Site icon Vistara News

Lok Sabha Election 2024: ಡಿ.ಕೆ. ಶಿವಕುಮಾರ್, ಹೇಮಂತ್ ನಿಂಬಾಳ್ಕರ್ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

Lok Sabha Election 2024 BJP files complaint with Election Commission against DK Shivakumar and Hemant Nimbalkar

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟುನಿಟ್ಟಿನ ನೀತಿ ಸಂಹಿತೆಯನ್ನು ಜಾರಿ ಮಾಡಲಾಗಿದೆ. ಈ ವೇಳೆ, ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಮಿಷನರ್ ಹೇಮಂತ್ ನಿಂಬಾಳ್ಕರ್ (Hemant Nimbalkar) ಅವರ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ (Election Commission) ಬಿಜೆಪಿ ನಿಯೋಗವು (BJP delegation) ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ (Violation of model code of conduct) ಸಂಬಂಧ ದೂರು ನೀಡಿದೆ.

ನಗರದ ನೃಪತುಂಗ ರಸ್ತೆಯಲ್ಲಿರುವ ಚುನಾವಣಾ ಆಯೋಗ ಕಚೇರಿಗೆ ಬುಧವಾರ (ಮಾ. 27) ಭೇಟಿ ನೀಡಿದ ಬಿಜೆಪಿ ನಿಯೋಗವು ಡಿ.ಕೆ. ಶಿವಕುಮಾರ್ ವಿರುದ್ಧ ದೂರು ನೀಡಿತು. ಡಿ.ಕೆ. ಶಿವಕುಮಾರ್ ಅವರು ತಮ್ಮ ಅಧಿಕೃತ ಫೇಸ್‍ಬುಕ್ ಪೇಜಿನಲ್ಲಿ ಕರ್ನಾಟಕ ಸರ್ಕಾರದ ಚಿಹ್ನೆ, ಕಾಂಗ್ರೆಸ್ ಪಕ್ಷದ ಚಿಹ್ನೆ ಬಳಸಿಕೊಂಡು ಡಿ.ಕೆ.ಸುರೇಶ್ (DK Suresh) ಅವರ ಪರವಾಗಿ ಚುನಾವಣಾ ಪ್ರಚಾರ ಮಾಡಿ ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿದ್ದಾಗಿ ಗಮನಕ್ಕೆ ತರಲಾಯಿತು.

ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ರಾಜ್ಯ ವಕ್ತಾರರಾದ ಎಚ್.ಎನ್. ಚಂದ್ರಶೇಖರ್, ಎಚ್. ವೆಂಕಟೇಶ್ ದೊಡ್ಡೇರಿ, ಕಾನೂನು ಪ್ರಕೋಷ್ಟದ ರಾಜ್ಯ ಸಂಚಾಲಕ ವಸಂತ್ ಕುಮಾರ್ ಅವರು ಈ ದೂರನ್ನು ಸಲ್ಲಿಸಿದರು.

ಹೇಮಂತ್‌ ನಿಂಬಾಳ್ಕರ್‌ ವರ್ಗಾವಣೆಗೆ ಮನವಿ

ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಮಿಷನರ್ ಹೇಮಂತ್ ನಿಂಬಾಳ್ಕರ್ ಅವರನ್ನು ಆ ಹುದ್ದೆಯಿಂದ ವರ್ಗಾವಣೆ ಮಾಡಲು ಕೋರಲಾಗಿದೆ. ಅವರು ತಮ್ಮ ಕಚೇರಿಯನ್ನು ಬಳಸಿಕೊಂಡು ಪತ್ನಿ, ಉತ್ತರ ಕನ್ನಡದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ (Anjali Nimbalkar) ಪರವಾಗಿ ಮತ ನೀಡಲು ಕೇಳುತ್ತಿರುವುದಾಗಿ ಮಾಹಿತಿ ಸಿಕ್ಕಿದೆ. ಆದ್ದರಿಂದ ತಕ್ಷಣ ಅವರನ್ನು ಅಲ್ಲಿಂದ ವರ್ಗಾವಣೆ ಮಾಡುವಂತೆ ಚುನಾವಣಾ ಕಮಿಷನರ್ ಅವರಿಗೆ ಮನವಿ ಮಾಡಿದ್ದೇವೆ. ರಾಜ್ಯದ ಒಳಗಡೆ ಇದ್ದರೆ ಮತ್ತೆ ಪ್ರಭಾವ ಬಳಸುವ ಸಾಧ್ಯತೆ ಇದ್ದು, ಅವರಿಗೆ ಕರ್ನಾಟಕದಿಂದ ಹೊರಗಡೆ ಕೆಲಸ ಮಾಡಲು ಅವಕಾಶ ಕೊಡಿ ಎಂದು ವಿನಂತಿಸಿದ್ದಾಗಿ ವಿವರಿಸಿದರು.

ಇದನ್ನೂ ಓದಿ: Lok Sabha Election 2024: ರಾಯಚೂರಲ್ಲಿ ಬಿ.ವಿ. ನಾಯಕ ಭಿನ್ನಮತ ಸ್ಫೋಟ; ಡೀಸೆಲ್‌ ಸುರಿದುಕೊಂಡು ಹೈಡ್ರಾಮಾ!

ಚುನಾವಣಾ ವೇಳಾಪಟ್ಟಿ ನಾಳೆಯಿಂದ (ಮಾ.28) ಆರಂಭವಾಗಲಿದ್ದು, ಈ ಸಂಬಂಧ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಕಮಿಷನರ್ ತಿಳಿಸಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿದರು.

ಇನ್ನೂ ಎರಡು ದೂರು ನೀಡಿದ ಬಿಜೆಪಿ

ರಾಜ್ಯ ಸರ್ಕಾರದ ಕೆಲವು ಸಚಿವರು ತಮ್ಮ ಅಧಿಕೃತ ಕಚೇರಿಗಳನ್ನು ಲೋಕಸಭಾ ಚುನಾವಣಾ ಕೆಲಸಕ್ಕಾಗಿ ದುರ್ಬಳಕೆ ಮಾಡಿಕೊಳ್ಳುವ ಸಂಬಂಧ ಇನ್ನೊಂದು ದೂರಿನಲ್ಲಿ ಗಮನ ಸೆಳೆಯಲಾಗಿದೆ. ಬಿಜೆಪಿ ಚುನಾವಣಾ ಬೋನಸ್ ಕುರಿತಂತೆ ವಾಟ್ಸಾಪ್ ನಕಲಿ ಸಂದೇಶದ ಕುರಿತು ಮತ್ತೊಂದು ದೂರು ಕೊಡಲಾಗಿದ್ದು, ಕ್ರಮ ಕೈಗೊಳ್ಳಲು ಕೋರಲಾಗಿದೆ.

Exit mobile version