ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಚಾರಗಳು, ಬಹಿರಂಗ ಸಭೆಗಳು ಆರಂಭವಾಗಿವೆ. ಈಗಾಗಲೇ ನಾಮಪತ್ರ ಸಲ್ಲಿಕೆ ಕಾರ್ಯಗಳು ಮುಕ್ತಾಯಗೊಂಡಿವೆ. ಇನ್ನೇನಿದ್ದರೂ ಪ್ರಚಾರದ್ದೇ ಅಬ್ಬರ. ಈಗ ಡಿಕೆ ಬ್ರದರ್ಸ್ (DK Brothers) ಕೋಟೆಯಾದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ (Bangalore Rural Lok Sabha constituency) ಬಿಜೆಪಿ ಮತ್ತು ಜೆಡಿಎಸ್ ನಾಯಕರು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು, ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಹಾಲಿ ಸಂಸದ ಡಿ.ಕೆ. ಸುರೇಶ್‌ಗೆ (DK Suresh) ಸಲಹೆ ನೀಡಿದ್ದಾರೆ. ಅಲ್ಲದೆ, ಮಂಜುನಾಥ್ ಅವರು ಕೇಂದ್ರದಲ್ಲಿ ಮಂತ್ರಿ ಆಗಲಿದ್ದಾರೆ ಎಂದೂ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ನಡೆದ ಜೆಡಿಎಸ್ ಬಿಜೆಪಿ ಮೈತ್ರಿ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಡಿಕೆ ಸುರೇಶ್‌ಗೆ ಮನವಿ ಮಾಡುತ್ತೇನೆ. ಡಾಕ್ಟರ್ ಮಂಜುನಾಥ್ ಜಯದೇವದಲ್ಲಿ ಸೇವೆ ಮಾಡಿದ್ದಾರೆ. ಸಾಕಷ್ಟು ಜನರ ಜೀವ ಉಳಿಸಿದ್ದಾರೆ. ಮಂಜುನಾಥ್ ಸರ್ವಾನುಮತದಿಂದ ದೆಹಲಿಗೆ ಹೋಗಬೇಕಿತ್ತು. ಆದರೆ, ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ಸ್ಪರ್ಧೆ ಮಾಡಿದ್ದಾರೆ. ನಾನು ಅವರಲ್ಲಿ ಮನವಿ ಮಾಡುತ್ತೇನೆ. ನಿಮಗೆ ಅನೇಕ ಅವಕಾಶಗಳಿವೆ. ಡಾಕ್ಟರ್ ಮಂಜುನಾಥ್ ಹಿರಿಯರಿದ್ದಾರೆ. ಅವರು ಈಗ ಸ್ಪರ್ಧೆ ಮಾಡಿದ್ದರಿಂದ ನೀವು ಸ್ಪರ್ಧೆಯಿಂದ ಹಿಂದೆ ಸರಿಯಿರಿ. ಡಾಕ್ಟರ್ ಮಂಜುನಾಥ್ ಪ್ರಚಾರಕ್ಕೆ ಬರಬಾರದಾಗಿತ್ತು. ನೀವು ಕಾರ್ಯಕರ್ತರೆಲ್ಲರೂ ಎಲ್ಲ ಮತದಾರರ ಮನೆ ಮನೆಗೆ ಹೋಗಿ ಪ್ರಚಾರ ಮಾಡಬೇಕು. ಏಕೆಂದರೆ ಮಂಜುನಾಥ್ ಕೇಂದ್ರದಲ್ಲಿ ಮಂತ್ರಿ ಆಗುತ್ತಾರೆ ಎಂದು ಮನವಿ ಮಾಡುವುದಾಗಿ ಹೇಳಿದರು.
ಮೈತ್ರಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಮಾತನಾಡಿ, ಈ ಚುನಾವಣೆಯು ನರೇಂದ್ರ ಮೋದಿ ಅವರಿಗೆ ಹ್ಯಾಟ್ರಿಕ್ ಗೆಲುವನ್ನು ಪಡೆದುಕೊಳ್ಳಲಿದೆ. ಕಳೆದ ಹದಿನೈದು ದಿನಗಳಿಂದ ನಾನು ಓಡಾಡುತ್ತಿದ್ದೇನೆ. ಗೆಲ್ಲುವ ವಾತಾವರಣವಿದೆ. ಕ್ಷೇತ್ರದಲ್ಲಿ ಕೆಲ ತಂತ್ರಗಳು ನಡೆಯುತ್ತವೆ. ಮತ ಎನ್ನುವುದು ಮನೆಯ ಹೆಣ್ಣು ಮಗಳು ಇದ್ದಂತೆ, ಅದನ್ನು ಮಾರಾಟ ಮಾಡಬೇಡಿ ಎಂದು ಅಂಬೇಡ್ಕರ್ ಹೇಳಿದ್ದಾರೆ. ಚಿಕಿತ್ಸೆ ಮೊದಲು, ಪಾವತಿ ನಂತರ ಎಂದು ತಿಳಿದುಕೊಂಡು ನಾನು ಸೇವೆ ಮಾಡಿದ್ದೇನೆ. ಮತ ಮೊದಲು, ಸೇವೆ ನಿರಂತರ ಎಂದು ನಾನು ಮತ ಕೇಳುತ್ತಿದ್ದೇನೆ ಎಂದು ಹೇಳಿದರು.
ಪಾರ್ಲಿಮೆಂಟ್‌ಗೆ ನನ್ನನ್ನು ಕಳಿಸಿ: ಡಾ. ಸಿ.ಎನ್. ಮಂಜುನಾಥ್
ಜೆಡಿಎಸ್ – ಬಿಜೆಪಿ ಮನಸ್ಸುಗಳು ಒಂದಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ಲಸಿಕೆಯನ್ನು ಕೊಡಲಿಲ್ಲ ಎಂದಿದ್ದರೆ ವೇದಿಕೆ ಮೇಲೆ ಇದ್ದವರು, ವೇದಿಕೆ ಮುಂಭಾಗದಲ್ಲಿ ಇರುವವರು ಎಷ್ಟು ಜನ ಇರುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ಮನುಷ್ಯರಾದರೆ ಪ್ರಯೋಜನ ಇಲ್ಲ, ಮನುಷ್ಯತ್ವ ಇರಬೇಕು. ನಾನು ನಿಮ್ಮ ಜತೆ ಇರುತ್ತೇನೆ. ನೀವು ನನ್ನ ಜತೆ ಇರಬೇಕು. ನನ್ನನ್ನು ಪಾರ್ಲಿಮೆಂಟ್‌ಗೆ ನೀವು ಕಳುಹಿಸಬೇಕು ಎಂದು ಡಾ. ಸಿ.ಎನ್. ಮಂಜುನಾಥ್ ಮತಯಾಚನೆ ಮಾಡಿದರು.
ಇದನ್ನೂ ಓದಿ: Lok Sabha Election 2024: ಡಿ.ಕೆ. ಸುರೇಶ್ ಮಣಿಸಲು ಬಿಜೆಪಿ ಹೈಕಮಾಂಡ್ ಪ್ಲ್ಯಾನ್; ಟಾರ್ಗೆಟ್ ಡಿಕೆಶಿ!
ಡಿಕೆ ಬ್ರದರ್ಸ್ ಸೋಲೊಪ್ಪಿಕೊಂಡಿದ್ದಾರೆ: ಡಾ. ಸಿ.ಎನ್. ಮಂಜುನಾಥ್
75 ಲಕ್ಷ ಜನರಿಗೆ ಚಿಕಿತ್ಸೆ ಕೊಟ್ಟಿದ್ದೇನೆ. 8 ಲಕ್ಷ ಆಪರೇಷನ್ ಮಾಡಿದ್ದೇನೆ. ಒಬ್ಬರೇ ಒಬ್ಬರನ್ನು ಹಣದ ಕಾರಣದಿಂದ ವಾಪಸ್ ಕಳಿಸಿಲ್ಲ. ಮಂಜುನಾಥ್ ಹೆಸರಿನ ನಾಲ್ಕು ಜನ ಸ್ಪರ್ಧೆ ಮಾಡಿದ್ದಾರೆ. ಮೊದಲು ಮಂತ್ರ, ಆ ಮೇಲೆ ಯಂತ್ರಗಳು ಕೆಲಸ ಮಾಡುತ್ತಿದ್ದವು. ಈಗ ತಂತ್ರಗಳು ಕೆಲಸ ಮಾಡುತ್ತಿವೆ. ಹಾಗಾಗಿ ನನ್ನ ಹೆಸರಿನ ನಾಲ್ಕು ಜನರನ್ನು ಸ್ಪರ್ಧೆಗಿಳಿಸಿದ್ದಾರೆ. ಬಹುಶಃ ಅವರು ಸೋಲು ಒಪ್ಪಿಕೊಂಡಿದ್ದಾರೆ ಎಂದು ಕಾಣಿಸುತ್ತದೆ. ಬಿಜೆಪಿ ಗುರುತಿಗೆ ಮತ ಹಾಕಿ ಎಂದು ಡಾ. ಸಿ.ಎನ್. ಮಂಜುನಾಥ್ ಮನವಿ ಮಾಡಿದರು.