ಚಿಕ್ಕಬಳ್ಳಾಪುರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ (Chikkaballapur Lok Sabha constituency) ಅಭೂತಪೂರ್ವವಾಗಿ ರಕ್ಷಾ ರಾಮಯ್ಯ (Raksha Ramayya) ಗೆಲ್ಲುತ್ತಾರೆ. ಅಲ್ಲದೆ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಭವಿಷ್ಯ ನುಡಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ನಡೆದ ಬೃಹತ್ ರೋಡ್ ಶೋ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನೀವೇ ತಿರಸ್ಕರಿಸಿದ ಎನ್‌ಡಿಎ ಅಭ್ಯರ್ಥಿ ಸುಧಾಕರ್ ಮತ್ತೆ ಪ್ರಭಾವ ಬಳಸಿ ಲೋಕಸಭೆಗೆ ನಿಂತಿದ್ದಾರೆ. ಇವರನ್ನು ಈ ಬಾರಿಯೂ ಸೋಲಿಸಿದರೆ ನಿಮ್ಮ ಮತಕ್ಕೆ ಹೆಚ್ಚು ಗೌರವ ಬರುತ್ತದೆ ಎಂದು ಕರೆ ನೀಡಿದರು.
ಭ್ರಷ್ಟಾಚಾರಿ ಎನ್ನುವ ಕಾರಣಕ್ಕೇ ಇಲ್ಲಿಯ ಜನತೆ ಸುಧಾಕರ್ ಅವರನ್ನು ಸೋಲಿಸಿದ್ದೀರಿ. ಇವರ ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಇವರ ಭ್ರಷ್ಟಾಚಾರ ಸಾಬೀತಾಗುತ್ತದೆ. ಬಳಿಕ ಸುಧಾಕರ್ ಎಲ್ಲಿಗೆ ಹೋಗಬೇಕೋ ಅಲ್ಲಿಗೇ ಹೋಗ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಜನತಾ ನ್ಯಾಯಾಲಯದಲ್ಲಿ ಶಿಕ್ಷೆ ಕೊಡಿ
ಎನ್‌ಡಿಎ ಅಭ್ಯರ್ಥಿ ಸುಧಾಕರ್ ಅವರಿಗೆ ಜನತಾ ನ್ಯಾಯಾಲಯದಲ್ಲಿ ನೀವೂ ಶಿಕ್ಷೆ ಕೊಡಬೇಕು. ಶಿಕ್ಷೆ ಕೊಟ್ಟರೆ ಮಾತ್ರ ಕ್ಷೇತ್ರದ ಜನತೆಯ ಹೆಸರಿನಲ್ಲಿ ಮಾಡಿದ ಮೋಸಕ್ಕೆ ಮತ್ತು ಮಂತ್ರಿಯಾಗಿ ಮಾಡಿದ ಭ್ರಷ್ಟಾಚಾರಕ್ಕೆ ತಕ್ಕ ಶಾಸ್ತಿ ಮಾಡಿದಂತಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: Jai Shree Ram slogan: ಹಿಂದೂ ವಿರೋಧಿ ಕೃತ್ಯಗಳಿಗೆ ರಾಹುಲ್ ಗಾಂಧಿ ಕುಮ್ಮಕ್ಕು: ಜೋಶಿ ಕಿಡಿ
ಈ ಬಾರಿ ಕೇಂದ್ರದಲ್ಲೂ ಬಿಜೆಪಿ ಅಧಿಕಾರಕ್ಕೆ ಬರೋದಿಲ್ಲ
ನಮ್ಮ ಸರ್ಕಾರ ರಾಜ್ಯದಲ್ಲಿ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ರೂಪಾಯಿ ನೀಡುತ್ತಿದೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತೀ ಅರ್ಹ ಕುಟುಂಬದ ಮಹಿಳೆಯರ ಅಕೌಂಟಿಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಜಮೆ ಆಗುತ್ತದೆ. ರಾಜ್ಯ ಸರ್ಕಾರ ಕೊಡುವ ಪ್ರತಿ ತಿಂಗಳ 2 ಸಾವಿರ ರೂಪಾಯಿ ಕೂಡ ಇದಕ್ಕೆ ಸೇರಿ ವರ್ಷಕ್ಕೆ ಒಂದು ಲಕ್ಷದ 24 ಸಾವಿರ ರೂಪಾಯಿ ಪ್ರತಿ ಕುಟುಂಬಗಳ ಖಾತೆಗೆ ಬರುತ್ತದೆ ಎಂದು ಸಿದ್ದರಾಮಯ್ಯ ಘೋಷಿಸಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಡೀ ದೇಶದ ಅಷ್ಟೂ ರೈತರ ಸಾಲ ಮನ್ನಾ ಮಾಡಲಾಗುವುದು. ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಲಕ್ಷ ನಿರುದ್ಯೋಗ ಭತ್ಯೆ ಸಿಗುತ್ತದೆ. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಚಿತವಾಗಿ ನೀಡಲಾಗುವುದು. ಪ್ರಧಾನಿ ಮೋದಿಯವರ ಕೆಟ್ಟ ನೀತಿಯಿಂದಾಗಿ ಹದಗೆಟ್ಟಿರುವ ಭಾರತದ ಆರ್ಥಿಕತೆಯನ್ನು ಸರಿ ದಾರಿಗೆ ತಂದು ಜನರ ಪರವಾದ ಆರ್ಥಿಕತೆಯನ್ನು ಪುನರ್ ಸ್ಥಾಪಿಸಲಾಗುವುದು. ನೂರಕ್ಕೆ ನೂರು ಈ ಬಾರಿ ರಕ್ಷಾ ರಾಮಯ್ಯ ಗೆಲ್ಲುತ್ತಾರೆ. ಇವರಿಗೆ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಆಶೀರ್ವಾದ ಇರಲಿ ಎಂದು ಕೋರಿದರು.