Site icon Vistara News

Lok Sabha Election 2024: ಕಾಂಗ್ರೆಸ್ 50 ಸ್ಥಾನ ಗೆದ್ದು ತೋರಿಸಲಿ: ಖರ್ಗೆ, ರಾಹುಲ್ ಗಾಂಧಿಗೆ ಬೊಮ್ಮಾಯಿ ಸವಾಲು

Lok Sabha Election 2024 Bommai challenges Kharge and Rahul Gandhi to let Congress win 50 seats

ಹಾವೇರಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಕಾಂಗ್ರೆಸ್‌ಗೆ ಅಬ್ ಕೀ ಬಾರ್ 50 ಪಾರ್ ಅಂತಾ ಹೇಳುವ ಧೈರ್ಯ ರಾಹುಲ್ ಗಾಂಧಿ (Rahul Gandhi), ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರಿಗೆ ಇದೆಯಾ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸವಾಲು ಹಾಕಿದ್ದಾರೆ.

ಹಾವೇರಿ ಲೋಕಸಭಾ ಕ್ಷೇತ್ರದ ಹಾನಗಲ್‌ನಲ್ಲಿನ ಕುಮಾರಸ್ವಾಮಿ ಮಠದ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಬಸವರಾಜ ಬೊಮ್ಮಾಯಿ, ರಾಜ್ಯ ಸರ್ಕಾರ ರೈತರಿಗಾಗಿ ಇಟ್ಟ ಹಣವನ್ನು ಗ್ಯಾರಂಟಿಗೆ ಹಾಕಿದ್ದಾರೆ. ಮತ್ತೆ ಸಿಎಂ ಸಿದ್ದರಾಮಯ್ಯ ರೈತರ ಬಗ್ಗೆ ದೊಡ್ಡ ಭಾಷಣ ಮಾಡುತ್ತಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಜಾತಿಗಣತಿ ಬಹಿರಂಗಪಡಿಸುತ್ತೇನೆ ಅಂತ ಹೇಳಿದರು. ಹೊರಗಡೆ ಬಂತಾ? ಈಗ ಈ ಸಂಬಂಧ ಕಾಂತರಾಜ್ ವರದಿಯನ್ನು ಸ್ವೀಕಾರ ಮಾಡಿದ್ದಾರೆ. ಈಗ ಬಹಿರಂಗ ಪಡಿಸಬಹುದಿತ್ತಲ್ವಾ? ಚುನಾವಣೆ ಲಾಭಕ್ಕಾಗಿ ವರದಿ ತೆಗೆದುಕೊಂಡಿದ್ದು ಜನರಿಗೆ ಗೊತ್ತಿದೆ. ಜಾತಿಗಳ ವಿಚಾರದಲ್ಲಿ ರಾಜ್ಯ ಸರ್ಕಾರ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಒಂದು ಕಾಳು ಅಕ್ಕಿಯನ್ನೂ ನೀಡಿಲ್ಲ

ಎಸ್ಸಿ – ಎಸ್‌ಟಿ ಜನರಿಗೆ ಮೀಸಲಾತಿ ಹೆಚ್ಚು ಮಾಡಿದ್ದು ನಾನು ಸಿಎಂ ಇದ್ದಾಗ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಒಂದು ಬಾರಿ ಮೋಸ ಮಾಡಬಹುದು. ಪದೇ ಪದೆ ಜನರಿಗೆ ಮತದಾತರಿಗೆ ಮೋಸ ಮಾಡಲು ಸಾಧ್ಯವಿಲ್ಲ. ಸಬ್ ಕಾ ಸಾಥ್ ಬಸ್ ಕಾ ವಿಕಾಸ ಅಂತಾ ನಾವೂ ಇದ್ದೇವೆ. ಕರ್ನಾಟಕದ 57 ಲಕ್ಷ ಕುಟುಂಬಗಳಿಗೆ 14 ಸಾವಿರ ಕೋಟಿ ರೂಪಾಯಿಯನ್ನು ಕಿಸಾನ್ ಸಮ್ಮಾನ್ ಮೂಲಕ ರೈತರ ಕುಟುಂಬಕ್ಕೆ ಕೇಂದ್ರ ಸರ್ಕಾರ ನೀಡಿದೆ. ಅನ್ನಭಾಗ್ಯ ಅಂತ ಹೇಳುತ್ತಾರೆ. ಒಂದು ಕಾಳು ಅಕ್ಕಿಯನ್ನೂ ರಾಜ್ಯ ಸರ್ಕಾರ ನೀಡುತ್ತಿಲ್ಲ. 1 ಕೋಟಿ ಕುಟುಂಬಗಳಿಗೆ ಕೇಂದ್ರ ಸರ್ಕಾರದಿಂದ 5 ಕೆಜೆ ಅಕ್ಕಿ ಬರುತ್ತಿದೆ. 11 ಲಕ್ಷ ಮನೆಗಳಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ನೀಡಲಾಗಿದೆ. ಕೇಂದ್ರ ಸರ್ಕಾರ ನಾಲ್ಕು ವರ್ಷದಲ್ಲಿ ಜನರಿಗೆ ವಿವಿಧ ಯೋಜನೆ ನೀಡಿದೆ. 30 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಯೋಜನೆ ನೀಡಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ನಾವು ಇಡೀ ದೇಶದಲ್ಲಿ 400 ಸ್ಥಾನಕ್ಕೂ ಹೆಚ್ವು ಗೆಲ್ಲುತ್ತೇವೆ

ದೇಶದಲ್ಲಿ ಶರವೇಗದಲ್ಲಿ ನ್ಯಾಷನಲ್ ಹೈವೆಯನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಪ್ರತಿ ಮಹಿಳೆಗೆ ವರ್ಷಕ್ಕೆ 1 ಲಕ್ಷ ರೂ. ಕೊಡುತ್ತೇವೆ ಎಂದು ಕಾಂಗ್ರೆಸ್ ಘೋಷಣೆ ಮಾಡಿದೆ‌. ಬೋಗಸ್ ಗ್ಯಾರಂಟಿಗಳನ್ನು ಕಾಂಗ್ರೆಸ್ ನಾಯಕರು ನೀಡುತ್ತಾರೆ. ಅವರು ಅಧಿಕಾರಕ್ಕೆ ಬರುವುದಿಲ್ಲ. ಅದಕ್ಕೆ ಈ ರೀತಿ ಯೋಜನೆಯನ್ನು ಘೋಷಣೆ ಮಾಡುತ್ತಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ನಾವು ಇಡೀ ದೇಶದಲ್ಲಿ 400 ಸ್ಥಾನಕ್ಕೂ ಹೆಚ್ವು ಗೆಲ್ಲುತ್ತೇವೆ. ಹಾನಗಲ್ ತಾಲೂಕಿನಿಂದ ಬದಲಾವಣೆ ಪ್ರಾರಂಭವಾಗಲಿ. ಸಿಎಂ ಉದಾಸಿ ಮತ್ತು ಅವರ ಪುತ್ರ ಶಿವಕುಮಾರ್‌ ಈ ಕ್ಷೇತ್ರದಲ್ಲಿ ತುಂಬಾ ಕೆಲಸ ಮಾಡಿದ್ದಾರೆ. ಉದಾಸಿ ಅವರ ಮಾರ್ಗದರ್ಶನದಲ್ಲಿ ನಾವು ನಡೆಯುತ್ತಿದ್ದೇವೆ ಎಂದು ಹೇಳಿದರು.

ಅಭಿವೃದ್ಧಿ ಶೂನ್ಯ

ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಕಾಂಗ್ರೆಸ್ ನಾಯಕರು, ಶಾಸಕರು ಜನರಿಗೆ ಮುಖ ತೋರಿಸಲು ಹಿಂದೇಟು ಹಾಕುತ್ತಿದ್ದಾರೆ. ಬರಗಾಲ ಬಂದಿದೆ, ಕುಡಿಯುವ ನೀರಿಗೆ ಒಂದಾದರೂ ಯೋಜನೆ ಮಾಡಿದ್ದಾರಾ? 800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬಕ್ಕೆ ಪರಿಹಾರ ನೀಡಿಲ್ಲ. ಜನರು ಈಗ ಕುಡಿಯುವ ನೀರಿನ ಗ್ಯಾರಂಟಿ ಕೊಡಿ ಅಂತ ಕೇಳುತ್ತಿದ್ದಾರೆ. ನೀರು ನೀಡದ ಸರ್ಕಾರದ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಜನ ಉತ್ತರ ನೀಡುತ್ತಾರೆ. ಸಿಎಂ ಸಿದ್ದರಾಮಯ್ಯ ಅವರು 1 ಲಕ್ಷ 5 ಸಾವಿರ ಕೋಟಿ ರೂ. ಸಾಲ ಮಾಡಿದ್ದಾರೆ. ಅದುವೇ ಇವರ ಸಾಧನೆಯಾಗಿದೆ. ರೊಟ್ಟಿಯನ್ನು ಹೇಗೆ ತಾಯಂದಿರು ತಟ್ಟುತ್ತಾ, ತಿರುಗಿಸುತ್ತಾರೋ, ಹಾಗೆಯೇ ಹಾನಗಲ್ ಜನರು ಈ ಬಾರಿ ಕಾಂಗ್ರೆಸ್‌ನವರನ್ನು ತಿರುಗಿಸಬೇಕು. ಕಾಂಗ್ರೆಸ್‌ನವರ ಹಣದ ಆಮಿಷ ಇಲ್ಲಿ ನಡೆಯುವುದಿಲ್ಲ. ಜನ ತೀರ್ಮಾನ ಮಾಡಿದ್ದಾರೆ. ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡುತ್ತಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ: Lok Sabha Election 2024: ಸುಮಲತಾಗೆ ದಿಲ್ಲಿಗೆ ಬುಲಾವ್;‌ ಸ್ಪರ್ಧೆ ಮಂಡ್ಯದಿಂದಲೋ? ಚಿಕ್ಕಬಳ್ಳಾಪುರದಿಂದಲೋ?

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಪೂಜಾರ್, ಮಾಜಿ ಸಚಿವ ಮನೋಹರ್ ತಹಸೀಲ್ದಾರ್, ಶಿವರಾಜ್ ಸಜ್ಜನ್ ಮತ್ತಿತರರು ಹಾಜರಿದ್ದರು.

Exit mobile version