ಹಾವೇರಿ: ನಾನು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ (KS Eshwarappa) ಅವರಿಗೆ ಮೋಸ ಮಾಡಿಲ್ಲ. ನಾನು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಕೆ.ಇ. ಕಾಂತೇಶ್‌ಗೆ (KE Kantesh) ಟಿಕೆಟ್ ಕೊಡುವಂತೆ ಹೇಳಿದ್ದೆ. ಆದರೆ, ಅನಿವಾರ್ಯತೆ ಇದೆ. ಹೀಗಾಗಿ ನನಗೆ ಸ್ಪರ್ಧಿಸುವಂತೆ ಹೈಕಮಾಂಡ್ (BJP High Command) ನಾಯಕರು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸ್ಪರ್ಧೆಗೆ ಒಪ್ಪಿಕೊಂಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ – ಗದಗ ಲೋಕಸಭಾ ಕ್ಷೇತ್ರದ (Haveri Gadag Lok Sabha constituency) ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ (Basavaraj Bommai) ಸ್ಪಷ್ಟಪಡಿಸಿದ್ದಾರೆ.
ಹಾವೇರಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ, ತಮ್ಮ ಪುತ್ರನಿಗೆ ಟಿಕೆಟ್ ಸಿಗದಿದ್ದಕ್ಕೆ ಕೆ.ಎಸ್ ಈಶ್ವರಪ್ಪ ಅಸಮಾಧಾನಗೊಂಡಿರುವ ಕುರಿತು ಈ ಸ್ಪಷ್ಟೀಕರಣ ನೀಡಿದರು.
ಇದನ್ನೂ ಓದಿ: Lok Sabha Election 2024: ಮೋದಿ ನೋಡಿಕೊಂಡೇ ಮತ ಬರೋದು; ನನಗೆ ವೋಟ್ ಬಂತು ಎನ್ನಬೇಡಿ ಎಂದ ಸಿ.ಟಿ. ರವಿ!
ಕೆ.ಎಸ್. ಈಶ್ವರಪ್ಪ ಅವರ ಸಭೆ ಬಗ್ಗೆ ಮಾಹಿತಿ ಇಲ್ಲ. ಈಶ್ವರಪ್ಪ ಅವರಿಗೆ ಎಲ್ಲ ಗೊತ್ತಿದೆ. ನಾನು ಪಾರ್ಲಿಮೆಂಟರಿ ಬೋರ್ಡ್‌ನಲ್ಲಿ ಏನ್ ಹೇಳಿದ್ದೆ ಎಂದು ಎಲ್ಲ ಅವರಿಗೆ ಗೊತ್ತಿದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.
ನನ್ನ ಹೆಸರು ಪಾರ್ಲಿಮೆಂಟರಿ ಬೋರ್ಡ್‌ನಲ್ಲಿ ಕೂಡಾ ಫೈನಲ್ ಆಗಿರಲಿಲ್ಲ. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಬೇರೆಯವರಿಗೆ ಅವಕಾಶ ಕೊಡಿ ಎಂದಿದ್ದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಡ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ ಅವರು ಅನಿವಾರ್ಯ ಇದೆ ನೀನು ಸ್ಪರ್ಧಿಸು ಎಂದು ಹೇಳಿದರು. ಹೀಗಾಗಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.
ಈಶ್ವರಪ್ಪ ಅವರು ಈ ಪಕ್ಷವನ್ನು ಕಟ್ಟಿ ಬೆಳೆಸಿದವರು. ಶಿಸ್ತಿನ ಸಿಪಾಯಿ ಅವರು. ನಾನು ಸಹ ಈಗ ಈಶ್ವರಪ್ಪರ ಜತೆಗೆ ಮಾತನಾಡುತ್ತೇನೆ. ಅದು ವರಿಷ್ಠರ ತೀರ್ಮಾನ, ನಾನು ಮೋಸ ಮಾಡಿಲ್ಲ ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.
ಪುತ್ರ ಭರತ್‌ಗೆ ಟಿಕೆಟ್ ಬಗ್ಗೆ ಈಗಲೂ ಹೇಳಲು ಆಗಲ್ಲ
ಶಿಗ್ಗಾಂವಿ ಬೈ ಎಲೆಕ್ಷನ್ ನಡೆದರೆ ಪುತ್ರ ಭರತ್ ಬೊಮ್ಮಾಯಿಗೆ ಟಿಕೆಟ್ ಕೊಡಿಸುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ಈಗ ನಾನಿನ್ನೂ ಸ್ಪರ್ಧೆ ಮಾಡಿ ಲೋಕಸಭಾ ಚುನಾವಣೆ ಗೆಲ್ಲಬೇಕು. ಬಳಿಕ ಶಿಗ್ಗಾಂವಿಗೆ ಉಪ ಚುನಾವಣೆ ನಡೆಯಲಿದೆ. ಊಹೆ ಮಾಡಿ ನಾನು ಹೇಳಲು ಆಗುವುದಿಲ್ಲ. ಆ ಸಂದರ್ಭದಲ್ಲಿ ಜನರ ಅಭಿಪ್ರಾಯ, ಪಕ್ಷದ ಅಭಿಪ್ರಾಯ ಕೇಳಬೇಕು ಎಂದು ಹೇಳಿದರು.
ಶಿಗ್ಗಾಂವಿ ಜತೆ ಭಾವನಾತ್ಮಕ ಸಂಬಂಧ ಇದೆ
ಮಾಜಿ ಶಾಸಕ ನೆಹರು ಓಲೇಕಾರ್ ಅವರ ನಿಲುವು ಗೊತ್ತಿಲ್ಲ. ನಾನು ಈಗ ಏನು ಹೇಳಲು ಆಗುವುದಿಲ್ಲ. ಈ ಬಗ್ಗೆ ಸ್ಥಳೀಯ ನಾಯಕರ ಜತೆ ಚರ್ಚೆ ಮಾಡುವೆ. ನನಗೆ ಶಿಗ್ಗಾಂವಿ ಜತೆ ಭಾವನಾತ್ಮಕ ಸಂಬಂಧ ಇದೆ. ಎಲ್ಲ ತಾಲೂಕುಗಳ ಅಭಿವೃದ್ಧಿ ಜತೆ ಶಿಗ್ಗಾಂವಿ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: Lok Sabha Election 2024: ಜೆಡಿಎಸ್‌ಗೆ 2 ಕ್ಷೇತ್ರ ಮಾತ್ರ! ಕೋಲಾರದಲ್ಲೂ ಬಿಜೆಪಿ ಅಭ್ಯರ್ಥಿ?
ಹಾವೇರಿ ಗ್ರಾಮೀಣ ಘಟಕದ ಅಧ್ಯಕ್ಷರ ನೇಮಕದಲ್ಲಿ ಆಕ್ಷೇಪದ ಕುರಿತು ನನ್ನ ಬಳಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದು ನಿಜ. ಅದನ್ನು ನಾನು ಸರಿ ಮಾಡುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.