Site icon Vistara News

Lok Sabha Election 2024: ಭ್ರಷ್ಟಾಚಾರ ಮರೆ ಮಾಚಲು ವಿಪಕ್ಷಗಳು ಒಗ್ಗೂಡಿವೆ; ಬಿಜೆಪಿ ವಾಗ್ದಾಳಿ

Lok Sabha Election 2024

Lok Sabha Election 2024

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರ ಬಂಧನವನ್ನು ವಿರೋಧಿಸಿ ವಿಪಕ್ಷಗಳ ʼಇಂಡಿಯಾʼ ಒಕ್ಕೂಟ (I.N.D.I.A. bloc) ನವದೆಹಲಿಯಲ್ಲಿ ಭಾನುವಾರ (ಮಾರ್ಚ್‌ 31) ಆಯೋಜಿಸಿದ್ದ ʼಲೋಕತಂತ್ರ ಬಚಾವೋʼ (Loktantra Bachao) ರ‍್ಯಾಲಿಯನ್ನು ಟೀಕಿಸಿದ ಬಿಜೆಪಿ (BJP), ವಿಪಕ್ಷಗಳು ವಂಶ ಪಾರಂಪರ್ಯ ರಾಜಕೀಯ ಮತ್ತು ಭ್ರಷ್ಟಾಚಾರವನ್ನು ರಕ್ಷಿಸಲು ಬಯಸಿವೆಯೇ ಹೊರತು ಪ್ರಜಾಪ್ರಭುತ್ವವನ್ನಲ್ಲ ಎಂದು ಹೇಳುವ ಮೂಲಕ ತಿರುಗೇಟು ನೀಡಿದೆ (Lok Sabha Election 2024).

“ವಿಪಕ್ಷಗಳು ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿವೆ. ಈ ಪಕ್ಷಗಳ ನಾಯಕರು ಕುಟುಂಬ ವ್ಯವಸ್ಥೆಯಿಂದ ನಿಯಂತ್ರಿಸಲ್ಪಡುತ್ತಾರೆ. ಇವರ ರಾಜಕೀಯದ ಮೂಲ ಕಾರ್ಯ ವಿಧಾನವೆಂದರೆ ಕೋಮು, ಪ್ರಾದೇಶಿಕ, ಭಾಷಾ ವಿಭಜನೆ ಮತ್ತು ಜಾತಿ ವಿಭಜನೆ. ಅವರು ಅಧಿಕಾರವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಾರೆ ಮತ್ತು ನಂತರ ತಮ್ಮ ಕುಟುಂಬದ ಹಿತಾಸಕ್ತಿಗಾಗಿ ಖಜಾನೆಯನ್ನು ತುಂಬುತ್ತಾರೆ. ಈಗ ಅವರು ʼಲೋಕತಂತ್ರ ಬಚಾವೋʼ ಎಂಬ ಅಭಿಯಾನ ನಡೆಸುತ್ತಿದ್ದಾರೆ. ಇದು ನಿಜವಾಗಿಯೂ ʼಪರಿವಾರ್ ಬಚಾವೋ ಔರ್ ಭ್ರಷ್ಟಾಚಾರ್ ಚುಪಾವೊʼ (ಕುಟುಂಬವನ್ನು ಉಳಿಸಿ ಮತ್ತು ಭ್ರಷ್ಟಾಚಾರವನ್ನು ಮರೆಮಾಚಿ) ಅಭಿಯಾನʼʼ ಎಂದು ಬಿಜೆಪಿ ಮುಖಂಡ ಸುಧಾಂಶು ತ್ರಿವೇದಿ ವಾಗ್ದಾಳಿ ನಡೆಸಿದ್ದಾರೆ.

ಆಮ್ ಆದ್ಮಿ ಪಕ್ಷ (AAP) ಮತ್ತು ಕಾಂಗ್ರೆಸ್ (Congress) ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಸುಧಾಂಶು ತ್ರಿವೇದಿ, ʼʼಇಂಡಿಯಾʼ ಒಕ್ಕೂಟವು ಕುಟುಂಬವನ್ನು ಉಳಿಸಲು ಮತ್ತು ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆʼʼ ಎಂದು ಪುನರುಚ್ಚರಿಸಿದ್ದಾರೆ.

ರಾಮ ಮಂದಿರಕ್ಕೆ ವಿರೋಧ

ʼಇಂಡಿಯಾʼ ಬಣ ರಾಮ ಮಂದಿರ ವಿರುದ್ಧವಾಗಿದೆ ಎಂದು ತ್ರಿವೇದಿ ಟೀಕಿಸಿದ್ದಾರೆ. “ತಮ್ಮ ಹಳೆಯ ಅಪರಾಧಗಳನ್ನು ಮರೆಮಾಚಲು, ರಾಮ ಮಂದಿರದ ವಿರುದ್ಧವಾಗಿದ್ದ, ಹಿಂದೂ ಧರ್ಮದ ಸಾಮೂಹಿಕ ನಾಶದಂತಹ ನಿರ್ಣಯಗಳನ್ನು ಕೈಗೊಂಡ, ಹಿಂದೂ ಧರ್ಮದ ದೇವರು ಮತ್ತು ದೇವತೆಗಳ ಬಗ್ಗೆ ಅನೇಕ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಈ ಎಲ್ಲ ಪಕ್ಷಗಳು ತಮ್ಮ ಹಳೆಯ ಭ್ರಷ್ಟಾಚಾರದ ಅಪರಾಧಗಳನ್ನು ಮರೆಮಾಚಲು ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಸಭೆ ಸೇರಿವೆʼʼ ಎಂದು ವಾಗ್ದಾಳಿ ನಡೆಸಿದ್ದಾರೆ.

ವಿಪಕ್ಷಗಳ ನಡೆಯನ್ನು ಟೀಕಿಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಅವರು, “ನಿಮಗೆ ಬೇಕಾದ ತೀರ್ಪು ನೀಡದಿದ್ದರೆ ನ್ಯಾಯಾಲಯವು ನಿಮ್ಮ ವಿರುದ್ಧವಾಗಿದೆ ಎಂಬ ಅರ್ಥವೇ? ವಿಪಕ್ಷಗಳು ಪ್ರಜಾಪ್ರಭುತ್ವ ಉಳಿಸಲು ಹೋರಾಡುತ್ತಿಲ್ಲ. ಬದಲಾಗಿ ತಮ್ಮ ಭ್ರಷ್ಟಾಚಾರವನ್ನು ಉಳಿಸಲು ಪ್ರಯತ್ನಿಸುತ್ತಿವೆ. ಅದಕ್ಕಾಗಿಯೇ ಎಲ್ಲ ಭ್ರಷ್ಟರು ಒಗ್ಗೂಡಿ ಭ್ರಷ್ಟಾಚಾರದ ವಿರುದ್ಧದ ತನಿಖೆಯ ನಡೆಸದಂತೆ ಘೋಷಣೆಗಳನ್ನು ಕೂಗುತ್ತಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Lok Sabha Election 2024: ಪ್ರಧಾನಿ ಮೋದಿ ಮ್ಯಾಚ್‌ ಫಿಕ್ಸಿಂಗ್‌ ನಡೆಸಿದ್ದಾರೆ; ರಾಹುಲ್‌ ಗಾಂಧಿ ಹೀಗೆ ಹೇಳಿದ್ಯಾಕೆ?

ವಿಪಕ್ಷಗಳು ಭ್ರಷ್ಟವಾಗಿವೆ ಎಂದು ಬಿಜೆಪಿ ನಾಯಕಿ ಶೈನಾ ಎನ್‌.ಸಿ. ಆರೋಪಿಸಿದ್ದಾರೆ. “ನಾವು ಒಂದು ರಾಜಕೀಯ ಪಕ್ಷವಾಗಿ, ಸಮರ್ಥ ವಿಪಕ್ಷವನ್ನು ಬಯಸುತ್ತೇವೆ. ಆದರೆ ವಿಪಕ್ಷಗಳು ಭ್ರಷ್ಟವಾಗಿದ್ದರೆ, ಏಜೆನ್ಸಿಗಳು ಸರಿಯಾದ ಪ್ರಕ್ರಿಯೆಯನ್ನು ಏಕೆ ತೆಗೆದುಕೊಳ್ಳಬಾರದು? 2003ರ ನಂತರದ ಜಾರಿ ನಿರ್ದೇಶನಾಲಯವು ಕೇವಲ ಶಾಸನಬದ್ಧ ಸಂಸ್ಥೆಯಾಗಿರದೆ, ಒದಗಿಸಿದ ಪುರಾವೆಗಳ ಆಧಾರದ ಮೇಲೆ ಭ್ರಷ್ಟರನ್ನು ಬಂಧಿಸುವ ಕ್ರಮ ಕೈಗೊಳ್ಳುತ್ತಿದೆ” ಎಂದು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version