Site icon Vistara News

Lok Sabha Election 2024: ಈಶ್ವರಪ್ಪನವರ ಉದ್ಧಟತನದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲ್ಲ; ಬಿ.ವೈ. ವಿಜಯೇಂದ್ರ ಕಿಡಿ

Petrol Diesel Price

ಚಾಮರಾಜನಗರ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ತಮ್ಮ ಪುತ್ರನಿಗೆ ಟಿಕೆಟ್‌ ಕೈತಪ್ಪಿದ ಸಂಬಂಧ ಬಂಡಾಯ ಎದ್ದಿರುವ ಮಾಜಿ ಡಿಸಿಎಂ ಕೆ.ಎಸ್.‌ ಈಶ್ವರಪ್ಪ (KS Eshwarappa) ನಾಳೆ (ಶುಕ್ರವಾರ – ಏಪ್ರಿಲ್‌ 12) ನಾಮಪತ್ರ ಸಲ್ಲಿಸಲು ಸಜ್ಜಾಗಿದ್ದಾರೆ. ಈ ನಡುವೆ ಅವರು ನರೇಂದ್ರ ಮೋದಿ (PM Narendra Modi) ಫೋಟೊ ಇಟ್ಟುಕೊಂಡು ಪ್ರಚಾರ ಮಾಡುವುದರ ವಿರುದ್ಧ ದೂರು ನೀಡಲಾಗಿದೆ. ಇದರ ಜತೆಗೆ ಬಿಜೆಪಿ ನಾಯಕರು ಮೋದಿ ಭಾವಚಿತ್ರವನ್ನು ಹಾಕದೇ ಪ್ರಚಾರ ಮಾಡಲಿ ಎಂಬ ಕೆಇಎಸ್‌ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ತಿರುಗೇಟು ನೀಡಿದ್ದಾರೆ. ಈಶ್ವರಪ್ಪನವರ ಉದ್ಧಟತನದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದು ಗುಡುಗಿದ್ದಾರೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ವೈ. ವಿಜಯೇಂದ್ರ, ಈಶ್ವರಪ್ಪ ಅವರು ಪಕ್ಷೇತರವಾಗಿ ಸ್ಪರ್ಧೆ ಮಾಡುವ ವಿಚಾರ ಅವರ ಹಣೆಬರಹ. ಏನಾಗುತ್ತದೋ ಆಗಲಿ ಬಿಡಿ ಎಂದು ಹೇಳಿದರು.

ಚುನಾವಣಾ ಪ್ರಚಾರಕ್ಕೆ (Lok Sabha Election 2024) ಫೋಟೊ ಬಳಕೆ ಬಗ್ಗೆ ನಾವು ತೀರ್ಮಾನಿಸುತ್ತೇವೆ

ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಮಕ್ಕಳ ಫೋಟೊ ಹಾಕಿ ಪ್ರಚಾರ ಮಾಡಲಿ ಎಂಬ ಕೆ.ಎಸ್.‌ ಈಶ್ವರಪ್ಪ ಅವರ ಸಲಹೆಗೆ ಗರಂ ಆಗಿಯೇ ಉತ್ತರ ನೀಡಿರುವ ಬಿ.ವೈ. ವಿಜಯೇಂದ್ರ, ಯಾರ ಫೋಟೊವನ್ನು ಇಟ್ಟುಕೊಂಡು ಪ್ರಚಾರ ಮಾಡಬೇಕು? ಯಾರ ಫೋಟೊ ಬೇಡ ಎಂಬ ಬಗ್ಗೆ ನಾವು ತೀರ್ಮಾನ ಮಾಡುತ್ತೇವೆ. ಇದರ ಬಗ್ಗೆ ಅವರು ತೀರ್ಮಾನ ಮಾಡೋದು ಬೇಡ ಎಂದು ಖಾರವಾಗಿ ಹೇಳಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಖಂಡಿಸಿದ ಬಿ.ವೈ. ವಿಜಯೇಂದ್ರ, ಗೂಂಡಾಗಿರಿ ಮಾಡುವ ಹಾಗೂ ಹೆದರಿಸಿ ಗೆಲ್ಲುವ ಯೋಚನೆಯಲ್ಲಿ ಕಾಂಗ್ರೆಸ್ ಇದೆ. ನಮ್ಮ ಅಭ್ಯರ್ಥಿ ಡಾ. ಸಿ.ಎನ್.‌ ಮಂಜುನಾಥ್ ಅವರನ್ನು ಗೆಲ್ಲಿಸಲು ಮತದಾರರು ತಯಾರಾಗಿದ್ದಾರೆ. ಈ ಹಲ್ಲೆಗೆ ಮತದಾರರು ಉತ್ತರ ಕೊಡುತ್ತಾರೆ. ಕಾಂಗ್ರೆಸ್‌ನವರ ಹತಾಶೆಯಿಂದ ಈ ರೀತಿಯಾಗಿ ಮಾಡುತ್ತಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ಕಿಡಿಕಾರಿದರು.

ಚಾಮರಾಜನಗರ ಕ್ಷೇತ್ರದಲ್ಲಿ ಆಪರೇಷನ್ ಹಸ್ತ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿ.ವೈ. ವಿಜಯೇಂದ್ರ, ಯಾವ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿ.ಕೆ. ಶಿವಕುಮಾರ್‌ (DK Shivakumar) ಅವರಾಗಲೀ, ಇಲ್ಲಿ ಏನನ್ನೂ ಮಾಡಲು ಆಗುವುದಿಲ್ಲ. ಈ ಕ್ಷೇತ್ರದಲ್ಲಿ ನಮಗೆ ಹರ್ಷವರ್ಧನ್ ಹಾಗೂ ಶ್ರೀನಿವಾಸ್ ಪ್ರಸಾದ್ ಅವರ ಬೆಂಬಲ ಇದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

ಇದನ್ನೂ ಓದಿ: Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

ನಾಳೆ ನಾಮಪತ್ರ ಸಲ್ಲಿಸಲಿರುವ ಕೆ.ಎಸ್.‌ ಈಶ್ವರಪ್ಪ

ಈಗಾಗಲೇ ಬಿಜೆಪಿ ವಿರುದ್ಧ ಸಮರ ಸಾರಿರುವ ಮಾಜಿ ಡಿಸಿಎಂ ಕೆ.ಎಸ್.‌ ಈಶ್ವರಪ್ಪ ಶಿವಮೊಗ್ಗದಲ್ಲಿ ಮಾತನಾಡಿ, ಎಲ್ಲೆಡೆ ಬಿಜೆಪಿ ಕಾರ್ಯಕರ್ತರು ನನ್ನ ಪರ ಒಲವು ವ್ಯಕ್ತಪಡಿಸುತ್ತಿದ್ದಾರೆ. ಶೇ. 60ರಷ್ಟು ಜನ ಬಿಜೆಪಿ ಕಾರ್ಯಕರ್ತರು ನಮ್ಮ ಪರವಾಗಿದ್ದೇವೆಂದು ಹೇಳುತ್ತಿದ್ದಾರೆ. ಹಿಂದುತ್ವವನ್ನು ಮೆಚ್ಚಿ ನನಗೆ ಪ್ರೋತ್ಸಾಹಿಸುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ ಕಾರ್ಯಕರ್ತರು, ಮುಖಂಡರು ಕೂಡ ನಮ್ಮ ಪರವಾಗಿದ್ದಾರೆ. ಕಾಂಗ್ರೆಸ್‌ನ ಅಭ್ಯರ್ಥಿ ವೀಕ್ ಇದ್ದಾರೆಂದು ಅಲ್ಲಿಯವರೇ ನನಗೆ ಕರೆ ಮಾಡಿ ಹೇಳುತ್ತಿದ್ದಾರೆ. ಹೀಗಾಗಿ ಅವರೂ ನನಗೆ ಬೆಂಬಲ ಕೊಡುವುದಾಗಿ ಹೇಳುತ್ತಿದ್ದಾರೆ. ಬಹಳ ವ್ಯವಸ್ಥಿತವಾಗಿ ನಮ್ಮ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಎಷ್ಟೋ ಜನರ ಮುಖಗಳನ್ನೇ ನಾನು ನೋಡಿಲ್ಲ. ಆದರೂ ಅವರೆಲ್ಲರೂ ಕೂಡ ನನ್ನ ಪರ ಒಲವು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ನಾಮಪತ್ರ ಹಿಂಪಡೆಯುತ್ತೇನೆ ಎಂದು ಹೇಳುತ್ತಿದ್ದಾರೆ. ದಯಮಾಡಿ ಅಪಪ್ರಚಾರ ಮಾಡಬೇಡಿ ಎಂದು ಮನವಿ ಮಾಡುತ್ತೇನೆ. ನಾನು ಚುನಾವಣೆ ನಿಲ್ಲುತ್ತೇನೆ. ಇದನ್ನು ನಾನು ಯಾವ ಭಾಷೆಯಲ್ಲಿ ಹೇಳಲಿ. ನಾನು ವಾಪಸ್ ಬರುವ ಪ್ರಶ್ನೆ ಇಲ್ಲ ಎಂದು ಹೇಳಿದ್ದಾರೆ.

ಶುಕ್ರವಾರ ಬೆಳಗ್ಗೆ ಕೆ.ಎಸ್. ಈಶ್ವರಪ್ಪ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಚುನಾವಣಾ ಠೇವಣಿ ಹಣವಾದ 24 ಸಾವಿರ ರೂಪಾಯಿಯನ್ನು ಮಾಜಿ ಮೇಯರ್ ಸುವರ್ಣ ಶಂಕರ್ ನೇತೃತ್ವದಲ್ಲಿ ಮಹಿಳೆಯರು ನೀಡಿದರು.

Exit mobile version