ನವದೆಹಲಿ: ಲೋಕಸಭಾ ಚುನಾವಣೆ (Lok Sabha Election 2024)ಗೆ ದಿನಾಂಕ ಘೋಷಣೆಯಾಗಿದ್ದು, ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿವೆ. ಈ ಮಧ್ಯೆ ಪ್ರಮುಖ ನಾಯಕರ ಮಧ್ಯೆ ವಾದ-ವಿವಾದ ಆರಂಭವಾಗಿದೆ. ಭಾನುವಾರ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ (Rahul Gandhi), ಎನ್‌ಡಿಎ ಸರ್ಕಾರವನ್ನು ಟೀಕಿಸಲು ʼಶಕ್ತಿʼ ಪದವನ್ನು ಪ್ರಯೋಗಿಸಿದ್ದರು. ಇದೀಗ ಬಿಜೆಪಿ (BJP) ಇದನ್ನೇ ಪ್ರತ್ಯಸ್ತ್ರವಾಗಿ ಕೈಗೆತ್ತಿಕೊಂಡಿದೆ. ‘ಶಕ್ತಿ’ ಹೇಳಿಕೆಯು ರಾಹುಲ್ ಗಾಂಧಿ ಅವರ ʼಸ್ತ್ರೀ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ’ ಎಂದು ಬಿಜೆಪಿ ತಿರುಗಿ ಬಿದ್ದಿದೆ. ಜತೆಗೆ ವಿದ್ಯುನ್ಮಾನ ಮತಯಂತ್ರಗಳ (EVM) ಬಗ್ಗೆಯೂ ರಾಹುಲ್ ಗಾಂಧಿ ಪ್ರಶ್ನಿಸಿದ್ದು, ಇದು ಭಾರತದ ಮತದಾರರಿಗೆ ಮಾಡಿದ ಅವಮಾನ ಎಂದು ಬಿಜೆಪಿ ನಾಯಕ ನಳಿನ್ ಕೊಹ್ಲಿ (Nalin Kohli) ಹೇಳಿದ್ದಾರೆ.
ಬಿಜೆಪಿ ಹೇಳಿದ್ದೇನು?
“ಇವಿಎಂನ ಬಗ್ಗೆ ಪ್ರಶ್ನೆ ಎತ್ತುವ ಮೂಲಕ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಒಂದು ರೀತಿಯಲ್ಲಿ ಭಾರತದ ಮತದಾರರನ್ನು ಅವಮಾನಿಸುತ್ತಿದ್ದಾರೆ. ಭಾರತದ ಮತದಾರರು ದೇಶದ ಭವಿಷ್ಯವನ್ನು ನಿರ್ಧರಿಸುತ್ತಾರೆ. ಅವರು 2014, 2019ರಲ್ಲಿ ಪ್ರಧಾನಿ ಮೋದಿ ಅವರನ್ನು ಆಶೀರ್ವದಿಸಿದವರು ಮತ್ತು ಮೂರನೇ ಅವಧಿಗಗೂ ಅವರನ್ನು ಆಶೀರ್ವದಿಸಲು ಬಯಸುತ್ತಿದ್ದಾರೆ. ಯಾಕೆಂದರೆ ನರೇಂದ್ರ ಮೋದಿ ಇಡೀ ದೇಶವನ್ನು ತಮ್ಮ ಕುಟುಂಬ ಎಂಬಂತೆ ನೋಡುತ್ತಾರೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವುದು ಮೋದಿ ಅವರ ಗುರಿ” ಎಂದು ಕೊಹ್ಲಿ ಹೇಳಿದ್ದಾರೆ.
#WATCH | On Congress leader Rahul Gandhi's 'Shakti' remark, BJP leader Nalin Kohli says, "Rahul Gandhi's statement makes it clear that they do not trust the electorate & go to any extent to disrespect…They (people) voted for PM Modi twice because they saw him as the Pradhan… pic.twitter.com/xGugsjWN7Q
— ANI (@ANI) March 18, 2024
“ತಮಗೆ ಮತ ಬರುತ್ತಿಲ್ಲ ಎಂಬ ಅಂಶವನ್ನು ಕಾಂಗ್ರೆಸ್ ನಾಯಕರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಅವರು ಇವಿಎಂಗಳ ವಿರುದ್ಧ ಮಾತನಾಡುವ ಮೂಲಕ ಮತದಾರರನ್ನು ಅವಮಾನಿಸುತ್ತಿದ್ದಾರೆ” ಎಂದು ಕೊಹ್ಲಿ ದೂರಿದ್ದಾರೆ.
ಬಿಜೆಪಿ ಮುಖಂಡ ಶೆಹಜಾದ್ ಪೂನಾವಾಲಾ ಮಾತನಾಡಿ, ರಾಹುಲ್ ಗಾಂಧಿ ಅವರ ಶಕ್ತಿಯ ಹೇಳಿಕೆಯನ್ನು ಖಂಡಿಸಿದ್ದಾರೆ. ʼʼಹಿಂದೂ ಧರ್ಮವನ್ನು ʼಇಂಡಿಯಾʼ ಮೈತ್ರಿಕೂಟದ ಸದಸ್ಯರು ಅವಮಾನಿಸಿದ್ದಾರೆ. ಅವರು ʼರಾಮಚರಿತ ಮಾನಸʼವು ಸೈನೈಡ್ ಎಂದು ಹೇಳಿದ್ದಾರೆ. ರಾಮನ ಅಸ್ತಿತ್ವವನ್ನು ನಿರಾಕರಿಸುವುದರಿಂದ ಹಿಡಿದು ʼಶಕ್ತಿʼಯ ಬಗ್ಗೆ ಹೇಳಿಕೆ ನೀಡುವವರೆಗೆ ಕಾಂಗ್ರೆಸ್‌ನ ಹಿಂದೂ ದ್ವೇಷದ ಮನಸ್ಥಿತಿ ಅನಾವರಣಗೊಂಡಿದೆ. ʼಶಕ್ತಿʼ ಹೇಳಿಕೆ ಹಿಂದೂ ನಂಬಿಕೆಗೆ ಮಾಡಿದ ಅವಮಾನ ಮಾತ್ರವಲ್ಲ, ನಾರಿ-ಶಕ್ತಿ ಮತ್ತು ಅದರ ಅಭಿವ್ಯಕ್ತಿಯನ್ನು ವಿರೋಧಿಸುವ ರಾಹುಲ್ ಗಾಂಧಿ ಅವರ ಸ್ತ್ರೀದ್ವೇಷದ ಮನಸ್ಥಿತಿಯನ್ನು ತೋರಿಸುತ್ತದೆ” ಎಂದು ಅವರು ಹೇಳಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಮಾತನಾಡಿ, ʼʼರಾಹುಲ್ ಗಾಂಧಿ ಭಾರತವನ್ನು ಇಟಲಿಯ ದೃಷ್ಟಿಕೋನದಿಂದ ನೋಡುತ್ತಾರೆʼʼ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಮ ಮಂದಿರದ ಅರ್ಚಕರಿಂದ ವಿರೋಧ
ಅಯೋಧ್ಯೆ ಶ್ರೀ ರಾಮ ಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಮಾತನಾಡಿ, ʼʼಹಿಂದೂ ದೇವರ ವಿರುದ್ಧ ಮಾತನಾಡುವವರನ್ನು ಜೈಲಿಗೆ ಕಳುಹಿಸಬೇಕುʼʼ ಎಂದಿದ್ದಾರೆ. ʼʼಇದೇ ಕಾರಣಕ್ಕೆ ದಿನ ಕಳೆದಂತೆ ಕಾಂಗ್ರೆಸ್‌ನ ಶಕ್ತಿ ಕುಂದುತ್ತಿದೆ. ನಾರಿ ಶಕ್ತಿ ಎನ್ನುವುದು ಹಿಂದೂ ಧರ್ಮದ ಹೆಮ್ಮೆಯ ಸಂಕೇತ. ಈ ರೀತಿಯ ಹೇಳಿಕೆ ಖಂಡನಾರ್ಹʼʼ ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಬೆನ್ನಿಗೆ ನಿಂತ ವಿಪಕ್ಷ ನಾಯಕರು
ಈ ವೇಳೆ ಇಂಡಿಯಾ ಮೈತ್ರಿ ಕೂಟದ ನಾಯಕರು ರಾಹುಲ್ ಗಾಂಧಿಯ ಬೆಂಬಲಕ್ಕೆ ನಿಂತಿದ್ದಾರೆ. ಆರ್‌ಜೆಡಿ ನಾಯಕ ಮೃತ್ಯುಂಜಯ್ ತಿವಾರಿ, ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್, ಎಎಪಿ ನಾಯಕ ಗೋಪಾಲ್ ರೈ, ಕಾಂಗ್ರೆಸ್ ವಕ್ತಾರ ಪವನ್ ಖೇರ ಮತ್ತಿತರರು ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಸಮರ್ಥಿಸಿದ್ದಾರೆ.
ಇದನ್ನೂ ಓದಿ: Narendra Modi: ರಾಹುಲ್ ಗಾಂಧಿ ‘ಶಕ್ತಿ’ ಹೇಳಿಕೆಗೆ ಟಕ್ಕರ್; ಸವಾಲು ಸ್ವೀಕಾರ ಎಂದ ಮೋದಿ
ರಾಹುಲ್ ಗಾಂಧಿ ಹೇಳಿದ್ದೇನು?
ಮುಂಬೈಯ ಶಿವಾಜಿ ಪಾರ್ಕ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಶಕ್ತಿ ಎಂಬ ಪದದ ಪ್ರಸ್ತಾವ ಮಾಡಿದ್ದರು. ಎನ್‌ಡಿಎ ಸರ್ಕಾರವನ್ನು ಶಕ್ತಿಗೆ ಹೋಲಿಸಿದ್ದ ಅವರು, ಆ ಶಕ್ತಿಯ ವಿರುದ್ಧ ಹೋರಾಡುತ್ತೇವೆ ಎಂದಿದ್ದರು. “ಹಿಂದಿಯಲ್ಲಿ ಶಕ್ತಿ ಎಂಬ ಪದ ಇದೆ. ನಾವು ಆ ಶಕ್ತಿಯ ವಿರುದ್ಧ ಹೋರಾಡುತ್ತೇವೆ. ಅಷ್ಟಕ್ಕೂ, ಈ ಶಕ್ತಿ ಎಂದರೇನು? ಇದು ನಮಗೆ ಏನು ಮಾಡುತ್ತದೆ? ವಿದ್ಯುನ್ಮಾನ ಮತಯಂತ್ರಗಳ ಆತ್ಮ ಹಾಗೂ ಸಮಗ್ರತೆಯನ್ನು ರಾಜನಿಗೆ (ಮೋದಿ) ವರ್ಗಾಯಿಸಲಾಗಿದೆ. ಇ.ಡಿ, ಸಿಬಿಐಗಳು ಕೂಡ ರಾಜನ ವಶವಾಗಿವೆ. ಇವಿಎಂ, ಇ.ಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲ್ಲದೆ ಪ್ರಧಾನಿ ಮೋದಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ” ಎಂದು ರಾಹುಲ್ ಗಾಂಧಿ ಟೀಕಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ