ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಆಡುವ ಒಂದೊಂದು ಮಾತುಗಳೂ ಪ್ರಾಮುಖ್ಯತೆಯನ್ನು ಪಡೆಯುತ್ತವೆ. ಕೆಲವು ಮಾತುಗಳು ಪ್ಲಸ್ ಮಾಡಿದರೆ, ಮತ್ತೆ ಕೆಲವು ಭಾರಿ ಡ್ಯಾಮೇಜ್ ಮಾಡುತ್ತವೆ. ಈಗ ಉದ್ಯಮಿ ಸ್ಯಾಮ್ ಪಿತ್ರೋಡ (Sam Pitroda) ಕಾಂಗ್ರೆಸ್ ಪರವಾಗಿ ಆಡಿದ ಮಾತುಗಳು ಕೈಪಡೆಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. “ಪಿತ್ರಾರ್ಜಿತ ಆಸ್ತಿಗಳನ್ನು (Ancestral property) ಮಕ್ಕಳಿಗೆ ಹಸ್ತಾಂತರಿಸುವ ಸಂದರ್ಭದಲ್ಲಿ ಅಮೆರಿಕದಲ್ಲಿ ಜಾರಿಯಲ್ಲಿರುವ ಕಾನೂನನ್ನು ಭಾರತದಲ್ಲಿಯೂ ಅನುಷ್ಠಾನಕ್ಕೆ ತರಬೇಕು. ಪಿತ್ರಾರ್ಜಿತ ಆಸ್ತಿಗೂ ತೆರಿಗೆ ವಿಧಿಸಬೇಕು. ಇದರಲ್ಲಿ ಶೇಕಡಾ 55ರಷ್ಟು ಪಾಲನ್ನು ಸರ್ಕಾರಕ್ಕೆ ಕೊಡಬೇಕು” ಎಂಬ ಸ್ಯಾಮ್ ಪಿತ್ರೋಡ ಹೇಳಿಕೆಯು ಈಗ ಭಾರಿ ವಿವಾದವನ್ನು ಸೃಷ್ಟಿಸಿದೆ. ಇದನ್ನು ಬಿಜೆಪಿ ಚುನಾವಣಾ ಅಸ್ತ್ರ ಮಾಡಿಕೊಂಡಿದ್ದು, ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿದೆ. ಈ ಹೇಳಿಕೆಗೂ ನಮಗೂ ಸಂಬಂಧವೇ ಇಲ್ಲವೆಂದು ಸ್ಪಷ್ಟೀಕರಣ ಕೊಡುತ್ತಿದೆ. ಅಲ್ಲದೆ, ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಸಹ ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಡಿಕೆಶಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಈ ರೀತಿ ಮಾಡಲು ಕಾನೂನಿನಲ್ಲಿ ಅವಕಾಶವೇ ಇಲ್ಲ ಎಂದು ಹೇಳಿದ್ದಾರೆ.
ದೇಶದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ಶುರುವಾಗುವ ಮುನ್ನ ಕಾಂಗ್ರೆಸ್‌ಗೆ ಸ್ಯಾಮ್ ಪಿತ್ರೋಡ ಹೇಳಿಕೆ ನುಂಗಲಾರದ ತುತ್ತಾಗಿದೆ. ಕಾರಣ, ಈ ಹೇಳಿಕೆಯನ್ನು ಸರಿಯಾಗಿ ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಇದನ್ನೇ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡಿದೆ. “ಪಿತ್ರಾರ್ಜಿತ ಆಸ್ತಿಗೆ ಕಾಂಗ್ರೆಸ್ ಕೊಕ್ಕೆ” ಎಂಬ ಅಭಿಯಾನವನ್ನೂ ಬಿಜೆಪಿ ಶುರು ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಸಾಮಾನ್ಯ ಕಾರ್ಯಕರ್ತನವರೆಗೂ ಈ ವಿಚಾರವನ್ನು ಪ್ರಸ್ತಾಪ ಮಾಡಲು ತಂತ್ರಗಾರಿಕೆ ಹೆಣೆಯಲಾಗಿದೆ. ಮಾಸ್ ಮತದಾರರನ್ನು ಟಾರ್ಗೆಟ್ ಮಾಡಿ ಈ ವಿಚಾರವನ್ನು ಬಿಜೆಪಿ ಪ್ರಸ್ತಾಪ ಮಾಡುತ್ತಿದೆ. ದಿನೇ ದಿನೇ ಬಿಜೆಪಿ ಈ ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದಂತೆ ಕಾಂಗ್ರೆಸ್‌ಗೆ ಇದರ ಡ್ಯಾಮೇಜ್‌ನ ಅರಿವಾಗಿದೆ. ಚುನಾವಣೆಯಲ್ಲಿ ಇದು ದೊಡ್ಡ ಹೊಡೆತವನ್ನು ಕೊಡಬಹುದು ಎಂದು ಅಂದಾಜಿಸಿದೆ. ಈ ಕಾರಣಕ್ಕೆ ಎಚ್ಚೆತ್ತುಕೊಂಡ ಕೈಪಡೆ ಈಗ ಸ್ಯಾಮ್ ಪಿತ್ರೋಡ ಹೇಳಿಕೆಯಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದೆ. ಈ ಬಗ್ಗೆ ಕೇಂದ್ರ ಮಟ್ಟದಲ್ಲಿಯೂ ಸ್ಪಷ್ಟೀಕರಣವನ್ನು ನೀಡಲಾಗಿದೆ. ಆದರೆ, ಬಿಜೆಪಿ ಮಾತ್ರ ಇದನ್ನೂ ಹಳ್ಳಿ ಹಳ್ಳಿಗೂ ಕೊಂಡೊಯ್ಯಲು ಪ್ಲ್ಯಾನ್ ಮಾಡಿಕೊಂಡಿದೆ.
ಇದನ್ನೂ ಓದಿ: Bank fraud: ಗುರು ರಾಘವೇಂದ್ರ, ವಸಿಷ್ಠ ಸಹಕಾರ ಬ್ಯಾಂಕ್‌ಗಳ ಹಗರಣ ಎಸ್‌ಐಟಿ ಹೆಗಲಿಗೆ; ಶೀಘ್ರ ಕ್ರಮವೆಂದ ಡಿಕೆಶಿ
ಡಿ.ಕೆ. ಶಿವಕುಮಾರ್ ಹೇಳಿದ್ದೇನು?
ಈ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಇಂತಹ ಕಾನೂನನ್ನು ತರಲು ಸಾಧ್ಯವೇ ಇಲ್ಲ. ನಮ್ಮದು ಕೂಡಾ ಆಸ್ತಿ ಇದೆ. ಸ್ಯಾಮ್ ಪಿತ್ರೋಡ ಅವರ ಹೇಳಿಕೆಯನ್ನು ತಿರುಚುವ ಕೆಲಸ ಆಗುತ್ತಿದೆ ಎಂದು ಹೇಳಿದ್ದಾರೆ. ಇತ್ತ ಸಿಎಂ ಸಿದ್ದರಾಮಯ್ಯ ಸಹ ಈ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಣೆ ಮಾಡಿದ್ದಾರೆ.