ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ ಭರ್ಜರಿ ತಯಾರಿ ನಡೆಸುತ್ತಿದೆ. ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಈ ನಡುವೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಸರ್ಕಾರ ಹಾಗೂ ಆ ಪಕ್ಷದ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಸಿಎಂ ಸಿದ್ದರಾಮಯ್ಯ (CM Siddaramaiah) ಸೇರಿದಂತೆ ಅವರ ಸಂಪುಟ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ಪದೇ ಪದೆ ಹರಿಹಾಯುತ್ತಲೇ ಬಂದಿದ್ದಾರೆ. ಎರಡು ಕೋಟಿ ಉದ್ಯೋಗ ಕೊಟ್ಟರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. 2014ರಿಂದ ಈವರೆಗೂ 7 ಕೋಟಿ ಹೊಸ ಉದ್ಯೋಗ ಸೇರ್ಪಡೆಯಾಗಿದೆ. ಎಂಎಸ್‌ಎಂಇ ಸಂಖ್ಯೆ ಕೂಡ ಹೆಚ್ಚಳವಾಗಿದೆ ಎಂದು ಮಾಹಿತಿ ನೀಡಿದರು.
ಎಚ್ಎಎಲ್ ಅನ್ನು ಮುಚ್ಚಲಾಗುವುದು ಎಂದು ಅಪಪ್ರಚಾರ ಮಾಡಿದರು. ಹಾಗಾದರೆ ಮುಚ್ಚಲಾಯಿತೇ? ಇದಕ್ಕೆ ನಿಮ್ಮ ರಾಹುಲ್ ಗಾಂಧಿ ಕ್ಷಮೆ ಕೋರುತ್ತಾರಾ? ಡಿ.ಕೆ. ಶಿವಕುಮಾರ್ (DK Shivakumar) ಕ್ಷಮೆ ಕೋರಿಸ್ತಾರಾ? ಸಿದ್ದರಾಮಯ್ಯ ಕಳೆದ ಹತ್ತು ತಿಂಗಳ ಅವಧಿಗೆ ರಾಜ್ಯದಲ್ಲಿ ಎಷ್ಟು ಉದ್ಯೋಗ ಸೃಷ್ಟಿ ಮಾಡಿದ್ದಾರೆ ಎಂಬ ಮಾಹಿತಿಯನ್ನು ನೀಡಲಿ. ಪ್ರಿಯಾಂಕ್ ಖರ್ಗೆ, ಎಂ.ಬಿ. ಪಾಟೀಲ್ ಕೇವಲ ಟ್ವೀಟ್ ಮಾಡಿರೋದೇ ಇವರ ದಾಖಲೆ. ಮೂಲಭೂತ ಸೌಕರ್ಯಗಳ ವಿಚಾರದಲ್ಲಿ ಕೂಡ ಸಾಧನೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಒಟ್ಟಾರೆ 7 ಸಾವಿರ ಕಿ.ಮೀ ಆಗಿದೆ. ಇದರಲ್ಲಿ 3,234 ಕಿ.ಮೀ ಬಿಜೆಪಿ ಅವಧಿಯಲ್ಲಿ ಆಗಿದೆ ಎಂದು ಬಿ.ಎಸ್. ಯಡಿಯೂರಪ್ಪ ಅವರು ಸಾಧನೆಯನ್ನು ಬಿಚ್ಚಿಟ್ಟರು.
ಕಾಂಗ್ರೆಸ್‌ಗೆ ಮತ (Lok Sabha Election 2024) ಕೊಟ್ಟರೆ ಭಯೋತ್ಪಾದನೆಗೆ ಕೊಟ್ಟಂತೆ
ಕರ್ನಾಟಕದಲ್ಲಿ ರೈಲ್ವೇ ಯೋಜನೆಯನ್ನು ವಿದ್ಯುತ್ತೀಕರಣ ಮಾಡಲಾಗಿದೆ. ಆರು ವಂದೇ ಭಾರತ್ ರೈಲು ಸಂಚಾರ ಮಾಡುತ್ತಿವೆ. ಗರೀಬಿ ಕಲ್ಯಾಣ್ ಯೋಜನೆ ಮೂಲಕ ರೇಷನ್ ನೀಡಲಾಗುತ್ತಿದೆ. ರಾಜ್ಯದ 54 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಆರು ಸಾವಿರ ರೂಪಾಯಿ ಕೊಡಲಾಗುತ್ತಿದೆ. ನಾವು ಅಧಿಕಾರದಲ್ಲಿ ಇದ್ದಾಗ ನಾಲ್ಕು ಸಾವಿರ ರೂಪಾಯಿಯನ್ನು ರೈತರಿಗೆ ನೀಡುತ್ತಿದ್ದೆವು. ಈಗ ಸರ್ಕಾರ ಅದನ್ನು ನಿಲ್ಲಿಸಿ, ದಿವಾಳಿ ಆಗಿದೆ ಅಂತ ತೋರಿಸಿದೆ. ಮೋದಿ ಅವರು ಒಂದು ಬಾರಿ ಗ್ಯಾರಂಟಿ ನೀಡಿದರೆ ಬಂದೇ ಬರುತ್ತದೆ. ಸುಳ್ಳು ಆಶ್ವಾಸನೆ ಅಲ್ಲ ಅಂತ ಭಾವಿಸಿದೆ. ಬಿಜೆಪಿಗೆ ಕೊಡುವ ವೋಟು ದೇಶದ ಅಭಿವೃದ್ಧಿಗೆ ಹೋಗುತ್ತದೆ. ಆದರೆ, ಕಾಂಗ್ರೆಸ್‌ಗೆ ಕೊಡುವ ವೋಟು ಆಂತರಿಕ ಭದ್ರತೆಯನ್ನು ಅಪಾಯಕ್ಕೆ ತಳ್ಳಲಿದೆ, ಭಯೋತ್ಪಾದನೆಗೆ ಕೊಟ್ಟಂತಾಗುತ್ತದೆ. ಹೀಗಾಗಿ ಇಂಡಿ ಮೈತ್ರಿಕೂಟವನ್ನು ದೇಶದ ಜನತೆ ತಿರಸ್ಕಾರ ಮಾಡಲಿದ್ದಾರೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದರು.
ರೈತರಿಗೆ ಕೊಡುತ್ತಿದ್ದ 4 ಸಾವಿರ ಕಿಸಾನ್ ಸಮ್ಮಾನ್ ಹಣ ನಿಲ್ಲಿಸಿದ್ದು ಯಾಕೆ?
ಕೇಂದ್ರದ ಹತ್ತು ವರ್ಷಗಳ ಸಾಧನೆಯು ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ. ಆದರೆ, ರಾಜ್ಯದಲ್ಲೇನಾಗಿದೆ? ಸಿಎಂ ಸಿದ್ದರಾಮಯ್ಯ ಅವರೇ, ನಾವು ರೈತರಿಗೆ ಕೊಡುತ್ತಿದ್ದ 4000 ರೂಪಾಯಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಏಕೆ ನಿಲ್ಲಿಸಿದಿರಿ? ನಿಮ್ಮ ಸರ್ಕಾರ ದಿವಾಳಿಯಾಗಿದೆಯಾ? ವಿಶ್ವದ ಆರ್ಥಿಕ ಅಭಿವೃದ್ಧಿಯಲ್ಲಿ ಐದನೇ ಸ್ಥಾನದಲ್ಲಿ ಭಾರತ ಇದೆ. ಇದಕ್ಕೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಪ್ರತಿ ದಿನ 33 ಕಿ.ಮೀ ರಸ್ತೆ ಮಾಡಲಾಗುತ್ತಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ, ಕೇದಾರನಾಥ ಜೀರ್ಣೋದ್ಧಾರ, ಎಕ್ಸ್‌ಪ್ರೆಸ್ ಕಾರಿಡಾರ್ ಮಾಡಲಾಗಿದೆ ಎಂದು ಬಿ.ಎಸ್. ಯಡಿಯೂರಪ್ಪ ಕಿಡಿಕಾರಿದರು.
ಕೇಂದ್ರದ ಸಾಧನೆಗಳ ಪಟ್ಟಿ ಕೊಟ್ಟ ಬಿಎಸ್‌ವೈ
ಆರ್ಟಿಕಲ್ 370 ರದ್ದು ಮಾಡಿದ್ದೇವೆ. 21 ಲಕ್ಷ ನಿವೃತ್ತ ಯೋಧರಿಗೆ ಒಂದು ದೇಶ, ಒಂದು ಪೆನ್ಷನ್ ಮಾಡಲಾಗಿದೆ. ಕೇಂದ್ರದಿಂದ ರಾಜ್ಯಕ್ಕೆ 1.85 ಲಕ್ಷ ಕೋಟಿ ರೂಪಾಯಿ ತೆರಿಗೆ ಹಣ ಪಾವತಿಯಾಗಿದೆ. 2004-14ರ ವರೆಗೂ 81 ಸಾವಿರ ಕೋಟಿ ರೂಪಾಯಿ ತೆರಿಗೆ ಹಣ ನೀಡಲಾಗುತ್ತಿತ್ತು. ಆದರೆ, 2014ರಿಂದ ನೀಡಿರುವುದು 91,374 ಕೋಟಿ ರೂಪಾಯಿ ಆಗಿದೆ. ಜಲಜೀವನ್ ಮಿಷನ್ ಯೋಜನೆ ಮೂಲಕ ಲಕ್ಷಾಂತರ ಮನೆಗೆ ನಲ್ಲಿ ನೀರು ನೀಡಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆ ಜಾರಿಗೆ ತರಲಾಗಿದೆ. ಗರೀಬ್ ಕಲ್ಯಾಣ ಯೋಜನೆ ಮೂಲಕ 70 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಬಿ.ಎಸ್. ಯಡಿಯೂರಪ್ಪ ವಿವರಿಸಿದರು.
ರಾಜ್ಯದಲ್ಲಿ ಐಐಡಿ, ವಿಧಿ ವಿಜ್ಞಾನ ಪ್ರಯೋಗಾಲಯಗಳನ್ನು ತೆರೆಯಲಾಗಿದೆ. ಬೆಂಗಳೂರಿನಲ್ಲಿ ಸೆಟಲೈಟ್ ರಿಂಗ್ ರೋಡ್ ಮಾಡಲು, ಭಾರತ್ ಮಾಲಾ ಯೋಜನೆಯಡಿ ಹಣ ಬಿಡುಗಡೆ ಮಾಡಲು ತಯಾರಿ ನಡೆಯುತ್ತಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ 2 ಕಾರ್ಯಾರಂಭವಾಗಿದೆ ಎಂದು ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಬಿಜೆಪಿ-ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸುತ್ತಿದೆ. 28 ಕ್ಷೇತ್ರ ಗೆದ್ದು ದೆಹಲಿಗೆ ಕರೆದುಕೊಂಡು ಹೋಗುತ್ತೇವೆ. ಅಬ್ ಕಿ ಬಾರ್ ಚಾರ್ ಸೌ ಪರ್ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದರು.
ಡಿಕೆಶಿ ಹೇಳಿಕೆಯಿಂದ ಯಾವುದೇ ಲಾಭವಿಲ್ಲ
ಒಕ್ಕಲಿಗರು ಮುಖ್ಯಮಂತ್ರಿಯಾಗಿದ್ದ ಸರ್ಕಾರವನ್ನು ಬೀಳಿಸಲಾಯಿತು ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿ.ಎಸ್. ಯಡಿಯೂರಪ್ಪ, ಇಂಥ ಹೇಳಿಕೆ ನೀಡುವುದರಿಂದ ಯಾವುದೇ ಲಾಭವಿಲ್ಲ. ಎಲ್ಲ ಸಮುದಾಯ ಒಟ್ಟಾಗಿರಲಿದೆ. ಇಂದು ಮುಸ್ಲಿಂ ಸಮುದಾಯದವರು ರಂಜಾನ್ ಆಚರಿಸುತ್ತಿದ್ದಾರೆ. ಶಿವಕುಮಾರ್ ಹೋಗಿ ಮಾತಾಡಲಿ. ನಾನು ಹೋಗಿ ಮಾತನಾಡಲು ಸಾಧ್ಯವಾ? ಡಿಕೆಶಿ ಪರಿಣಿತರಿದ್ದಾರೆ, ಅವರು ಹೋಗಿ ಕೇಳಲಿ ಎಂದು ಹೇಳಿದರು.
ಇಂದಿನಿಂದ ರಾಜ್ಯ ಪ್ರವಾಸ
ಇಂದಿನಿಂದ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಜನರಿಗೆ ನಮ್ಮ ಮೇಲೆ ವಿಶ್ವಾಸ ಹೇಗಿದೆ ಎಂಬುದು ಇಲ್ಲಿ ಗೊತ್ತಾಗಲಿದೆ. ಕೆಲವರು ಟೀಕೆ ಮಾಡುತ್ತಾರೆ. ಆದರೆ, ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. 28 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ಇದೆ ಎಂದು ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ರಾಜ್ಯಕ್ಕೆ ತೆರಿಗೆಯಲ್ಲಿ ಅನ್ಯಾಯವಾಗಿದೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿ.ಎಸ್. ಯಡಿಯೂರಪ್ಪ, ಈಗಾಗಲೇ ನಿರ್ಮಲಾ ಸೀತಾರಾಮನ್ ಉತ್ತರ ಕೊಟ್ಟಿದ್ದಾರೆ. ಹಾಗಾಗಿ ನಾನು ಮತ್ತೆ ಆ ವಿಷಯವನ್ನು ಪ್ರಸ್ತಾಪ ಮಾಡಲಾರೆ ಎಂದು ಹೇಳಿದರು.
ಇದನ್ನೂ ಓದಿ: Sumalatha Ambareesh : ಬಿಜೆಪಿಗೆ ಸೇರ್ಪಡೆಗೊಂಡರೂ ಪ್ರಚಾರಕ್ಕೆ ಇಳಿಯದ ಸುಮಲತಾ!
ರಾಹುಲ್ ಗಾಂಧಿ ನಾಯಕತ್ವ ಸಂಪೂರ್ಣ ವಿಫಲ
ಲೋಕಸಭಾ ಚುನಾವಣೆ ನಡೆಯುತ್ತಿದೆ ಎಂಬುದನ್ನೇ ಕಾಂಗ್ರೆಸ್ ಮರೆತಂತಿದೆ. ರಾಹುಲ್ ಗಾಂಧಿ ನಾಯಕತ್ವ ಸಂಪೂರ್ಣ ವಿಫಲವಾಗಿರುವುದರಿಂದ ಅವರ ಹೆಸರು ಹೇಳುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರು ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ವಿಶ್ವಾಸಾರ್ಹ ನಾಯಕತ್ವ ಇಲ್ಲ. ಕೇಂದ್ರ ಸರ್ಕಾರದ ಅನುದಾನದ ಬಗ್ಗೆ ಗೊಂದಲ ಸೃಷ್ಟಿಸಿ, ವಿವಾದ ಸೃಷ್ಟಿಸಿ ಬೆಂಬಲ ಪಡೆಯುವ ಕನಸನ್ನು ರಾಜ್ಯ ನಾಯಕರು ಕಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸ ಆಧಾರದ ಮೇಲೆ ನಾವು ಈ ಚುನಾವಣೆಯನ್ನು ಎದುರಿಸುತ್ತಿದ್ದೇವೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದರು.
Live : ಪತ್ರಿಕಾಗೋಷ್ಠಿ
— BJP Karnataka (@BJP4Karnataka) April 11, 2024
ಉಪಸ್ಥಿತಿ : ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSYBJP ಮತ್ತು ಪ್ರಮುಖರು.
ಸ್ಥಳ : ಚುನಾವಣಾ ಮಾಧ್ಯಮ ಕೇಂದ್ರ, ಜಿ. ಎಂ. ರಿಜಾಯ್ಸ್, ಬೆಂಗಳೂರು https://t.co/ffYkVvdZSn
ಕಾರ್ಯಕರ್ತನ ಪುತ್ರಿಗೆ ಬಿಎಸ್‌ವೈ ಸನ್ಮಾನ
ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ 5ನೇ Rank ಪಡೆದ ಬಿಜೆಪಿ ಕಾರ್ಯಕರ್ತ ನಾಗೇಶ್ ಎಂಬುವವರ ಪುತ್ರಿ ಅನನ್ಯ ಅವರನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸನ್ಮಾನಿಸಿದರು. ಮಲ್ಲೇಶ್ವರದ ಮಾಧ್ಯಮ ಕೇಂದ್ರದಲ್ಲಿ ಶಾಲು ಹೊದಿಸಿ ಸನ್ಮಾನಿಸಿದರು. ಅನನ್ಯ ಕಾಮರ್ಸ್ ವಿಭಾಗದಲ್ಲಿ 600ಕ್ಕೆ 593 ಅಂಕ ಪಡೆದುಕೊಂಡಿದ್ದಾರೆ.
ಶಾಸಕ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್, ಶಾಸಕ ಉಪಾಧ್ಯಕ್ಷ ಬೈರತಿ ಬಸವರಾಜ್, ಮುಖ್ಯ ವಕ್ತಾರ ಅಶ್ವಥ್ ನಾರಾಯಣ್ ಉಪಸ್ಥಿತರಿದ್ದರು.