹಾಗೂ ಕೊಪ್ಪಳಕ್ಕೆ ಮಲ್ಕಾಪುರೆ ಹೆಸರು ಎಂಟ್ರಿ ಕೊಟ್ಟಿವೆ.

Exit mobile version