ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ನಾಯಕರ ವಾಕ್ಸಮರಗಳು ಜೋರಾಗಿವೆ. ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ (Udupi Chikkamagaluru Lok Sabha constituency) ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಅವರಿಗೆ ಹಿಂದಿ, ಇಂಗ್ಲಿಷ್ ಬರುವುದಿಲ್ಲ. ಅವರಿಗೆ ಮತ ಹಾಕಬೇಡಿ ಎಂಬ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ (Jayaprakash Hegde) ಹೇಳಿಕೆ ವಿರುದ್ಧ ಮುಖ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ. ಅಲ್ಲದೆ, “ಆಪರೇಷನ್ ಕಮಲ ನಡೆಯುತ್ತಿದ್ದು, ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂಪಾಯಿ ಆಫರ್ ಮಾಡಲಾಗಿದೆ” ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿರುದ್ಧವೂ ಬಿಜೆಪಿಯಿಂದ ದೂರು ನೀಡಲಾಗಿದೆ.
ಶಾಸಕ ಸುರೇಶ್ ಕುಮಾರ್ ನೇತೃತ್ವದಲ್ಲಿ ದೂರು ನೀಡಲಾಗಿದ್ದು, ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥ ನಾರಾಯಣ, ವಕ್ತಾರ ಪ್ರಕಾಶ್, ಕಾನೂನು ಪ್ರಕೋಷ್ಠದ ಸಂಚಾಲಕ ವಸಂತ್ ಕುಮಾರ್ ಜತೆಗಿದ್ದರು. ಜಯಪ್ರಕಾಶ್ ಹೆಗ್ಡೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ದೂರಿನಲ್ಲಿ ಉಲ್ಲೇಖಿಸಿದೆ.
ಬಿಜೆಪಿ ದೂರಿನಲ್ಲೇನಿದೆ?
22.03.2024 ರಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರು ಬ್ರಹ್ಮಾವರದಲ್ಲಿ ತಮ್ಮ ಚುನಾವಣಾ ಪ್ರಚಾರದ ವೇಳೆ ಮತದಾರರನ್ನು ಉದ್ದೇಶಿಸಿ ಮಾತನಾಡುವಾಗ, “ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಕನ್ನಡ ಬಿಟ್ಟರೆ ಹಿಂದಿ ಅಥವಾ ಇಂಗ್ಲಿಷ್ ಬರುವುದಿಲ್ಲ. ಅವರನ್ನು ಆಯ್ಕೆ ಮಾಡಿದರೆ ದೆಹಲಿಯಲ್ಲಿ ಕೆಲಸಗಳಾಗುವುದಿಲ್ಲ” ಎಂದು ಹೇಳುವ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುತ್ತಾರೆ.
ಸದರಿಯವರ ಹೇಳಿಕೆಯು ದಿನಾಂಕ: 23.03.2024 ರ ಕನ್ನಡ ದಿನಪತ್ರಿಕೆಯಲ್ಲಿ “ಕೋಟಗೆ ಹಿಂದಿ, ಇಂಗ್ಲಿಷ್ ಬರಲ್ಲ, ಗೆಲ್ಲಿಸಬೇಡಿ” ಎಂಬ ಶೀರ್ಷಿಕೆಯಡಿ ಪ್ರಕಟವಾಗಿರುತ್ತದೆ. ಸದರಿ ಹೇಳಿಕೆಯು ಭಾಷಾ ಸಾಮರಸ್ಯವನ್ನು ಹದಗೆಡಿಸುವ ಹಾಗೂ ಕನ್ನಡಿಗರ ಅಸ್ಮಿತೆಗೆ ಧಕ್ಕೆ ತರುವುದಲ್ಲದೆ ಪ್ರಾದೇಶಿಕ ಭಾಷೆಯ ಬಗ್ಗೆ ಅವಮಾನಕರ ಹೇಳಿಕೆಯಾಗಿರುತ್ತದೆ.
ಆದ್ದರಿಂದ ಭಾಷೆಯ ಹೆಸರಿನಲ್ಲಿ ಮತಯಾಚಿಸಿ ಪ್ರತಿಸ್ಪರ್ಧಿಯನ್ನು ಗೆಲ್ಲಿಸಬೇಡಿ ಎಂದು ಹೇಳಿಕೆ ನೀಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ವಿನಂತಿ” ಎಂದು ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
ಶನಿವಾರ ಟ್ವೀಟ್ ಮೂಲಕ ಕಿಡಿಕಾರಿದ್ದ ಬಿಜೆಪಿ
ಕನ್ನಡ ವಿರೋಧಿ ನಾಡ ದ್ರೋಹಿ @INCKarnataka ದ ಅಸಲಿ ಮುಖ ಅನಾವರಣಗೊಂಡಿದೆ.
— BJP Karnataka (@BJP4Karnataka) March 23, 2024
ಕನ್ನಡವೇ ಸತ್ಯ ಕನ್ನಡವೇ ನಿತ್ಯವೆಂದು ಉಸಿರಾಗಿಸಿಕೊಂಡ ಕೋಟಿ ಕೋಟಿ ಕನ್ನಡಿಗರಿಗೆ ಕಾಂಗ್ರೆಸ್ ಮಾಡಿದ ಅಪಮಾನವಿದು.
ಮಾನ್ಯ ನಕಲಿ ಕನ್ನಡ ಪಂಡಿತರಾದ @siddaramaiah ಸಾಹೇಬರೇ, ಇನ್ನೂ ಇಂತಹ ಕನ್ನಡ ವಿರೋಧಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯನ್ನು… pic.twitter.com/1ooQ7oC7LU
ದೂರು ಕೊಟ್ಟ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಎಸ್. ಸುರೇಶ್ ಕುಮಾರ್, ಉಡುಪಿ – ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ನಮ್ಮ ಪಕ್ಷದ ಅಭ್ಯರ್ಥಿ ವಿರುದ್ಧ ಅಪಪ್ರಚಾರ ಮಾಡಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಹಿಂದಿ, ಇಂಗ್ಲಿಷ್ ಭಾಷೆ ಬರಲ್ಲ, ಮತ ಹಾಕಬೇಡಿ ಅಂದಿದ್ದಾರೆ. ಈ ಹೇಳಿಕೆಯನ್ನು ಆಯೋಗ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ. ಜಯಪ್ರಕಾಶ್ ಹೆಗ್ಡೆ ಅವರು ಆ ಹೇಳಿಕೆ ನೀಡಿ ಜನರಿಗೆ ಅವರ ಮೇಲಿದ್ದ ಗೌರವವನ್ನು ಅವರೇ ಕಮ್ಮಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: HD Kumaraswamy: ಹಾರ್ಟ್ ಆಪರೇಷನ್ ಬಳಿಕ ಎಚ್‌ಡಿಕೆ ಮೊದಲ ಮಾತು; ಮಂಡ್ಯ, ಸಿಎಂ ಬಗ್ಗೆ ಹೇಳಿದ್ದೇನು?
ಸಿಎಂ ಸಿದ್ದರಾಮಯ್ಯ ವಿರುದ್ಧವೂ ದೂರು
ಸಿಎಂ ಸಿದ್ದರಾಮಯ್ಯ ಅವರು ಆಪರೇಷನ್ ಕಮಲ ನಡೆಯುತ್ತಿದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಅವರ ಶಾಸಕರಿಗೆ 50 ಕೋಟಿ ರೂಪಾಯಿ ಆಮಿಷ ಒಡ್ಡುತ್ತಿದೆ ಎಂದು ಆಧಾರ ರಹಿತವಾಗಿ ಸುಳ್ಳು ಹೇಳಿದ್ದಾರೆ. ಇವರ ಹೇಳಿಕೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.