ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ ಈಗಾಗಲೇ ತಂತ್ರಗಾರಿಕೆಯನ್ನು ಶುರು ಮಾಡಿದೆ. ಅಲ್ಲದೆ, ತನ್ನ ಮೊದಲ ಪಟ್ಟಿಯನ್ನು ಸಹ ಪ್ರಕಟಿಸಿದೆ. ಈಗ ಎರಡನೇ ಪಟ್ಟಿಯಲ್ಲಿ ಕರ್ನಾಟಕದ (BJP Karnataka) ಅಭ್ಯರ್ಥಿಗಳ ಹೆಸರನ್ನು ಪ್ರಕಟ ಮಾಡುವ ಸಂಬಂಧ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಮೈತ್ರಿ ಸೀಟು ಹಂಚಿಕೆ ಬಹುತೇಕ ಪಕ್ಕಾ ಆಗಿದೆ ಎನ್ನಲಾಗಿದೆ. ಇಂದು (ಭಾನುವಾರ – ಮಾ. 10) ನಡೆಯಬೇಕಿದ್ದ ಬಿಜೆಪಿ ಸಿಇಸಿ ಸಭೆಯನ್ನು ಸೋಮವಾರಕ್ಕೆ (ಮಾ. 11) ಮುಂದೂಡಿಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದರೂ, ನಿಖರ ದಿನಾಂಕವನ್ನು ಬಿಜೆಪಿ ಅಧಿಕೃತವಾಗಿ ಹೇಳುತ್ತಿಲ್ಲ. ಈ ಬಗ್ಗೆ ಮೊದಲೇ ಗೊತ್ತಿದ್ದರೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ನವ ದೆಹಲಿಯಲ್ಲಿಯೇ ಬೀಡುಬಿಟ್ಟಿದ್ದು, ವರಿಷ್ಠರನ್ನು ಭೇಟಿ ಮಾಡಿ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.
ಲೋಕಸಭಾ ಚುನಾವಣೆಗೆ ಸಂಬಂಧಿಸಿ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲು ಮಾರ್ಚ್ 11ರಂದು ಸಿಇಸಿ ಸಭೆಯನ್ನು ನಿಗದಿ ಮಾಡಲಾಗಿದೆ ಎನ್ನಲಾಗುತ್ತಿದೆ. ಇದರ ಬಗ್ಗೆ ಸೋಮವಾರ ಬೆಳಗ್ಗೆ ಅಥವಾ ಇಂದು ರಾತ್ರಿ ಸ್ಪಷ್ಟತೆ ಸಿಗಬೇಕಿದೆ. ಸಭೆಯನ್ನು ರದ್ದುಗೊಳಿಸಲು ನಿರ್ದಿಷ್ಟ ಕಾರಣವನ್ನು ಬಿಜೆಪಿ ತಿಳಿಸಿಲ್ಲವಾದರೂ, ಸಿಇಸಿಯಲ್ಲಿರುವ ಕೆಲವು ಸದಸ್ಯರ ಪೂರ್ವ ನಿಯೋಜಿತ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎನ್ನಲಾಗಿದೆ. ಇದರ ಜತೆಗೆ ನಾಳೆ ನಡೆಯಲಿರುವ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸಹ ಭಾಗಿಯಾಗಬಹುದು ಎನ್ನಲಾಗಿದೆ. ಈ ಬಗ್ಗೆ ಶಿವಮೊಗ್ಗದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು ಹೇಳಿದ್ದಾರೆ.
ಇನ್ನು ಮೂರ್ನಾಲ್ಕು ದಿನಗಳಲ್ಲಿ ಚುನಾವಣೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಇದಕ್ಕೂ ಮುನ್ನವೇ ಬಿಜೆಪಿ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ. ಹೀಗಾಗಿ ಇನ್ನೆರಡು ದಿನದಲ್ಲಿ ಚುನಾವಣೆ ಸಮಿತಿ ಸಭೆ ನಿಗದಿಯಾಗಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Lok Sabha Election 2024: ಮಾರ್ಚ್ 14ಕ್ಕೆ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ?
ವಿಜಯೇಂದ್ರ ದೆಹಲಿಯಲ್ಲೇ ಇರುವುದು ಏಕೆ?
ವರಿಷ್ಠರ ಸಭೆ ಕ್ಯಾನ್ಸಲ್ ಆದರೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಸಭೆ ಮುಂದೂಡಿಕೆ ಆಗಿದ್ದರ ಬಗ್ಗೆ ಶನಿವಾರವೇ ಬಿಜೆಪಿ ವರಿಷ್ಠರು ಮಾಹಿತಿ ನೀಡಿದ್ದರು. ಆದರೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ದೆಹಲಿಯಲ್ಲೇ ಉಳಿದುಕೊಂಡಿರುವುದು ಕೆಲವರಿಗೆ ಕುತೂಹಲ ಮೂಡಿಸಿದೆ. ವಿಜಯೇಂದ್ರ ಅವರು ಈ ವೇಳೆ ಬಿಜೆಪಿ ವರಿಷ್ಠರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಭೇಟಿ ಸಂದರ್ಭದಲ್ಲಿ ಆಕಾಂಕ್ಷಿ ಅಭ್ಯರ್ಥಿಗಳ ಬಗ್ಗೆ ವಿವರವಾಗಿ ಮಾಹಿತಿಯನ್ನು ನೀಡಲು ನಿರ್ಧಾರ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.