Site icon Vistara News

Lok Sabha Election 2024: ಸಚಿವರ, ಶಾಸಕರ ಕಚೇರಿಗಳಲ್ಲಿ ರಾಜಕೀಯ ಚಟುವಟಿಕೆ: ಬಿಜೆಪಿ ದೂರು

Lok Sabha Election 2024 BJP complains of political activity in ministers and MLAs offices

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರ ಮತ್ತು ಶಾಸಕರ ಕಚೇರಿಗಳಲ್ಲಿ ರಾಜಕೀಯ ಚಟುವಟಿಕೆ ಮುಂದುವರಿದಿದೆ ಎಂದು ಕಿಡಿಕಾರಿರುವ ಬಿಜೆಪಿಯು (BJP Karnataka) ಈ ಸಂಬಂಧ ರಾಜ್ಯದ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧವನ್ನು ಕಾಂಗ್ರೆಸ್ ಕಚೇರಿಯೆಂದು ಭಾವಿಸಿರುವಂತೆ ಕಾಣುತ್ತಿದೆ. ಮಾರ್ಚ್ 30ರಂದು ಡಿ.ಕೆ. ಶಿವಕುಮಾರ್ ಅವರು ತಮ್ಮ ವಿಧಾನಸೌಧ ಕಚೇರಿಯಲ್ಲಿ ನಜ್ಮಾ ನಜೀರ್ ಚಿಕ್ಕನೇರಳೆ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಈ ಮೂಲಕ ಜಾರಿಯಲ್ಲಿರುವ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ರಾಜ್ಯ ಜವಾಬ್ದಾರಿಯುತ ಸಚಿವರಾಗಿದ್ದಾರೆ. ಅವರಿಗೆ ಸರ್ಕಾರಿ ಕಚೇರಿಯನ್ನು ಪಕ್ಷದ ಚಟುವಟಿಕೆ ಬಳಕೆ ಮಾಡಬಾರದು ಎಂಬುದು ತಿಳಿದಿದೆ. ಹಾಗಿದ್ದರೂ ನೀತಿ ಸಂಹಿತೆಯನ್ನು ಧಿಕ್ಕರಿಸಿ ರಾಜಕೀಯ ಕಾರ್ಯಕ್ರಮವನ್ನು ನಡೆಸಿದ್ದಾರೆ ಎಂದು ಬಿಜೆಪಿ ದೂರಿನಲ್ಲಿ ಉಲ್ಲೇಖಿಸಿದೆ.

ರಾಜ್ಯದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರ ಮೂಗಿನಡಿಯಲ್ಲಿಯೇ ಇದು ನಡೆದರೂ ಯಾವುದೇ ಕ್ರಮ ಜರುಗಿಸಿಲ್ಲ. ಅವರ ಈ ನಿಷ್ಕ್ರಿಯತೆಯು ಆತಂಕಕಾರಿಯಾಗಿದೆ ಎಂದು ಬಿಜೆಪಿ ದೂರಿದೆ.

ಲೋಕಸಭಾ ಚುನಾವಣೆಗಳು ಘೋಷಣೆಯಾಗಿ ಈಗಾಗಲೇ ನಾಮಪತ್ರ ಸಲ್ಲಿಕೆಯು ಆರಂಭವಾಗಿದೆ. ಆದರೆ, ಚುನಾವಣಾ ನೀತಿ ಸಂಹಿತೆಯ ಕಟ್ಟುನಿಟ್ಟಿನ ಜಾರಿ ಮಾಡಬೇಕಾದ ಸರ್ಕಾರದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಎದ್ದು ಕಾಣುತ್ತಿದೆ. ಹಲವಾರು ಆಡಳಿತ ಪಕ್ಷದ ಶಾಸಕರ ಕಚೇರಿಗಳಲ್ಲಿ ಪಕ್ಷದ ಚಟುವಟಿಕೆ ಇನ್ನೂ ಮುಂದುವರಿದಿದೆ ಎಂದು ಬಿಜೆಪಿ ದೂರಿನಲ್ಲಿ ತೀವ್ರ ಅಸಮಾಧಾನವನ್ನು ಹೊರಹಾಕಿದೆ.

ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿ ರಿಲೀಸ್; ಪಾಕ್‌ ಪರ ಘೋಷಣೆ ಕೇಸ್‌ ವಿವಾದಿತ ನಾಸಿರ್‌ ಹುಸೇನ್‌ಗೂ ಸ್ಥಾನ!

ವಿಧಾನಸೌಧದ ಕಚೇರಿಗಳ ಮುಚ್ಚಿಸಿ

ಸಚಿವರು ವಿಕಾಸಸೌಧದಿಂದ ಪತ್ರಿಕಾಗೋಷ್ಠಿಯನ್ನು ನಡೆಸುತ್ತಿದ್ದಾರೆ. ಇದಕ್ಕೆ ಉದಾಹರಣೆಯು ಮಾರ್ಚ್ 25 ರಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ. ಚುನಾವಣಾ ಆಯೋಗವು ಕೂಡಲೇ ವಿಧಾನಸೌಧ ಸಚಿವರ ಕಚೇರಿಗಳನ್ನು ಕೂಡಲೇ ಮುಚ್ಚಿಸಬೇಕು. ಸರ್ಕಾರಿ ಕಟ್ಟಡಗಳಲ್ಲಿ ಸಚಿವರಿಗೆ ಮತ್ತು ಶಾಸಕರಿಗೆ ಯಾವುದೇ ರಾಜಕೀಯ ಚಟುವಟಿಕೆ ನಡೆಸದಂತೆ ನಿರ್ಬಂಧ ಹೇರಬೇಕು. ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಕುರಿತು ಸೂಕ್ತ ನಿರ್ದೇಶನ ನೀಡಲು ಕೋರುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ. ನಿಯಮವನ್ನು ಮೀರಿ ಅವಕಾಶ ಮಾಡಿಕೊಡುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಯಿತು.

ಶಾಸಕ ಸುರೇಶ್ ಕುಮಾರ್, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ರಾಜ್ಯ ವಕ್ತಾರರಾದ ಪ್ರಕಾಶ್ ಶೇಷರಾಘವಾಚಾರ್, ಎಚ್.ಎನ್. ಚಂದ್ರಶೇಖರ್, ಬೆಂಗಳೂರು ದಕ್ಷಿಣ ಜಿಲ್ಲಾ ವಕ್ತಾರ ಟಿ.ಎಸ್. ಸಂಕೀರ್ತ್ ಉಪಸ್ಥಿತರಿದ್ದರು.

Exit mobile version