Site icon Vistara News

Lok Sabha Election 2024: ಈಶ್ವರಪ್ಪ ಸೇರಿ ಬಿಜೆಪಿಯ ಸಣ್ಣಪುಟ್ಟ ಗೊಂದಲ ಶೀಘ್ರ ಪರಿಹಾರ: ಬಿ.ವೈ. ವಿಜಯೇಂದ್ರ

Lok Sabha Election 2024 Bjp minor confusions will be resolved soon says BY Vijayendra

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಸಂಬಂಧ ಬಿಜೆಪಿಯಲ್ಲಿ ತಯಾರಿ ಜೋರಾಗಿದೆ. ಕಾರ್ಯತಂತ್ರಗಳನ್ನು ರೂಪಿಸಲಾಗುತ್ತಿದೆ. ರಾಜ್ಯದಲ್ಲಿದ್ದ ಸಣ್ಣಪುಟ್ಟ ಗೊಂದಲಗಳು ಬಗೆಹರಿಯುತ್ತಿವೆ. ಶಿವಮೊಗ್ಗವೂ ಸೇರಿ ಎಲ್ಲ ಸಮಸ್ಯೆಗಳೂ ಪರಿಹಾರವಾಗಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಬಿ.ವೈ. ವಿಜಯೇಂದ್ರ, ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದು ನರೇಂದ್ರ ಮೋದಿಯವರು (Narendra Modi) ಪ್ರಧಾನಿ ಆಗುವುದು ಖಚಿತವಾಗಿರುವ ಕಾರಣ ಬಿಜೆಪಿಗೆ (BJP Karnataka) ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ರಾಜ್ಯದಲ್ಲಿ ಕೆಲವೊಂದು ಸಮಸ್ಯೆಗಳಿದ್ದು, ಅವು ಶೀಘ್ರವೇ ಬಗೆಹರಿಯಲಿವೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: Lok Sabha Election 2024: ಸಿದ್ದರಾಮಯ್ಯ ಹಿಂದೆ ಏನಿದೆ? ಹಿಂದೆಲ್ಲ ನೋಡಬೇಡ ಅಂದ್ರಾ ಸಿಎಂ?

ಈಶ್ವರಪ್ಪನವರ ಸಮಸ್ಯೆಯೂ ಬಗೆಹರಿಯಲಿದೆ

ಕೆ.ಎಸ್. ಈಶ್ವರಪ್ಪ (KS Eshwarappa) ಅವರ ಸ್ಪರ್ಧೆ ಕುರಿತ ಪ್ರಶ್ನೆಗೆ ಉತ್ತರ ನೀಡಿದ ಬಿ.ವೈ. ವಿಜಯೇಂದ್ರ, ನಮ್ಮದೊಂದು ರಾಷ್ಟ್ರೀಯ ಪಕ್ಷವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದರೂ ಬಿಜೆಪಿ ಗೆಲ್ಲುವ ನಿರೀಕ್ಷೆಯಿಂದ ಆಕಾಂಕ್ಷಿಗಳೂ ಹೆಚ್ಚಾಗಿದ್ದರು. ದಾವಣಗೆರೆ ಮತ್ತು ಬೆಳಗಾವಿಗೆ ನಮ್ಮ ರೈತ ನಾಯಕರಾದ ಬಿ.ಎಸ್. ಯಡಿಯೂರಪ್ಪನವರು ಭೇಟಿ ಕೊಟ್ಟು ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಈಶ್ವರಪ್ಪನವರ ಸಮಸ್ಯೆಯೂ ಬಗೆಹರಿಯಲಿದೆ ಎಂದು ಹೇಳಿದರು.

ಕೇಂದ್ರದ ನಾಯಕರು ನಮ್ಮನ್ನು ಕೇಳಿ ತೀರ್ಮಾನ ಮಾಡಲ್ಲ

ನಮ್ಮ ಪಕ್ಷದಲ್ಲಿ ಕೇಂದ್ರದ ನಾಯಕರು ಬಲಿಷ್ಠರಾಗಿದ್ದಾರೆ. ಕೇವಲ ಬಿ.ವೈ. ವಿಜಯೇಂದ್ರ ಮತ್ತು ಬಿ.ಎಸ್. ಯಡಿಯೂರಪ್ಪ ಅವರ ಮಾತು ಕೇಳಿ ‌ಅವರು ಯಾವುದೇ ತೀರ್ಮಾನವನ್ನು ಮಾಡುವುದಿಲ್ಲ. ಒಂದು ಬಲಿಷ್ಠ ನಾಯಕತ್ವ ನಮ್ಮ ಕೇಂದ್ರದಲ್ಲಿದೆ. ಬಲಿಷ್ಠ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಅವರಿದ್ದಾರೆ. ರಾಜ್ಯಕ್ಕೆ ಸಂಬಂಧಿಸಿ ಎಲ್ಲ ನಾಯಕರ ಜತೆ ಚರ್ಚೆ ಮಾಡಿ ತೀರ್ಮಾನ ಮಾಡಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದನ್ನೂ ಓದಿ: Lok Sabha Election 2024: ಆಪರೇಷನ್‌ ದಾವಣಗೆರೆ ಬಿಜೆಪಿ ಸಕ್ಸಸ್‌; ರವೀಂದ್ರನಾಥ್‌ಗೆ ಚುನಾವಣೆ ಹೊಣೆ, ಬಂಡಾಯ ಶಮನ

ಫಲಿತಾಂಶ ಬಂದಾಗ ಸಕ್ರಿಯತೆ ಬಗ್ಗೆ ಗೊತ್ತಾಗುತ್ತದೆ

ಚುನಾವಣೆ ಫಲಿತಾಂಶ ಬಂದಾಗ ಯಾರೆಲ್ಲ ಸಕ್ರಿಯರಾಗಿ ಕೆಲಸ ಮಾಡಿದ್ದಾರೆ ಎಂಬುದು ಗೊತ್ತಾಗಲಿದೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಸಂಬಂಧ ಎಲ್ಲರೂ ಶ್ರಮ ವಹಿಸಬೇಕು ಎಂದು ಬಿ.ವೈ. ವಿಜಯೇಂದ್ರ ಕರೆ ನೀಡಿದರು.

ಮೋದಿ, ಬಿಜೆಪಿ ಪರ ಅಲೆ

ಲೋಕಸಭಾ ಚುನಾವಣೆಗೆ 18-20 ಸಚಿವರನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ತೀರ್ಮಾನಿಸಿದ್ದರು. ರಾಜ್ಯದ ಯಾವುದೇ ಒಬ್ಬ ಸಚಿವರೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯ ತೋರಿಸಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಪರ ಅಲೆ, ಬಿಜೆಪಿ ಪರ ಅಲೆಯೇ ಇದಕ್ಕೆ ಕಾರಣ ಎಂದು ಬಿ.ವೈ. ವಿಜಯೇಂದ್ರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Exit mobile version