ಬೆಂಗಳೂರು: ಲೋಕಸಭಾ ಚುನಾವಣೆಗೆ (LoK Sabha Election 2024) ಭರದ ಸಿದ್ಧತೆ ನಡೆಯುತ್ತಿದೆ. ಇನ್ನೇನು ಚುನಾವಣೆ ಸಮೀಪ ಬರುತ್ತಿದೆ. ದಿನಾಂಕ ಘೋಷಣೆ ಇನ್ನೇನು ಆಗಲಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿವೆ. ಈಗಾಗಲೇ ಬಿಜೆಪಿ ಎಲ್ಲ ಪಕ್ಷಗಳಿಗಿಂತ ಮೊದಲು ವಿವಿಧ ರಾಜ್ಯಗಳ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಮುಂಚೂಣಿಯಲ್ಲಿದ್ದು, ಈಗ 2ನೇ ಪಟ್ಟಿಯನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಇದರಲ್ಲಿ ಕರ್ನಾಟಕದ (BJP Karnataka) ಅಭ್ಯರ್ಥಿಗಳ ಪಟ್ಟಿ ಸಹ ಇರಲಿದೆ ಎನ್ನಲಾಗಿದ್ದು, ಇಂದು (ಬುಧವಾರ – ಮಾ. 6) ನವದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಫೈನಲ್ ಮಾಡಲಾಗುವುದು. ಜತೆಗೆ ಜೆಡಿಎಸ್‌ಗೆ (JDS Karnataka) ಯಾವೆಲ್ಲ ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎಂಬುದು ಸಹ ತೀರ್ಮಾನ ಆಗಲಿದೆ. ಇನ್ನು ಬಿಜೆಪಿಯ 17 ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿದೆ ಎಂದು ತಿಳಿದುಬಂದಿದೆ.
ನವದೆಹಲಿಯಲ್ಲಿ ಬೀಡು ಬಿಟ್ಟಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಫೈನಲ್ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರದ ನಾಯಕರ ಜತೆಗೆ ಇಂದು ಸಭೆ ಇದೆ. ವರಿಷ್ಠರ ಜತೆ 28 ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಯಲಿದೆ. ಜೆಡಿಎಸ್‌ಗೆ ಎಷ್ಟು ಸ್ಥಾನ ಬಿಟ್ಟು ಕೊಡಬೇಕು ಎಂಬುದನ್ನು ಹೈಕಮಾಂಡ್ (BJP High Command) ನಿರ್ಧಾರ ಮಾಡಲಿದೆ. ಇನ್ನು ವಿಧಾನಸಭೆಯಲ್ಲಿ ಸೋತ ನಾಯಕರು ಸಹ ಈ ಬಾರಿ ಟಿಕೆಟ್‌ಗೆ ಲಾಬಿ ನಡೆಸುತ್ತಿದ್ದು, ಅವರಿಗೆ ಟಿಕೆಟ್ ಕೊಡುವ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ. ಶೀಘ್ರದಲ್ಲಿ ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಆಗಲಿದೆ.
ರಾಜ್ಯ ಬಿಜೆಪಿಯ 17 ಅಭ್ಯರ್ಥಿಗಳ ಪಟ್ಟಿ ಫೈನಲ್; ಯಾರಿಗೆ, ಏಕೆ ಟಿಕೆಟ್?
ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ
ಯುವ ಸಂಸದರಾಗಿರುವ ತೇಜಸ್ವಿ ಸೂರ್ಯ ಕ್ಷೇತ್ರದ ಅಭಿವೃದ್ಧಿಯಲ್ಲಿ ಮುಂದಿದ್ದಾರೆ. ಅಲ್ಲದೆ, ಸಂಸತ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿಕೆ ಇವರಿಗೆ ಪ್ಲಸ್ ಆಗಿದೆ.
ಬೆಂಗಳೂರು ಕೇಂದ್ರ – ಪಿಸಿ ಮೋಹನ್
ಮೂರು ಬಾರಿ ಬೆಂಗಳೂರು ಕೇಂದ್ರದಿಂದ ಸಂಸದರಾಗಿದ್ದಾರೆ. ಎಲ್ಲರೂ ಒಪ್ಪುವ ರೀತಿ ಕೆಲಸ ಮಾಡಿದ್ದಾರೆ. ಯಾವುದೇ ವಿವಾದವನ್ನು ಮಾಡಿಕೊಂಡಿಲ್ಲ. ಕ್ಷೇತ್ರದ ಅನುದಾನವನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ.
ಶಿವಮೊಗ್ಗ – ಬಿ.ವೈ. ರಾಘವೇಂದ್ರ
ಕ್ಷೇತ್ರದಲ್ಲಿ ನಡೆಯುತ್ತಿರುವ ನಿರಂತರ ಅಭಿವೃದ್ಧಿ ಕೆಲಸದ ಜತೆಗೆ ಬಿ.ವೈ. ರಾಘವೇಂದ್ರ ಬಗ್ಗೆ ಕ್ಷೇತ್ರದಲ್ಲಿ ಒಳ್ಳೆಯ ಅಭಿಪ್ರಾಯ ಇದೆ. ಅಲ್ಲದೆ, ಉತ್ತಮ ಸಂಘಟನಕಾರ ಎಂಬ ಖ್ಯಾತಿ ಇವರಿಗೆ ಪ್ಲಸ್ ಆಗಿದೆ.
ಉಡುಪಿ ಚಿಕ್ಕಮಗಳೂರು – ಶೋಭಾ ಕರಂದ್ಲಾಜೆ
ಉಡುಪಿ ಚಿಕ್ಕಮಗಳೂರು ಸಂಸದೆಯಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಣೆ ಮಾಡಿದ ಖ್ಯಾತಿ. ಕೇಂದ್ರ ಸಚಿವೆಯಾಗಿಯೂ ಸಕ್ಸಸ್ ಆಗಿದ್ದಾರೆ. ಈ ಮಧ್ಯೆ ಕ್ಷೇತ್ರದಲ್ಲಿ ನಡೆದಿದ್ದ ಗೋ ಬ್ಯಾಕ್ ಅಭಿಯಾನದಿಂದ ಅಲ್ಪ ಗೊಂದಲ ಏರ್ಪಟ್ಟಿತ್ತು. ಆದರೆ, ಇದರಿಂದ ಹಿಂದೆ ಸ್ಥಳೀಯ ಕೆಲವು ಬಿಜೆಪಿ ನಾಯಕರೇ ಇರುವ ಗುಮಾನಿ ಹಿನ್ನೆಲೆಯಲ್ಲಿ ಶೋಭಾಗೆ ಟಿಕೆಟ್ ಪಕ್ಕಾ ಎನ್ನಲಾಗುತ್ತಿದೆ.
ಹುಬ್ಬಳ್ಳಿ ಧಾರವಾಡ – ಪ್ರಹ್ಲಾದ ಜೋಶಿ
ಕೇಂದ್ರದಲ್ಲಿ ಸಚಿವರಾಗಿ ಉತ್ತಮವಾಗಿ ಕಾರ್ಯನಿರ್ವಹಣೆ. ಕ್ಷೇತ್ರದಲ್ಲಿ ನಿರಂತರ ಅಭಿವೃದ್ಧಿ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ಕರ್ನಾಟಕ ಮತ್ತು ಕೇಂದ್ರದ ನಡುವೆ ಕೊಂಡಿ ರೀತಿಯಲ್ಲಿ ಕೆಲಸ ಮಾಡುತ್ತಿರುವುದರ ಜತೆಗೆ ಬಿಜೆಪಿ ಸಂಘಟನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.
ಜಿ.ಎಂ ಸಿದ್ದೇಶ್ವರ – ದಾವಣಗೆರೆ ಸಂಸದ
ದಾವಣಗೆರೆಯಲ್ಲಿ ಆಗಿರುವ ಅಭಿವೃದ್ಧಿ ಕೆಲಸವೇ ಶ್ರೀರಕ್ಷೆಯಾಗಲಿದೆ. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರನ್ನು ಹೊರತುಪಡಿಸಿದರೆ ಬಹುತೇಕ ನಾಯಕರ ಬೆಂಬಲ ಇವರಿಗೆ ಇದೆ. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಇವರಾಗಿದ್ದಾರೆ.
ಪಿ.ಸಿ. ಗದ್ದಿಗೌಡರ್ – ಬಾಗಲಕೋಟೆ
ಬಾಗಲಕೋಟೆಯಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ ಆಕಾಂಕ್ಷಿಯಾಗಿದ್ದರು. ಆದರೆ, ಪಿ.ಸಿ. ಗದ್ದಿಗೌಡರ್ ಅವರಿಗೆ ಟಿಕೆಟ್ ಖಚಿತ ಎನ್ನಲಾಗಿದೆ. ಕೆಲ ಕಡೆ ಕಾರ್ಯಕರ್ತರ ಅಸಮಾಧಾನ ಇದ್ದರೂ ಕ್ಷೇತ್ರದ ಅಭಿವೃದ್ಧಿ ಮತ್ತು ಸಂಘಟನೆಯಲ್ಲಿ ಹಿಂದೆ ಬಿದ್ದಿಲ್ಲ.
ಮೈಸೂರು – ಪ್ರತಾಪ್ ಸಿಂಹ
ಉತ್ತಮ ಸಂಘಟನೆಯನ್ನು ಮಾಡಿಕೊಂಡು ಬಂದಿರುವ ಪ್ರತಾಪ್ ಸಿಂಹ ಕ್ಷೇತ್ರದ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲ. ಅಲ್ಲದೆ, ಕೇಂದ್ರ ಸರ್ಕಾರದ ಸಾಧನೆ ಬಗ್ಗೆ ನಿರಂತರವಾಗಿ ಪ್ರಚಾರವನ್ನು ಮಾಡಿಕೊಂಡು ಬರುವುದರ ಜತೆಗೆ ಸಂಸತ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದು ಸಹ ಇವರಿಗೆ ಪ್ಲಸ್ ಆಗಿದೆ.
ಕಲಬರಗಿ – ಡಾ. ಉಮೇಶ್ ಜಾದವ್
ಕಾಂಗ್ರೆಸ್‌ನ ಭದ್ರಕೋಟೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ ಕೀರ್ತಿ ಡಾ. ಉಮೇಶ್ ಜಾದವ್ ಅವರದ್ದಾಗಿದೆ. ಅಪ್ಪ – ಮಗ ಇಬ್ಬರೂ ಈಗ ಸಂಘಟನೆಯಲ್ಲಿ ಸಕ್ರಿಯವಾಗಿದ್ದಾರೆ. ಹೀಗಾಗಿ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಘಟನೆಯನ್ನು ಚುರುಕು ಮಾಡಿದ್ದಾರೆ. ಹೀಗಾಗಿ ಈ ಬಾರಿಯೂ ಇವರಿಗೇ ಟಿಕೆಟ್ ನೀಡುವ ಮನಸ್ಸನ್ನು ಹೈಕಮಾಂಡ್ ಮಾಡಿದೆ.
ಇದನ್ನೂ ಓದಿ: Text Book Revision: ಪಠ್ಯ ಪರಿಷ್ಕರಣೆಯಲ್ಲಿ ಸನಾತನ ಧರ್ಮಕ್ಕೆ ‘ಸೂಕ್ತ ವಿವರಣೆ’ ನೀಡಿದ್ದೇವೆ: ಸಿಎಂ ಸಿದ್ದರಾಮಯ್ಯ
ಬೀದರ್ – ಭಗವಂತ ಖೂಬಾ
ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿರುವ ಭಗವಂತ ಖೂಬಾ ಜಿಲ್ಲೆಯಲ್ಲಿ ನಿರಂತರವಾಗಿ ಸಂಘಟನೆ ಮಾಡಿಕೊಂಡು ಬರುತ್ತಿದ್ದಾರೆ. ಶಾಸಕ ಪ್ರಭು ಚೌವ್ಹಾನ್ ಅವರನ್ನು ಹೊರತುಪಡಿಸಿದರೆ ಪಕ್ಷದ ಕಾರ್ಯಕರ್ತರು ಮತ್ತು ಜನಪ್ರತಿನಿಧಿಗಳ ಬೆಂಬಲ ಇವರಿಗೆ ಇದೆ. ಕೇಂದ್ರದ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಇವರು ಸಹ ಮುಂಚೂಣಿಯಲ್ಲಿದ್ದಾರೆ.