Site icon Vistara News

Lok Sabha Election 2024: ಬಿಜೆಪಿ- ಜೆಡಿಎಸ್ ಮೈತ್ರಿ ಸುಸೂತ್ರ; ಮೋದಿ ಪ್ರವಾಸದ ಬಗ್ಗೆ ಬಿ.ವೈ. ವಿಜಯೇಂದ್ರ ಹೇಳಿದ್ದೇನು?

BY Vijayendra meets HD Kumaraswamy

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ- ಜೆಡಿಎಸ್ ನಡುವೆ ಏನೇ ಸಣ್ಣಪುಟ್ಟ ವ್ಯತ್ಯಾಸಗಳಿದ್ದರೂ ಎಲ್ಲವೂ ಸುಖಾಂತ್ಯ ಆಗಲಿದೆ. ಬಿಜೆಪಿ- ಜೆಡಿಎಸ್ ಮೈತ್ರಿ (BJP JDS Alliance) ಸುಸೂತ್ರವಾಗಿ ಮುಂದುವರಿಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ವಿಶ್ವಾಸ ವ್ಯಕ್ತಪಡಿಸಿದರು.

ಡಾಲರ್ಸ್ ಕಾಲೋನಿ ನಿವಾಸದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಬಿ.ವೈ. ವಿಜಯೇಂದ್ರ, ಜೆಡಿಎಸ್‍ನವರಿಗೂ ಸಮಾಧಾನ ಆಗುವ ರೀತಿಯಲ್ಲಿ ನಮ್ಮ ರಾಷ್ಟ್ರೀಯ ನಾಯಕರು ಸಮರ್ಪಕ ತೀರ್ಮಾನ ಮಾಡುವ ವಿಶ್ವಾಸ ಇದೆ. ಚರ್ಚೆಯಿಂದ ವಿಷಯ ಬಗೆಹರಿಯಲಿದೆ ಎಂದು ತಿಳಿಸಿದರು.

ನಮ್ಮ ರಾಷ್ಟ್ರೀಯ ನಾಯಕರ ಜತೆ ನಿನ್ನೆ ದೂರವಾಣಿ ಮೂಲಕ ಚರ್ಚೆ ಮಾಡಿದ್ದೇನೆ. ಬಳಿಕ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಜತೆಗೂ ದೂರವಾಣಿ ಮೂಲಕ ಚರ್ಚಿಸಿದ್ದೇನೆ. ಮಾಜಿ ಸಿಎಂ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೂ ಬೆಳಗ್ಗೆ ಮಾಹಿತಿ ನೀಡಿದ್ದೇನೆ. ಲೋಕಸಭಾ ಚುನಾವಣಾ ವಿಷಯಗಳ ಕುರಿತು ನಮ್ಮ ಪಕ್ಷದ ವರಿಷ್ಠರು ಮತ್ತು ಜೆಡಿಎಸ್ ವರಿಷ್ಠರು ಚರ್ಚೆ ಮಾಡಿದ್ದಾರೆ. ಅಲ್ಲದೆ, ಚರ್ಚೆ ಮಾಡುತ್ತಲೂ ಇದ್ದಾರೆ. ಎಲ್ಲವೂ ಕೂಡ ಸುಖಾಂತ್ಯ ಕಾಣಲಿದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

ಕಾಂಗ್ರೆಸ್‌ ನಾಯಕರಿಗೆ ಬಿಜೆಪಿ ಮೇಲೆ ವಿಶ್ವಾಸ

ಕಳೆದ ಒಂದು ವಾರದ ಘಟನೆಗಳನ್ನು ಅವಲೋಕನ ಮಾಡಿದರೆ, ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಅವರ ನಾಯಕರಿಂದ ಬಿಜೆಪಿ ಮುಖಂಡರ ಬಗ್ಗೆ ಹೆಚ್ಚು ವಿಶ್ವಾಸ ಬಂದಿದೆ. ಸಚಿವ ಎಂ.ಬಿ. ಪಾಟೀಲ್ ಮತ್ತು ಇತರರ ಹೇಳಿಕೆ ಗಮನಿಸಿದರೆ, ಬಿಜೆಪಿ ನಾಯಕರ ಮೇಲೆ ಅವರಿಗೆ ವಿಶ್ವಾಸ ಬಂದಿದೆ ಎಂಬುದು ಸ್ಪಷ್ಟವಾಗಿದೆ ಎಂದು ಬಿ.ವೈ. ವಿಜಯೇಂದ್ರ ಕುಟುಕಿದರು.

ಸದಾನಂದ ಗೌಡ ಪಕ್ಷ ಬಿಡಲ್ಲ

ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಅವರು ಸಹ ಬಿಜೆಪಿಯಲ್ಲೇ ಇರುತ್ತಾರೆ. ಮೊದಲನೇ ಪಟ್ಟಿ ಬಿಡುಗಡೆ ಆಗಿದೆ. ಅಭ್ಯರ್ಥಿಗಳ ಎರಡನೇ ಪಟ್ಟಿ ಸದ್ಯದಲ್ಲೇ ಬಿಡುಗಡೆ ಆಗಲಿದೆ. ಟಿಕೆಟ್ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ನಿರ್ಧಾರವೇ ಅಂತಿಮವಾಗಿದೆ. ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು ಹಿರಿಯ ನಾಯಕರು. ಕೆಲವು ತಪ್ಪು ಮಾಹಿತಿಗಳು ಅವರಿಗೆ ತಲುಪಿವೆ. ಹಾಗಾಗಿ ಈ ರೀತಿ ಚರ್ಚೆಗಳು ನಡೆಯುತ್ತಿವೆ. ಅವರಿಗೆ ಸತ್ಯ ಅರ್ಥ ಆದ‌ ಮೇಲೆ ಸಮಸ್ಯೆ ಬಗೆಹರಿಯುವ ವಿಶ್ವಾಸ ನನಗೆ ಈಗಲೂ ಇದೆ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದರು.

ಇದನ್ನೂ ಓದಿ: Lok Sabha Election 2024: ಮಂಡ್ಯದಿಂದ ಎಚ್‌ಡಿಕೆ ಕಣಕ್ಕೆ? ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಬದಲು?

ಪ್ರಧಾನಿ ಮೋದಿಯಿಂದ ಮೆಚ್ಚುಗೆ

ರಾಜ್ಯದಲ್ಲಿ ದಿನೇ ದಿನೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನಪ್ರಿಯತೆ ಹೆಚ್ಚಾಗುತ್ತಲೇ ಇದೆ. ಅವರ ಜನಪ್ರಿಯತೆ ಇನ್ನೂ ಎತ್ತರಕ್ಕೆ ಹೋಗುತ್ತಿರುವುದು ಚುನಾವಣಾ ರಣಭೂಮಿಯಲ್ಲಿರುವ ನಮ್ಮ ಕಾರ್ಯಕರ್ತರಿಗೆ ಉತ್ಸಾಹ ತಂದುಕೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿಯವರ ಶಿವಮೊಗ್ಗದ ಪ್ರವಾಸ, ಸಭೆ ಯಶಸ್ವಿಯಾಗಿದೆ. ಕೇವಲ ಒಂದು ವಾರದಲ್ಲಿ ಇಷ್ಟು ದೊಡ್ಡ ಸಮಾವೇಶ ಆಯೋಜಿಸಲಾಗಿದ್ದಕ್ಕೆ ಮೆಚ್ಚುಗೆ ಸೂಚಿಸಿದರು. ಶಿವಮೊಗ್ಗ, ಕಲಬುರಗಿ ಕಾರ್ಯಕ್ರಮಗಳ ಕುರಿತು ಸ್ವತಃ ಪ್ರಧಾನಿಯವರು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದರು.

Exit mobile version