ಚಿಕ್ಕಮಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಶುಕ್ರವಾರ (ಏಪ್ರಿಲ್ 26) ಮೊದಲ ಹಂತದ ಮತದಾನ (First phase of polling) ಮುಕ್ತಾಯಗೊಂಡಿದೆ. ಆದರೆ, ಚಿಕ್ಕಮಗಳೂರು ತಾಲೂಕಿನ ಉಜ್ಜಿನಿ ಗ್ರಾಮದ ಬಳಿ ಬಿಜೆಪಿ ಕಾರ್ಯಕರ್ತರ ನಡುವೆಯೇ ಮಾರಾಮಾರಿಯಾಗಿದೆ. ಬಿಜೆಪಿ ಮುಖಂಡ ಪ್ರವೀಣ್ ಖಾಂಡ್ಯಾ ಎಂಬುವವರ ಮೇಲೆ ಹಲ್ಲೆಯಾದ ವರದಿಯಾಗಿದೆ.
ಮತದಾನದ ವೇಳೆ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿಯಾಗಿದ್ದು, ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಿಜೆಪಿ ಕಾರ್ಯಕರ್ತರಿಂದಲೇ ಪ್ರವೀಣ್ ಖಾಂಡ್ಯ ಮೇಲೆ ಹಿಗ್ಗಾಮುಗ್ಗ ಥಳಿತವಾಗಿದೆ. ಪ್ರವೀಣ್ ತಲೆಗೆ ಏಟಾಗಿದ್ದು, ರಕ್ತ ಸುರಿದಿದೆ. ಕೂಡಲೇ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಏಕೆ ಗಲಾಟೆ?
ಚಿಕ್ಕಮಗಳೂರು ತಾಲೂಕಿನ ಉಜ್ಜಿನಿ ಗ್ರಾಮದ ಬಳಿ ಘಟನೆ ನಡೆದಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಪ್ರವೀಣ್ ಖಾಂಡ್ಯ ಕಾಂಗ್ರೆಸ್‌ನಿಂದ ಬಿಜೆಪಿ ಸೇರ್ಪಡೆಯಾಗಿದ್ದರು. ಆದರೆ, ಲೋಕಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಪರ ಮತ ಚಲಾಯಿಸಲು ಮತದಾರರಿಗೆ ಪ್ರೇರೇಪಿಸಿದ್ದಾರೆ ಎಂಬ ವಿಷಯವು ಗಲಾಟೆಗೆ ಕಾರಣವಾಗಿದೆ. ಬಿಜೆಪಿ ಕಾರ್ಯಕರ್ತರು ಹಾಗೂ ಬಿಜೆಪಿ ಮುಖಂಡರು ಆಕ್ರೋಶಗೊಂಡು ಪ್ರವೀಣ್ ಬಳಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಹೊಡೆದಾಟ ಆಗಿದೆ.
ಬಾಳೆಹೊನ್ನೂರು ವ್ಯಾಪ್ತಿಯ ಬೂತ್ ಮಟ್ಟದಲ್ಲಿ ಖಾಂಡ್ಯ ಪ್ರವೀಣ್ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಿಜೆಪಿ ಕಾರ್ಯಕರ್ತರಾದ ಸೃಜನ್, ಸಚಿನ್, ಅಭಿ, ಶಂಕರ್ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಹೃದಯಾಘಾತಕ್ಕೆ ಮೂವರು ಸಾವು
ತುಮಕೂರು/ ಕೊಡಗು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಶುಕ್ರವಾರ (ಏಪ್ರಿಲ್ 26) ಮೊದಲ ಹಂತದ ಮತದಾನಕ್ಕೆ (First phase of polling) ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಜನರು ಬಿಸಿಲನ್ನೂ ಲೆಕ್ಕಿಸದೆ ಮತದಾನ ಮಾಡುತ್ತಿದ್ದಾರೆ. ಇದೇ ವೇಳೆ ತುಮಕೂರಿನಲ್ಲಿ ಮತ ಚಲಾಯಿಸಿ ಬಂದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮತ್ತೊಂದು ಕಡೆ ಕೊಡಗಿನ ವಿರಾಜಪೇಟೆಯಲ್ಲಿಯೂ ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದಾಗ ಹೃದಯಾಘಾತವಾಗಿ ವ್ಯಕ್ತಿಯೊಬ್ಬರು ಇಹಲೋಕ ತ್ಯಜಿಸಿದ್ದಾರೆ.
ತುಮಕೂರಲ್ಲಿ ಹೃದಯಾಘಾತಕ್ಕೆ ವ್ಯಕ್ತಿ ಬಲಿ
ತುಮಕೂರು ನಗರದ ಎಸ್.ಎಸ್.ಪುರಂನಲ್ಲಿ ಮತ ಚಲಾಯಿಸಿ ಮನೆಗೆ ಬಂದಿದ್ದ ರಮೇಶ್ (54) ಎಂಬುವವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಬಟ್ಟೆ ಅಂಗಡಿ ವ್ಯಾಪಾರಿಯಾಗಿದ್ದ ರಮೇಶ್ ಅವರು ಶುಕ್ರವಾರ ಬೆಳಗ್ಗೆ ನಗರದ ಎಸ್.ಎಸ್. ಪುರಂನಲ್ಲಿರುವ ಎಸ್‌ವಿಕೆ ಸ್ಕೂಲ್‌ನಲ್ಲಿರುವ ಮತಗಟ್ಟೆ ಸಂಖ್ಯೆ 149ರಲ್ಲಿ ಪತ್ನಿಯ ಜತೆ ಹೋಗಿ ಮತ ಚಲಾಯಿಸಿ ಬಂದಿದ್ದರು. ಮನೆಗೆ ಬಂದವರಿಗೆ ತೀವ್ರ ಎದೆ ನೋವು ಬಂದಿದೆ. ಹೀಗಾಗಿ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕೊಡಗಿನಲ್ಲಿ ಮತದಾನಕ್ಕೆ ನಿಂತಿದ್ದ ವ್ಯಕ್ತಿ ಹೃದಯಾಘಾತಕ್ಕೆ ಬಲಿ
ವೀರಾಜಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಗ್ರಾಮದ ಮತಗಟ್ಟೆ ಸಮೀಪ ಮತ ಹಾಕಲು ಸರತಿ ಸಾಲಿನಲ್ಲಿ ನಿಂತಿದ್ದ ಪದಾರ್ಥಿ ಮನೋಹರ (58) ಎಂಬುವವರು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.
ಆಕ್ಸಿಜನ್ ಸಹಾಯದಿಂದ ಮತ ಚಲಾಯಿಸಿದ ಮಹಿಳೆ; ವೋಟು ಹಾಕಿ ಕುಸಿದು ಮೃತಪಟ್ಟ ವೃದ್ಧೆ!
ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಶುಕ್ರವಾರ (ಏಪ್ರಿಲ್ 26) ಮೊದಲ ಹಂತದ ಮತದಾನ (First phase of polling) ನಡೆಯುತ್ತಿದ್ದು, ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ವೃದ್ಧೆಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರೂ, ಆಕ್ಸಿಜನ್ ಸಮೇತ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ್ದಾರೆ. ಇನ್ನು ಮೈಸೂರಿನ ಹುಣಸೂರಿನಲ್ಲಿ ವೃದ್ಧೆಯೊಬ್ಬರು ಮತ ಚಲಾಯಿಸಿ ಮೃತಪಟ್ಟಿದ್ದಾರೆ.
ವೋಟು ಹಾಕಿ ಬಂದು ವೃದ್ಧೆ ನಿಧನ
ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದ (Mysore Lok Sabha constituency) ಹುಣಸೂರು ತಾಲೂಕಿನ ತಿಪ್ಪೂರು ಗ್ರಾಮದ ವೃದ್ಧೆಯೊಬ್ಬರು ತಿಪ್ಪೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 172ರಲ್ಲಿ ಮತ ಚಲಾವಣೆ ಮಾಡಿದ್ದಾರೆ. ಮತ ಹಾಕಿ ಹೊರ ಬರುತ್ತಿದ್ದಂತೆ ಅವರು ಕುಸಿದು ಮೃತಪಟ್ಟಿದ್ದಾರೆ.
ಹುಣಸೂರು ತಾಲೂಕಿನ ತಿಪ್ಪೂರು ಗ್ರಾಮದ ಪುಟ್ಟಮ್ಮ (90) ಮೃತರು. ಇವರು ಪ್ರತಿ ಚುನಾವಣೆಯಂತೆ ಈ ಬಾರಿಯೂ ತಮ್ಮ ಹಕ್ಕನ್ನು ತಪ್ಪದೇ ಚಲಾವಣೆ ಮಾಡಿದ್ದಾರೆ. ಮತ ಹಾಕಿ ಅದೇ ಖುಷಿಯಲ್ಲಿ ವಾಪಸಾಗುತ್ತಿದ್ದಾಗ ದಿಢೀರ್ ಕುಸಿದುಬಿದ್ದಿದ್ದು, ಅಲ್ಲಿಯೇ ಮೃತಪಟ್ಟಿದ್ದಾರೆ.
ಆಕ್ಸಿಜನ್ ಸಮೇತ ಹಕ್ಕು ಚಲಾಯಿಸಿದ ವೃದ್ಧೆ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ (Bangalore South Lok Sabha constituency) ಜಯನಗರದಲ್ಲಿ ವೃದ್ಧೆಯೊಬ್ಬರು ಆಕ್ಸಿಜನ್ ಸಹಾಯದಿಂದಲೇ ಮತಗಟ್ಟೆಗೆ ಬಂದು ಹಕ್ಕು ಚಲಾವಣೆ ಮಾಡಿದ್ದಾರೆ. 78 ವರ್ಷದ ಕಲಾವತಿ ಎಂಬುವವರೇ ಆಕ್ಸಿಜನ್ ಸಮೇತ ಹಕ್ಕು ಚಲಾಯಿಸಿದ ವೃದ್ಧೆಯಾಗಿದ್ದಾರೆ. ಕಲಾವತಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಇವರನ್ನು ಏಪ್ರಿಲ್ 23ರಂದು ಜಯನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಅವರನ್ನು ಆಂಬ್ಯುಲೆನ್ಸ್ ಮೂಲಕ ವೈದ್ಯಕೀಯ ಸಿಬ್ಬಂದಿ ಜತೆ ಕರೆತರಲಾಗಿದ್ದು, ಮತ ಚಲಾವಣೆಗೆ ಅವಕಾಶ ಕಲ್ಪಿಸಲಾಗಿತ್ತು. ಕೊನೆಗೂ ಅವರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.
ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ
ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ (First phase of polling) ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಜೆ.ಪಿ.ನಗರ 8ನೇ ಹಂತದ ಜಂಬೂ ಸವಾರಿ ದಿನ್ನೆಯಲ್ಲಿ ಮತ ಚಲಾಯಿಸಲು ಬಂದ ಮಹಿಳೆಯೊಬ್ಬರಿಗೆ ಹೃದಯ ಸ್ತಂಭನ (cardiac arrest) ಆಗಿದೆ. ಬಳಿಕ ಅಲ್ಲಿಯೇ ಮತ ಚಲಾಯಿಸಲು ಬಂದಿದ್ದರಿಂದ ಅವರ ಜೀವ ಉಳಿದಿದೆ.
ಜೆ.ಪಿ. ನಗರದ 8ನೇ ಹಂತದ ಜಂಬೂ ಸವಾರಿ ದಿನ್ನೆಯಲ್ಲಿ ಮಹಿಳೆಯೊಬ್ಬರು ಮತದಾನ ಮಾಡಲು ಬಂದಿದ್ದಾರೆ. ಅವರು ಆಯಾಸವಾಗಿದೆ ಎಂದು ಮತಗಟ್ಟೆಯಲ್ಲಿ ಇಟ್ಟಿದ್ದ ನೀರು ಕುಡಿಯಲು ಹೋಗಿದ್ದಾರೆ. ಅದೇ ವೇಳೆಗೆ ಅವರು ಕುಸಿದು ಬಿದ್ದಿದ್ದಾರೆ. ಅದೇ ಸಮಯದಲ್ಲಿ ಅಲ್ಲಿಗೆ ಬಂದಿದ್ದ ಬೊಮ್ಮಸಂದ್ರದ ನಾರಾಯಣ ಆರೋಗ್ಯ ಕೇಂದ್ರದ ಮೂತ್ರಪಿಂಡ ತಜ್ಞ ಡಾ. ಗಣೇಶ್ ಶ್ರೀನಿವಾಸ ಪ್ರಸಾದ್ ಅವರು ರಕ್ಷಣೆಗೆ ದಾವಿಸಿದ್ದಾರೆ.
ಇದನ್ನೂ ಓದಿ: Lok Sabha Election 2024: ಚಾಮರಾಜನಗರದಲ್ಲಿ ಮತ ಯಂತ್ರ ಪೀಸ್ ಪೀಸ್; ಮತಗಟ್ಟೆ ಧ್ವಂಸ, ಲಾಠಿ ಚಾರ್ಜ್!
ನಾಡಿಮಿಡಿತವನ್ನು ಪರಿಶೀಲಿಸಿದ ಡಾ. ಗಣೇಶ್ ಶ್ರೀನಿವಾಸ ಪ್ರಸಾದ್, ಪಲ್ಸ್ ರೇಟ್ ಕಡಿಮೆಯಾಗುತ್ತಿರುವುದನ್ನು ಗಮನಿಸಿದ್ದಾರೆ. ಆ ಸಮಯದಲ್ಲಿ ದೇಹ ಕೂಡ ಯಾವುದೇ ಸ್ಪಂದನೆಯನ್ನು ಮಾಡುತ್ತಿರಲಿಲ್ಲ. ಹೀಗಾಗಿ ಕೂಡಲೇ ಸಿಪಿಆರ್ ಮಾಡಿದ್ದು, ಪರಿಸ್ಥಿತಿಯು ಕೊಂಚ ಮಟ್ಟಿಗೆ ಸುಧಾರಿಸುವಂತೆ ಮಾಡಿದ್ದಾರೆ. ಚುನಾವಣಾ ಕರ್ತವ್ಯದಲ್ಲಿದ್ದವರು ಧಾವಿಸಿ ಜ್ಯೂಸ್ ನೀಡಿದ್ದಾರೆ. ಕೂಡಲೇ ಆಂಬ್ಯುಲೆನ್ಸ್‌ಗೆ ಕರೆ ಮಾಡಲಾಗಿದೆ. ಐದು ನಿಮಿಷದೊಳಗೆ ಮತಗಟ್ಟೆ ಬಳಿ ಆಂಬ್ಯುಲೆನ್ಸ್ ಬಂದಿದ್ದು, ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.