Site icon Vistara News

Lok Sabha Election 2024: 28 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ದಿಗ್ವಿಜಯ; ಈ ಆತ್ಮವಿಶ್ವಾಸಕ್ಕೆ ಕಾರಣ ಬಿಚ್ಚಿಟ್ಟ ವಿಜಯೇಂದ್ರ

Lok Sabha Election 2024 BJP wins 28 Lok Sabha seats says BY Vijayendra

ಬೆಂಗಳೂರು: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ – ಜೆಡಿಎಸ್‌ ಮೈತ್ರಿ (BJP JDS Alliance) ಪಕ್ಷಗಳು ಕರ್ನಾಟಕದ 28ಕ್ಕೆ 28 ಕ್ಷೇತ್ರಗಳಲ್ಲೂ ಜಯ ಸಾಧಿಸಲಿದೆ ಎಂದು ಹೇಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra), ಇದಕ್ಕೆ ಹಲವು ಕಾರಣವನ್ನೂ ಬಿಚ್ಚಿಟ್ಟಿದ್ದಾರೆ. ನರೇಂದ್ರ ಮೋದಿ (PM Narendra Modi) ನೇತೃತ್ವದ ಕೇಂದ್ರ ಸರ್ಕಾರವು ಸಾಕಷ್ಟು ಜನಪರ ಕೆಲಸಗಳನ್ನು ಕಾರ್ಯಾನುಷ್ಠಾನ ಮಾಡಿವೆ. ಜನರು ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯಾಗಿ ನೋಡಬೇಕು ಎಂದು ಬಯಸಿದ್ದಾರೆ. ಹೀಗಾಗಿ ಬಿಜೆಪಿ ಗೆಲುವನ್ನು ತಡೆಯಲು ಯಾವ ದುಷ್ಟ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ಬೆಂಗಳೂರು ಕೇಂದ್ರ ಜಿಲ್ಲೆ ಲೋಕಸಭಾ ಕ್ಷೇತ್ರದ ಚುನಾವಣಾ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಬಿ.ವೈ. ವಿಜಯೇಂದ್ರ ಅವರು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಅಲ್ಲದೆ, ಸಂಸದ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ (Bangalore Central Lok Sabha constituency) ಅಭ್ಯರ್ಥಿ ಪಿ.ಸಿ. ಮೋಹನ್ (PC Mohan) ಅವರ ಗೆಲುವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ನಿನ್ನೆಯಷ್ಟೇ (ಶನಿವಾರ – ಮಾ. 17) ಚುನಾವಣೆ ಘೋಷಣೆಯಾಗಿದೆ. ಇಂದು ಕಾರ್ಯಾಲಯವನ್ನು ಉದ್ಘಾಟನೆ ಮಾಡಲಾಗಿದೆ. ಇಲ್ಲಿ ಸೇರಿರುವ ಜನರನ್ನು ನೋಡಿದರೆ ನಮಗೆ ವಿಜಯೋತ್ಸವದ ರೀತಿ ಕಾಣಿಸುತ್ತಿದೆ. ಈ ಹಿಂದೆ 2014ರಲ್ಲಿ ಯುಪಿಎ ಅವಧಿಯ ಭ್ರಷ್ಟಾಚಾರದ ಪುಸ್ತಕ ತೆಗೆದುಕೊಂಡು ಚುನಾವಣೆಗೆ ಹೋಗಿದ್ದೆವು. ಈಗ ಹತ್ತು ವರ್ಷಗಳ ನರೇಂದ್ರ ಮೋದಿಯವರ ಆಡಳಿತದ ಅಭಿವೃದ್ಧಿ ಯೋಜನೆಗಳ ಪಟ್ಟಿಯನ್ನು ತೆಗೆದುಕೊಂಡು ಹೋಗುತ್ತಿದ್ದೇವೆ. ಹತ್ತು ವರ್ಷಗಳ ಹಲವು ಯೋಜನೆಗಳನ್ನು ಜನರ ಮುಂದಿಡುತ್ತೇವೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

ಕಾರ್ಯಕರ್ತರಿಗೆ ಕರೆ

ನರೇಂದ್ರ ಮೋದಿ ಅವರು ಮತ್ತೊಮ್ಮೆ ಈ ದೇಶದ ಪ್ರಧಾನಿ ಆಗಬೇಕು. ಈ ನಿಟ್ಟಿನಲ್ಲಿ ಈ ಪಕ್ಷದ ಕಾರ್ಯಕರ್ತರ ಜವಾಬ್ದಾರಿ ಸಾಕಷ್ಟು ಇದೆ. ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿಜೆಪಿ ಪರ‌ ಮತಯಾಚನೆ ಮಾಡೋಣ. ಸುಳ್ಳು ಭರವಸೆ ನೀಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡೋಣ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

2024ರ ಲೋಕಸಭಾ ಚುನಾವಣೆ ದಿನಾಂಕ ಈಗ ಅಧಿಕೃತವಾಗಿ ಘೋಷಣೆಯಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡುವುದನ್ನು ಯಾವ ದುಷ್ಟಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ. ಪಿ.ಸಿ ಮೋಹನ್ ನಾಲ್ಕನೇ ಬಾರಿ ಆಯ್ಕೆಯಾಗುವುದು ನಿಶ್ಚಿತ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

ಬಿ.ವೈ. ವಿಜಯೇಂದ್ರಗೆ ಇಷ್ಟು ಆತ್ಮವಿಶ್ವಾಸ ಯಾಕೆ ಎಂದು ಕೇಳಬಹುದು. ಪ್ರಧಾನಿ ನರೇಂದ್ರ ಮೋದಿ ಅವರು ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಅಂತ ಕೆಲಸ ಮಾಡುತ್ತಿದ್ದಾರೆ. ಅವರು ಜನಾನುರಾಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಅನ್ನೋದನ್ನು ಬದಿಗಿಟ್ಟು, ರಾಜಕಾರಣದಲ್ಲಿ ಇಂತಹ ವ್ಯಕ್ತಿಯನ್ನು ಬೆಳೆಸುವುನ್ನು ಮಾಡಬೇಕು. ಕೇಂದ್ರದ ಅಭಿವೃದ್ಧಿ ದೃಷ್ಟಿಯಿಂದ ರಾತ್ರಿಯನ್ನೂ, ಹಗಲು ಅಂತ ತಿಳಿದು ಕೆಲಸ ಮಾಡಬೇಕು ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

ಮೋದಿ ಕಾರ್ಯಕ್ರಮ ನೋಡಿದರೆ ಸಾಕು; ಸಿಎಂಗೆ ತಿರುಗೇಟು

ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಏನು ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಮೋದಿ ಅವರು ಬೆಂಗಳೂರು ಅಭಿವೃದ್ಧಿಗೆ ಎಷ್ಟು ಹಣ ಕೊಟ್ಟಿದ್ದಾರೆ ಅಂತ ನಾನು ಹೇಳುವುದಿಲ್ಲ. ಮೋದಿ ಅವರ ಕಾರ್ಯಕ್ರಮಗಳನ್ನು ನೋಡಿದರೆ ಜನರಿಗೆ ಅದು ತಿಳಿಯುತ್ತದೆ. ಅದಕ್ಕೆ ಉತ್ತರ ರಾಜ್ಯದ 28ಕ್ಕೆ 28 ಕ್ಷೇತ್ರದಲ್ಲಿ ಜನ ಉತ್ತರ ಕೊಡುತ್ತಾರೆ ಎಂದು ಬಿ.ವೈ. ವಿಜಯೇಂದ್ರ ತಿರುಗೇಟು ನೀಡಿದರು.

ಇದನ್ನೂ ಓದಿ: BBMP Property Tax Hike: ಬೆಂಗಳೂರು ಜನರಿಗೆ ಬಿಗ್‌ ರಿಲೀಫ್; ಬಿಬಿಎಂಪಿ ಆಸ್ತಿ ತೆರಿಗೆ ಜಾರಿಗೆ ಬ್ರೇಕ್!

ಶಾಸಕರಾದ ಎಸ್. ಸುರೇಶ್ ಕುಮಾರ್, ಎಸ್. ರಘು, ಮಂಜುಳಾ ಲಿಂಬಾವಳಿ, ಶರಣು ತಳ್ಳಿಕೇರಿ ಹಾಗೂ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಸೇರಿದಂತೆ ಮಾಜಿ ಪಾಲಿಕೆ ಸದಸ್ಯರು, ಪದಾಧಿಕಾರಿಗಳು, ಕಾರ್ಯಕರ್ತರು ಭಾಗಿಯಾಗಿದ್ದಾರೆ.

Exit mobile version