ರಾಯಚೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಈಗ ಪ್ರಮುಖ ರಾಷ್ಟ್ರೀಯ ಪಕ್ಷಗಳಿಗೆ ಭಿನ್ನಮತದ ತಲೆ ನೋವು ಎದುರಾಗಿದೆ. ಟಿಕೆಟ್ ವಂಚಿತ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಬಂಡಾಯದ ಬಾವುಟವನ್ನು ಹಾರಿಸಿದ್ದಾರೆ. ಬಿಜೆಪಿ (BJP Karnataka) ಸಹ ಇದಕ್ಕೆ ಹೊರತಾಗಿಲ್ಲ. ಒಂದು ಕಡೆ ಬಂಡಾಯವನ್ನು ಶಮನ ಮಾಡುತ್ತಿದ್ದಂತೆ ಮತ್ತೊಂದು ಕಡೆ ಅಸಮಾಧಾನ ಸ್ಫೋಟಗೊಳ್ಳುತ್ತಿದೆ. ಈ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ರಾಜಾ ಅಮರೇಶ್ವರ ನಾಯಕಗೆ (Raja Amareswara Nayaka) ಟಿಕೆಟ್ ಕೊಟ್ಟಿರುವುದು ಬಿ.ವಿ. ನಾಯಕ (BV Nayaka) ಅವರನ್ನು ಕೆರಳಿಸಿದೆ. ಇದೀಗ ಅವರ ಬಣ ರೌದ್ರಾವತಾರ ತಾಳಿದ್ದು, ಪ್ರತಿಭಟನೆಯನ್ನು ಮಾಡಿವೆ. ಅಭ್ಯರ್ಥಿ ಬದಲಾವಣೆಗೆ ಎರಡು ದಿನಗಳ ಗಡುವನ್ನು ನೀಡಿದೆ. ಇನ್ನು ಪ್ರತಿಭಟನೆ ವೇಳೆ ಬಿ.ವಿ. ನಾಯಕ ಅವರ ಅಭಿಮಾನಿಯೊಬ್ಬ ಮೈಮೇಲೆ ಸೀಮೆ ಎಣ್ಣೆ ಸುರಿದು ಹೈಡ್ರಾಮಾ ನಡೆಸಿದ್ದಾನೆ.
ರಾಯಚೂರಿನಲ್ಲಿ ಕರೆದ ಅಭಿಮಾನಿ, ಬೆಂಬಲಿಗರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕಗೆ ಗೋಬ್ಯಾಕ್ ಘೋಷಣೆಯನ್ನು ಕೂಗಲಾಗಿದೆ. ಬಳಿಕ ರಸ್ತೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಗಿದೆ. ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬಿ.ವಿ. ನಾಯಕ ಅವರಿಗೆ ಬಿಜೆಪಿ ಟಿಕೆಟ್ ಕೊಡಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಈ ವೇಳೆ ಅವರ ಅಭಿಮಾನಿಯೊಬ್ಬ ಡೀಸೆಲ್ ಸುರಿದುಕೊಂಡು ಆಕ್ರೋಶವನ್ನು ಹೊರಹಾಕಿದ್ದಾನೆ.
ಎರಡು ದಿನಗಳ ಗಡುವು: ಬಿ.ವಿ. ನಾಯಕ ಎಚ್ಚರಿಕೆ
ಈ ವೇಳೆ ಮಾತನಾಡಿದ ಬಿ.ವಿ. ನಾಯಕ ಅವರು ಮುಂದಿನ ಎರಡು ದಿನಗಳವರೆಗೆ ಕಾದು ನೋಡುತ್ತೇನೆ. ಬಳಿಕ ನನ್ನ ಕಾರ್ಯಕರ್ತರ, ಅಭಿಮಾನಿಗಳ ತೀರ್ಮಾನದಂತೆ ನಿರ್ಧಾರ ಮಾಡುತ್ತೇನೆ. ಈ ಬಗ್ಗೆ ಇನ್ನೆರಡು ದಿನದಲ್ಲಿ ದೇವದುರ್ಗದಲ್ಲಿ ಬೃಹತ್ ಸಭೆ ನಡೆಸಿ ಬಿಜೆಪಿ ಹೈಕಮಾಂಡ್‌ಗೆ ನನ್ನ ನಿರ್ಣಯ ತಿಳಿಸುವೆ. ಬಿಜೆಪಿ ನಾಯಕರ ಸೂಚನೆಯಂತೆ ಸ್ಪರ್ಧೆಗೆ ನಿರ್ಧರಿಸಿ ಸಂಚಾರ ಮಾಡಿದ್ದೆ. ತನ್ನ ತಂದೆ ಹಾಗೂ ನಾನು 40 ವರ್ಷದಿಂದ ಇದ್ದ ಪಕ್ಷವನ್ನು ಬಿಟ್ಟು ಬಿಜೆಪಿಗೆ ಬಂದಿದ್ದೆ. ಈಗ ಬಿಜೆಪಿ ನಾಯಕರು ಮೋಸ ಮಾಡಿದ್ದಾರೆ ಎಂದು ಬಿ.ವಿ. ನಾಯಕ ಅವರು ಆಕ್ರೋಶವನ್ನು ಹೊರಹಾಕಿದ್ದಾರೆ. ಈ ವೇಳೆ ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ತಿಮ್ಮಾರೆಡ್ಡಿ ಬೋಗಾವತಿ ಸೇರಿ ಸಾವಿರಾರು ಜನರು ಭಾಗಿಯಾಗಿದ್ದರು.
ಇದನ್ನೂ ಓದಿ: Lok Sabha Election 2024: ಎಚ್.ವಿ. ರಾಜೀವ್ ಕಾಂಗ್ರೆಸ್ ಸೇರಲು ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಕಾರಣ!
ಬಿ.ಎಸ್. ಯಡಿಯೂರಪ್ಪ ಮಧ್ಯಪ್ರವೇಶ?
ಈಗಾಗಲೇ ಬಿಜೆಪಿಯಲ್ಲಿ ಎದ್ದಿರುವ ಬಂಡಾಯ ಶಮನಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮುಂದಾಗಿದ್ದರು. ಈ ನಿಟ್ಟಿನಲ್ಲಿ ಹಳೇ ಮೈಸೂರು ಭಾಗಕ್ಕೆ ವಿಜಯೇಂದ್ರ ತೆರಳಿದ್ದರೆ, ಉತ್ತರ ಕರ್ನಾಟಕ ಭಾಗಕ್ಕೆ ಯಡಿಯೂರಪ್ಪ ಭೇಟಿ ನೀಡುತ್ತಿದ್ದಾರೆ. ಬಿಎಸ್‌ವೈ ಇಂದು ಬೆಳಗಾವಿಯಲ್ಲಿದ್ದಾರೆ. ಹೀಗಾಗಿ ಶೀಘ್ರವೇ ಅವರು ರಾಯಚೂರು ಕಡೆಗೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈಗಾಗಲೇ ಕುಪಿತಗೊಂಡಿರುವ ಬಿ.ವಿ. ನಾಯಕ ಅವರು ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಕಾರಣದಿಂದ ಅವರು ಬಿ.ಎಸ್. ಯಡಿಯೂರಪ್ಪ ಅವರ ಮಾತನ್ನು ಕೇಳಲಿದ್ದಾರೆಯೇ? ಅಷ್ಟು ತಾಳ್ಮೆ ಅವರಲ್ಲಿ ಇದೆಯೇ? ಎಂಬ ಪ್ರಶ್ನೆ ಮೂಡಿದೆ. ಇನ್ನು ಎರಡು ದಿನದಲ್ಲಿ ಬಿಜೆಪಿ ಒಂದು ನಿರ್ಣಯಕ್ಕೆ ಬಾರದೇ ಹೋದಲ್ಲಿ, ಮನವೊಲಿಕೆ ಮಾಡದೇ ಹೋದಲ್ಲಿ ಬಿ.ವಿ. ನಾಯಕ ಅವರು ಮುಂದಿನ ಹೆಜ್ಜೆಯನ್ನು ಇಡಲಿದ್ದಾರೆ. ಅದು ಬಿಜೆಪಿ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದು ಮುಖ್ಯವಾಗುತ್ತದೆ.