ಬೆಂಗಳೂರು: ಲೋಕಸಭಾ ಚುನಾವಣೆ (LoK Sabha Election 2024) ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಆರೋಪ – ಪ್ರತ್ಯಾರೋಪಗಳು ಜೋರಾಗಿಯೇ ಇವೆ. ಕೇಂದ್ರ ಸರ್ಕಾರ ಬರ ಪರಿಹಾರ (Drought Relief) ನೀಡಲು ಚುನಾವಣಾ ಆಯೋಗದ (Election Commission) ಅನುಮತಿ ಕೇಳಿದ್ದು, ಇದನ್ನೇ ನ್ಯಾಯಾಲಯದಲ್ಲಿ ತಿಳಿಸಲಾಗಿದೆ. ಈ ವಿಷಯವನ್ನು ತಮಗೆ ಸಿಕ್ಕಿದ ಜಯ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಸುಳ್ಳನ್ನು ಬಿಂಬಿಸುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಜನರ ಕೈಗೆ ಚಿಪ್ಪು ಕೊಟ್ಟಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashok) ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್. ಅಶೋಕ್, ಕೇಂದ್ರ ಸರ್ಕಾರ (Central Government) ಬರ ಪರಿಹಾರ ಬಿಡುಗಡೆಗೆ ಅನುಮತಿಗಾಗಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು. ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತು ತಿಳಿಸಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ (Supreme Court) ನಡೆಯುತ್ತಿರುವ ಪ್ರಕರಣದ ವಿಚಾರಣೆ ವೇಳೆಯೂ ಇದನ್ನು ತಿಳಿಸಲಾಗಿದೆ. ಆದರೆ, ಕಾಂಗ್ರೆಸ್ ನಾಯಕರು (Congress Leaders) ಜಯ ಸಿಕ್ಕಿದೆ ಎಂದು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರ ಹಣ ಬಿಡುಗಡೆಗಾಗಿಯೇ ಅನುಮತಿ ಕೇಳಿರುವಾಗ, ಕಾಂಗ್ರೆಸ್ ಪಾತ್ರ ಇದರಲ್ಲಿ ಏನೂ ಇಲ್ಲ. ಜಯ ಸಿಗಲು ಕಾಂಗ್ರೆಸ್‌ನ ವಕೀಲರು ಏನೂ ವಾದ ಮಾಡಿಲ್ಲ ಎಂದರು.
ಮಲ್ಲಿಕಾರ್ಜುನ ಖರ್ಗೆ ಹಾಗೂ ಸುರ್ಜೇವಾಲಾ ಅವರು ಯಾವ ಮುಖ ಇಟ್ಟುಕೊಂಡು ಬೆಂಗಳೂರಿಗೆ ಬರುತ್ತಾರೆ? ಇಲ್ಲಿ ಬಾಂಬ್ ಸ್ಫೋಟ ಆಗಿರುವಾಗ ನಿಮಗೆ ಮತ ಕೇಳಲು ಯಾವ ಅಧಿಕಾರ ಇದೆ? ಕೇಂದ್ರ ಸರ್ಕಾರ ಕ್ರಮ ವಹಿಸಿದ್ದರಿಂದಲೇ ಬರ ಪರಿಹಾರ ಹಲವಾರು ರಾಜ್ಯಗಳಿಗೆ ದೊರೆಯುತ್ತಿದೆ. ಈಗಾಗಲೇ ಬರ ಪರಿಹಾರವನ್ನು ರಾಜ್ಯ ಸರ್ಕಾರದ ವತಿಯಿಂದ ನೀಡಬೇಕಿತ್ತು. ಎಸ್‌ಡಿಆರ್‌ಎಫ್‌ನಿಂದ 700 ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರ ನೀಡಿದೆ. ಆದರೆ ರಾಜ್ಯ ಸರ್ಕಾರವೇ ನೀಡಿದಂತೆ ಸಿಎಂ ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದಾರೆ ಎಂದು ಆರ್. ಅಶೋಕ್ ಕಿಡಿಕಾರಿದರು.
2013-14 ರಲ್ಲಿ ಬರ ಪರಿಹಾರ ನೀಡಲು ಸಿಎಂ ಸಿದ್ದರಾಮಯ್ಯ 9 ತಿಂಗಳು ತೆಗೆದುಕೊಂಡಿದ್ದರು. ಕೇಂದ್ರದಲ್ಲೀಗ ಬಿಜೆಪಿ ಇದೆ ಎಂಬ ಕಾರಣಕ್ಕೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಮೋದಿ ಸರ್ಕಾರ 7,940 ಕೋಟಿ ರೂ. ಪರಿಹಾರ ನೀಡಿದ್ದರೆ, ಮನಮೋಹನ್ ಸಿಂಗ್ ಸರ್ಕಾರ 3,000 ಕೋಟಿ ರೂ. ನೀಡಿದೆ. ಗ್ಯಾರಂಟಿಗಳಿಂದಾಗಿ ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಈ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ಆರ್. ಅಶೋಕ್ ಹೇಳಿದರು.
ಸಿಬಿಐಗೆ ತನಿಖೆ ವಹಿಸಿ
ಕಾಂಗ್ರೆಸ್ ಸರ್ಕಾರ ಪಾಪರ್ ಆಗಿ ಬೀದಿಗೆ ಬಂದಿದ್ದು, ಮುಂದೆ ಸಂಬಳ ಕೊಡಲು ಹಣ ಇರುವುದಿಲ್ಲ. ಕಾಂಗ್ರೆಸ್ ವಿರುದ್ಧ ಹಿಂದೂಗಳು ಕೆರಳುತ್ತಿದ್ದಾರೆ. ಹಿಂದೂಗಳ ರಕ್ತವನ್ನು ಮತಾಂಧರು ಹರಿಸುತ್ತಿದ್ದು, ಇದನ್ನು ಮರೆಮಾಚಿಸಲು ಈ ರೀತಿ ಪ್ರತಿಭಟನೆ ಮಾಡುತ್ತಿದ್ದಾರೆ. ನೇಹಾ ಹತ್ಯೆಯ ತನಿಖೆಯನ್ನು ಸಿಬಿಐಗೆ ಕೊಡದೆ ಸಿಐಡಿಗೆ ನೀಡಿ ಮುಚ್ಚಿಹಾಕುವ ಕೆಲಸ ಮಾಡುತ್ತಿದ್ದಾರೆ. ಅವರ ತಂದೆಯೇ ಲವ್ ಜಿಹಾದ್ ಹೇಳಿದ್ದಾರೆ. ಈ ಪ್ರಕರಣವನ್ನು ಸೂಕ್ತವಾಗಿ ತನಿಖೆ ಮಾಡಲು ಸಿಬಿಐಗೆ ವಹಿಸಬೇಕು ಎಂದು ಆರ್. ಅಶೋಕ್ ಆಗ್ರಹಿಸಿದರು.
“ಪಿಕ್ ಪಾಕೆಟ್ ಕಾಂಗ್ರೆಸ್” ಮತ್ತು “ಕನ್ನಡಿಗರ ಕೈಗೆ ಚಿಪ್ಪು” ಪೋಸ್ಟರ್ ಬಿಡುಗಡೆ
ಕೇಂದ್ರ ಸರ್ಕಾರದಿಂದ ಅನುದಾನ ತಾರತಮ್ಯ ನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ಆರೋಪಿಸುತ್ತಾ ಬಂದಿದ್ದ ಕಾಂಗ್ರೆಸ್ “ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಚೊಂಬು” ಎಂಬ ಜಾಹೀರಾತನ್ನು ಕೊಟ್ಟಿತ್ತು. ಈಗ ಇದಕ್ಕೆ ಪ್ರತಿಯಾಗಿ ಬಿಜೆಪಿ ಎರಡು ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದ್ದು, ಸತ್ಯ ಸಂಗತಿ ಮರೆಮಾಚಿ ಜನರನ್ನು ವಂಚಿಸುತ್ತಿರುವ ಕಾಂಗ್ರೆಸ್ ಮುಖವಾಡ ಬಯಲು ಮಾಡಲಾಗುತ್ತಿದೆ ಎಂದು ಹೇಳಿದೆ. ಈ ಸಂಬಂಧ “ಪಿಕ್ ಪಾಕೆಟ್ ಕಾಂಗ್ರೆಸ್” ಮತ್ತು “ಕನ್ನಡಿಗರ ಕೈಗೆ ಚಿಪ್ಪು” ಪೋಸ್ಟರ್‌ಗಳನ್ನು ಆರ್. ಅಶೋಕ್ ಬಿಡುಗಡೆ ಮಾಡಿದರು.
ಕಾಂಗ್ರೆಸ್ ಸರ್ಕಾರ ಚಿಪ್ಪು ಕೊಟ್ಟಿದೆ ಎಂಬ ಹಾಡು ಬಿಡುಗಡೆ ಮಾಡಿರುವ ಬಿಜೆಪಿ; ಇಲ್ಲಿದೆ ವಿಡಿಯೊ
ಚಿಪ್ಪು….ಚಿಪ್ಪು….ಚಿಪ್ಪು
— BJP Karnataka (@BJP4Karnataka) April 23, 2024
ಇದು ಕಾಂಗ್ರೆಸ್ ಚಿಪ್ಪು… pic.twitter.com/OTxPhaom7l
ಇದನನೂ ಓದಿ: CM Siddaramaiah: ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ; ಮೋದಿ, ಅಮಿತ್ ಶಾಗೆ ಗೋ ಬ್ಯಾಕ್ ಘೋಷಣೆ
ಚುನಾವಣಾ ಆಯೋಗಕ್ಕೆ ದೂರು
ವಿಧಾನಸೌಧದಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಅವಕಾಶ ನೀಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪ್ರತಿಭಟಿಸಿದ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ವಿಧಾನಸೌಧದ ಒಳಗೆ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ವಿರೋಧಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಈಗ ವಿಧಾನಸೌಧದ ಮುಂಭಾಗ ಕಾಂಗ್ರೆಸ್ ನಾಯಕರು ಪ್ರತಿಭಟಿಸಲು ಅವಕಾಶ ಕೊಟ್ಟ ಮುಖ್ಯ ಕಾರ್ಯದರ್ಶಿಯ ವಿರುದ್ಧ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ದೂರ ನೀಡಲಾಗಿದೆ. ವಿಧಾನಸೌಧವನ್ನು ಈಗಾಗಲೇ ಮೂರು ನಾಲ್ಕು ಬಾರಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರ್.ಅಶೋಕ ದೂರಿದರು.